ADVERTISEMENT

ಘನಶ್ಯಾಂ ಕೈಯಲ್ಲಿ ‘ಕೆಂಗುಲಾಬಿ’

​ಪ್ರಜಾವಾಣಿ ವಾರ್ತೆ
Published 21 ಮೇ 2015, 19:30 IST
Last Updated 21 ಮೇ 2015, 19:30 IST

ನಿರ್ಮಾಪಕ ಘನಶ್ಯಾಂ ಭಾಂಡಗೆ ತಮ್ಮ ಸಿನಿಮಾಗಳಿಗೆ ಆಯ್ದುಕೊಳ್ಳುವ ವಸ್ತು ಶೋಷಿತರು, ದುರ್ಬಲರು ಇಲ್ಲವೆ ತುಳಿತಕ್ಕೊಳಗಾದವರ ಬಗ್ಗೆ. ಈ ಹಿಂದೆ ‘ಇಂಗಳೆ ಮಾರ್ಗ’ ಸಿನಿಮಾದ ಮೂಲಕ ತಮ್ಮ ಹಾದಿ ಯಾವುದು ಎನ್ನುವುದನ್ನು ಸ್‍ಪಷ್ಟಪಡಿಸಿದ್ದರು. ಈಗ ಮತ್ತೊಂದು ಪ್ರಯತ್ನಕ್ಕೆ ಮುಂದಾಗಿದ್ದು ಪತ್ರಕರ್ತ ಹನುಮಂತ ಹಾಲಿಗೇರಿ ಅವರ ‘ಕೆಂಗುಲಾಬಿ’ ಕಾದಂಬರಿಗೆ ಸಿನಿಮಾ ರೂಪು ಕೊಡಲು ಮುಂದಾಗಿದ್ದಾರೆ.

‘ಇಂಗಳೆ ಮಾರ್ಗ’ ಕೂಡ ಕಾದಂಬರಿ ಆಧರಿಸಿದ ಚಿತ್ರವೇ. ಅದು ಸರಜೂ ಕಾಟ್ಕರ್ ಅವರ ‘ದೇವರಾಯ’ ಕಾದಂಬರಿ ಆಧರಿಸಿದ್ದು. ತಮ್ಮ ಎರಡನೇ ಚಿತ್ರಕ್ಕೂ ಘನಶ್ಯಾಂ ಅವರು ಕಾದಂಬರಿಯನ್ನೇ ಆರಿಸಿಕೊಂಡಿದ್ದಾರೆ. ‘ಕೆಂಗುಲಾಬಿ’ ವೇಶ್ಯೆಯೊಬ್ಬಳ ಬದುಕು–ಬಾಳ್ವೆಯ ಕಥೆ. ಹಳ್ಳಿಯಿಂದ ನಗರಕ್ಕೆ ಬರುವ ಹೆಣ್ಣೊಬ್ಬಳು ಅಲ್ಲಿ ವೇಶ್ಯಾವಾಟಿಕೆಗೆ ಹೇಗೆ ಸಿಲುಕುವಳು, ಹೇಗೆ ಬದುಕು ಸಾಗಿಸುವಳು ಎನ್ನುವ ವಸ್ತು ಇಲ್ಲಿದೆ. ಕಾದಂಬರಿಯಲ್ಲಿನ ಶೇ 75ರಷ್ಟು ವಸ್ತುವನ್ನು ಬಳಸಿಕೊಂಡು ಉಳಿದ 25ರಷ್ಟು ಕಥೆಯನ್ನು ಬದಲಿಸಲು ಚಿತ್ರತಂಡ ಮುಂದಾಗಿದೆ.

ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿದ್ದ ಗೌರೀಶ್ ಅಕ್ಕಿ ‘ಕೆಂಗುಲಾಬಿ’ಯ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‘ನಾನು ಅನಿವಾಸಿ ಭಾರತೀಯನ ಪಾತ್ರದಲ್ಲಿ ನಟಿಸುತ್ತಿದ್ದು, ವೇಶ್ಯೆಯನ್ನು ಪ್ರೀತಿಸುವೆ. ಇಲ್ಲಿ ಬ್ಯೂಟಿಪುಲ್ ಲವ್ ಸ್ಟೋರಿಯೂ ಇದೆ. ಫೈಟ್ ಇಲ್ಲ. ಮಾತಿನಲ್ಲಿ ಜಗಳವಿದೆ’ ಎಂದರು ಗೌರೀಶ್ ಅಕ್ಕಿ.

ಎರಡನೇ ಸಿನಿಮಾ ನಿರ್ಮಾಣದ ಖುಷಿ ಘನಶ್ಯಾಂ ಭಾಂಡಗೆ ಅವರದ್ದು. ‘ಇಂಗಳೆ ಮಾರ್ಗದ ನಂತರ ನಾನು ಗಾಂಧಿನಗರಕ್ಕೆ ಬರಬಾರದು ಎಂದುಕೊಂಡಿದ್ದೆ. ಆದರೆ ಎಲ್ಲರ ಸಹಕಾರ–ಪ್ರೀತಿ ಈ ಚಿತ್ರ ಮಾಡಲು ಕಾರಣವಾಯಿತು’ ಎಂದರು.

ರಂಗಭೂಮಿ ಹಿನ್ನೆಲೆಯ ಶ್ರೀಶ ‘ಕೆಂಗುಲಾಬಿ’ಯ ನಿರ್ದೇಶಕರು. ರಜನಿ ಮತ್ತು ಯೋಗಿತಾ ಚಿತ್ರದ ನಾಯಕಿಯರು. ರಜನಿ ‘ವಲ್ಲಭ’ದಲ್ಲಿ ನಟಿಸಿದ್ದರೆ, ಯೋಗಿತಾ ಅವರಿಗಿದು ಮೊದಲ ಸಿನಿಮಾ. ರೂಪಿಕಾ ಸಹ ಸಿನಿಮಾದಲ್ಲಿ ಗೌರವ ಪೂರ್ವಕವಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಹುನಗುಂದ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಗಜೇಂದ್ರಗಡ, ಬೆಂಗಳೂರಿನಲ್ಲಿ 45 ದಿನಗಳ ಕಾಲ ಚಿತ್ರೀಕರಣದ ಯೋಜನೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.