ADVERTISEMENT

‘ರಾಜ್‌ ವಿಷ್ಣು’ವಿನಲ್ಲಿ ನಗುವಿನ ಕಚಗುಳಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 19:30 IST
Last Updated 20 ಜುಲೈ 2017, 19:30 IST
‘ರಾಜ್‌ ವಿಷ್ಣು’ವಿನಲ್ಲಿ ನಗುವಿನ ಕಚಗುಳಿ
‘ರಾಜ್‌ ವಿಷ್ಣು’ವಿನಲ್ಲಿ ನಗುವಿನ ಕಚಗುಳಿ   

‘ಅಧ್ಯಕ್ಷ’ ಚಿತ್ರದಲ್ಲಿ ಶರಣ್‌ ಮತ್ತು ಚಿಕ್ಕಣ್ಣ ಜೋಡಿ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಈಗ ‘ರಾಜ್‌ ವಿಷ್ಣು’ ಚಿತ್ರದ ಮೂಲಕ ಮತ್ತೆ ನಗುವಿನ ಕಚಗುಳಿ ಇಡಲು ಈ ಜೋಡಿ ಸಜ್ಜಾಗಿದೆ. ತಮಿಳಿನ ‘ರಜನಿ ಮುರುಗನ್’ ಚಿತ್ರದ ಕನ್ನಡದ ಅವತರಣಿಕೆಯೇ ‘ರಾಜ್‌ ವಿಷ್ಣು’.

ನಿರ್ದೇಶಕ ಕೆ. ಮಾದೇಶ್, ‘ಶರಣ್‌, ಚಿಕ್ಕಣ್ಣ ಅವರೊಟ್ಟಿಗೆ ಕೆಲಸ ಮಾಡಿದ್ದು ಸಂತಸ ನೀಡಿತು. ಚಿತ್ರದಲ್ಲಿ ಕಾಮಿಡಿ ಇದೆ. ಕುಟುಂಬ ಸಮೇತ ನೋಡಬಹುದಾದ ಮನರಂಜನಾತ್ಮಕ ಚಿತ್ರ ಇದಾಗಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ರಾಮು ಬ್ಯಾನರ್‌ನಲ್ಲಿ ಮೊದಲ ಬಾರಿಗೆ ನಟಿಸಿದ್ದೇನೆ. ನಾನು ಮಾಲಾಶ್ರೀ ಮೇಡಂ ಅಭಿಮಾನಿ. ನಿರ್ದೇಶಕರದು ಮೃದು ಸ್ವಭಾವ’ ಎಂದು ಚಿಕ್ಕಣ್ಣ ಗುಣಗಾನ ಮಾಡಿದರು.

ADVERTISEMENT

‘ಮೈಸೂರು ಭಾಗಕ್ಕೆ ಅಧ್ಯಕ್ಷ ಚಿತ್ರವನ್ನು ತೆಗೆದುಕೊಂಡಾಗ ಅಲ್ಲಿನ ಗಳಿಕೆ ನೋಡಿದಾಗಲೇ ಈ ಇಬ್ಬರನ್ನು ಸೇರಿಸಿಕೊಂಡು ಚಿತ್ರ ಮಾಡುವ ಬಯಕೆ ಬಂತು. ಆ ಕಾಲ ಈಗ ಕೂಡಿಬಂದಿದೆ. ಚಿತ್ರದ ನಾಯಕಿ ಪಾತ್ರಕ್ಕೆ 500ಕ್ಕೂ ಹೆಚ್ಚು ಹುಡುಗಿಯರ ತಲಾಷೆ ನಡೆಯಿತು. ಕೊನೆಗೆ ಮರಾಠಿ ರಂಗಭೂಮಿಯ ನಟಿ ವೈಭವಿ ಆಯ್ಕೆಯಾದರು. ರಿಮೇಕ್ ಚಿತ್ರಗಳು ಯಶಸ್ವಿಯಾಗಿವೆ. ಈ ಚಿತ್ರವೂ ಯಶಸ್ವಿಯಾಗುತ್ತದೆಂಬ ಆಶಾಭಾವನೆ ಇದೆ’ ಎಂದರು ನಿರ್ಮಾಪಕ ರಾಮು.

