ADVERTISEMENT

ಮೊದಲ ದಿನವೇ ಮೂರು ಕೋಟಿ ಬಾಚಿದ ‘ತಲ್ವಾರ್‌’

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2015, 19:34 IST
Last Updated 5 ಅಕ್ಟೋಬರ್ 2015, 19:34 IST

ಗುಲ್ಜಾರ್‌ ಕುಟುಂಬದ ಕುಡಿ ಮೇಘನಾ ಗುಲ್ಜಾರ್‌ ತಮ್ಮ ಸಿನಿಪರೀಕ್ಷೆಯಲ್ಲಿ ಗೆದ್ದಿದ್ದಾರೆ. ಅವರ ನಿರ್ದೇಶನದ ‘ತಲ್ವಾರ್‌’ ಸಿನಿಮಾಕ್ಕೆ ವಿಮರ್ಶಕರಿಂದ ಅಪಾರ ಪ್ರಶಂಸೆ ವ್ಯಕ್ತವಾಗಿರುವುದಲ್ಲದೇ ಬಾಕ್ಸ್‌ ಆಫೀಸಿನಲ್ಲಿಯೂ ತಕ್ಕಮಟ್ಟಿಗೆ ಸದ್ದು ಮಾಡಿದೆ.

2008ರಲ್ಲಿ ನಡೆದ 14 ವರ್ಷ ವಯಸ್ಸಿನ ಆರುಷಿ ತಲ್ವಾರ್‌ ಮತ್ತು  ಹೇಮರಾಜ್‌ ಕೊಲೆ ಪ್ರಕರಣವನ್ನು ಆಧರಿಸಿದ ‘ತಲ್ವಾರ್‌’ ಬಿಡುಗಡೆಯಾದ ಮೊದಲ ದಿನವೇ ಮೂರು ಕೋಟಿ ರೂಪಾಯಿಗಳನ್ನು ಬಾಚಿಕೊಂಡಿದೆ.

ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿರುವ ಇರ್ಫಾನ್‌ ಖಾನ್‌ ಮತ್ತು ಕೊಂಕಣಾ ಸೆನ್‌ ಶರ್ಮ ಸಹ ಮೊದಲ ದಿನವೇ ಜನರಿಂದ ದೊರೆತ ಉತ್ತಮ ಸ್ಪಂದನದಿಂದ ಖುಷಿಗೊಂಡಿದ್ದಾರೆ.‘‘ತಲ್ವಾರ್‌’ ಚಿತ್ರಕ್ಕೆ ವಿಮರ್ಶಕರಿಂದ ಮತ್ತು ಪ್ರೇಕ್ಷಕವರ್ಗದಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದೆ’ ಎಂದು ಚಿತ್ರ ತಂಡ ಮುಂಬೈನಲ್ಲಿ ಸುದ್ದಿಗಾರರಿಗೆ ತಿಳಿಸಿದೆ.

ಬಾಲಿವುಡ್‌ ಸೂಪರ್‌ಸ್ಟಾರ್‌ ಅಕ್ಷಯ್‌ ಕುಮಾರ್‌ ಅಭಿನಯದ ‘ಸಿಂಗ್‌ ಈಸ್‌ ಬ್ಲಿಂಗ್‌’ ಮತ್ತು ಹಾಲಿವುಡ್‌ ಸಿನಿಮಾ ‘ದಿ ಮಾರ್ಟಿಯನ್‌’ ಕೂಡ ಇದೇ ವಾರ ತೆರೆಕಂಡಿವೆ. ಈ ಸಿನಿಮಾಗಳ ಅಬ್ಬರದ ನಡುವೆಯೂ ‘ತಲ್ವಾರ್‌’ ಗಲ್ಲಾಪೆಟ್ಟಿಗೆಯಲ್ಲಿ ತನ್ನ ಅಸ್ತಿತ್ವ ಉಳಿಸಿಕೊಂಡಿರುವುದು ಚಿತ್ರತಂಡದ ಖುಷಿಯನ್ನು ಹೆಚ್ಚಿಸಿದೆ.
‘ಮುಂದಿನ ವಾರ ಈ ಸಿನಿಮಾದ ಗಳಿಗೆ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ’ ಎಂದು ಚಿತ್ರತಂಡ ಹೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.