ADVERTISEMENT

ಚೂಸಿ ಕಂಗನಾ

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2015, 19:30 IST
Last Updated 3 ಆಗಸ್ಟ್ 2015, 19:30 IST

ಕಂಗನಾ ರನೋಟ್‌! ಸದ್ಯ ಬಾಲಿವುಡ್‌ ಅಂಕಣದಲ್ಲಿ ಗೆಲ್ಲುವ ಕುದುರೆ ಎಂದೇ ಗುರ್ತಿಸಿಕೊಂಡಿರುವ ‘ಕ್ವೀನ್‌’. ತೊಟ್ಟ ಬಟ್ಟೆ, ಮಾಡಿಕೊಂಡ ಕೇಶ ವಿನ್ಯಾಸ ಎಲ್ಲವೂ ಅಭಿಮಾನಿಗಳ ಟ್ರೆಂಡ್‌ ಆಗಿ ಬದಲಾಗಿಬಿಡುವಷ್ಟು ಜನಪ್ರಿಯ ನಟಿ ಕಂಗನಾ.

ಕಂಗನಾ ಫ್ಯಾಷನ್‌ ಲೋಕದ ಹಿನ್ನೆಲೆಯಿಂದ ಬಂದು, ಬಾಲಿವುಡ್‌ನಲ್ಲಿ ಉತ್ತುಂಗಕ್ಕೇರಿದವರು. ಇಂದಿಗೂ ಆಗೀಗ ಕೆಂಪುಹಾಸಿನ ಮೇಲೆ ನಡೆಯುವುದು ಅವರಿಗೆ ಪ್ರಿಯವಾದ ಕೆಲಸ. ಸಿನಿಮಾಗಳ ಆಯ್ಕೆಯಲ್ಲಿ ಮಾತ್ರವಲ್ಲ, ಫ್ಯಾಷನ್‌ ಷೋಗಳ ಆಯ್ಕೆಯಲ್ಲಿಯೂ ತಾನು ಚೂಸಿ ಎಂದು ಕಂಗನಾ ಹೇಳಿದ್ದಾರೆ.

‘ಯಾವ್ಯಾವುದೋ ವಿನ್ಯಾಸಕರ ಉಡುಪುಗಳನ್ನು ತೊಟ್ಟು ರ್‍ಯಾಂಪ್‌ ಮೇಲೆ ನಡೆಯವುದು ನನಗೆ ಒಗ್ಗುವುದಿಲ್ಲ. ನಾನು ಯಾರ ಜತೆ ಕೆಲಸ ಮಾಡಬೇಕು ಎಂಬುದರ ಬಗ್ಗೆ ನನಗೆ ಸ್ಪಷ್ಟತೆ ಇದೆ. ಯಾವುದೇ ಒಂದು ಫ್ಯಾಷನ್‌ ಷೋ ಒಪ್ಪಿಕೊಳ್ಳುವಾಗ ನಾನು ವಿನ್ಯಾಸಕರು ಮತ್ತು ಅವರ ವಸ್ತ್ರ ಸಂಗ್ರಹವನ್ನು ಪರಿಗಣನೆಗೆ ತೆಗೆದುಕೊಳ್ಳುತ್ತೇನೆ. ಅವು ನನಗೆ ಇಷ್ಟವಾದರೆ ಮಾತ್ರ ನಾನು ಆ ಫ್ಯಾಷನ್‌ ಷೋ ಒಪ್ಪಿಕೊಳ್ಳುತ್ತೇನೆ’ ಎಂದು ಕಂಗನಾ ಹೇಳಿದ್ದಾರೆ.

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಫ್ಯಾಷನ್‌ ಷೋ ಒಂದರಲ್ಲಿ ಮಾನವ್ ಗಂಗ್ವಾನಿ ಅವರ ವಿನ್ಯಾಸದ ಉಡುಗೆ ತೊಟ್ಟು ಕೆಂಪು ಹಾಸಿನ ಮೇಲೆ ಹೆಜ್ಜೆ ಹಾಕಿದ ಕಂಗನಾ, ಇದೇ ಸಮಯದಲ್ಲಿ ತಮ್ಮ ಆಯ್ಕೆಯ ಮಾನದಂಡಗಳನ್ನು ಬಿಚ್ಚಿಟ್ಟರು.

‘ತನು ವೆಡ್ಸ್‌ ಮನು ರಿಟರ್ನ್ಸ್’, ‘ಕ್ವೀನ್‌’  ಸಿನಿಮಾಗಳ ಯಶಸ್ಸಿನಿಂದ ಬಿ–ಟೌನ್‌ನಲ್ಲಿ ಜನಪ್ರಿಯತೆಯ ಉತ್ತುಂಗಕ್ಕೇರಿರುವ ಕಂಗನಾ ಅವರಿಗೆ ಫ್ಯಾಷನ್‌ ಲೋಕದಲ್ಲಿಯೂ ಸಾಕಷ್ಟು ಅವಕಾಶಗಳು ಬರುತ್ತಿರಬೇಕಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಕಂಗನಾ ಹೀಗೆ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ತಮ್ಮ ಇಷ್ಟದ ಉಡುಪುಗಳ ಬಗ್ಗೆಯೂ ಕಂಗನಾ ಮಾತನಾಡಿದ್ದಾರೆ. ‘ವಿಸ್ತಾರವಾಗಿ ಇಳಿಬಿಡುವ ಬಟ್ಟೆಗಳೆಂದರೆ ನನಗೆ ಇಷ್ಟ. ಅವು ರೆಡ್‌ ಕಾರ್ಪೆಟ್‌ ಮೇಲಿನ ನಡಿಗೆಗೆ ಸರಿಯಾಗಿ ಹೊಂದುತ್ತವೆ’ ಎಂದಿರುವ ಅವರು, ಮಾನವ್‌ ಅವರ ವಿನ್ಯಾಸವನ್ನೂ ಮನದುಂಬಿ ಹೊಗಳಿದ್ದಾರೆ.

‘ಮುಂದಿನ ದಿನಗಳಲ್ಲಿ ಫ್ಯಾಷನ್‌ ಷೋ ಮತ್ತು ವಿಶೇಷ ಸಂದರ್ಭಗಳಲ್ಲಿ ಮಾನವ್‌ ವಿನ್ಯಾಸ ಮಾಡಿದ ಬಟ್ಟೆಗಳಲ್ಲಿಯೇ ನೀವು  ನನ್ನನ್ನು ನೋಡಲಿದ್ದೀರಿ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.