ADVERTISEMENT

ತೇರು ಹೊಂಟೈತವ್ವ...

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2015, 20:23 IST
Last Updated 26 ನವೆಂಬರ್ 2015, 20:23 IST

ಶ್ರೀಮುರುಳಿ ತಮ್ಮ ದಂಡು–ದಳಪತಿಗಳ ಜತೆ ಡಿಸೆಂಬರ್ ನಾಲ್ಕರಂದು ಚಿತ್ರ ಮಂದಿರಗಳಿಗೆ ಲಗ್ಗೆ ಇಡಲಿದ್ದಾರೆ. ಅಂದಹಾಗೆ ಒಂದೂವರೆ ವರ್ಷದಿಂದ ಯಾವ ಚಿತ್ರಗಳನ್ನೂ ಒಪ್ಪಿಕೊಳ್ಳದೆ ಅವರು ನಟಿಸಿದ್ದ ‘ರಥಾವರ’ ಚಿತ್ರ ಮುಂದಿನ ವಾರ ತೆರೆ ಕಾಣುತ್ತಿದೆ. ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಚಿತ್ರತಂಡ, ‘ರಥಾವರ’ ಮುರುಳಿ ಅಭಿಮಾನಿಗಳಲ್ಲಿ ಹುಟ್ಟಿಸಿರುವ ನಿರೀಕ್ಷೆಗಳನ್ನು ತುಂಬಿಕೊಡಲಿದೆ ಎಂದಿತು. ಅದೇ ವೇಳೆ ‘ರಥಾವರ’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಯಿತು.

ಒನ್‌ ಮ್ಯಾನ್ ಶೋನಂತೆ ಶ್ರೀಮುರುಳಿ ಕಾರ್ಯಕ್ರಮ ನಿರ್ವಹಿಸಿದರು. ಕುರ್ಚಿಯಲ್ಲಿ ಕೂರದೆ ಫಾಸ್ಟ್ ಫಾಸ್ಟ್ ಎಂದು ತಮ್ಮ ತಂಡವನ್ನು ಪರಿಚಯಿಸಿದರು. ಮಾಧ್ಯಮಗಳಿಗೆ ಅಭಿಪ್ರಾಯ ತಿಳಿಸಿ ಎಂದು ಚಿತ್ರತಂಡದವರಿಗೆ ಮನವಿ ಮಾಡಿದರು. ಮೊದಲ ಬಾರಿಗೆ ‘ರಥಾವರ’ದಲ್ಲಿ ‘ಹುಡುಗಿ ಕಣ್ಣು...’ ಎನ್ನುವ ಹಾಡನ್ನು ಹೇಳುವ ಮೂಲಕ ಮುರುಳಿ ಗಾಯಕರೂ ಆಗಿದ್ದಾರೆ. ಹಾಡುಗಳನ್ನು ಅಂತರ್ಜಾಲದ ಮೂಲಕ ಕೇಳುಗರಿಗೆ ಮುಟ್ಟಿಸಲಾಗಿದೆ.

‘ರಥಾವರ’ದ ಕಥೆಗೆ ಶ್ರೀಮುರುಳಿ ಅವರನ್ನು ಆಯ್ಕೆ ಮಾಡಿಕೊಳ್ಳುವಂತೆ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಅವರಿಗೆ ಹೇಳಿದ್ದು ಫೈಟ್ ಮಾಸ್ಟರ್ ಡಿಫರೆಂಟ್ ಡ್ಯಾನಿ ಅವರಂತೆ. ‘ಒಂದು ದಿನ ಸ್ನೇಹಿತ ಚಂದ್ರಶೇಖರ್ ನನಗೆ ಪೋನ್ ಮಾಡಿ, ಹೀಗೊಂದು ಕಥೆ ಇದೆ ಎಂದರು. ತಕ್ಷಣವೇ ಶ್ರೀಮುರುಳಿ ಅವರೇ ಈ ಕಥೆಗೆ ಸೂಕ್ತ ಎಂದೆ. ಆ ನಂತರ ಮುರುಳಿ ಜತೆ ಮಾತುಕತೆ’ ಎಂದರು ಡ್ಯಾನಿ. ಟ್ರೇಲರ್‌ ನೋಡಿದರೆ ಡ್ಯಾನಿ ಅವರ ಕಸರತ್ತಿಗೆ ಭರಪೂರ ಅವಕಾಶವಿದೆ ಎನ್ನುವುದು ಅರ್ಥವಾಗುತ್ತದೆ.

‘ರಥಾವರ ಸಂಸ್ಕೃತ ಪದ. ಇದಕ್ಕೆ ಅಲ್ಟಿಮೇಟ್ ವಾರಿಯರ್ ಎನ್ನುವ ಅರ್ಥ. ಇದರ ಅರ್ಥ ತುಂಬಾ ಆಳವಾಗಿದೆ. ಮತ್ತೊಬ್ಬರ ಬಗ್ಗೆ ಇಡುವ ನಂಬಿಕೆ ಇದೆಯಲ್ಲ ಅದರ ಒಟ್ಟು ಅಂದವೇ ಈ ಚಿತ್ರ’ ಎಂದರು ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ. ಒಂದೂವರೆ ವರುಷದಿಂದ ತಮ್ಮ ತಂಡದ ಜತೆ ಕುಳಿತು ಎಲ್ಲ ಕೆಲಸಗಳಲ್ಲೂ ಜತೆಯಾದ ಶ್ರೀಮುರುಳಿ ಅವರಿಗೆ ಹೆಚ್ಚು ಅಂಕ ನೀಡಿದರು.

‘ರಥಾವರ ಎಂದರೆ ಇಡೀ ತಂಡದ ಕೆಲಸ’ ಎಂದವರು ನಾಯಕಿ ರಚಿತಾ ರಾಮ್‌. ಕಾಮಿಡಿ ಕಿಲಾಡಿ ಚಿಕ್ಕಣ್ಣನಿಗೆ ಇಲ್ಲಿ ಕಾಮಿಡಿ ಜತೆ ಭಾವುಕತೆಯ ಪಾತ್ರ. ನಿಮ್ಮದು ಕಾಮಿಡಿ ಪಾತ್ರ ಎಂದುಕೊಳ್ಳಬೇಡಿ ಎಂದು ಮೊದಲೇ ನಿರ್ದೇಶಕರು ಹೇಳಿದ್ದರಂತೆ. ‘ನಾನು ಭಾವುಕವಾಗಿಯೂ ನಟಿಸುವೆ’ ಎಂದರು ಚಿಕ್ಕಣ್ಣ. ಧರ್ಮ ವಿಶ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಭುವನ್ ಗೌಡ ಛಾಯಾಗ್ರಹಕರು. ಪುತ್ರ ಶ್ರೀಮುರುಳಿಯನ್ನು ನಿರ್ಮಾಪಕ ಚಿನ್ನೇಗೌಡರು ಹರಸಿ ಚಿತ್ರತಂಡಕ್ಕೆ ಶುಭಕೋರಿದರು. ಶರತ್ ಲೋಹಿತಾಶ್ವ, ರವಿಶಂಕರ್, ಧರ್ಮ ಮತ್ತಿತರರು ‘ರಥಾವರ’ದ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.