ADVERTISEMENT

ಮಾರಿಕೊಂಡವರ ತವಕ ತಲ್ಲಣ

ಕೆ.ಎಚ್.ಓಬಳೇಶ್
Published 17 ಆಗಸ್ಟ್ 2017, 19:30 IST
Last Updated 17 ಆಗಸ್ಟ್ 2017, 19:30 IST
‘ಮಾರಿಕೊಂಡವರು’ ಚಿತ್ರದಲ್ಲಿ ಸೋನು ಗೌಡ ಮತ್ತು ಸುಲೀಲ್‌ ಕುಮಾರ್
‘ಮಾರಿಕೊಂಡವರು’ ಚಿತ್ರದಲ್ಲಿ ಸೋನು ಗೌಡ ಮತ್ತು ಸುಲೀಲ್‌ ಕುಮಾರ್   

ದೇವನೂರ ಮಹಾದೇವ ಕನ್ನಡ ಸಾಹಿತ್ಯ ಲೋಕದ ಅನನ್ಯ ಬರಹಗಾರ. ಅವರು ಬರೆದಿರುವ ‘ಮಾರಿಕೊಂಡವರು’, ‘ಡಾಂಬರು ಬಂದದು’ ಮತ್ತು ‘ಗ್ರಸ್ತರು’ ಎಂಬ ಮೂರು ಕಥೆಗಳನ್ನು ಸಂಯೋಜಿಸಿ ‘ಮಾರಿಕೊಂಡವರು’ ಸಿನಿಮಾ ನಿರ್ಮಿಸಲಾಗಿದೆ. ಇದು ಕಲಾತ್ಮಕ ಚಿತ್ರ. 2015ರಲ್ಲಿ ಎರಡನೇ ಅತ್ಯುತ್ತಮ ರಾಜ್ಯ ಪ್ರಶಸ್ತಿಗೂ ಈ ಸಿನಿಮಾ ಭಾಜನವಾಗಿದೆ. ಆಗಸ್ಟ್‌ 18ರಂದು ರಾಜ್ಯದಾದ್ಯಂತ ಸಿನಿಮಾದ ಬಿಡುಗಡೆಗೆ ಚಿತ್ರತಂಡ ಮುಂದಾಗಿದೆ. ಚಿತ್ರದ ನಿರ್ದೇಶಕ ಕೆ. ಶಿವರುದ್ರಯ್ಯ ಅವರು ಚಂದನವನದೊಂದಿಗೆ ಈ ಕುರಿತು ಅನುಭವ ಹಂಚಿಕೊಂಡಿದ್ದಾರೆ.

‘ಕಳೆದ ವರ್ಷವೇ ಚಿತ್ರದ ಬಿಡುಗಡೆಗೆ ಸಿದ್ಧತೆ ನಡೆಸಲಾಗಿತ್ತು. ಕಾರಣಾಂತರದಿಂದ ತೆರೆಕಂಡಿರಲಿಲ್ಲ. ದೇವನೂರ ಮಹಾದೇವ ಅವರು 70–80ರ ದಶಕದಲ್ಲಿ ಬರೆದ ಕಥೆಗಳನ್ನು ಆಧರಿಸಿ ಈ ಚಿತ್ರ ನಿರ್ಮಿಸಲಾಗಿದೆ. ಆ ಕಾಲಘಟ್ಟದ ಸನ್ನಿವೇಶಗಳು ಸಿನಿಮಾದಲ್ಲಿ ಚಿತ್ರಿತವಾಗಿವೆ. ನೋಡು ಗರಿಗೆ ಇದೊಂದು ಕಲಾತ್ಮಕ ಚಿತ್ರ ಎನಿಸುವುದಿಲ್ಲ. ಒಟ್ಟಾರೆಯಾಗಿ ಆ ಕಾಲದ ಸನ್ನಿವೇಶವನ್ನು ವರ್ತಮಾನಕ್ಕೂ ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇನೆ’ ಎಂದ ಶಿವರುದ್ರಯ್ಯ ಅವರ ಮಾತಿನಲ್ಲಿ ಚಿತ್ರವು ಜನರಿಗೆ ಇಷ್ಟವಾಗಲಿದೆ ಎಂಬ ಭರವಸೆ ಇತ್ತು.

