ADVERTISEMENT

ಬ್ಯಾಟು, ಕ್ರೀಸು, ಸಿನಿಮಾ, ಇತ್ಯಾದಿ...

‘ಮುಂಗಾರು ಮಳೆ’ಗೆ ಹತ್ತು ವರ್ಷ

​ಪ್ರಜಾವಾಣಿ ವಾರ್ತೆ
Published 5 ಜನವರಿ 2017, 19:30 IST
Last Updated 5 ಜನವರಿ 2017, 19:30 IST
ಯೋಗರಾಜ್‌ ಭಟ್‌
ಯೋಗರಾಜ್‌ ಭಟ್‌   

‘ಮುಂಗಾರು ಮಳೆ’ ಸಿನಿಮಾ ಬಿಡುಗಡೆಯಾಗಿ ಹತ್ತು ವರ್ಷಗಳು ಕಳೆದವು!
ಈಗಲೂ ಮನೆಯಲ್ಲಿರುವಾಗ, ಊಟ ಮಾಡುತ್ತಿರುವಾಗ, ಯಾರೊಂದಿಗೋ ಮಾತನಾಡುತ್ತಿರುವಾಗಲೆಲ್ಲ ಟೀವಿಯಲ್ಲಿ ‘ಮಂಗಾರು ಮಳೆ’ ಸಿನಿಮಾದ ಹಾಡು, ದೃಶ್ಯಗಳು ಬರುತ್ತಿರುತ್ತವೆ. ಅವನ್ನು ನೋಡುತ್ತ ಚಿತ್ರೀಕರಣದ ದಿನಗಳು ನೆನಪಾಗುತ್ತವೆ.

ಈಗ ‘ಮುಗುಳುನಗೆ’ ಸಿನಿಮಾ ಚಿತ್ರೀಕರಣದಲ್ಲಿ ಗಣೇಶ್ ಜತೆಯಲ್ಲಿರುವಾಗಲೆಲ್ಲ ‘ಮುಂಗಾರು ಮಳೆ’ಯ ಸೆಟ್‌ನಲ್ಲಿಯೇ ಇದ್ದೇನೆ ಅನಿಸುತ್ತಿರುತ್ತದೆ. ಹತ್ತು ವರ್ಷ ಫಟ್ಟಂತ ಹೋಗಿದ್ದೂ ಗೊತ್ತಾಗಲಿಲ್ಲ.

ಒಂದೊಂದು ಸರ್ತಿ, ಎಷ್ಟೇ ಪಕ್ಕಾ ಇದ್ರೂ, ನಾವು ಬಹಳ ಸರಿಯಾಗಿ ಬೀಸಿದೀವಿ ಅಂದ್ಕೊಂಡ್ರೂ ಎಡ್ಜ್‌ ಆಗಿ ಕ್ಯಾಚ್‌ ಆಗಿಬಿಡ್ತದೆ. ಇಲ್ಲ, ಬೌಂಡರಿ ಲೈನ್‌ನಲ್ಲಿ ಯಾರಾದ್ರೂ ಹಿಡ್ಕೊಂಡುಬಿಡ್ತಾರೆ. ಇಲ್ಲ, ಗ್ರೌಂಡ್‌ ತುಂಬಾ ದೊಡ್ಡದಿದ್ದು ಅದನ್ನು ದಾಟಕ್ಕಾಗ್ದೇನೆ ಕ್ಯಾಚ್‌ ಆಗಿಬಿಡ್ತದೆ. ಹಿಂಗೆ ಒಂದು ಸಿನಿಮಾದಲ್ಲಿ ಏನೇನೋ ಸಮಸ್ಯೆಗಳಿರ್ತವೆ.

