ADVERTISEMENT

ಜೇಡ ಜಾಲವಲ್ಲ, ಇದು ‘ಶಿವ’ತಾಂಡವ!

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2017, 11:40 IST
Last Updated 15 ಸೆಪ್ಟೆಂಬರ್ 2017, 11:40 IST
ಜೇಡ ಜಾಲವಲ್ಲ, ಇದು ‘ಶಿವ’ತಾಂಡವ!
ಜೇಡ ಜಾಲವಲ್ಲ, ಇದು ‘ಶಿವ’ತಾಂಡವ!   

ತೆಲುಗಿನ ಮಹೇಶ್‌ ಬಾಬು ಹೆಸರು ಕೇಳಿದ್ರೆ ಸಾಲು ಸಾಲು ಆ್ಯಕ್ಷನ್‌ ಸಿನಿಮಾಗಳೇ ಕಣ್ಮುಂದೆ ಬರುತ್ತವೆ. ಹರಿತ ನೋಟ, ಖಡಕ್‌ ಡೈಲಾಗ್‌, ಎದುರಾಳಿಗಳನ್ನು ಚಿಂದಿ ಉಡಾಯಿಸುವ ಪಂಚ್‌ಗಳು... ಇಂತಿಪ್ಪ ಮಹೇಶ್‌ ಬಾಬು ‘ನಾ ಪೇರು ಶಿವ, ಇದೇ ನಾ ಆಫೀಸ್‌’ (ನನ್ನ ಹೆಸರು ಶಿವ, ಇದೇ ನನ್ನ ಆಫೀಸ್‌) ಎಂದು ಸಭ್ಯಸ್ಥ ಸಾಫ್ಟ್‌ವೇರ್‌ ಹುಡುಗನ ಹಾಗೆ ಇನ್‌ಷರ್ಟ್‌ ಮಾಡಿಕೊಂಡು, ಹೆಗಲಿಗೆ ಲ್ಯಾಪ್‌ಟಾಪ್‌ ಬ್ಯಾಗ್‌ ನೇತುಹಾಕಿಕೊಂಡು ಬಂದರೆ ನಂಬುವುದು ಕಷ್ಟ ಅಲ್ಲವೇ? ಕಷ್ಟಪಟ್ಟಾದರೂ ನಂಬಲೇಬೇಕು. ಸೆ.14ರಂದು ಅಪ್‌ಲೋಡ್‌ ಆದ ಮಹೇಶ್‌ ಬಾಬು ಹೊಸ ಸಿನಿಮಾ ‘ಸ್ಪೈಡರ್‌’ನ ಟ್ರೈಲರ್‌ ಆರಂಭವಾಗುವುದೇ ಈ ದೃಶ್ಯದೊಂದಿಗೆ!

ಛೆ, ಖಡಕ್‌ ಆಗಿ ಹಾಡ್ಕೊಂಡು ಹೊಡ್ಕೊಂಡು ಇದ್ದ ಹುಡುಗ ಹೀಗೆ ಸಾಚಾ ಆಗೋಗಿದ್ದು ಯಾಕೆ? ಎಂದು ಅಚ್ಚರಿಪಡಬೇಡಿ. ಬದಲಾಗುವ ಮಾತೇ ಇಲ್ಲ. ಮರುದೃಶ್ಯದಲ್ಲಿಯೇ ಸ್ಟೈಲಿಶ್‌ ಲುಕ್‌ನಲ್ಲಿ ಸಖತ್‌ ಸ್ಟೆಪ್‌ ಹಾಕುವುದು ಕಾಣುತ್ತದೆ. ಕೊಂಚ ನಿಟ್ಟುಸಿರುವ ಬಿಡುವ ಮುನ್ನವೇ ದಡ್‌ ದಡ್‌ ದಡಾಲ್‌ ಎಂಬ ಶಬ್ದ... ಬಾಬು ಬಗ್ಗೆ ಗೊತ್ತಿರೋರ‍್ಯಾರೂ ಬೆಚ್ಚಿ ಬೀಳಲು ಚಾನ್ಸೇ ಇಲ್ಲ. ಎದುರಾಳಿಗಳ ದೇಹಗಳು ಕಾಲ್ಚೆಂಡಿನಂತೆ ಬಿದ್ದೆದ್ದು ಪುಟಿದು ಹೊರಳಾಡುತ್ತಿರುತ್ತವೆ! ನೋಡಿ ಎಂಜಾಯ್‌ ಮಾಡಿ.

