ADVERTISEMENT

‘ದಗಲ್ಬಾಜಿ ದುನಿಯಾ...’

​ಪ್ರಜಾವಾಣಿ ವಾರ್ತೆ
Published 18 ಮೇ 2017, 19:30 IST
Last Updated 18 ಮೇ 2017, 19:30 IST
‘ದಗಲ್ಬಾಜಿ ದುನಿಯಾ...’
‘ದಗಲ್ಬಾಜಿ ದುನಿಯಾ...’   
‘ಹಾಡುಗಳು ಹಿಟ್‌ ಆದರೆ ಜನರು ಸಿನಿಮಾ ನೋಡಲು ಬರುತ್ತಾರೆ. ಸಿನಿಮಾ ಗೆಲ್ಲುತ್ತದೆ’ – ತಮ್ಮ ಈ ಮಾತಿಗೆ ಅಶ್ವಿನಿ ರಾಮ್‌ಪ್ರಸಾದ್‌ ಅವರು ನಿದರ್ಶನವಾಗಿ ನೀಡಿದ್ದು ತಮ್ಮದೇ ನಿರ್ಮಾಣದ ‘ಜೋಗಿ’ ಸಿನಿಮಾವನ್ನು.
 
ಹಾಡುಗಳ ಗೆಲುವಿನ ಸೂತ್ರದ ಮೇಲೆಯೇ ಅವರು ತಾವು ನಿರ್ಮಾಣ ಮಾಡುತ್ತಿರುವ ‘ಸರ್ಕಾರಿ ಕೆಲಸ ದೇವರ ಕೆಲಸ’ ಸಿನಿಮಾದ ಒಂದು ಹಾಡಿಗಾಗಿಯೇ 20 ಲಕ್ಷ ರೂಪಾಯಿ ವೆಚ್ಚ ಮಾಡಿದ್ದಾರೆ.

ಚಿತ್ರದ ಉಳಿದ ಗೀತೆಗಳಿಗೆ ಅರ್ಜುನ್‌ ಜನ್ಯ ರಾಗಸಂಯೋಜನೆ ಮಾಡಿದ್ದರೆ, ‘ದಗಲ್ಬಾಜಿ ದುನಿಯಾ/ ಇಲ್ಲಿಲ್ಲ ನೀತಿ ನ್ಯಾಯ..’ ಎಂಬ ಒಂದು ಹಾಡನ್ನು ಚಂದನ್‌ ಶೆಟ್ಟಿ ಸಂಯೋಜನೆ ಮಾಡಿ ಹಾಡಿರುವುದರ ಜೊತೆಗೆ ತೆರೆಯ ಮೇಲೆಯೂ ಕಾಣಿಸಿಕೊಂಡಿದ್ದಾರೆ. ಈ ಗೀತೆಯ ಸಾಹಿತ್ಯ ವಿ. ನಾಗೇಂದ್ರ ಪ್ರಸಾದ್‌ ಅವರದು.
 
ಈ ಒಂದು ಹಾಡಿನ ಬಿಡುಗಡೆಗಾಗಿ ಪತ್ರಿಕಾಗೋಷ್ಠಿ ಕರೆಯಲಾಗಿತ್ತು. ಕೇವಲ ಹಾಡಿನ ಕುರಿತಾಗಿ ಮಾತ್ರ ಮಾತನಾಡಬೇಕು ಎಂದು ಮೊದಲೇ ನಿರ್ಧರಿಸಿದ್ದರಿಂದಲೋ ಏನೋ, ಚಿತ್ರದ ಯಾವ ಕಲಾವಿದರೂ ಬಂದಿರಲಿಲ್ಲ. 
 
‘ಸರ್ಕಾರಿ ಕೆಲಸ ದೇವರ ಕೆಲಸ’ ಸಿನಿಮಾಗೆ ಆರ್‌. ರವೀಂದ್ರ ಅವರ ನಿರ್ದೇಶನದ ಈ ಚಿತ್ರಕ್ಕೆ ‘ಮಠ’ ಖ್ಯಾತಿಯ ಗುರುಪ್ರಸಾದ್‌ ಸಂಭಾಷಣೆ ಬರೆದಿರುವುದು ವಿಶೇಷ. ‘ಸಿನಿಮಾಗೆ ಟ್ಯಾಗ್‌ಲೈನ್‌ ಕೊಡುವುದು ಇತ್ತೀಚೆಗೆ ಹುಟ್ಟಿಕೊಂಡ ಪದ್ಧತಿ.
 
