ADVERTISEMENT

‘ರಾಜ್‌ಕುಮಾರ’ ದರ್ಬಾರಿನಲ್ಲಿ ಶತಕ ಸಂಭ್ರಮ!

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 19:30 IST
Last Updated 13 ಜುಲೈ 2017, 19:30 IST
ಸುದೀಪ್‌ ಅವರಿಗೆ ಡಾನ್ಸ್‌ ಸ್ಟೆಪ್‌ ಹೇಳಿಕೊಡುತ್ತಿರುವ ಪುನೀತ್‌
ಸುದೀಪ್‌ ಅವರಿಗೆ ಡಾನ್ಸ್‌ ಸ್ಟೆಪ್‌ ಹೇಳಿಕೊಡುತ್ತಿರುವ ಪುನೀತ್‌   

ಅಂದು ಸಂಜೆ ಮಳೆಯ ಆಗಮನದ ಸುದ್ದಿಯನ್ನು ಎಲ್ಲೆಡೆ ಹರಡುವ ಅವಸರದಲ್ಲಿ ತಂಗಾಳಿ ತುಸು ಜೋರಾಗಿಯೇ ಓಡಾಡುತ್ತಿತ್ತು. ಕಪ್ಪುಮೋಡ ತುಂಬಿಕೊಂಡಿದ್ದ ಆಕಾಶ ನೆಲವನ್ನು ಸುಮ್ಮನೆ ಕೆಣಕುತ್ತಿರುವಂತಿತ್ತು. ಬೆಂಗಳೂರಿನ ಗಾಯತ್ರಿ ವಿಹಾರ್‌ ಗೇಟ್‌ನಲ್ಲಿನ ದೀಪಗಳು ಆ ಸಂಜೆಗಂಟಿಕೊಂಡಿದ್ದ ಮಬ್ಬನ್ನು ಬಡಿದೋಡಿಸುವ ಉತ್ಸಾಹದಲ್ಲಿ ಪ್ರಖರವಾಗಿ ಬೆಳಗುತ್ತಿದ್ದವು.

ಸಾಮಾನ್ಯವಾಗಿ ಅರಮನೆ ಮೈದಾನದ ಸಭಾಂಗಣಗಳು ಜನಸಂದಣಿಯಿಂದ ತುಂಬುವುದು ಒಂದೋ ರಾಜಕೀಯ ಸಭೆಗಳಿಗೆ ಇಲ್ಲವೇ ಪ್ರತಿಷ್ಟಿತರ ಮದುವೆಗಳಿಗೆ. ಆದರೆ ಅಂದು ಸಂಜೆಯ ಸಂಭ್ರಮ ಈ ಎರಡಕ್ಕೂ ಸಂಬಂಧಿಸಿದ್ದಾಗಿರಲಿಲ್ಲ. ಅದು ರಾಜ್‌ಕುಮಾರನ ದರ್ಬಾರಿಗೆ ಸಾಕ‌್ಷಿಯಾಗುವ ಪುಲಕದಲ್ಲಿ ಮಿಂದೇಳುವ ಸಂಭ್ರಮ.

ಸಂತೋಷ್‌ ಆನಂದ್‌ರಾಮ್‌ ನಿರ್ದೇಶನದ, ಪುನೀತ್‌ ರಾಜಕುಮಾರ್‌ ಅಭಿನಯದ ‘ರಾಜ್‌ಕುಮಾರ’ ಸಿನಿಮಾ ನೂರು ದಿನದ ಗಡಿ ದಾಟಿ ಪ್ರದರ್ಶನ ಕಾಣುತ್ತಿರುವ ಖುಷಿಯನ್ನು ಹಂಚಿಕೊಳ್ಳಲು ಸಮಾರಂಭವನ್ನು ಆಯೋಜಿಸಲಾಗಿತ್ತು. ನಿರ್ದೇಶಕರಿಂದ ಹಿಡಿದು ಸೆನ್ಸಾರ್‌ ಸ್ಕ್ರಿಪ್ಟ್‌ ಬರೆದವರವರೆಗೆ ಚಿತ್ರಕ್ಕಾಗಿ ದುಡಿದ ಎಲ್ಲರನ್ನೂ ವೇದಿಕೆಗೆ ಕರೆದು ಸ್ಮರಣಿಕೆ ಕೊಟ್ಟು ಅಭಿನಂದಿಸಿದ್ದು ವಿಶೇಷ.