‘ಮುಂಗಾರು ಮಳೆ’ ವಿಷಯದಲ್ಲಿ ಹಾಗಾಗಲಿಲ್ಲ. ಅಲ್ಲಿ ಬಾಲು ಸ್ವಲ್ಪ ವೀಕಿತ್ತೋ, ಬ್ಯಾಟ್‌ ಗಟ್ಟಿ ಇತ್ತೋ, ಭುಜಬಲದ ಪರಿಣಾಮವೋ– ಇದೆಲ್ಲ ಸೇರಿ ಆದದ್ದೋ... ಸ್ಟೇಡಿಯಂ ದಾಟಿ ಬಾಲೇ ಕಳೆದುಹೋದಂಥ ಸ್ಥಿತಿ ಅದು. ದೊಡ್ಡ ಮಟ್ಟದಲ್ಲಿ ಜನರಿಗೆ ಕನೆಕ್ಟ್‌ ಆದ ಚಿತ್ರ ‘ಮುಂಗಾರು ಮಳೆ’.
ಒಂದು ಸಿನಿಮಾದ ಅಭೂತಪೂರ್ವ ಯಶಸ್ಸು ಇರ್ತದಲ್ಲ, ಅದರಲ್ಲಿ ಜನರ ಕೊಡುಗೆ ದೊಡ್ಡದಿರತ್ತೆ. ಅಥವಾ ಅವರು ಆ ಸಿನಿಮಾದ ಯಶಸ್ಸಿನಲ್ಲಿ ಭಾಗಿಯಾಗುತ್ತಾರೆ.

ಯಶಸ್ಸು ಊಹೆಗೆ ನಿಲುಕದೇ ಇರುವಂಥ ವಿಚಿತ್ರ. ಅಂಥಾ ಒಂದು ವಿಚಿತ್ರ ‘ಮುಂಗಾರು ಮಳೆ’ಯಲ್ಲಿ ಸಂಭವಿಸಿತು. ಅದನ್ನು ನಾವ್ಯಾರೂ ನಿರೀಕ್ಷೆ ಮಾಡಿರಲಿಲ್ಲ. ಆ ಯಶಸ್ಸು ಒಬ್ಬಿಬ್ಬರದಲ್ಲ – ಅದ್ರಲ್ಲಿ ಮನೋಮೂರ್ತಿ, ಜಯಂತ ಕಾಯ್ಕಿಣಿ ಕೊಡುಗೆ ದೊಡ್ಡದು. ಆಮೇಲೆ ಗಣೇಶನ ನಟನೆ. ಮೊದಲ ಬಾರಿಗೆ ನಾನು ಬರೆದ ಸಂಭಾಷಣೆಗಳು, ಚಿತ್ರಕಥೆ, ಚಿತ್ರೀಕರಿಸಿದ ಸ್ಥಳಗಳು, ಮಳೆ... ಎಲ್ಲ ದಿಕ್ಕಿನಲ್ಲಿಯೂ ಹೊಸತು ಹೊಸತು ಅನ್ನಿಸುತ್ತಾ ಹೋಯಿತು. ಮತ್ತು ಆ ಸಿನಿಮಾದಲ್ಲೊಂದು ಮುಗ್ಧತೆ ಇತ್ತು.

ಚಿತ್ರ ಬಿಡುಗಡೆ ಆದ ಸಂದರ್ಭವೂ ಹಾಗಿತ್ತು. ಥಿಯೇಟರ್‌ನಲ್ಲಿ ಸೆಕೆ ಆಗ್ತಿದ್ದಾಗ ಮಳೆ ದೃಶ್ಯಗಳನ್ನು ತೋರಿಸಿದ್ರೆ ಮಜಾ ಬರೋದಿಲ್ಲ. ‘ಮುಂಗಾರು ಮಳೆ’ ಬಿಡುಗಡೆಯಾಗಿದ್ದು ಡಿಸೆಂಬರ್‌ನ ಚಳಿಗಾಲದಲ್ಲಿ. ಆಗ ಚಿತ್ರಮಂದಿರದಲ್ಲಿ ಮಳೆಗಾಲದಲ್ಲಿಯೇ ಇದ್ದಂತೆ ಅನಿಸುತ್ತಿತ್ತು. ಸಂಗೀತವೂ ಜನರನ್ನು ಆವರಿಸಿಕೊಂಡಿತು. ಹೀಗೆ ಸಣ್ಣ ಸಣ್ಣ ಸಂಗತಿಗಳೆಲ್ಲ ಸೇರಿ ಯಶಸ್ಸು ರೂಪುಗೊಳ್ಳುತ್ತಾ ಹೋಯಿತು.

