ADVERTISEMENT

ರಾಧಿಕಾ: ರಂಗದಿಂದ ರಂಗಿಗೆ...

ಅಮಿತ್ ಎಂ.ಎಸ್.
Published 2 ಜುಲೈ 2015, 19:30 IST
Last Updated 2 ಜುಲೈ 2015, 19:30 IST

‘ಬಾಲ್ಯದಲ್ಲಿ ಸಿನಿಮಾಗಳನ್ನು ನೋಡುವಾಗ ನಟಿಯಾಗಬೇಕು ಅನ್ನಿಸುತ್ತಿತ್ತು. ಆದರೆ, ನಟಿಯಾಗುವ ಉತ್ಕಟ ಬಯಕೆಯೇನೂ ನನ್ನಲ್ಲಿ ಇರಲಿಲ್ಲ. ಕಲೆಯೆಡೆಗೆ ಸಣ್ಣನೆ ಸೆಳೆತವಿತ್ತು. ಅದು ಹಿರಿದಾಗಿ ಬೆಳೆದಿರಲಿಲ್ಲ.

ಹಾಗೆ ನೋಡಿದರೆ ಬಣ್ಣದ ಲೋಕ ಕೈಬೀಸಿ ಕರೆದದ್ದು ತೀರಾ ತಡವಾಗಿ’– ಹೀಗೆ ತಮ್ಮ ನಟನೆಯ ಕನಸನ್ನು ನಟಿ ರಾಧಿಕಾ ಚೇತನ್ ನೆನಪಿಸಿಕೊಳ್ಳುತ್ತಾರೆ. ‘ಗುಪ್ತವಾಗಿ ಅಡಗಿದ್ದ ಕನಸು’ ಎಂದವರು ತಮ್ಮೊಳಗಿನ ನಟನೆಯ ಹಂಬಲವನ್ನು ಬಣ್ಣಿಸುತ್ತಾರೆ.

ಉಡುಪಿ ತವರೂರಾದರೂ ರಾಧಿಕಾ ಬೆಳೆದಿರುವುದು ಮೈಸೂರಿನಲ್ಲಿ. ಮಾಹಿತಿ ವಿಜ್ಞಾನ ವಿಭಾಗದಲ್ಲಿ ಎಂಜಿನಿಯರಿಂಗ್‌ ಪೂರ್ಣಗೊಳಿಸಿದ ಅವರು 3–4 ವರ್ಷ ಕಾರ್ಪೊರೇಟ್‌ ಕಂಪೆನಿಯೊಂದರ ಉದ್ಯೋಗಿಯಾಗಿದ್ದರು.

ಅದರ ನಡುವೆಯೇ ಕಲೆಯ ಹವ್ಯಾಸವನ್ನು ಮೈಗೂಡಿಸಿಕೊಳ್ಳುವ ಆಸಕ್ತಿ ಚಿಗುರಿತು. ಗೆಳೆಯರೊಬ್ಬರು ಬಯಕೆ ತಣಿಸಿಕೊಳ್ಳಲು ರಂಗಭೂಮಿ ಕಡೆಗೇಕೆ ಹೋಗಬಾರದು ಎಂಬ ಸಲಹೆ ಇತ್ತರು.

ಅದನ್ನು ಪರಿಗಣಿಸಿದ ಬಳಿಕ ಕೆಲ ದಿನಗಳಲ್ಲೇ ರಂಗಭೂಮಿ ಸಹಚರ್ಯ ಬದುಕಿನ ನೋಟದ ದಿಕ್ಕನ್ನೂ ಬದಲಿಸಿತು. ಒಳ್ಳೆಯ ಕಂಪೆನಿ, ಉತ್ತಮ ವೇತನ ಇದ್ದರೂ, ಆಸಕ್ತಿ ಇರುವಲ್ಲಿಯೇ ತನ್ನನ್ನು ತೊಡಗಿಸಿಕೊಳ್ಳಬೇಕು ಎಂಬ ನಿಲುವು ಅವರನ್ನು ರಂಗಭೂಮಿಯಲ್ಲಿಯೇ ಪೂರ್ಣ ಪ್ರಮಾಣದಲ್ಲಿ ನೆಲೆಯೂರುವಂತೆ ಪ್ರೇರೇಪಿಸಿತು.