ಆದರೆ ವಿಧಾನಸೌಧಕ್ಕೆ ಬಹು ಹಿಂದೆಯೇ ‘ಸರ್ಕಾರಿ ಕೆಲಸ ದೇವರ ಕೆಲಸ’ ಎಂಬ ಟ್ಯಾಗ್‌ಲೈನ್‌ ನೀಡಲಾಗಿದೆ. ಅದನ್ನೇ ಚಿತ್ರದ ಶೀರ್ಷಿಕೆಯನ್ನಾಗಿಸಿಕೊಂಡಿದ್ದಾರೆ ಆರ್‌. ರವೀಂದ್ರ. ಇದು ಸರ್ಕಾರದ ಕಾರ್ಯವೈಖರಿ, ಅಧಿಕಾರಶಾಹಿಯ ವಿರುದ್ಧ ವಿಡಂಬನಾತ್ಮಕ ಕಥೆ ಇರುವ ಸಿನಿಮಾ’ ಎಂದರು ವಿ. ನಾಗೆಂದ್ರಪ್ರಸಾದ್‌.
 
ಅಂದಹಾಗೆ ಈ ಸಿನಿಮಾದ ಟ್ಯಾಗ್‌ಲೈನ್‌ ‘ಎಲ್ರೂ ... ನನ್ ಮಕ್ಳೇ’. ‘ಇಲ್ಲಿ ಖಾಲಿ ಬಿಟ್ಟಿರುವ ಜಾಗವನ್ನು ಜನರು ತಮ್ಮ ತಮ್ಮ ಅನುಭವಕ್ಕೆ ಅನುಗುಣವಾಗಿ ತುಂಬಿಕೊಳ್ಳಬಹುದು’ ಎಂದರು ನಿರ್ದೇಶಕ ಆರ್‌. ರವೀಂದ್ರ. ಈ ಚಿತ್ರದ ವಿಭಿನ್ನ ಶೀರ್ಷಿಕೆಯೇ ಚಂದನ್‌ ಶೆಟ್ಟಿ ಅವರನ್ನು ಆಕರ್ಷಿಸಿತಂತೆ.
 
‘ಚಿತ್ರದ ಶೀರ್ಷಿಕೆ ಮತ್ತು ಅದರ ಉದ್ದೇಶದಲ್ಲಿರುವ ಸಾಮಾಜಿಕ ಜಾಗೃತಿಯ ಕಾಳಜಿ ಇವನ್ನೆಲ್ಲ ತಿಳಿದುಕೊಂಡಾಗ ನನ್ನ ಮನಸ್ಸಿನಲ್ಲಿ ರಾಕ್‌ ಶೈಲಿಯ ಟ್ಯೂನ್‌ ಹುಟ್ಟಿಕೊಂಡಿತು. ಅದಕ್ಕೆ ನಾಗೇಂದ್ರಪ್ರಸಾದ್‌ ಪದಗಳನ್ನು ಹೊಸೆದಿದ್ದಾರೆ.
 
ಈ ಮೊದಲು ಆಲ್ಬಂಗಳನ್ನು ಮಾಡಿದ್ದರೂ ಸಿನಿಮಾದಲ್ಲಿ ನಟಿಸಿರಲಿಲ್ಲ. ಈ ಚಿತ್ರದ ಮೂಲಕ ಬೆಳ್ಳಿತೆರೆಯ ಮೇಲೂ ಕಾಣಿಸಿಕೊಳ್ಳುತ್ತಿದ್ದೇನೆ’ ಎಂದು ಅವರು ಖುಷಿಯಿಂದ ಹೇಳಿಕೊಂಡರು.
 
ಈಗ ಹದಿನೈದು ವರ್ಷಗಳ ಹಿಂದೆ ಅಶ್ವಿನಿ ಆಡಿಯೊ ಕಂಪೆನಿಯಿಂದಲೇ ಬಿಡುಗಡೆಯಾಗಿ ಉತ್ತರಕರ್ನಾಟಕದಲ್ಲಿ ಜನಪ್ರಿಯವಾಗಿದ್ದ ‘ಬೆಳ್ಳುಳ್ಳವ್ವಾ ಬೆಳ್ಳುಳ್ಳಿ’ ಎಂಬ ಹಾಡನ್ನೂ ಈ ಸಿನಿಮಾದಲ್ಲಿ ಮರುರೂಪಿಸಿ ಬಳಸಿಕೊಳ್ಳಲಾಗಿದೆ.
 
ಇದೀಗ ಸೆನ್ಸಾರ್‌ ಮಂಡಳಿಯ ಅಂಗಳಲ್ಲಿರುವ ‘ಸರ್ಕಾರಿ ಕೆಲಸ ದೇವರ ಕೆಲಸ’ ಸಿನಿಮಾವನ್ನು ಆದಷ್ಟು ಬೇಗ ಬಿಡುಗಡೆ ಮಾಡುವ ಆಲೋಚನೆ ಚಿತ್ರತಂಡಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.