ADVERTISEMENT

ದೀಪಿಕಾ, ಪ್ರಿಯಾಂಕಾ ಲಾವಣಿ ನೋಡಲು ಮಾಧುರಿಗೆ ಕಾತರ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2015, 19:30 IST
Last Updated 26 ಏಪ್ರಿಲ್ 2015, 19:30 IST
ದೀಪಿಕಾ, ಪ್ರಿಯಾಂಕಾ ಲಾವಣಿ ನೋಡಲು ಮಾಧುರಿಗೆ ಕಾತರ
ದೀಪಿಕಾ, ಪ್ರಿಯಾಂಕಾ ಲಾವಣಿ ನೋಡಲು ಮಾಧುರಿಗೆ ಕಾತರ   

ಸಂಜಯ್‌ ಲೀಲಾ ಬನ್ಸಾಲಿ ಅವರ ‘ಬಾಜಿರಾವ್‌ ಮಸ್ತಾನಿ’ ಚಿತ್ರದಲ್ಲಿ ನಟಿಯರಾದ ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾ ಲಾವಣಿ ನೃತ್ಯಕ್ಕೆ ಹೆಜ್ಜೆ ಹಾಕಲಿದ್ದು, ಅದನ್ನು ನೋಡಲು ಕಾತುರಳಾಗಿ ಇರುವುದಾಗಿ ಮಾಧುರಿ ದೀಕ್ಷಿತ್‌ ಹೇಳಿದ್ದಾರೆ.

ಮುಂಬೈನ ಮೊದಲ ಸಮಕಾಲೀನ ನೃತ್ಯ ಹಬ್ಬವಾದ ‘ಜುಗನಿ’ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಧುರಿ, ‘ನೃತ್ಯಕ್ಕೆ ಸಂಬಂಧಿಸಿದ ಯಾವುದೇ ವಿಷಯಗಳು ನನ್ನಲ್ಲಿ ಕುತೂಹಲ ಮೂಡಿಸುತ್ತವೆ. ದೀಪಿಕಾ ಹಾಗೂ ಪ್ರಿಯಾಂಕಾ ಅವರ ಲಾವಣಿ ನೃತ್ಯ ಹೇಗಿರುತ್ತದೆಯೋ ಎಂದು ನೋಡಲು ಕುತೂಹಲದಿಂದ ಕಾಯುತ್ತಿದ್ದೇನೆ’ ಎಂದಿದ್ದಾರೆ ಅವರು.

‘ಬಾಜಿರಾವ್‌ ಮಸ್ತಾನಿ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಪ್ರಿಯಾಂಕಾ ಹಾಗೂ ದೀಪಿಕಾ ಲಾವಣಿ ನೃತ್ಯಕ್ಕೆ ಒಟ್ಟಿಗೆ ಹೆಜ್ಜೆ ಹಾಕಲಿದ್ದಾರೆ. ನಾನು ‘ದಿಲ್‌ ತೊ ಪಾಗಲ್‌ ಹೈ’ ಚಿತ್ರದಲ್ಲಿ ಅಭಿನಯಿಸುವಾಗ ಕರಿಷ್ಮಾ ಕಪೂರ್‌ ಅವರೊಂದಿಗೆ ನೃತ್ಯ ಮಾಡುವ ದೃಶ್ಯವಿತ್ತು. ಅದನ್ನು ತುಂಬಾ ಖುಷಿಯಿಂದ ಮಾಡಿದ್ದೆ. ಆಗ ಆ ಕೊರಿಯೋಗ್ರಫಿಯನ್ನು ನೃತ್ಯ ನಿರ್ದೇಶಕ ಶ್ಯಾಮಕ್‌ ದಾವರ್‌ ಮಾಡಿದ್ದರು’ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

‘ಆಗ ನಾನು ಮಾಡಿದ್ದು ಜಾಸ್ ಹಾಗೂ ಸಮಕಾಲೀನ ನೃತ್ಯ. ಕರಿಷ್ಮಾ ಅವರೊಂದಿಗೆ ಹೆಜ್ಜೆ ಹಾಕುವಾಗ ನಿಜಕ್ಕೂ ಎಂಜಾಯ್‌ ಮಾಡಿದ್ದೆ. ಆ ರೀತಿಯ ನೃತ್ಯ ಪ್ರಕಾರವನ್ನು ಮೊದಲ ಬಾರಿಗೆ ಮಾಡಿದ್ದೆ’ ಎಂದು ನಗೆ ಬೀರಿದರು ಮಾಧುರಿ. ‘ಸಂಜಯ್‌ ಲೀಲಾ ಬನ್ಸಾಲಿ ಅವರ ‘ದೇವದಾಸ್‌’ ಚಿತ್ರದಲ್ಲಿ ಐಶ್ವರ್ಯ ರೈ ಜತೆ ನೃತ್ಯ ಮಾಡಿದ್ದೇನೆ. ಅದರ ಕೊರಿಯೋಗ್ರಫಿ ಸರೋಜ್‌ ಖಾನ್‌ ಅವರದ್ದು. ನಿಜಕ್ಕೂ ಅದು ಮರೆಯಲಾಗದ ಅನುಭವ’ ಎಂದಿದ್ದಾರೆ ಮಾಧುರಿ.                                                   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.