ADVERTISEMENT

ಗಾಯಕ – ನಾಯಕ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2014, 19:30 IST
Last Updated 19 ಸೆಪ್ಟೆಂಬರ್ 2014, 19:30 IST
ಗಾಯಕ – ನಾಯಕ
ಗಾಯಕ – ನಾಯಕ   

ಮೋಹಕ ಕಂಠಸಿರಿಯ ಗಾಯಕ ಶಾನ್, ತಮ್ಮ ದನಿಯ ಮೂಲಕ ಎಲ್ಲ ವಯೋಮಾನದ ಕೇಳುಗರನ್ನು ಕರ್ಣಾನಂದಗೊಳಿಸಿದವರು. ಚಿಕ್ಕ ವಯೋಮಾನದಲ್ಲಿಯೇ ಜಾಹೀರಾತುಗಳಿಗೆ ಹಿನ್ನೆಲೆ ದನಿ ನೀಡುವ ಮೂಲಕ ತೆರೆಯ ಹಿಂದೆ ಗುರ್ತಿಸಿಕೊಂಡವರು. ತಮ್ಮ ಹದಿನೇಳರ ಪ್ರಾಯದಲ್ಲಿ, ಅಂದರೆ ೧೯೮೯ರಲ್ಲಿ ಬಂದ ‘ಪರಿಂದಾ’ ಚಿತ್ರದ ‘ಕಿತನೀ ಹೈ ಪ್ಯಾರೀ ಪ್ಯಾರೀ ದೋಸ್ತಿ ಹಮಾರೀ’ ಹಾಡಿನ ಮೂಲಕ ಹಿನ್ನೆಲೆ ಗಾಯಕರಾಗಿಯೂ ಪರಿಚಯಗೊಂಡವರು. ನಂತರ ಮ್ಯಾಗ್ನಸೌಂಡ್ ಆಡಿಯೊ ಆಲ್ಬಂಗಳಾದ ‘ನೌಜವಾನ್’ ಮತ್ತಿತರ ಮ್ಯೂಸಿಕ್ ಆಲ್ಬಂಗಳಿಂದ ಖ್ಯಾತಿಯನ್ನೂ ಪಡೆದರು.  

ಈಗ ಶಾನ್ ಗಾಯಕನಿಂದ ನಾಯಕನಾಗುವತ್ತ ಹೆಜ್ಜೆ ಇಟ್ಟಿದ್ದಾರೆ. ‘ಬಲ್ವಿಂದರ್ ಸಿಂಗ್ ಫೇಮಸ್ ಹೋಗಯಾ’ ಹಿಂದಿ ಚಿತ್ರದ ನಾಯಕನಾಗಿದ್ದಾರೆ ಶಾನ್. ಅವರಿಗೆ ಇಲ್ಲಿ ನಾಯಕಿ ಮಿಕಾ ಸಿಂಗ್. ಕರ್ನಾಟಕದ ಕರಾವಳಿ ಮೂಲದ ವಂದನಾ ಜೈನ್ ಚಿತ್ರದ ನಿರ್ಮಾಪಕಿ. ಈ ವಂದನಾ ಜೈನ್ ಸಿಸಿಎಲ್‌ನ ಪಾಲುದಾರರೂ ಹೌದು. ಈ ಹಿಂದೆ ಹಿಂದಿಯಲ್ಲಿ ‘ಚಂದ್ರಕಾಂತಾ’ ಧಾರಾವಾಹಿಯನ್ನು ನಿರ್ಮಿಸಿದ್ದರು. ಇತ್ತೀಚೆಗೆ ಚಿತ್ರದ ಪ್ರಚಾರಾರ್ಥ ಶಾನ್ ಬೆಂಗಳೂರಿಗೆ ಬಂದಿದ್ದರು. ಸಿನಿಮಾ ಕುರಿತು ಬಹಳ ಖುಷಿಯಲ್ಲಿ ಮಾತನಾಡಿದರು.

‘ಬಾಲಿವುಡ್‌ನಲ್ಲಿ ಚಿತ್ರ ಮಾಡಬೇಕು ಎನ್ನುವ ಆಸೆಯಿಂದ ಹುಟ್ಟಿದ್ದು ‘ಬಲ್ವಿಂದರ್ ಸಿಂಗ್ ಫೇಮಸ್ ಹೋಗಯಾ’. ಹಾಸ್ಯದ ಎಳೆಯನ್ನು ಪ್ರಧಾನವಾಗಿಟ್ಟುಕೊಂಡು ಚಿತ್ರ ನಿರ್ಮಿಸಲಾಗಿದೆ’ ಎಂದರು ವಂದನಾ ಜೈನ್. ಈ ಚಿತ್ರಕ್ಕಾಗಿ ಪ್ರಥಮವಾಗಿ ಬೈಕ್ ಓಡಿಸುವುದನ್ನು ಕಲಿತರಂತೆ ಶಾನ್! ‘ಹಾಡು ಹೇಳುವಷ್ಟು ಸುಲಭವಾಗಿ ಕ್ಯಾಮೆರಾ ಮುಂದೆ ನಟಿಸುವುದು ಸಾಧ್ಯವಿಲ್ಲ. ಒಂದು ಶಾಟ್‌ಗಾಗಿ ದಿನಗಟ್ಟಲೆ ಕಾಯಬೇಕಾಗುತ್ತದೆ’ ಎಂದರು ನಾಯಕ ಕಂ ಗಾಯಕ ಶಾನ್. ‘ಬಲ್ವಿಂದರ್...’ ಚಿತ್ರ ಆರಂಭವಾಗಿ ಎರಡು ವರ್ಷಗಳೇ ಕಳೆದರೂ ಅನೇಕ ಅಡೆತಡೆಗಳು, ಡೇಟ್ಸ್‌ಗಳ ತೊಂದರೆಗಳಿಂದಾಗಿ ಪೂರ್ಣಗೊಳ್ಳಲು ತಡವಾಯಿತು.

ಅಂದಹಾಗೆ, ಸೆಪ್ಟೆಂಬರ್ ೨೬ರಂದು ‘ಬಲ್ವಿಂದರ್ ಸಿಂಗ್ ಫೇಮಸ್ ಹೋಗಯಾ’ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ. ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ‘ಬಲ್ವಿಂದರ್ ಸಿಂಗ್’ ಚಿತ್ರತಂಡವನ್ನು ಪರಿಚಯಿಸಿದರು. ‘ವಂದನಾ ಜೈನ್ ನಿರ್ಮಾಣದ ಚಿತ್ರವೊಂದನ್ನು ನಾನು ನಿರ್ದೇಶಿಸುವ ಆಲೋಚನೆ ಇದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.