ADVERTISEMENT

‘ವಿ ಮೂವ್‌ ಥಿಯೇಟರ್‌’ ತಂಡದಲ್ಲಿ ಗುರ್ತಿಸಿಕೊಂಡಿರುವ ಅವರು, ‘ನನ್ನವಳ ಕಾಗದ’, ‘ನಮ್ಮ ಮೆಟ್ರೊ’, ‘ಮಾಗಡಿ ಡೇಸ್‌’, ‘ಮಿರರ್‌ ಮಿರರ್‌’ ಮುಂತಾದ ನಾಟಕಗಳಲ್ಲಿ ಅಭಿನಯಿಸಿದರು.

ನಟನೆ, ಕಾರ್ಯಾಗಾರಗಳ ಕೆಲಸ, ಹೀಗೆ ರಂಗಭೂಮಿಯ ಸಖ್ಯದಲ್ಲಿ ಖುಷಿ ಕಂಡಿದ್ದ ಅವರು ‘ರಂಗಿತರಂಗ’ದ ನಿರ್ದೇಶಕ ಅನೂಪ್ ಭಂಡಾರಿ ಅವರ ಕಣ್ಣಿಗೆ ಬಿದ್ದದ್ದು ಕಿರುಚಿತ್ರವೊಂದರಲ್ಲಿ. ಅಲ್ಲಿಂದ ನೇರವಾಗಿ ಚಿತ್ರತಂಡದ ಭಾಗವಾದರೂ, ರಾಧಿಕಾ ಸತತ ಎರಡು ತಿಂಗಳ ಕಾಲ ಚಿತ್ರಕ್ಕಾಗಿ ತಯಾರಿ ನಡೆಸಿದ್ದಾರೆ. ಅನೂಪ್‌ ನೀಡಿದ್ದ ಸ್ಕ್ರಿಪ್ಟ್‌ ಅನ್ನು ಒಂದೇ ಉಸಿರಿನಲ್ಲಿ ಓದಿ ಮುಗಿಸಿದ ಅವರಲ್ಲಿ ಆಗಲೇ ದೃಶ್ಯಗಳ ಚಿತ್ರಿಕೆಗಳು ಮನದಲ್ಲಿ ಮೂಡುತ್ತಿದ್ದವಂತೆ.

ಅನೂಪ್‌ ಅಷ್ಟು ಆಳವಾಗಿ ಚಿತ್ರಕ್ಕೆ ಸಿದ್ಧತೆ ನಡೆಸಿದ್ದರು ಎನ್ನುತ್ತಾರೆ ರಾಧಿಕಾ. ಚಿತ್ರದಲ್ಲಿ ಅವರದು ‘ಇಂದು’ ಎಂಬ ಯುವತಿಯ ಪಾತ್ರ. ಪಾತ್ರಕ್ಕೆ ತಕ್ಕಂತೆಯೇ ಈ ಹೆಸರೂ ಇದೆ. ಚಂದ್ರನಂತೆ ಶೋಭಿಸುವ, ಹೊಳಪುಳ್ಳ ಪಾತ್ರ ತನ್ನದು ಎನ್ನುವ ಅವರು, ಅಷ್ಟೇ ನಿಗೂಢತೆಯೂ ಪಾತ್ರದಲ್ಲಿದೆ ಎನ್ನುತ್ತಾರೆ. ಅಭಿನಯ ಪ್ರತಿಭೆ ಪ್ರದರ್ಶನಕ್ಕೆ ಉತ್ತಮ ಅವಕಾಶ ದೊರೆತಿದೆ ಎಂಬ ಖುಷಿ ಅವರದು.

ನಾಟಕ ಮತ್ತು ಸಿನಿಮಾಗಳಲ್ಲಿನ ಅನುಭವ ಇದ್ದರೂ ತಮಗೆ ಅಭಿನಯದ ಪಾಠ ಹೇಳಿಕೊಟ್ಟದ್ದು ಕಥಕ್ ನೃತ್ಯ ಎಂದು ಅವರು ಹೇಳುತ್ತಾರೆ. ಅವರು ತಮ್ಮ ಗುರುವೆಂದು ಕರೆಯುವುದು ನಿರುಪಮಾ ರಾಜೇಂದ್ರ ಅವರನ್ನು. ಕಥಕ್ ನೃತ್ಯ ಕಲಿಕೆಯ ಪ್ರಕ್ರಿಯೆಯೇ ಅಭಿನಯದ ತತ್ವಗಳನ್ನು ಮೈಗೂಡಿಸಿಕೊಂಡಿತ್ತು ಎಂದವರು ಹೇಳುತ್ತಾರೆ.