ಸಿನಿಮಾದ ಹೆಸರೇ ‘ಸ್ಪೈಡರ್‌’ ಎಂದಿದ್ದರೂ ಟ್ರೈಲರ್‌ನಲ್ಲಿ ಮಹೇಶ್‌ ಬಾಬು ಅವರೇ ‘ನಾನು ಸ್ಪೈಡರ್‌ ಮ್ಯಾನ್‌ ಸೂಪರ್‌ ಮ್ಯಾನ್‌ ಯಾರೂ ಅಲ್ಲ’ ಎಂದು ಒಪ್ಪಿಕೊಳ್ಳುತ್ತಾರೆ. ಇಂಗ್ಲಿಷಿನ ಸ್ಪೈಡರ್‌ ಮ್ಯಾನ್‌ ಆವಾಹಿಸಿಕೊಂಡಿರುವ ಅತಿಮಾನುಷ ಶಕ್ತಿ ಮಹೇಶ್‌ ಬಾಬು ನಟಿಸುವ ಪಾತ್ರಗಳಿಗೆ ಹುಟ್ಟಾ ದಕ್ಕಿಬಿಡುವುದರಿಂದ ಅವರಿಗೆ ಸ್ಪೈಡರ್‌ ಮ್ಯಾನ್‌ ಆಗಬೇಕಾದ ಅವಶ್ಯಕತೆಯೇ ಇಲ್ಲಬಿಡಿ. ‘ಶಿವ’ನಾಗಿಯೇ ರುದ್ರತಾಂಡವ ಮಾಡಬಲ್ಲ ಪ್ರತಾಪ ಅವರಿಗಿದೆ.

ADVERTISEMENT

1.51 ನಿಮಿಷ ಅವಧಿಯ ಈ ಟ್ರೈಲರ್‌ನಲ್ಲಿ ‘ಶಿವ’ ತಾಂಡವದ ನಡುವೆಯೇ ಪುಸ್ತಕ ರಾಶಿಯ ನಡುವೆ ಪ್ರೇಮಕಾವ್ಯದ ನವಿರು ಸಾಲಿನಂಥ ಚೆಲುವೆ ರಾಕುಲ್‌ ಪ್ರೀತ್‌ ಸಿಂಗ್‌ ಕೂಡ ಹಾದು ಹೋಗುತ್ತಾರೆ.

ರೊಮ್ಯಾನ್ಸ್‌, ಥ್ರಿಲ್ಲರ್‌, ಆ್ಯಕ್ಷನ್‌ ಮೂರೂ ಎಳೆಗಳನ್ನೂ ಗಟ್ಟಿಯಾಗಿಯೇ ಹೆಣೆದು ಕಟ್ಟಿದ ಸ್ಪೈಡರ್‌ ಜಾಲವಿದು ಎಂಬುದಕ್ಕೆ ಸಾಕಷ್ಟು ಸೂಚನೆಗಳು ಈ ಚಿತ್ರದಲ್ಲಿವೆ.

ಎ.ಆರ್‌. ಮರುಗದಾಸ್‌ ನಿರ್ದೇಶನದ ಈ ಚಿತ್ರ ತೆಲುಗು ಮತ್ತು ತಮಿಳು ಎರಡೂ ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಮಹೇಶ್‌ ಬಾಬು ಅವರ ಸಿನಿಮಾವೊಂದು ಏಕಕಾಲದಲ್ಲಿ ಎರಡು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವುದು ಇದೇ ಮೊದಲು. ಸೆಪ್ಟೆಂಬರ್ 27 ತೆರೆಯ ಮೇಲೆ ಎದುರಾಳಿಗಳನ್ನು ಬಗ್ಗುಬಡಿಯಲು ‘ಸ್ಪೈಡರ್‌’ ಜಾಲ ಹೆಣೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.