ADVERTISEMENT

ವಿಲನ್‌ಗೇ ವಿಲನ್‌ ಈ ವಿವಾನ್‌

ರೋಹಿಣಿ ಮುಂಡಾಜೆ
Published 16 ನವೆಂಬರ್ 2017, 19:30 IST
Last Updated 16 ನವೆಂಬರ್ 2017, 19:30 IST
ವಿವಾನ್‌ ಆಕರ್ಷ್‌
ವಿವಾನ್‌ ಆಕರ್ಷ್‌   

ಕನ್ನಡದ ಕಿರುತೆರೆಗೆ ಭರವಸೆಯ ಕಲಾವಿದರ ಪ್ರವೇಶವಾಗುತ್ತಲೇ ಇರುತ್ತದೆ. ಧಾರಾವಾಹಿಯ ಏಕತಾನತೆಯನ್ನು ತೊಡೆದುಹಾಕಿ ವೀಕ್ಷಕರಲ್ಲಿ ಹೊಸ ಉಮೇದು ತುಂಬುವಲ್ಲಿ ಕಥೆಯ ತಿರುವಿನಷ್ಟೇ ಹೊಸ ಕಲಾವಿದರೂ ಕಾರಣರಾಗುತ್ತಾರೆ. ‘ಪುಟ್ಟಗೌರಿ ಮದುವೆ’ ಧಾರಾವಾಹಿಯ ಕಥೆಯಲ್ಲಿ ತಿರುವುಗಳು ಹೊಸತೇನಲ್ಲ. ಆದರೆ ಇತ್ತೀಚಿನ ಕೆಲವು ಸಂಚಿಕೆಗಳನ್ನು ಕಾದು ಕುಳಿತು ನೋಡುವಂತೆ ಮಾಡಿರುವುದು ಹೊಸ ಖಳನಾಯಕನ ಪ್ರವೇಶ. ‘ವೈಲ್ಡ್‌ಲೈಫ್‌ ಫೋಟೊಗ್ರಾಫರ್‌ ಕೃಷ್ಣ’ ಎಂದು ಪರಿಚಯಿಸಿಕೊಂಡಿದ್ದು ಬಿಟ್ಟರೆ ಪಾತ್ರದ ಹೆಸರು ಎಲ್ಲೂ ಪ್ರಸ್ತಾಪವಾಗುವುದಿಲ್ಲ.

ಕಿರುತೆರೆಯಲ್ಲಿ ಎಂಟು ವರ್ಷಗಳ ಹಿಂದೆಯೇ ಸುನಿಲ್‌ ಸಾಗರ್‌ ಹಾಗೂ ಸನ್ನಿ ಸಾಗರ್‌ ಆಗಿ ಗುರುತಿಸಿಕೊಂಡಿದ್ದ ಕಲಾವಿದ ಇವರು. ಈಗ ಸಂಖ್ಯಾಶಾಸ್ತ್ರದ ಪ್ರಭಾವಕ್ಕೊಳಗಾಗಿ ವಿವಾನ್‌ ಆಕರ್ಷ್‌ ಆಗಿದ್ದಾರೆ. ಸಂಖ್ಯಾಶಾಸ್ತ್ರ ಅಂದ ಮೇಲೆ ಅದೃಷ್ಟ ಸಂಖ್ಯೆಯೂ ಇರಲೇಬೇಕಲ್ಲ? ವಿವಾನ್‌ ಆಕರ್ಷ್‌, ಆರು ತಮಗೆ ಅದೃಷ್ಟ ತರುತ್ತದೆ ಎಂದು ನಂಬಿದ್ದಾರೆ. ತವರೂರು ಶಿವಮೊಗ್ಗ ಜಿಲ್ಲೆಯ ಸಾಗರ.

ಖಳನಾಯಕನ ಪಾತ್ರದಲ್ಲಿ ಈ ಹಿಂದೆಯೂ ಮಿಂಚಿದ್ದ ವಿವಾನ್‌ಗೆ ಕಲರ್ಸ್‌ ಕನ್ನಡ ವಾಹಿನಿ ಮತ್ತು ರಾಮ್‌ಜಿ ಪ್ರೊಡಕ್ಷನ್‌ನಲ್ಲಿ ಅವಕಾಶ ಸಿಕ್ಕಿರುವುದೂ ಅದೃಷ್ಟವೇ ಅಂತೆ. ‘ಒಂದು ಧಾರಾವಾಹಿಯಲ್ಲಿ ನನ್ನ ಪಾತ್ರ ಮುಗಿಯುತ್ತಿದ್ದಂತೆ ಬೇರೆ ಬೇರೆ ಧಾರಾವಾಹಿಯ ಪ್ರೊಡಕ್ಷನ್‌ ಮ್ಯಾನೇಜರ್‌ಗಳಿಗೆ ಕರೆ ಮಾಡಿ ಹೊಸ ಅವಕಾಶ ಇದ್ದರೆ ತಿಳಿಸಿ ಎಂದು ಮನವಿ ಮಾಡಿಕೊಳ್ಳುವುದು ನನಗೆ ಆರಂಭದಿಂದಲೂ ರೂಢಿ.