ಒಬ್ಬ ನಿರ್ದೇಶಕನಾಗಿ ನನಗೆ, ನಮ್ಮ ಇಡೀ ತಂಡಕ್ಕೆ ಆ ಸಿನಿಮಾ ತುಂಬ ಸಂಗತಿಗಳನ್ನು ಹೇಳಿದೆ. ನಮ್ಮ ಕಿವಿಯಲ್ಲಿ ಏನೇನೋ ಉಸುರಿ ಮುಂದೆ ಕಳುಹಿಸಿದೆ. ಇನ್ನೂ ನಲವತ್ತೈವತ್ತು ಸಿನಿಮಾ ಮಾಡಬಲ್ಲೆ ಎಂಬ ಶಕ್ತಿ–ವಿಶ್ವಾಸ ಇತ್ಯಾದಿ ಇತ್ಯಾದಿಗಳನ್ನು ನನಗೆ ನೀಡಿದೆ. ಅದಕ್ಕೂ ಮುಂಚೆ ಎರಡು ಸಿನಿಮಾ ಮಾಡಿದಾಗಲೂ ಹಾಗಾಗಿರಲಿಲ್ಲ.

***
‘ಮುಂಗಾರು ಮಳೆ’ ಅಭೂತಪೂರ್ವ ಯಶಸ್ಸು ಕಂಡ ನಂತರ ಎಲ್ಲರೂ ಅವೇ ಮಾಧುರ್ಯಪೂರ್ಣ ಹಾಡುಗಳು, ಪ್ರೇಮಕಥೆಯ ಹಿಂದೆ ಹೋಗಲಿಕ್ಕೆ ಶುರು ಮಾಡಿದರು. ಹತ್ತರಲ್ಲಿ ಮೂರು ನಾಲ್ಕು ಸಿನಿಮಾಗಳು ಅದೇ ರೀತಿಯವು ಬರುತ್ತಿದ್ದವು. ಅದನ್ನು ಶುರುಮಾಡಿದವರೇ ನಾವಾದ್ರೂನೂ ಅಂಥ ಅನುಕರಣೆಗಳನ್ನು ನೋಡಿದಾಗ ಮುಜುಗರ ಆಗ್ತಿತ್ತು.

ಬಹುಶಃ ನನ್ನ ಮೊದಲನೇ ಸಿನಿಮಾವೇ ಅಷ್ಟೊಂದು ದೊಡ್ಡ ಯಶಸ್ಸು ಕಂಡಿದ್ರೆ ನಾನೂ ಅದೇ ನೆರಳಲ್ಲೇ ಸಾಗುತ್ತಿದ್ದೆನೇನೋ! ಆದರೆ ಮೊದಲೆರಡು ಚಿತ್ರಗಳಲ್ಲಿ ಸೋತಿದ್ದರಿಂದ, ಯಶಸ್ಸಿನ ಇನ್ನೊಂದು ಮುಖ ನನಗೆ ಗೊತ್ತಿತ್ತು. ಆದ್ದರಿಂದಲೇ ‘ಮುಂಗಾರು ಮಳೆ’ ಸ್ವತಃ ನನಗೆ ಹ್ಯಾಂಗೋವರ್‌ ಆಗಿ ಕಾಡಲಿಲ್ಲ.

