ADVERTISEMENT

ಖರ್ಚಿಗೊಂದ್‌ ಮಾಫಿಯಾ!

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 19:30 IST
Last Updated 12 ಜನವರಿ 2017, 19:30 IST
ಖರ್ಚಿಗೊಂದ್‌ ಮಾಫಿಯಾ!
ಖರ್ಚಿಗೊಂದ್‌ ಮಾಫಿಯಾ!   

ಸಿನಿಮಾಗಳಿಗೆ ಉದ್ದುದ್ದ ಹೆಸರಿಡುವುದು ಇತ್ತೀಚೆಗೆ ಒಂದು ಟ್ರೆಂಡ್‌ ಆಗಿ ಬೆಳೆಯುತ್ತಿದೆ. ಇದಕ್ಕೆ ಹೊಸ ಸೇರ್ಪಡೆ ‘ನಾನು ನಮ್ಮುಡ್ಗಿ ಖರ್ಚಿಗೊಂದ್‌ ಮಾಫಿಯಾ’. ಮಧ್ಯಮ ವರ್ಗ ಮತ್ತು ಕೆಳ ಮಧ್ಯಮವರ್ಗದ ಎರಡು ಜೋಡಿಗಳನ್ನು ಇಟ್ಟುಕೊಂಡು ಈ ಸಿನಿಮಾದ ಕಥೆ ಹೆಣೆದಿದ್ದಾರೆ ಅಮರನಾಥ್‌. ನಿರ್ದೇಶನದ ಜವಾಬ್ದಾರಿಯನ್ನೂ ನಿರ್ವಹಿಸಿರುವ ಅವರಿಗೆ ಚಲಪತಿ ಕೂಡ ಜತೆಯಾಗಿದ್ದಾರೆ.

ಇತ್ತೀಚೆಗೆ ಚಿತ್ರತಂಡ ಧ್ವನಿಮುದ್ರಿಕೆಯನ್ನು ಬಿಡುಗಡೆ ಮಾಡಿತು. ಚಿತ್ರದಲ್ಲಿರುವ ನಾಲ್ಕು ಹಾಡುಗಳಿಗೆ ಎ.ಆರ್‌. ರೆಹಮಾನ್‌ ಅವರ ಗರಡಿಯಲ್ಲಿ ಪಳಗಿರುವ ವಿಕ್ರಮ್‌ ವರ್ಮನ್‌ ಸಂಗೀತ  ಸಂಯೋಜಿಸಿದ್ದಾರೆ. ಚಲಪತಿ ಮತ್ತು ಕವಿರಾಜ್‌ ಸಾಹಿತ್ಯ ರಚಿಸಿದ್ದಾರೆ.

ನಿರ್ದೇಶನದ ಜತೆಗೆ ಅಮರ್‌ ಚಿತ್ರದ ನಾಯಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನೊಬ್ಬ ನಾಯಕನ ಪಾತ್ರದಲ್ಲಿ ಶ್ಯಾಮ್‌ಸುಂದರ್‌ ನಟಿಸಿದ್ದಾರೆ. ಶ್ರದ್ಧಾ ಮತ್ತು ಅಶ್ವಿನಿ ಚಿತ್ರದ ನಾಯಕಿಯರು.

‘ಹೆಣ್ಣಿಗೆ ಪ್ರತಿನಿತ್ಯಎದುರಾಗುವ ಪ್ರಶ್ನೆಗಳಿಗೆ ಉತ್ತರ ಹುಡುಕುವುದರಲ್ಲಿ ಗಂಡಿನ ಪಾತ್ರ ಎಷ್ಟು? ಈ ವ್ಯವಸ್ಥೆಯಲ್ಲಿ ಅವನ ಅವನ ಅವ್ಯವಸ್ಥೆಯ ಸ್ವರೂಪ ಎಂಥದ್ದು ಎಂಬ ಪ್ರಶ್ನೆಗಳಿಗೆ ಉತ್ತರ ಈ ಸಿನಿಮಾದಲ್ಲಿವೆಯಂತೆ.

‘ಸಮಾಜದಲ್ಲಿ ಪ್ರತಿಯೊಬ್ಬನಿಗೂ ತಮ್ಮದೇ ಆದ ಅವಶ್ಯಕತೆಗಳಿರುತ್ತವೆ. ಆದರೆ ಅದನ್ನು ಮೀರಿದ ಆಸೆಗಳಿಗೆ ಬಲಿಯಾಗಿ ಅದರ ಈಡೇರಿಕೆಗಾಗಿ ಅಡ್ಡದಾರಿಗಳನ್ನು ಹಿಡಿದರೆ ಏನಾಗುತ್ತದೆ ಎನ್ನುವುದನ್ನು ತೋರಿಸಹೊರಟಿದ್ದೇವೆ’ ಎಂದು ತಮ್ಮ ಸಿನಿಮಾದ ಕುರಿತು ಹೇಳಿಕೊಂಡರು ಅಮರನಾಥ್‌.

‘ಇದೇನೂ ದೊಡ್ಡ ಮಾಫಿಯಾದ ಕಥೆಯಲ್ಲ. ಶೀರ್ಷಿಕೆಯಲ್ಲಿರುವಂತೆ ತನ್ನ ಬದುಕಿನ ನಿರ್ವಹಣೆಗಾಗಿ ಮಾಡು ಸಣ್ಣಪುಟ್ಟ ಮಾಫಿಯಾ ಇಲ್ಲಿದೆ’ ಎಂದೂ ಅವರು ವಿವರಣೆ ಸೇರಿಸಿದರು. ಮನರಂಜನೆಯ ಜತೆಗೆ ಸಾಮಾಜಿಕ ಸಂದೇಶವನ್ನೂ ನಿರ್ದೇಶಕರು ಸಿನಿಮಾದಲ್ಲಿ ಅಡಕಗೊಳಿಸಿದ್ದಾರಂತೆ.

‘ನಾನು ಈ ಸಿನಿಮಾದಲ್ಲಿ ಸಾಮಾಜಿಕ ಜವಾಬ್ದಾರಿಯುಳ್ಳ ಹುಡುಗಿಯ ಪಾತ್ರದಲ್ಲಿ ನಟಿಸಿದ್ದೇನೆ. ಸಮಾಜದಲ್ಲಿ ಯಾವುದೇ ತಪ್ಪು, ಅನ್ಯಾಯ ಕಂಡರೂ ಸಿಡಿದೇಳುವ, ಸಮಾಜವನ್ನು ತಿದ್ದುವ ಪಾತ್ರ ನನ್ನದು’ ಎಂದು ಹೇಳಿಕೊಂಡರು ಶ್ರದ್ಧಾ. ಇನ್ನೋರ್ವ ನಟಿ ಅಶ್ವಿನಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿರಲಿಲ್ಲ. ವಿಶಾಲ್‌ ತಿವಾರಿ ಈ ಸಿನಿಮಾಕ್ಕೆ ಹಣ ಹೂಡಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು ಫೆಬ್ರುವರಿ ವೇಳೆಗೆ ತೆರೆಗೆ ತರುವ ಸಿದ್ಧತೆಯಲ್ಲಿ ಚಿತ್ರತಂಡವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.