ADVERTISEMENT

‘ಚಕ್ರವರ್ತಿ’ಯ ಗಾನಬಜಾನ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 19:30 IST
Last Updated 19 ಜನವರಿ 2017, 19:30 IST
ಚಕ್ರವರ್ತಿ- ದರ್ಶನ್ ತೂಗುದೀಪ,  ದೀಪಾ ಸನ್ನಿಧಿ
ಚಕ್ರವರ್ತಿ- ದರ್ಶನ್ ತೂಗುದೀಪ, ದೀಪಾ ಸನ್ನಿಧಿ   
ಸಿನಿಮಾ ಪತ್ರಿಕಾಗೋಷ್ಠಿಗಳಲ್ಲಿ ವೇದಿಕೆ ಮೇಲೆ ಚಿತ್ರತಂಡ, ಎದುರಲ್ಲಿ ಸಾಲಾಗಿ ಸ್ಟ್ಯಾಂಡ್‌ ಮೇಲೆ ನಿಂತಿರುವ ಕ್ಯಾಮೆರಾಗಳ ಹಿಂದೆ ಕ್ಯಾಮೆರಾಮೆನ್‌ಗಳು ಇರುವುದು ಸಾಮಾನ್ಯ ಸಂಗತಿ. ಆದರೆ ಅಂದು ಸಂಜೆ ಕಾರ್ಯಕ್ರಮದ ಈ ನಿಯಮ ತಿರುಗಾಮುರುಗಾ ಆಗಿತ್ತು. ವಿವಿಧ ಟೀವಿ ವಾಹಿನಿಗಳ ಛಾಯಾಗ್ರಾಹಕರು ವೇದಿಕೆಯ ಮೇಲಿದ್ದರು. ಚಿತ್ರತಂಡದವರು ಕೆಳಗಿದ್ದರು. 
 
ಅದು ದರ್ಶನ್‌ ತೂಗುದೀಪ ಅಭಿನಯದ ‘ಚಕ್ರವರ್ತಿ’ಯ ಧ್ವನಿಮುದ್ರಿಕೆ ಬಿಡುಗಡೆ ಕಾರ್ಯಕ್ರಮ. ಟೀವಿ ಛಾಯಾಗ್ರಾಹಕರನ್ನು ಸೀಡಿ ಬಿಡುಗಡೆ ಮಾಡಲು ವೇದಿಕೆ ಮೇಲೆ ಕರೆದಿದ್ದು ದರ್ಶನ್‌ ಅವರೇ. ಛಾಯಾಗ್ರಾಹಕರು ಸೀಡಿ ಬಿಡುಗಡೆ ಮಾಡಿ ಕೆಳಗಿಳಿದ ಮೇಲೆ ಚಿತ್ರತಂಡದ ಸದಸ್ಯರು ವೇದಿಕೆಯೇರಿದರು. ಆಡಿಯೊ ಬಿಡುಗಡೆಗೂ ಮುನ್ನ ನಾಲ್ಕು ಹಾಡುಗಳ ವಿಡಿಯೊ ಮತ್ತು ಸಿನಿಮಾದ ಟ್ರೈಲರ್‌ ಅನ್ನೂ ಪ್ರದರ್ಶಿಸಲಾಯಿತು. 
 
‘ಚಕ್ರವರ್ತಿ’ ಸಿನಿಮಾದ ನಾಯಕ ದರ್ಶನ್‌. ಆದರೆ ಅವರು ಮಾತ್ರ ‘ಈ ಸಿನಿಮಾದಲ್ಲಿ ಒಂಬತ್ತು ಜನ ನಾಯಕರಿದ್ದಾರೆ’ ಎಂದು ಹೇಳಿ ಕುತೂಹಲದ ಬೀಜವನ್ನು ಬಿತ್ತಿದರು. ನಿರ್ದೇಶಕ ಚಿಂತನ್‌ ಪದೇ ಪದೇ ‘ನೋಡ್ಕೊಂಡು ಮಾಡಿ. ಇದು ನೀವು ದರ್ಶನ್‌ ಜತೆಗೆ ಕೆಲಸ ಮಾಡುತ್ತಿರುವ ಮೊದಲನೇ ಸಿನಿಮಾ’ ಎಂದು ಅರ್ಜುನ್‌ ಜನ್ಯ ಅವರಿಗೆ ನೆನಪಿಸುತ್ತಿದ್ದರಂತೆ. ‘ಇದರಿಂದ ನನಗೆ ಟೆನ್‌ಷನ್‌ ಹೆಚ್ಚಾಗಿತ್ತು. ಈಗ ಚಿತ್ರದ ಎರಡು ಹಾಡುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸುಮಾರು ಮೂರೂವರೆ ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ. ಇದು ನನ್ನ ಚಿಂತೆಯನ್ನು ನಿವಾರಿಸಿ ಖುಷಿಯನ್ನು ತಂದಿದೆ’ ಎಂದರು ಅರ್ಜುನ್‌ ಜನ್ಯ.
 