***
ನನ್ನ ಮುಂದಿನ ಸಿನಿಮಾ ಹುಟ್ಟುವುದು ಹಿಂದಿನ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿ. ಒಂದು ಸಿನಿಮಾದ ಚಿತ್ರೀಕರಣ ಮುಗಿಸಿ ಸೌಂಡ್‌ ಕೆಲಸ ಮಾಡುತ್ತಿರುತ್ತೇವಲ್ಲ, ಆಗ ನಮ್ಮ ಸಿನಿಮಾವನ್ನು ಸುಮಾರು ಅರವತ್ತೆಪ್ಪತ್ತು ಸಲ ನೋಡಬೇಕಾಗುತ್ತದೆ. ಪ್ರತಿ ಶಾಟ್‌, ಫ್ರೇಮ್‌ಗಳನ್ನೂ ನಿಲ್ಸಿ ನಿಲ್ಸಿ ನೋಡುತ್ತೇವೆ. ಅಲ್ಲಿ ನಾವು ಮಾಡಿರುವ ಕೆಲಸ ದೋಷಗಳೊಟ್ಟಿಗೇ ಕಣ್ಣಿಗೆ ರಾಚುತ್ತಿರುತ್ತದೆ. ನಾವು ಏನೆಲ್ಲ ತಿಳ್ಕೊಂಬಿಟ್ಟಿದೀವಿ ಎಂಬ ಅಹಂಕಾರಕ್ಕೆ ಪೆಟ್ಟು ಬೀಳುವ ಸಂದರ್ಭ ಅದು.

ಏನೋ ಒಂದು ಉದ್ದ ಬಂದಿರತ್ತೆ. ಇನ್ನೊಂದು ಸಣ್ಣ ಬಂದಿರತ್ತೆ. ನಾವು ತಮಾಷೆ ಅಂದುಕೊಂಡಿದ್ದೇನೋ ತಮಾಷೆಯಾಗಿ ಕಾಣಿಸುತ್ತಿರುವುದಿಲ್ಲ. ಯಾವುದನ್ನು ದುಃಖ ಅಂದುಕೊಂಡಿರುತ್ತೇವೆಯೋ ಅದು ದುಃಖವಾಗಿ ಕಾಣಿಸುತ್ತಿರುವುದಿಲ್ಲ. ಧ್ವನಿ ಅಳವಡಿಸಿದ ಮೇಲೆ ಅದು ಜನರಿಗೆ ಅದ್ಭುತವಾಗಿಯೇ ಕಾಣಿಸುತ್ತಿರುತ್ತದೆ. ಆದರೆ ಅದರ ಒಳಗಡೆಯ ಸತ್ಯಗಳು ನಮಗೇ ಗೊತ್ತಿರುತ್ತದೆ.

ಅದನ್ನು ನೋಡುವಾಗೆಲ್ಲ ‘ಇದನ್ನು ಹೀಂಗ್‌ ಮಾಡಿ ಹಾಂಗ್‌ ಮಾಡಿ ಆ ಥರ ಬರೆದುಬಿಟ್ಟಿದ್ರೆ ಅದ್ಭುತ ಆಗಿರೋದು’ ಎಂದೆಲ್ಲ ಅಂದುಕೊಳ್ತಿರ್ತೇವೆ. ಈಗ ಆಗ್ಲಿಲ್ಲ, ಮುಂದಿನ ಸಿನಿಮಾದಲ್ಲಿ ಈ ಫಾರ್ಮೆಟ್‌ ಸರಿಯಾಗಿ ನಿರ್ವಹಿಸಬೇಕು ಅಂತ ಸಂಕಲ್ಪ ಮಾಡಿಕೊಳ್ಳುತ್ತೇವೆ. ಹೀಗೆ ಆ ಸಿನಿಮಾ ಮಾಡುತ್ತಿರುವಾಗಲೇ ನಮ್ಮೊಳಗೆ ಇನ್ನೊಂದು ಸಿನಿಮಾ ಹುಟ್ಟಿಕೊಳ್ಳುತ್ತಿರುತ್ತದೆ.

ಆ ಸಿನಿಮಾ ನಾವು ಕಂಡುಕೊಂಡ ದೋಷಗಳೊಟ್ಟಿಗೇ ಬಿಡುಗಡೆಯೂ ಆಗುತ್ತದೆ. ಆಗ ನಾವು ಅಂದುಕೊಂಡು ದೋಷಗಳನ್ನೇ ಇನ್ನೊಬ್ಬ ಯಾರಾದ್ರೂ ಗುರ್ತಿಸಿ ಹೇಳಿದ್ರೆ ನಮಗೆ ಸಿಟ್ಟುಬಂದುಬಿಡ್ತದೆ.

