ADVERTISEMENT

ವಿಕಟಕವಿಯ ವಾಸ್ತುಪುರಾಣ...

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2014, 19:30 IST
Last Updated 18 ಡಿಸೆಂಬರ್ 2014, 19:30 IST
ವಿಕಟಕವಿಯ ವಾಸ್ತುಪುರಾಣ...
ವಿಕಟಕವಿಯ ವಾಸ್ತುಪುರಾಣ...   

‘ಬಿದ್ದಲ್ಲೆ ಬೇರೂರಿ ಗಗನಕ್ಕೆ ಕೈಯೆತ್ತಿ ಹೂ ಬಿಡುವ ಗಿಡ ಮರಕೆ ವಾಸ್ತುವೆಲ್ಲಿ...’– ಇದು ‘ವಾಸ್ತುಪ್ರಕಾರ’ ಚಿತ್ರದ ಗೀತೆಯೊಂದರ ಸಾಲು. ಜಯಂತ ಕಾಯ್ಕಿಣಿ ಇದರ ಕವಿ. ‘ಜಯಂತರ ಈ ಹಾಡು ಇಡೀ ಚಿತ್ರವನ್ನು ಲೀಗಲೈಸ್ ಮಾಡಿಬಿಡುತ್ತದೆ’ ಎಂದರು ನಿರ್ದೇಶಕ ಯೋಗರಾಜ ಭಟ್.

‘ವಾಸ್ತುಪ್ರಕಾರ’ ಚಿತ್ರದ ಗೀತೆಗಳ ಧ್ವನಿಮುದ್ರಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಯೋಗರಾಜ ಭಟ್‌ರ ಮಾತುಗಳಲ್ಲಿ ಹಾಡಿನ ಗುಂಗು ಕಾಣಿಸುತ್ತಿತ್ತು. ಭಟ್ಟರ ಹಿಂದಿನ ಚಿತ್ರಗಳಂತೆ ಈ ಚಿತ್ರದ ಹಾಡುಗಳಲ್ಲೂ ಹಾಸ್ಯ, ತುಂಟತನ, ಪ್ರೇಮದ ಘಮ ಹಾಗೂ ಕಥನದ ಓಘವಿದೆ.

ಅಂದಹಾಗೆ, ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ತಮಟೆ ಸದ್ದೇ ಮುಖ್ಯವಾದ ಒಂದು ಹಾಡೂ ಇದೆ. ಎಲ್ಲ ಹಾಡುಗಳಿಗೆ ವಿ. ಹರಿಕೃಷ್ಣ ಅವರ ಸಂಗೀತವಿದೆ. ಒಂದು ಹಾಡಿಗೆ ಜಯಂತ್ ಅವರು ಸಾಹಿತ್ಯ ಒದಗಿಸಿದರೆ ಉಳಿದ ಮೂರು ಹಾಡುಗಳಿಗೆ ಸ್ವತಃ ಭಟ್ಟರೇ ಪದ ಪೋಣಿಸಿದ್ದಾರೆ.

ಟಿಪ್ಪು, ಸೋನು ನಿಗಂ, ವಿಜಯ್‌ಪ್ರಕಾಶ್ ಹಾಗೂ ವಿ.ಹರಿಕೃಷ್ಣ ತಲಾ ಒಂದೊಂದು ಹಾಡಿಗೆ ದನಿಯಾಗಿದ್ದಾರೆ. ‘ಪ್ರತಿ ಬಾರಿಯೂ ಹೊಸ ಟಾರ್ಗೆಟ್ ಇಟ್ಟುಕೊಳ್ಳುವ ಹರಿಕೃಷ್ಣ ಈಗ ಒಂದೇ ಬಾರಿ ಎರಡು ಮೆಟ್ಟಿಲುಗಳನ್ನು ಏರಿದ್ದಾರೆ’ ಎಂದರು ಯೋಗರಾಜ್ ಭಟ್.

ಚಿತ್ರದ ಮುಖ್ಯ ಪಾತ್ರಧಾರಿ ಜಗ್ಗೇಶ್. ‘ನಾನು ವಾಸ್ತು ನಂಬುತ್ತೇನೆ, ಭಟ್ರು ನಂಬಲ್ಲ. ಈ ಪರಿಸ್ಥಿತಿಯಲ್ಲಿ ಸಿನಿಮಾ ಮಾಡಿದ್ದೇವೆ’ ಎಂದರು. ‘ಜಗ್ಗೇಶ್ ಇಮೇಜ್‌ಗೆ ಒಂದು ಹಾಡು ಮಾಡಬೇಕೆಂದಾಗ ಸವಾಲೆನಿಸಿತು. ಆದರೆ ಸಿನಿಮಾ ಶುರು ಆಗುವ ಮೊದಲೇ ಅವರಿಗೆ ಹಾಡು ಸಿದ್ಧವಾಗಿಬಿಟ್ಟಿತು’ ಎಂದರು ಹರಿಕೃಷ್ಣ.

‘ಭಟ್ರು ಮತ್ತು ಜಗ್ಗೇಶ್ ಅವರ ಮಧ್ಯೆ ಸಿಕ್ಕಿ ಹಾಕಿಕೊಂಡುಬಿಟ್ಟಿದ್ದೆ. ಉಗ್ಯಕ್ಕಾಗಲ್ಲ–ನುಂಗಕ್ಕಾಗಲ್ಲ’ ಎಂದು ಖುಷಿಯಿಂದಲೇ ನುಡಿದರು ನಾಯಕ ರಕ್ಷಿತ್ ಶೆಟ್ಟಿ. ರಕ್ಷಿತ್‌ಗೆ ಜೊತೆಯಾದ ನಟಿ ಐಶಾನಿ ಶೆಟ್ಟಿ, ತೀರಾ ರೋಮಾಂಚನಗೊಂಡಂತೆ ಕಾಣುತ್ತಿದ್ದರು. ಚಿತ್ರ ಯಾವಾಗ ಬಿಡುಗಡೆ ಆಗುತ್ತೆ ಎಂಬುದು ಅವರ ಕುತೂಹಲ.

‘ಭಟ್ರು ಮತ್ತು ಹರಿಕೃಷ್ಣ ಅವರದು ಡೆಡ್ಲಿ ಕಾಂಬಿನೇಷನ್. ಭಟ್ರು ನನ್ನ ಪ್ರಕಾರ ವಿಕಟಕವಿ’ ಎನ್ನುತ್ತ ಆಡಿಯೊ ಸಿಡಿ ಬಿಡುಗಡೆ ಮಾಡಿದರು ನಟ ಯಶ್. ನಿರ್ಮಾಪಕರಾದ ಕರಿಸುಬ್ಬು ಕಾರ್ಯಕ್ರಮದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.