ಶಿವರುದ್ರಯ್ಯ ಅವರಿಗೆ ಎರಡೂವರೆ ದಶಕಗಳ ಕಾಲ ವಾರ್ತಾ ಇಲಾಖೆಯ ಸಂಗೀತ ಮತ್ತು ನಾಟಕ ವಿಭಾಗದಲ್ಲಿ ಕೆಲಸ ನಿರ್ವಹಿಸಿದ ಅನುಭವವಿದೆ. ಅವರ ಅನುಭವದ ಮೂಸೆಯಲ್ಲಿ ಈ ಚಿತ್ರ ಅರಳಿದೆ. ಜತೆಗೆ, ಅವರು ಹವ್ಯಾಸಿ ವನ್ಯಜೀವಿ ಛಾಯಾಚಿತ್ರಕಾರರು ಹೌದು. ಹಾಗಾಗಿ, ತಮ್ಮ ಸಿನಿಮಾಗಳಿಗೆ ಅಗತ್ಯ ಇರುವ ಸನ್ನಿವೇಶ ಕಟ್ಟಿಕೊಡುವ ಕಲೆಯೂ ಅವರಿಗೆ ಸಿದ್ಧಿಸಿದೆ.

ADVERTISEMENT

‘ಚೈತ್ರದ ಚಿಗುರು’ ಚಿತ್ರದ ಮೂಲಕ ಅವರ ಸಿನಿಯಾನ ಆರಂಭಗೊಂಡಿತು. ಇದು ವಿಜಯಶ್ರೀ ಅವರ ಕಾದಂಬರಿ ಆಧಾರಿತ ಚಿತ್ರ. ಬಳಿಕ ‘ಅಮಾಸ’, ‘ದಾಟು’, ‘ಮೇಘವರ್ಷಿಣಿ’, ‘ಭಗವತಿ ಕಾಡು’, ‘ಮಾಗಿಯ ಕಾಲ’, ‘ಬೆಳ್ಳಿ ಕಿರಣ’, ‘ಮಾರಿಕೊಂಡವರು’, ‘ಮೂಡಲ ಸೀಮೆಯಲ್ಲಿ’ ಚಿತ್ರದವರೆಗೂ ಅವರ ಸಿನಿಪಯಣ ಬಂದು ನಿಂತಿದೆ.

(ಕೆ. ಶಿವರುದ್ರಯ್ಯ)

ಮೈಸೂರು, ಚಾಮರಾಜನಗರ ಮತ್ತು ರಾಮನಗರ ಜಿಲ್ಲೆಯ 33 ಸ್ಥಳಗಳಲ್ಲಿ ‘ಮಾರಿಕೊಂಡವರು’ ಸಿನಿಮಾವನ್ನು ‌ಚಿತ್ರೀಕರಿಸಲಾಗಿದೆ. ಚಿತ್ರೀಕರಣಕ್ಕೆ ಸುಮಾರು ಎರಡು ವರ್ಷ ಕಾಲ ಹಿಡಿಯಿತು. ಕಾಲಘಟ್ಟಕ್ಕೆ ಅನುಗುಣವಾಗಿ ಸಿನಿಮಾ ಚಿತ್ರೀಕರಿಸಲು ನಿರ್ಧರಿಸಲಾಗಿತ್ತು. ಇದರಿಂದ ಸಿನಿಮಾದ ಚಿತ್ರೀಕರಣಕ್ಕೆ ಹೆಚ್ಚು ಸಮಯವಾಯಿತು’ ಎಂದರು.