ಬರವಣಿಗೆ ಅನ್ನೋದು ಒಂಥರ ಮುದ್ದಾದ ಕೊಬ್ಬು. ಏನೇನೋ ಗೊತ್ತು ಅಂದ್ಕೋತಿರ್ತೀವಿ. ಆದರೆ ಅದನ್ನು ಬರೆಯಹೊರಟಾಗ ಇನ್ನೇನೋ ಆಗಿಬಿಡುತ್ತದೆ. ನನ್ನ ಮಟ್ಟಿಗೆ ಪ್ರತಿ ಸಿನಿಮಾವೂ ಹಾಗೆಯೇ. ಆ ಕ್ಷಣಕ್ಕೆ ಅಚಾನಕ್ಕಾಗಿ ಅನ್ನಿಸಿದ್ದರ ದೃಶ್ಯರೂಪ. ನನ್ನ ಬೆಳವಣಿಗೆಯ ವಿಸ್ತರಣೆ. ಪ್ರತಿಸಿನಿಮಾವೂ ಆಗಿನ ಕಾಲಕ್ಕೆ, ಸಂದರ್ಭಕ್ಕೆ ನೀಡಿದ ಪ್ರತಿಕ್ರಿಯೆ ಅಷ್ಟೆ.

***
ಒಂದು ಸಿನಿಮಾದ ಯಶಸ್ಸಿಗೆ ಜನರೇ ನಿಜವಾದ ನಿರ್ಣಾಯಕರು. ಅವರು ತಾವು ಮೆಚ್ಚಿಕೊಂಡ ಸಿನಿಮಾ ತಮ್ಮ ಭಾಷೆಯಲ್ಲಿಯೇ ಸಿಕ್ಕಿದ್ರೂ ದೊಡ್ಡ ಹಿಟ್‌ ಮಾಡ್ತಾರೆ. ಪಕ್ಕದ ಭಾಷೆಯಲ್ಲಿ ಸಿಕ್ಕಿದ್ರೂ ನೋಡಿ ಹಿಟ್‌ ಮಾಡ್ತಾರೆ. ಅದು ಅವರ ಹಸಿವು ಅಷ್ಟೆ. ಅವರಿಗೆ ಬೇಕಾಗಿದ್ದನ್ನು ಬೇರೆ ಭಾಷೆಯವರು ಕೊಟ್ಟರೆ ಅದನ್ನು ನೋಡ್ತಾರೆ. ನಮ್ಮವರೇ ಯಾರೋ ಮಾಡಿದರೆ ಅದನ್ನೇ ನೋಡ್ತಾರೆ ಅಷ್ಟೆ. ಸರಳವಾದ ಸತ್ಯ ಇದು.

‘ಬಾಹುಬಲಿ’ ಸಿನಿಮಾ ಕನ್ನಡದಲ್ಲಿಯೇ ಇಪ್ಪತ್ತೈದು ಮೂವತ್ತು ಕೋಟಿ ಮಾಡಿದೆಯಂತೆ. ಅಂದಮೇಲೆ ಅಷ್ಟು ದುಡ್ಡು ಇದೆಯಲ್ಲ ಕನ್ನಡದಲ್ಲಿ. ಅದು ಕನ್ನಡದ ಸಿನಿಮಾಗಳ ವಿಷಯಕ್ಕೆ ಬಂದರೆ ವಿಭಾಗವಾಗುತ್ತದೆ.

ಕಳೆದ ವರ್ಷ ಸಣ್ಣ ಸಣ್ಣ ಬಜೆಟ್‌ನ ಸುಮಾರು ಚಿತ್ರಗಳು ಹಣ ಮಾಡಿವೆ. ಐವತ್ತು ಅರವತ್ತು ಎಪ್ಪತ್ತು ಲಕ್ಷ ಹಾಕಿ ಮಾಡಿದ ಸಿನಿಮಾಗಳು ಒಂದಕ್ಕೆರಡು ಕಾಸು ಗಳಿಸಿಕೊಂಡಿವೆ. ಅವುಗಳಿಗೆ ಇದ್ದ ಅನುಕೂಲ ಏನೆಂದ್ರೆ – ಕಡಿಮೆ ಬಜೆಟ್‌. ಬೇಗ ಬಂಡವಾಳ ವಾಪಸ್‌ ಬರುತ್ತದೆ. ನಂತರ ಬಂದಿದ್ದೆಲ್ಲ ಲಾಭವೇ. ಆದರೆ ಗೊತ್ತಾಗದ ಸಂಗತಿ ಏನೆಂದರೆ ಅವುಗಳ ರೀಚ್‌ ತುಂಬ ಕಡಿಮೆ.

