ADVERTISEMENT

ನಟ ಯಶ್ 'ಮಿಸ್ಟರ್ ಶೋ ಆಫ್' ಎಂದು ಹೇಳಿ ವಿವಾದಕ್ಕೀಡಾಗಿದ್ದ ರಶ್ಮಿಕಾ ಫೇಸ್‍ಬುಕ್‍ನಲ್ಲಿ ಕ್ಷಮೆಯಾಚನೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2017, 11:09 IST
Last Updated 26 ಜೂನ್ 2017, 11:09 IST
ಫೋಟೊ ಕೃಪೆ: ಫೇಸ್ ಬುಕ್
ಫೋಟೊ ಕೃಪೆ: ಫೇಸ್ ಬುಕ್   

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರನ್ನು 'ಮಿಸ್ಟರ್ ಶೋ ಆಫ್'ಎಂದು ಹೇಳಿ ವಿವಾದಕ್ಕೀಡಾಗಿದ್ದ 'ಕಿರಿಕ್ ಪಾರ್ಟಿ' ನಟಿ ರಶ್ಮಿಕಾ ಮಂದಣ್ಣ  ಫೇಸ್‍ಬುಕ್‍ನಲ್ಲಿ ಕ್ಷಮೆ ಯಾಚಿಸಿದ್ದಾರೆ.

ಏನಿದು ವಿವಾದ?
ಸಂದರ್ಶನವೊಂದರಲ್ಲಿ ನಿರೂಪಕರು ರಶ್ಮಿಕಾ ಅವರಲ್ಲಿ ಕನ್ನಡದ ಯಾವ ನಟ ಮಿಸ್ಟರ್ ಶೋ ಆಫ್ ಎಂದು ನಿಮಗೆ ಅನಿಸುತ್ತದೆ ಎಂದು ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ರಶ್ಮಿಕಾ ಅವರು, ಯಾರೂ ಇಲ್ಲ. ನಾನು ಸುಮ್ನೆ ಈ ಪ್ರಶ್ನೆಗೆ ಉತ್ತರಿಸಿ ತೊಂದರೆಗೆ ಸಿಕ್ಕಿಹಾಕಿಕೊಳ್ಳುವುದಿಲ್ಲ ಎಂದು ಹೇಳಿದ್ದರೂ ಆಮೇಲೆ ಯಶ್ ಎಂದು ಉತ್ತರಿಸಿದ್ದರು.

ರಶ್ಮಿಕಾ ಅವರ ಈ ಮಾತಿಗೆ ಯಶ್ ಅಭಿಮಾನಿಗಳು ಗರಂ ಆಗಿದ್ದು, ಸಾಮಾಜಿಕ ತಾಣದಲ್ಲಿ ರಶ್ಮಿಕಾ ವಿರುದ್ಧ ಕಿಡಿಕಾರಿದ್ದರು.

ADVERTISEMENT

ರಶ್ಮಿಕಾ ವಿರುದ್ಧ ಟ್ರೋಲ್
ಫೇಸ್‍ಬುಕ್, ಟ್ವಿಟರ್‍‍ನಲ್ಲಿ ಯಶ್ ಅಭಿಮಾನಿಗಳು ರಶ್ಮಿಕಾ ವಿರುದ್ಧ ಸಮರ ಸಾರಿದ್ದು, ರಶ್ಮಿಕಾ ಅವರನ್ನು ಟ್ರೋಲ್ ಮಾಡಲಾಗಿದೆ.