ADVERTISEMENT

ಚಕ್ರಾಕಾರಗಳಿಂದಲೇ ವಿನ್ಯಾಸಗೊಳಿಸಲಾಗಿದ್ದ ವೇದಿಕೆ ಜಗಮಗ ಬೆಳಕಿನಿಂದ ಕಂಗೊಳಿಸುತ್ತಿತ್ತು. ಅರುಣ್‌ ಸಾಗರ್‌ ಮತ್ತು ಅನುಶ್ರೀ ಕಾರ್ಯಕ್ರಮ ನಿರೂಪಣೆ ಜವಾಬ್ದಾರಿ ಹೊತ್ತಿದ್ದರು. ಪುನೀತ್‌, ಶಿವರಾಜ್‌ಕುಮಾರ್‌, ಸುದೀಪ್‌, ಯಶ್‌, ಶ್ರೀಮುರಳಿ, ತಾರಾನಟರ ಸಮಾಗಮ, ಪ್ರಿಯಾ ಆನಂದ್‌, ಶ್ರದ್ಧಾ ಶ್ರೀನಾಥ್, ರಾಧಿಕಾ ಪಂಡಿತ್‌, ರಚಿತಾ ರಾಮ್‌ ಅವರಂಥ ನಟೀಮಣಿಯರ ಮೇಳಾಮೇಳ. ಪ್ರಕಾಶ್‌ ರೈ, ಅಚ್ಯುತ್‌ ಕುಮಾರ್‌, ಹೊನ್ನವಳ್ಳಿ ಕೃಷ್ಣ, ಚಿತ್ರಾ ಶೆಣೈ, ಜಗ್ಗೇಶ್‌, ರಂಗಾಯಣ ರಘು, ಸಾಧುಕೋಕಿಲ, ದತ್ತಣ್ಣ ಅವರಂಥ ಹಿರಿಯರ ಉಪಸ್ಥಿತಿ.

ಹರಿಪ್ರಿಯಾ ಮಾದಕ ನೃತ್ಯ, ಸಾಧುಕೋಕಿಲ ಅವರ ಹಾಸ್ಯಕುಣಿತ, ರವಿಚಂದ್ರನ್‌ ವಿಡಿಯೊ ಮಾತು, ಪಾರ್ವತಮ್ಮನವರ ನೆನಪಿನ ವಿಷಾದ ಎಲ್ಲವೂ ಅಲ್ಲಿತ್ತು. ಇದಕ್ಕೆಲ್ಲ ಕಿರೀಟವಿಟ್ಟಂತೆ ಅಭಿಮಾನಿಗಳ ಜೈಕಾರ. ತಂಡಕ್ಕೆ ಅಭಿನಂದನೆ ಹೇಳಲು ಬಂದ ಸುದೀಪ್‌ ಅವರಿಗೆ ಪುನೀತ್ ಸಾಲ್ಸಾ ನೃತ್ಯದ ಸ್ಟೆಪ್ಪು ಕಲಿಸಿದರು. ಹರಿಪ್ರಿಯ ಜತೆಗೆ ದತ್ತಣ್ಣ ಉಮೇದಿನಿಂದ ಹೆಜ್ಜೆ ಹಾಕಿದರು, ರಂಗಾಯಣ ರಘು ಹಾಡಿದರು, ಮರಳಿ ಕುಣಿದರು.

‘ಒಳ್ಳೆಯ ಚಿತ್ರಗಳನ್ನು ಜನರು ನೋಡುತ್ತಾರೆ ಎನ್ನುವುದಕ್ಕೆ ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಪುರಾವೆಗಳು ಸಿಗುತ್ತಿವೆ. ಇದರಿಂದ ನಮ್ಮ ಜವಾಬ್ದಾರಿಯೂ ಹೆಚ್ಚಿದೆ’ ಎಂದರು ಪ್ರಕಾಶ್‌ ರೈ. ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ ಅವರ ತಂದೆಗೆ ಎರಡು ಕನಸಿತ್ತಂತೆ. ಮೊದಲನೆಯದು ಸಂತೋಷ್‌ ಇನ್ಫೋಸಿಸ್‌ನಲ್ಲಿ ಕೆಲಸ ಮಾಡಬೇಕು ಎನ್ನುವುದು. ಇನ್ನೊಂದು ಅವರು ರಾಜಕುಮಾರ್‌ ಕುಟುಂಬದ ಕಲಾವಿದರಿಗೆ ಒಂದು ಸಿನಿಮಾ ನಿರ್ದೇಶಿಸಬೇಕು ಎನ್ನುವುದು. ಅವರೀಗ ಎರಡನೇ ಕನಸನ್ನು ಯಶಸ್ವಿಯಾಗಿ ನನಸಾಗಿಸಿದ ಖುಷಿಯಲ್ಲಿದ್ದಾರೆ.

‘ಇದು ನನ್ನ ವೃತ್ತಿಜೀವನದ ಬಹುಮುಖ್ಯ ಸಿನಿಮಾ’ ಎಂದು ಅವರು ಬಣ್ಣಿಸಿದರು. ಇನ್ನು ಮುಂದೆಯೂ ರಾಜ್‌ ಕುಟುಂಬದ ಜತೆ ಕೆಲಸ ಮಾಡುವ ಇಚ್ಛೆಯನ್ನೂ ವ್ಯಕ್ತಪಡಿಸಿದರು. ಎಲ್ಲರ ಶುಭ ಹಾರೈಕೆಗಳು, ಅಭಿಮಾನಿಗಳ ಜೈಕಾರಗಳು ಕಂತುವ ಹೊತ್ತಿಗೆ ರಾತ್ರಿ ಹನ್ನೊಂದರ ಗಡಿ ಸಮೀಪಿಸಿತ್ತು. ಈ ಸಂಭ್ರಮದಲ್ಲಿ ಭಾಗಿಯಾಗಲೋ ಎಂಬಂತೆ ಆಕಾಶವೂ ಕೊಂಚ ತಿಳಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.