ADVERTISEMENT

ಇತ್ತೀಚೆಗಷ್ಟೇ ‘ಅಮೃತವರ್ಷಿಣಿ’ಯಲ್ಲಿ ನನ್ನ ಪಾತ್ರ ಮುಗಿದಿತ್ತು. ರಾಮ್‌ಜಿ ಮತ್ತು ಅವರ ಪ್ರೊಡಕ್ಷನ್‌ ಮ್ಯಾನೇಜರ್‌ ಜಾಕಿ ಅವರಿಗೆ ಕರೆ ಮಾಡಿದೆ. ಕಾಕತಾಳೀಯ ಎಂಬಂತೆ, ‘ಪುಟ್ಟಗೌರಿ ಮದುವೆ’ಗೆ ಹೊಸ ತಿರುವು ಕೊಡಲು ವಿಲನ್‌ ಪಾತ್ರ ಸೃಷ್ಟಿಸುವ ಯೋಚನೆಯಲ್ಲಿದ್ದರು ರಾಮ್‌ಜಿ. ಆ ಅವಕಾಶ ನನಗೆ ಸಿಕ್ಕಿತು. ಕಲರ್ಸ್‌ ಕನ್ನಡ ಮತ್ತು ರಾಮ್‌ಜಿಯವರ ಕಾಂಬಿನೇಷನ್‌ ಅದ್ಭುತವಾಗಿದೆ. ನನ್ನ ಮಟ್ಟಿಗೆ ಇದು ದೊಡ್ಡ ವೇದಿಕೆ. ನಾನು ಅದೃಷ್ಟವಂತ’ ಎಂಬುದು ವಿವಾನ್‌ ಮನದ ಮಾತು.

‘ಪುಟ್ಟಗೌರಿ ಮದುವೆ’ಯಲ್ಲಿ ‘ಸಾಗರಿ’ ಎಂಬ ಖಳನಾಯಕಿ ವೀಕ್ಷಕರ ಹೊಟ್ಟೆ ಉರಿಸುತ್ತಲೇ ಇರುತ್ತಾಳೆ. ಅವಳಿಗೇ ಖೆಡ್ಡಾ ತೋಡುವ ಪಾತ್ರ ನನ್ನದು. ವಿಲನ್‌ಗೇ ವಿಲನ್‌ ಈ ‘ವೈಲ್ಡ್‌ಲೈಫ್‌ ಫೋಟೊಗ್ರಾಫರ್‌ ಕೃಷ್ಣ’. ತಣ್ಣಗಿನ ನೋಟ, ಸಾದಾ ಸೀದಾ ಹಾವಭಾವ, ಇದೆಲ್ಲಕ್ಕೂ ಜೀವ ತುಂಬುವಂತೆ ಧ್ವನಿಯ ಏರಿಳಿತದ (ವಾಯ್ಸ್‌ ಮಾಡ್ಯುಲೇಷನ್‌) ಮೂಲಕವೇ ಖಳ ಛಾಯೆಯನ್ನು ಕಟ್ಟಿಕೊಡಬೇಕು. ಇದು ನಿಜವಾದ ಸವಾಲು. ಹೀಗೆ, ಖಳನಾಯಕನಿಗೆ ಹೊಸ ಖದರು ಕೊಟ್ಟಿದ್ದಾರೆ ರಾಮ್‌ಜಿ. ನಾನು ಮೊದಲ ದಿನವೇ ಅವರ ಮೆಚ್ಚುಗೆ ಗಳಿಸಿದೆ’ ಎಂದು ನಗುತ್ತಾರೆ.

‘ಎಲೆಕ್ಟ್ರಾನಿಕ್ಸ್‌ ಡಿಪ್ಲೊಮಾ ಮುಗಿಸಿದಾಗಲೇ ಕಿರುತೆರೆಯ ಸೆಳೆತ ಇತ್ತು. ಹಾಗಂತ ಬೆಂಗಳೂರಿಗೆ ಬಂದ ತಕ್ಷಣ ಅವಕಾಶ ಸಿಗಲಿಲ್ಲ. ಪ್ರೊಡಕ್ಷನ್‌ ಬಾಯ್‌ ಮತ್ತು ಚಾಲಕನಾಗಿ ಕೆಲಸ ಮಾಡಿ ಕಿರುತೆರೆಯ ಸಂಪರ್ಕ ಉಳಿಸಿಕೊಂಡ ಜಾಣ. ‘ನಟನೆಯ ಲವಲೇಶವೂ ಗೊತ್ತಿರಲಿಲ್ಲ. ಅದಕ್ಕಾಗಿ ಬಿಡುವು ಮಾಡಿಕೊಂಡು ಕನ್ನಡಿ ಮುಂದೆ ನಿಲ್ಲುತ್ತಿದ್ದೆ. ನಮ್ಮನ್ನು ನಾವು ಒಪ್ಪಿಸಿಕೊಳ್ಳಲು, ತಿದ್ದಿಕೊಳ್ಳಲು ಕನ್ನಡಿಗಿಂತ ದೊಡ್ಡ ವೇದಿಕೆ ಇನ್ನೊಂದಿಲ್ಲ. ನನ್ನ ಪಾಲಿಗೆ ಕನ್ನಡಿಯೇ ಗುರು ಮತ್ತು ಗೆಳೆಯ. ಅಮ್ಮ ಇನ್ನೊಬ್ಬ ಗೆಳತಿ’ ಎಂದು ಮುಚ್ಚುಮರೆಯಿಲ್ಲದೆ ಗತವನ್ನು ನೆನಪಿಸಿಕೊಳ್ಳುತ್ತಾರೆ ವಿವಾನ್‌.