ಯಶ್ ಪ್ರತಿಕ್ರಿಯೆ

ರಶ್ಮಿಕಾ ಅವರು ವೈಯಕ್ತಿಕವಾಗಿ ನನಗೆ ಪರಿಚಿತರಲ್ಲ, ಇದುವರೆಗೂ ಭೇಟಿಯು ಮಾಡಿಲ್ಲ...ಮಾತು ಸಹ ಆಡಿಲ್ಲ.ಹಾಗೆಂದು ಅವರಿಗೆ ನನ್ನ ಬಗ್ಗೆ ಯಾವುದೇ ರೀತಿಯ ಆಭಿಪ್ರಾಯ ಇರಬಾರದೆಂದೇನಿಲ್ಲ. ಅವರ ಅಭಿಪ್ರಾಯ ಅವರದು, ಅದನ್ನು ಹೀಗಳೆಯುವ ಕೆಲಸ ಯಾರೂ ಮಾಡಬಾರದು. ಎಲ್ಲರ ಅಭಿಪ್ರಾಯವನ್ನು ಗೌರವಿಸೋಣ.
'ಒಬ್ಬರ ಅಭಿಪ್ರಾಯ ಇನ್ನೊಬ್ಬರ ವ್ಯಕ್ತಿತ್ವವನ್ನು ನಿರ್ಧರಿಸುವುದಿಲ್ಲ'
ಈ ವಿಷಯ ಇಲ್ಲಿಗೆ ಬಿಟ್ಟುಬಿಡಿ, ಇಲ್ಲಿ ಚರ್ಚಿಸುವಂತದ್ದು ಏನೂ ಇಲ್ಲ!  ಎಂದು ನಟ ಯಶ್ ತಮ್ಮ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

ಯಶ್ ಅವರ ಬಗ್ಗೆ ನೆಗೆಟಿವ್ ಆಗಿ ಮಾತನಾಡಿದ ರಶ್ಮಿಕಾ ಕ್ಷಮೆ ಕೇಳಲೇಬೇಕೆಂದು ಅಭಿಮಾನಿಗಳು ಪಟ್ಟು ಹಿಡಿದಿದ್ದರು. ಇದಕ್ಕೆ ಮಣಿದ ರಶ್ಮಿಕಾ ಸೋಮವಾರ ಫೇಸ್‍ಬುಕ್‍ನಲ್ಲಿ ಕ್ಷಮೆ ಯಾಚಿಸಿದ್ದಾರೆ.

ಕ್ಷಮೆಯಾಚಿಸಿದ ರಶ್ಮಿಕಾ

ಏಳು ತಿಂಗಳ ಹಿಂದೆ ಅಂದರೆ ಕಿರಿಕ್ ಪಾರ್ಟಿ ಚಿತ್ರ ಬಿಡುಗಡೆಯಾಗುವ ಮುನ್ನವೇ ಆ ಸಂದರ್ಶನದ ಶೂಟಿಂಗ್ ನಡೆದಿತ್ತು. ಈ ಸಂದರ್ಶನವನ್ನು ಕಿರಿಕ್ ಪಾರ್ಟಿ ಬಿಡುಗಡೆ ಸಮಯದಲ್ಲಿ ಸ್ಟಾರ್ ಸುವರ್ಣ ಪ್ರಸಾರ ಮಾಡಿದ್ದಲ್ಲದೆ ಇತ್ತೀಚೆಗೆ ಮತ್ತೊಮ್ಮೆ ಮರು ಪ್ರಸಾರ ಮಾಡಿತ್ತು.

ನನಗೆ ಯಶ್ ಸರ್ ಬಗ್ಗೆಯಾಗಲೀ ಅಥವಾ ಇನ್ನಿತರರ ಬಗ್ಗೆಯಾಗಲೀ ಅಗೌರವ ಇಲ್ಲ, ಯಶ್ ಸರ್ ಅವರ ಪ್ರತಿಭೆ ಬಗ್ಗೆ, ಅವರ ಮೇಲೆ ನನಗಿರುವ ಗೌರವದ ಬಗ್ಗೆ ನಾನೇ ಈ ಹಿಂದೆ ಹೇಳಿದ್ದೆ. ನಾನು ಸಂತು ಸ್ಟ್ರೈಟ್ ಫಾರ್ವರ್ಡ್ ಸಿನಿಮಾವನ್ನು ಮೆಚ್ಚಿಕೊಂಡಿರುವ ವಿಷಯವನ್ನು ಹೇಳಿದ್ದೆನಾದರೂ ವಾಹಿನಿ ಆ ವಿಷಯವನ್ನು ಕಡೆಗಣಿಸಿತ್ತು. ಆದರೆ ನಾನು ಕೇಳಿದ ಮಾತಿನ ಎರಡೇ ಎರಡು ಸಾಲನ್ನು ಎತ್ತಿಕೊಂಡು ಪ್ರಸಾರ ಮಾಡಿದರೆ ಅದು ವಿಷಯದ ಗತಿಯನ್ನೇ ಬದಲಿಸುತ್ತದೆ. ಸಂದರ್ಶನದ ರ‍್ಯಾಪಿಡ್‌ ಫೈರ್ ರೌಂಡ್‍ನಲ್ಲಿ ಕೇಳಿದ ಪ್ರಶ್ನೆಗೆ ನಾನು ಹಾಗೆ ಉತ್ತರ ಕೊಟ್ಟಿದ್ದೇನೆಯೇ ವಿನಾ ಉದ್ದೇಶಪೂರ್ವಕ ಯಾರಿಗೂ ಅಗೌರವ ತೋರಿಸಿಲ್ಲ. ನಿಮ್ಮ ಭಾವನೆಗಳಿಗೆ ಧಕ್ಕೆಯಾಗಿದ್ದರೆ ನಾನು ಕ್ಷಮೆಯಾಚಿಸುತ್ತಿದ್ದೇನೆ.