‘ಪ್ರಸ್ತುತ ರಾಜ್ಯದಲ್ಲಿ ಮರಳು ಗಣಿಗಾರಿಕೆ ದಂಧೆ ಎಲ್ಲೆ ಮೀರಿದೆ. ಇನ್ನೊಂದೆಡೆ ಗ್ರಾಮೀಣ ಬದುಕಿನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಸಮಾಜದ ಸ್ವಾಸ್ಥ್ಯ ಹದಗೆಡಲೂ ಮುನ್ನುಡಿ ಬರೆದಿದೆ. ಅವ್ಯಾಹತ ಮರಳು ಗಣಿಗಾರಿಕೆ ಪರಿಣಾಮ ಜೀವನದಿಗಳು ಉಸಿರುಗಟ್ಟುತ್ತಿವೆ. ನದಿ ಮೂಲಗಳು ಬತ್ತಿಹೋಗುವ ಅಪಾಯವಿದೆ. ಮಾರಿಕೊಂಡವರು ಚಿತ್ರದಲ್ಲಿ ಈ ದಂಧೆ ಬಗ್ಗೆಯೂ ಬೆಳಕು ಚೆಲ್ಲಲಾಗಿದೆ. ಪರಿಸರ ಉಳಿಸುವ ಸಂದೇಶ ಕುರಿತು ನೋಡುಗರಿಗೆ ತಿಳಿಹೇಳಲಾಗಿದೆ‘ ಎಂದ ಅವರ ಮಾತಿನಲ್ಲಿ ಪರಿಸರ ಸಂರಕ್ಷಣಾ ಕಾಳಜಿ ಇತ್ತು.

ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಮಗುವೊಂದು ಡಾಂಬರಿನೊಳಗೆ ಬೀಳುತ್ತದೆ. ಬಿಸಿಲಿನ ಝಳ ಹೆಚ್ಚಾದಂತೆ ಡಾಂಬರು ಕಾಯುತ್ತದೆ. ಗ್ರಾಮದ ಎಲ್ಲ ಜನರು ಅಲ್ಲಿ ನೆರೆಯುತ್ತಾರೆ. ಮಗುವನ್ನು ಉಳಿಸಲು ದಮನಿತ ಮಹಿಳೆಯರು ತಾವು ಧರಿಸಿರುವ ಸೀರೆಯನ್ನು ಬಿಚ್ಚಿ ಪುಟಾಣಿಗೆ ನೆರಳು ನೀಡುತ್ತಾರೆ. ಆ ನಂತರ ಅಲ್ಲಿ ಜಮಾಯಿಸಿದ್ದ ಎಲ್ಲ ಮಹಿಳೆಯರು ಇದೇ ಹಾದಿ ತುಳಿಯುತ್ತಾರೆ. ಎಲ್ಲರೂ ಧರ್ಮ, ಜಾತಿ ಮೀರಿ ಪ್ರಬುದ್ಧತೆ ತೋರುತ್ತಾರೆ. ದೇವನೂರ ಮಹಾದೇವ ಅವರೇ ಹೇಳುವಂತೆ ‘ಸಂಬಂಜ ಅನ್ನೋದು ದೊಡ್ಡದು ಕನಾ’ ಎಂಬ ಆಶಯವನ್ನು ಚಿತ್ರ ಸಾರುತ್ತದೆ ಎಂದರು ಶಿವರುದ್ರಯ್ಯ.

‘ಸಮಾಜದಲ್ಲಿ ಜಾತೀಯತೆ ತಾಂಡವವಾಡುತ್ತಿದೆ. ಇದರಿಂದ ತಳ ಸಮುದಾಯಗಳು ಸಂಕಷ್ಟದ ಕೂಪದಲ್ಲಿ ಸಿಲುಕಿವೆ. ಸಿನಿಮಾದಲ್ಲಿ ಜಾತಿ ವ್ಯವಸ್ಥೆಯ ಸೂಕ್ಷ್ಮಗಳು ಕಾಣಸಿಗುತ್ತದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.