ಹೆಚ್ಚು ಜನ ನೋಡಿರಲ್ಲ ಆ ಸಿನಿಮಾಗಳನ್ನು. ಹಾಗಂತ ಅದನ್ನು ನಾವು ಯಶಸ್ಸಲ್ಲ ಎಂದರೆ ಆ ತಂಡಗಳ ಗತಿ ಏನು? ಮುಂದೆ ದೊಡ್ಡಮಟ್ಟದಲ್ಲಿ ಜನರನ್ನು ತಲುಪುವುದಕ್ಕೆ ಆ ಪುಟ್ಟ ಯಶಸ್ಸು ಅವರಿಗೆ ಆತ್ಮವಿಶ್ವಾಸ ಕೊಟ್ಟಿರುತ್ತದೆ. ಇನ್ನು ದೊಡ್ಡ ಬಜೆಟ್‌ ಸಿನಿಮಾಗಳೆಲ್ಲ ಹಾಕಿದ ಬಂಡವಾಳ ವಾಪಸ್‌ ಗಳಿಸಿಕೊಳ್ಳುವುದರಲ್ಲಿಯೇ ಹೆಣ ಬಿದ್ದು ಹೋಗಿರತ್ತೆ. ಆದರೆ ಅಷ್ಟು ಹಣ ಗಳಿಸಿರುತ್ತವಲ್ಲ ಅವು. ಅದು ಹತ್ತು ವರ್ಷದ ಹಿಂದೆ ಸಾಧ್ಯವಿರಲಿಲ್ಲ.

ಒಂದು ಸಿನಿಮಾ ಇಪ್ಪತ್ತು ಕೋಟಿ ಬಂಡವಾಳದಲ್ಲಿ ನಿರ್ಮಾಣವಾಗಿರುತ್ತದೆ ಎಂದುಕೊಳ್ಳಿ. ಗಳಿಕೆಯೂ ಅಷ್ಟೇ ಆದರೆ ಅದು ಅಲ್ಲಿಗಲ್ಲಿಗೆ ಆದಂತಾಯ್ತು. ಲಾಭ ಮಾಡಿಕೊಳ್ಳಲಿಲ್ಲ. ಆದರೆ ಅದೂ ಇಪ್ಪತ್ತು ಕೋಟಿ ಗಳಿಸಿರುತ್ತದಲ್ಲ. ಅಷ್ಟು ಜನರು ಆ ಸಿನಿಮಾವನ್ನು ನೋಡಿರುತ್ತಾರಲ್ಲ. ಅಂಥ ಸಿನಿಮಾಗಳು ಲಾಭ ಮಾಡಿಕೊಳ್ಳಬೇಕು ಎಂದರೆ ಅವುಗಳನ್ನು ಎರಡು ಕೋಟಿಯಲ್ಲಿ ನಿರ್ಮಾಣ ಮಾಡಬೇಕು. ಅದು ಸಾಧ್ಯವಾಗುವುದಿಲ್ಲ. ಹೀಗೆ, ಬಂಡವಾಳ ಮತ್ತು ಲಾಭದ ಲೆಕ್ಕಾಚಾರ ಬ್ರಹ್ಮವಿದ್ಯೆ.