ನನ್ನ ವಿರುದ್ಧ ಕಿಡಿ ಕಾರುವ ಮುನ್ನ ನಾನು ಈ ಹಿಂದೆ ನೀಡಿರುವ ಸಂದರ್ಶನಗಳನ್ನು, ಎಫ್ ಬಿ ಲೈವ್ ವಿಡಿಯೊಗಳನ್ನು ನೋಡಿ. ಯಶ್ ಸರ್ ಅವರ ಕೆಲಸಗಳನ್ನು ನಾನು ಮೆಚ್ಚಿದ್ದೇನೆ. ಅವರೊಂದಿಗೆ ಕೆಲಸ ಮಾಡುವ ಇಚ್ಛೆಯನ್ನೂ ನಾನು ವ್ಯಕ್ತ ಪಡಿಸಿದ್ದೇನೆ.

ನಾನು ವೃತ್ತಿ ಜೀವನ ಆರಂಭಿಸಿದ ದಿನಗಳಿಂದಲೂ ಮಾಧ್ಯಮಗಳು ನನಗೆ ಪ್ರೋತ್ಸಾಹ ನೀಡುತ್ತಾ ಬಂದಿವೆ. ಆದ್ದರಿಂದ ಈ ವಿಷಯವನ್ನು ದೊಡ್ಡದಾಗಿ ಬಿಂಬಿಸಿ ಯಶ್ ಸರ್‍ ಮತ್ತು ಅವರ ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಬೇಡಿ.
ಈ ಕಹಿ ಘಟನೆಯನ್ನು ಇಲ್ಲಿಗೇ ಬಿಟ್ಟು, ಉತ್ತಮವಾದ ವಿಷಯಗಳಿಗಾಗಿ ಎದುರು ನೋಡೋಣ. ತಪ್ಪು ಗ್ರಹಿಕೆಗಾಗಿ ನನ್ನ ಪ್ರಾಮಾಣಿಕ ಕ್ಷಮೆಯಾಚನೆಗಳು.
ನಿಮ್ಮ ಆಶೀರ್ವಾದ ಇರಲಿ
-ನಿಮ್ಮ ರಶ್ಮಿಕಾ

ಕನ್ನಡದಲ್ಲಿ ಪೋಸ್ಟ್ ಹಾಕೋದನ್ನ ಕಲಿತ್ಕೊಳ್ಳಿ
ರಶ್ಮಿಕಾ ಅವರು ಕ್ಷಮೆ ಕೇಳಿದ್ದಾಯ್ತು. ಆದರೆ ಅವರು ಇಂಗ್ಲಿಷಿನಲ್ಲಿ ಪೋಸ್ಟ್ ಹಾಕಿ ಕ್ಷಮೆ ಕೇಳಿರುವ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ರಶ್ಮಿಕಾ ಅವರ ಪೋಸ್ಟ್ ಗೆ ಬಂದ ಕೆಲವು ಕಾಮೆಂಟ್‍ಗಳು ಹೀಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.