ನಿರುಪಮಾ ಅವರೊಂದಿಗೆ ದೇಶದ ಕೆಲವೆಡೆ ನೃತ್ಯ ಪ್ರದರ್ಶನಗಳನ್ನು ನೀಡುವ ಅವಕಾಶಗಳೂ ರಾಧಿಕಾ ಅವರಿಗೆ ಸಾಕಷ್ಟು ಕಲಿಸಿವೆ. ಹೀಗಾಗಿ ನಾಟಕ ಅಥವಾ ಸಿನಿಮಾ ನಟನೆ ಅವರಿಗೆ ಅಷ್ಟೇನೂ ಸವಾಲು ಎನಿಸಿರಲಿಲ್ಲ.

‘ರಂಗಿತರಂಗ’ದ ಬೆನ್ನಲ್ಲೇ ಹಲವು ಅವಕಾಶಗಳು ಬಂದರೂ ರಾಧಿಕಾ ನಟಿಸುವ ಆಸಕ್ತಿ ತೋರಿಸಿಲ್ಲ. ಇದಕ್ಕೆ ಕಾರಣ ಪಾತ್ರಗಳು ಮೆಚ್ಚುಗೆಯಾಗದಿರುವುದು. ಒಳ್ಳೆಯ ಕಥೆ, ಅಭಿನಯಕ್ಕೆ ಅವಕಾಶವಿರುವ ಪಾತ್ರಗಳಲ್ಲಿ ಮಾತ್ರ ನಟಿಸುತ್ತೇನೆ ಎನ್ನುವುದು ಅವರ ದೃಢ ನಿರ್ಧಾರ. ರಂಗಭೂಮಿಆಗಲೀ, ಸಿನಿಮಾವಾಗಲಿ ಒಳ್ಳೆಯ ಪಾತ್ರ ಇರಬೇಕು ಎನ್ನುತ್ತಾರೆ.

ಒಂದು ವೇಳೆ ಸ್ಟಾರ್ ನಟರೊಂದಿಗೆ ಅವಕಾಶ ದೊರೆತಾಗಲೂ ಇದೇ ನಿಲುವೇ ಎಂದು ಕೇಳಿದರೆ, ‘ಅವರೊಂದಿಗೆ ನಟಿಸುವ ಆಸೆ ಎಲ್ಲರಿಗೂ ಇರುತ್ತದೆಯಲ್ಲವೇ’ ಎಂದು ನಗುತ್ತಲೇ ಜಾರಿಕೊಳ್ಳಲು ಪ್ರಯತ್ನಿಸುತ್ತಾರೆ.

ಅಂದಹಾಗೆ, ರಾಧಿಕಾ ಯೋಗಪಟುವೂ ಹೌದು. ಬಣ್ಣದ ನಂಟಿನ ನಡುವೆ ಯೋಗದ ಪಾಠವನ್ನೂ ಮಾಡುತ್ತಾರೆ. ಸೀರೆ ಉಟ್ಟರೂ ಗ್ಲಾಮರ್‌ ಎನ್ನುವ ಹಲವು ನಟಿಯರ ಮಾತನ್ನು ಇವರೂ ಅನುಮೋದಿಸುತ್ತಾರೆ. ಆದರೆ ಸಭ್ಯತೆ ಎಲ್ಲೆ ಮೀರದ ಗ್ಲಾಮರಸ್‌ ಪಾತ್ರಗಳಿಗೆ ಅವರ ತಕರಾರಿಲ್ಲ. ಇನ್ನು ಕಲೆಗೆ ಯಾವುದೇ ಎಲ್ಲೆ ಇಲ್ಲ ಎನ್ನುವುದು ರಾಧಿಕಾ ನಂಬಿಕೆ. ಒಳ್ಳೆಯ ಅವಕಾಶಗಳು ಯಾವ ಭಾಷೆಯಿಂದ ಬಂದರೇನು ಎನ್ನುತ್ತಾರೆ ಅವರು.

‘ನಟನೆ ನನ್ನಲ್ಲಿದ್ದ ಹಿಡನ್ ಡ್ರೀಮ್‌. ಆ ಕನಸೀಗ ಸಾಕಾರಗೊಂಡಿದೆ’ ಎನ್ನುವ ಅವರು, ತಮ್ಮ ನಡೆಯ ದಿಕ್ಕನ್ನು ನಿರ್ಧರಿಸಲು ‘ರಂಗಿತರಂಗ’ದ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.