ಜನರು ತಾವು ಇಷ್ಟಪಡುವ ಚಿತ್ರಗಳನ್ನು ಹೇಗಾದರೂ ನೋಡುತ್ತಾರೆ. ಚಿತ್ರಮಂದಿರಗಳಲ್ಲಿ, ಮೊಬೈಲಿನಲ್ಲಿ, ಪೈರೇಟೆಡ್‌ ಸೀಡಿಗಳಲ್ಲಿ – ಹೇಗಾದರೂ ನೋಡುತ್ತಾರೆ. ಕೆಲವು ಸಿನಿಮಾಗಳು ಹಣ ಗಳಿಸುತ್ತವೆ. ಇನ್ನು ಕೆಲವು ಇಲ್ಲ. ಆದರೆ ಒಂದು ಸಿನಿಮಾ ಯಾವ ಪ್ರಮಾಣದಲ್ಲಿ ಜನರನ್ನುಗೆ ತಲುಪಿದೆ ಎನ್ನುವುದರ ಮೇಲೆ ಯಶಸ್ಸನ್ನು ನಿರ್ಧರಿಸಬೇಕು. ಅದು ಸರಿಯಾದ ಕ್ರಮ. 

ಕೆಲವು ಸಿನಿಮಾಗಳು ದೊಡ್ಡ ಹಿಟ್‌ ಆಗ್ತವೆ, ಕೆಲವು ಸಾಧಾರಣ ಹಿಟ್‌ ಆಗ್ತವೆ. ಕೆಲವು ಸಿನಿಮಾಗಳು ತುಂಬ ಒಳ್ಳೆಯ ಸಿನಿಮಾ ಎಂದು ನಾವು ಅಂದುಕೊಂಡಿರ್ತೀವಿ. ದೊಡ್ಡ ದೊಡ್ಡ ನಿರ್ದೇಶಕರಿಗೂ ಇದು ಕಾಡಿದ್ದಿದೆ. ಮಣಿರತ್ನಂ ಎಷ್ಟೇ ಒಳ್ಳೆಯ ಸಿನಿಮಾ ಮಾಡಿದ್ದರೂ ‘ನಾಯಗನ್‌’ ಸಿನಿಮಾವನ್ನೇ ಎಲ್ಲರೂ ಉಲ್ಲೇಖಿಸಿ ಮಾತಾಡ್ತಾರೆ.

ಅದು ಸಹಜ. ಆದರೆ, ಒಂದು ಮಗು ರ್‍ಯಾಂಕ್‌ ಗಳಿಸಿತು ಅಂತ ಬೇರೆ ಮಕ್ಕಳನ್ನೆಲ್ಲ ಹೀಗಳೆಯುವುದು ತಪ್ಪಲ್ವಾ? ಗೆದ್ದ ಮಗುವಿನ ಜತೆಗೇ ಎಲ್ಲ ಮಕ್ಕಳನ್ನೂ ಹೋಲಿಕೆ ಮಾಡ್ತಾರೆ. ಅದಕ್ಕೆ ಯಾರನ್ನು ದೂಷಿಸುವುದು? ಹಾಗೆ ಮಾಡ್ತಾರೆ ಅಂತ ಮಕ್ಕಳನ್ನು ಮಾಡುವುದನ್ನಂತೂ ನಿಲ್ಲಿಸುವಂಗಿಲ್ಲ. ಯಾವ ಮಕ್ಕಳು ಹೆಂಗೆ ರ್‍ಯಾಂಕ್‌ ಹೊಡೀತಾರೆ ಅನ್ನುವುದು ಮೊದಲೇ ಗೊತ್ತಾಗಲ್ವಲ್ಲ.

ನಮ್ಮ ಮಕ್ಕಳು ನಮಗೆ ಶ್ರೇಷ್ಠ ಅಂತಲೇ ಅನಿಸ್ತಿರತ್ತೆ. ಅವು ನಮ್ಮೊಳಗಡೆ ಇದ್ದು ಹುಟ್ಟಿ ಬಂದಿರುತ್ತವಲ್ಲ. ಹೆರಿಗೆ ಡಾಕ್ಟ್ರೋ, ಪಕ್ಕದ ನರ್ಸೋ – ಈ ಮಗು ಹೀಗಿದೆ ಎಂದು ದೋಷ ಗುರ್ತಿಸಿದಾಗ ಸ್ವಲ್ಪ ಹರ್ಟ್‌ ಆಗತ್ತೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.