ADVERTISEMENT

ವಾಟ್ಸ್‌ ಆ್ಯಪ್ ಪ್ರೀತಿ, ಹೊಸ ರೀತಿ!

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2015, 19:30 IST
Last Updated 1 ಡಿಸೆಂಬರ್ 2015, 19:30 IST

ಮೊಬೈಲ್ ಇಂದಿನ ಪೀಳಿಗೆಗೆ ಎಷ್ಟು ಆಪ್ತವಾಗುತ್ತಿದೆ ಮತ್ತು ಅವರ ಜೀವನದಲ್ಲಿ ಎಷ್ಟು ಮುಖ್ಯ ಸ್ಥಾನವನ್ನು ಪಡೆಯುತ್ತಿದೆ ಎಂದು ಹೇಳುವ ಕಥೆಯಿರುವ ‘ವಾಟ್ಸಪ್ ಲವ್’ ಚಿತ್ರದ ಹಾಡುಗಳ ಸೀಡಿ ಬಿಡುಗಡೆ ಕಾರ್ಯಕ್ರಮ ಕಳೆದ ವಾರ ನಡೆಯಿತು. ನಿರ್ದೇಶಕ ರಾಮ್ ಅವರಿಗಿದು ಮೊದಲ ಚಿತ್ರ. ಸಂಪೂರ್ಣವಾಗಿ ಬೆಂಗಳೂರಿನಲ್ಲೇ ಚಿತ್ರೀಕರಣ ನಡೆದಿದೆ.

ವಾಟ್ಸ್‌ ಆ್ಯಪ್‌ನಲ್ಲೇ ಪ್ರೀತಿ ಸಂಭವಿಸುವ ಮತ್ತು ನಂತರದ ಪರಿಣಾಮಗಳನ್ನು ಹೇಳಹೊರಟಿದ್ದಾರೆ ರಾಮ್. ಕಥೆ, ಗೀತ ಸಾಹಿತ್ಯವೂ ಅವರದೇ. ‘ವಾಟ್ಸ್‌ ಆ್ಯಪ್‌ನಲ್ಲೇ ಪ್ರೀತಿ ಹುಟ್ಟಿಕೊಳ್ಳುವ ಮತ್ತು ಅದರಿಂದಲೇ ಪ್ರೇಮಿಗಳು ದೂರವಾಗುವ ವಿಚಾರವನ್ನು ಹೇಳುತ್ತಿದ್ದೇನೆ. ಅದು ಹೇಗೆ ಎಂಬ ಸ್ವಾರಸ್ಯವನ್ನು ಚಿತ್ರದಲ್ಲೇ ನೋಡಬೇಕು’ ಎಂದರು ನಿರ್ದೇಶಕರು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹಂಚಿಕೊಳ್ಳಬಾರದು ಎಂಬ ಸಂದೇಶ ಚಿತ್ರದಲ್ಲಿ ಇದೆಯಂತೆ.

‘ಸುಂದರ ಸ್ವಪ್ನಗಳು’ ಚಿತ್ರದಲ್ಲಿ ಬಾಲಕಲಾವಿದನಾಗಿದ್ದ ಜೀವಾ ಮೊದಲ ಬಾರಿ ನಾಯಕನಾಗಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ‘ಇದು ಕೌಟುಂಬಿಕ ಚಿತ್ರ. ಒಂದೇ ಒಂದು ಅಶ್ಲೀಲ ಪದವಾಗಲೀ ದೃಶ್ಯವಾಗಲೀ ಇಲ್ಲ’ ಎನ್ನುವ ಜೀವಾ ಈಗಾಗಲೇ ತಮಿಳು ಚಿತ್ರಕ್ಕೂ ಸಹಿ ಹಾಕಿದ್ದಾರಂತೆ. ಅವರೇ ಚಿತ್ರಕ್ಕೆ ಹಣವನ್ನೂ ಹೊಂದಿಸಿದ್ದಾರೆ. ಜೀವಾಗೆ ನಾಯಕಿಯಾಗಿರುವ ಐಶ್ವರ್ಯ ಸಿಂಧೋಗಿ, ‘ಚಿತ್ರದಲ್ಲಿ ಸಾಕಷ್ಟು ತಿರುವುಗಳಿವೆ’ ಎಂದರು. ಮಮತಾ ರಾಹುತ್ ಮತ್ತು ಕೆಂಪೇಗೌಡ ಚಿತ್ರದಲ್ಲಿ ಲಿವ್ ಇನ್ ರಿಲೇಶನ್‌ಷಿಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ನಿರ್ದೇಶಕರು ತ್ವರಿತವಾಗಿ ಆರು ಹಾಡುಗಳಿಗೆ ಸಾಹಿತ್ಯ ರಚಿಸಿದ್ದು, ಅಷ್ಟೇ ವೇಗದಲ್ಲಿ ಸಂಗೀತವನ್ನೂ ಸಂಯೋಜಿಸಿದ್ದಾಗಿ ಹೇಳಿದರು ಸಂಗೀತ ನಿರ್ದೇಶಕ ಬಿ.ಆರ್. ಹೇಮಂತಕುಮಾರ್. ಟ್ರೇಲರ್ ಮತ್ತು ಹಾಡುಗಳನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಲಾಯಿತು. ‘ಲಹರಿ’ ಸಂಸ್ಥೆ ಹಾಡುಗಳನ್ನು ಮಾರುಕಟ್ಟೆಗೆ ತಂದಿದೆ. ಶ್ರೀಕಿ, ಶ್ರಾವ್ಯ, ತಿಲಕ್, ಚಿಕ್ಕಣ್ಣ ತಾರಾಗಣದಲ್ಲಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.