ನಾಯಕ ಶರಣ್‌, ‘ಮಾದೇಶ್‌ ಶಾಂತ ಸ್ವಭಾವದ ನಿರ್ದೇಶಕ. ಇದು ಸೆಟ್‌ನಲ್ಲಿ ನನ್ನ ಅನುಭವಕ್ಕೆ ಬಂತು. ಎಲ್ಲಿಗೆ ಹೋದರೂ ಚಿಕ್ಕಣ್ಣ ಜೊತೆಗೆ ಹೊಸ ಸಿನಿಮಾ ಯಾವಾಗ ಎಂದು ಕೇಳುತ್ತಿದ್ದರು. ಅದಕ್ಕೆ ಸರಿಯಾದ ಉತ್ತರವೇ ರಾಜ್‌ ವಿಷ್ಣು. ಟ್ರೈಲರ್ ಮೂರೇ ದಿನಕ್ಕೆ ಜನರಿಗೆ ಇಷ್ಟವಾಗಿದೆ’ ಎಂದು ಸಂತಸ ಹಂಚಿಕೊಂಡರು.

‘ಚಿತ್ರ ತಮಿಳಿನ ರಿಮೇಕ್‌ ಆದರೂ ಇಲ್ಲಿನ ನೇಟಿವಿಟಿಗೆ ತಕ್ಕಂತೆ ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ. ಅರ್ಜುನ್‌ ಜನ್ಯ ಉತ್ತಮ ಸಂಗೀತ ನೀಡಿದ್ದಾರೆ. ರಾಮು ಶೈಲಿಯು ಶರಣ್‌ನನ್ನು ಈ ಚಿತ್ರದಲ್ಲಿ ನೋಡಬಹುದು’ ಎಂದರು ಶರಣ್.

ನಾಯಕಿ ವೈಭವಿ ಶಾಂಡಿಲ್ಯ, ‘ಚಿತ್ರದಲ್ಲಿ ನನ್ನದು ಸರಳ ಹುಡುಗಿಯ ಪಾತ್ರ. ಎಲ್ಲ ಅಂಶಗಳು ತುಂಬಿಕೊಂಡ ಚಿತ್ರ ಇದಾಗಿದೆ’ ಎಂದು ಹೇಳಿ ಮಾತು ಮುಗಿಸಿದರು. ರಾಜೇಶ್ ಕಟ್ಟ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ವಿಶೇಷ ಪಾತ್ರದಲ್ಲಿ ‘ರೋರಿಂಗ್ ಸ್ಟಾರ್’ ಶ್ರೀಮುರುಳಿ ನಟಿಸಿದ್ದಾರೆ. ಸಾಧುಕೋಕಿಲಾ, ಶ್ರೀನಿವಾಸಮೂರ್ತಿ, ಭಜರಂಗಿ ಲೋಕಿ, ಸುಚಿಂದ್ರಪ್ರಸಾದ್, ಓಂಪ್ರಕಾಶ್‌ ರಾವ್, ವೀಣಾ ಸುಂದರ್ ತಾರಾಬಳಗದಲ್ಲಿದ್ದಾರೆ.

‘ಅಧ್ಯಕ್ಷ’ ಚಿತ್ರ ವರಮಹಾಲಕ್ಷ್ಮಿ ಹಬ್ಬದ ದಿನದಂದು ಬಿಡುಗಡೆಯಾಗಿ ಸೂಪರ್ ಹಿಟ್‌ ಆಗಿತ್ತು. ಆಗಸ್ಟ್‌ ತಿಂಗಳಿನಲ್ಲಿ ಹಬ್ಬದ ದಿನದಂದೇ ‘ರಾಜ್‌ ವಿಷ್ಣು’ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.