ಚಿತ್ರದ ಹಾಡುಗಳಿಗೆ ಜನರು ನೀಡಿರುವ ಪ್ರತಿಸ್ಪಂದನದ ಬಗ್ಗೆ ಆನಂದ್‌ ಆಡಿಯೊದ ಶ್ಯಾಮ್‌ ಸಂತೋಷ ವ್ಯಕ್ತಪಡಿಸಿದರು. ತುಂಬ ದಿನಗಳ ನಂತರ ‘ಚಕ್ರವರ್ತಿ’ ಸಿನಿಮಾದ ಮೂಲಕ ಕುಮಾರ್‌ ಬಂಗಾರಪ್ಪ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಇಷ್ಟದ ನಟನಾಕ್ಷೇತ್ರದತ್ತ ಮರಳುತ್ತಿರುವುದಕ್ಕೆ ಅವರು ಸಂತೋಷ ವ್ಯಕ್ತಪಡಿಸಿದರು. 
 
ರಾಜೇಂದ್ರಸಿಂಗ್‌ ಬಾಬು ಮಾತನಾಡಿ ‘ಕರ್ಣ, ಅರ್ಜುನರಂಥ ಪೌರಾಣಿಕ ಪಾತ್ರಗಳಿಗೂ ದರ್ಶನ್‌ ಚೆನ್ನಾಗಿ ಒಪ್ಪುತ್ತಾರೆ. ಕನ್ನಡ ಚಿತ್ರರಂಗದಲ್ಲಿ ದರ್ಶನ್‌ ಇರುವುದು ನಮ್ಮೆಲ್ಲರ ಅದೃಷ್ಟ’ ಎಂದು ಹೊಗಳಿದರು.
 
‘ಸಾರಥಿ’ ಚಿತ್ರದಲ್ಲಿ ದರ್ಶನ್‌ ಅವರೊಂದಿಗೆ ತೆರೆ ಹಂಚಿಕೊಂಡಿದ್ದ ದೀಪಾ ಸನ್ನಿಧಿ ‘ಚಕ್ರವರ್ತಿ’ಯ ನಾಯಕಿ. ಚಿತ್ರೀಕರಣದ ಸಂದರ್ಭದಲ್ಲಿನ ಸಂತಸದ ಕ್ಷಣಗಳನ್ನು ಅವರು ನೆನಪಿಸಿಕೊಂಡರು. ಈ ಚಿತ್ರದ ನಿರ್ಮಾಪಕ ಸಿದ್ಧಾರ್ಥ್‌ ಕೂಡ ಒಂದು ಪಾತ್ರದಲ್ಲಿ ನಟಿಸಿದ್ದಾರೆ. 
 
‘ಇಡೀ ಚಿತ್ರ ಯಾವುದೇ ತೊಂದರೆ ಇಲ್ಲದೇ ಪೂರ್ತಿಗೊಂಡಿದೆ. ದರ್ಶನ್‌ ಅವರಲ್ಲಿ ನಾನು ಒಬ್ಬ ಸಹೋದರನನ್ನು ಕಂಡುಕೊಂಡಿದ್ದೇನೆ’ ಎಂದರು ಸಿದ್ಧಾರ್ಥ್‌. ‘ಚಿಂತನ್‌ ಅವರು ನುರಿತ ನಿರ್ದೇಶಕನಂತೆ ಈ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಈ ಸಿನಿಮಾಕ್ಕೆ ನಾನು ಕ್ರೈಮ್‌ ಮತ್ತು ಆದಿತ್ಯ ಅವರು ಬ್ರೇನ್‌. ಅಭಿಮಾನಿಗಳ ಪಾಲಿಗೆ ಈ ಸಿನಿಮಾ ರಸದೌತಣ’ ಎಂದರು ದರ್ಶನ್‌.
 
ಈ ಚಿತ್ರದಲ್ಲಿ ನಟಿಸಿರುವ ಯಶಸ್‌ ಮಾತನಾಡಲು ತಡವರಿಸಿದರೆ, ಸೃಜನ್‌ ಲೋಕೇಶ್‌ ತಮ್ಮ ತರ್ಲೆಗಳಿಂದ ‘ಮಜಾ’  ಉಡಾಯಿಸಿದರು.
‘ಚಕ್ರವರ್ತಿ’ಯ ಆರ್ಭಟವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿರುವ ಚಂದ್ರಶೇಖರ್‌ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.