ಆಕರ್ಷಕ ವ್ಯಕ್ತಿತ್ವದ ವಿವಾನ್‌ಗೆ ಹೋದಲ್ಲೆಲ್ಲಾ ಹೆಣ್ಣು ಮಕ್ಕಳು ಬೆನ್ನು ಬೀಳುತ್ತಾರಂತೆ. ಸೆಟ್‌ನಲ್ಲಿಯೂ ಕೆಲವರು ‘ಐ ಲವ್‌ ಯೂ’ ಅಂತ ಮುಲಾಜಿಲ್ಲದೆ ಹೇಳಿದ್ದೂ ಉಂಟಂತೆ. ‘ಅಯ್ಯೋ, ಲವ್ವು ಗಿವ್ವುಗೆ ಪುರುಸೊತ್ತೇ ಇಲ್ಲ. ನಟನೆಯಲ್ಲೇ ಏನೋ ಸಾಧಿಸಬೇಕು ಎಂಬ ಗುರಿ ಇದೆ. ಅದಾದ ಮೇಲೆ ಪ್ರೀತಿಪ್ರೇಮ. ಮದುವೆಯಾಗಿ ಬದುಕಲ್ಲಿ ನೆಲೆ ನಿಲ್ಲುತ್ತೇನೋ, ಸಹಜೀವನ ನಡೆಸುತ್ತೇನೋ. ಅದೆಲ್ಲಾ ಚಿಂತೆಯೇ ಮಾಡಿಲ್ಲ. ಅದಕ್ಕೇ ಇದುವರೆಗೂ ನನ್ನ ರಾಯಲ್‌ ಎನ್‌ಫೀಲ್ಡ್‌ ಬೈಕ್‌ನಲ್ಲಿ ಹುಡುಗೀರನ್ನು ಹತ್ತಿಸಿಕೊಂಡೇ ಇಲ್ಲ ಗೊತ್ತಾ?’ ಎಂದು ‘ವೈಲ್ಡ್‌ಲೈಫ್‌ ಫೋಟೊಗ್ರಾಫರ್‌ ಕೃಷ್ಣ’ನ ಹಾಗೇ ಗಹಗಹಿಸಿ ನಗುತ್ತಾರೆ.

ವಿವಾನ್‌ ಗೆಳೆಯರ ದಂಡು ದೊಡ್ಡದು. ಎಲ್ಲರೂ ಒಟ್ಟು ಸೇರೋದು, ಹರಟೋದು ದಿನಚರಿಯ ಭಾಗ. ಆದರೆ ಬೈಕ್‌ ರೈಡ್‌ನಲ್ಲಿ ಮಾತ್ರ ಏಕಾಂಗಿ. ಸಂಗೀತ ಕೇಳುತ್ತಾ ಮೂಡ್‌ಗೆ ತಕ್ಕಂತೆ ಗಾಡಿ ಓಡಿಸುವುದೆಂದರೆ ಹುಚ್ಚು ಪ್ರೀತಿ.

‘ಯಾವುದೇ ಊರಿಗೆ ಹೋದರೂ ರಸ್ತೆ ಬದಿಯಲ್ಲಿ ಅಜ್ಜಿ ಅಥವಾ ಆಂಟಿಯವರು ನಡೆಸುವ ಚಹಾ ಅಂಗಡಿಗಳಲ್ಲಿ ಚಹಾ ಕುಡಿದು ಚಿತ್ರಾನ್ನವೋ ಪುಳಿಯೋಗರೆಯೋ ತಿಂದು ಒಂದಿಷ್ಟು ಹರಟೆ ಹೊಡೆದರೆ ಯಾವ ತಾರಾ ಹೋಟೆಲ್‌ಗಳ ಆತಿಥ್ಯವೂ ನೆನಪಾಗುವುದಿಲ್ಲ’ ಎಂಬುದು ವಿವಾನ್‌ ಅನುಭವದ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.