ADVERTISEMENT

ಗೋವಾ, ಮೋಹ–ದಾಹ...

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2014, 19:30 IST
Last Updated 23 ಅಕ್ಟೋಬರ್ 2014, 19:30 IST

‘ನೀರ್ ಕುಡಿದೂ ಬಾಯೆಲ್ಲ ಒಣ ಒಣ ಒಣ; ಟೂ ಪೀಸು ಬೇಬೀಸು ಗೊಣ ಗೊಣ ಗೊಣ...’– ಕನ್ನಡ ರಾಜ್ಯೋತ್ಸವಕ್ಕೆ ಕೆಲವೇ ದಿನ ಬಾಕಿ ಇರುವಾಗ ಇದೇನಿದು ವಿಚಿತ್ರ ಸಾಲುಗಳು ಎಂದುಕೊಳ್ಳಬೇಡಿ. ‘ಗೋವಾ’ ಚಿತ್ರದ ಹಾಡೊಂದಲ್ಲಿ ಕೇಳಿಸುವ ಸಾಲುಗಳಿವು.

‘ಗೋವಾ’ ಸಿನಿಮಾ ಸೆಟ್ಟೇರಿ ವರ್ಷವೇ ಕಳೆದಿದ್ದರೂ ಸದ್ದು–ಸುದ್ದಿ ಇರಲಿಲ್ಲ. ಈಗ ಚಿತ್ರವನ್ನು ಬಹುತೇಕ ಮುಕ್ತಾಯ ಹಂತಕ್ಕೆ ತಂದು ನಿಲ್ಲಿಸಿರುವ ಚಿತ್ರತಂಡ, ಹಾಡುಗಳ ಮೂಲಕ ಸದ್ದು ಮಾಡಲು ಹೊರಟಿದೆ. ‘ಗೋವಾ’ ಚಿತ್ರಕ್ಕೆ ಗೋವಾ ಟಚ್ ನೀಡುವ ಸಲುವಾಗಿ ಅಕ್ವೇರಿಯಂನಿಂದ ಸೀಡಿಗಳನ್ನು ಹೊರತೆಗೆದು ಧ್ವನಿಮುದ್ರಿಕೆ ಅನಾವರಣ ಮಾಡಿದ್ದು ವಿಶೇಷವಾಗಿತ್ತು. ಮೊದಲೇ ಚಿತ್ರದ ಹೆಸರು ‘ಗೋವಾ’. ಇನ್ನು ಅದರಲ್ಲಿನ ಹಾಡುಗಳೆಂದರೆ ಕೇಳಬೇಕೆ. ಮೇಲೆ ಹೇಳಿದ ಸಾಲುಗಳಂತೆ ಚಿತ್ರದ ಹಾಡುಗಳಲ್ಲಿ ಸಾಕಷ್ಟು ಬೇಬೀಸು ಟೂ ಪೀಸು ಸಾಲುಗಳಿವೆ. ಈ ಶ್ರವಣ ಸುಖ ರಸಿಕರ ಮನಸ್ಸನ್ನು ಯಾವುದೋ ಲಹರಿಯಲ್ಲಿ ತೇಲಿಸುವಂತಿದೆ. ಗೋವಾದ ಬೀಚ್ ಸಂಸ್ಕೃತಿಯನ್ನು ಹಾಡುಗಳಲ್ಲಿ ಭರಪೂರ ವಾಗಿ ತೋರಿಸಲಾಗಿದೆ.

ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮಟ್ಟು ಹಾಕಿದ್ದಾರೆ. ಎಲ್ಲ ಹಾಡುಗಳನ್ನು ಕನ್ನಡಿಗರ ದನಿಯಿಂದಲೇ ಕೇಳಿಸುತ್ತಿರುವ ಸಂತಸ ಅವರಿಗೆ. ‘ಚಿತ್ರ ಬಿಡುಗಡೆಯಾಗಲು ತಡವಾಗುತ್ತದೆ ಎಂಬುದನ್ನು ಮೊದಲೇ ಅಂದಾಜಿಸಿದವರಂತೆ ಜನ್ಯ ಅವರು ಸದ್ಯದ ಟ್ರೆಂಡ್‌ಗೆ ತಕ್ಕಂತೆ ಹಾಡುಗಳನ್ನು ಸಂಯೋಜಿಸಿದ್ದಾರೆ’ ಎಂದರು ನಿರ್ದೇಶಕ ಸೂರ್ಯ.

‘ಗೋವಾ’ ಸಿನಿಮಾದ ನಾಯಕರಾಗಿ ಕೋಮಲ್, ತರುಣ್, ಶ್ರೀಕಿ ಕಾಣಿಸಿಕೊಂಡಿ ದ್ದಾರೆ. ಇವರುಗಳಿಗೆ ಜೋಡಿಯಾಗಿ ಶರ್ಮಿಳಾ ಮಾಂಡ್ರೆ, ಸೋನು ಹಾಗೂ ವಿದೇಶಿ ಬೆಡಗಿ ರೇಚಲ್ ಸಾಥ್ ನೀಡಿದ್ದಾರೆ. ಇವರೆಲ್ಲರ ಹೊರತಾಗಿ ಧರ್ಮ ಹಾಗೂ ಡ್ಯಾನಿ ಅವರು ಸಲಿಂಗಿ ಜೋಡಿಯಾಗಿ ಪ್ರೇಕ್ಷಕರ ಮುಂದೆ ಹಾಜರಾಗಲಿದ್ದಾರೆ. ಕರಿಸುಬ್ಬು ಅವರು ಕೋಮಲ್ ಅವರ ತಂದೆಯಾಗಿ ಅಭಿನಯಿಸಿದ್ದಾರೆ.
ನಿರ್ಮಾಪಕರಾದ ಶಂಕರೇಗೌಡ, ರಜತ್ ಮಂಜುನಾಥ್, ಮಹೇಶ್ ಕೊಠಾರಿ  ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.