ADVERTISEMENT

ಶರಣ್ ‘ಅಧ್ಯಕ್ಷ’ಗಿರಿ

​ಪ್ರಜಾವಾಣಿ ವಾರ್ತೆ
Published 31 ಜುಲೈ 2014, 19:30 IST
Last Updated 31 ಜುಲೈ 2014, 19:30 IST

‘ಒಬ್ಬರಿಗೊಬ್ಬರು ಚಾಲೆಂಜ್ ಮಾಡಿಕೊಂಡು ಆ್ಯಕ್ಟಿಂಗ್ ಮಾಡಿದ್ದೀರಾ’ ಎಂದು ಪ್ರಶ್ನಿಸಿದರು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ.
ಅವರು ಕೇಳಿದ್ದು– ಶರಣ್ ಹಾಗೂ ರವಿಶಂಕರ್ ಅವರನ್ನು. ‘ಅಧ್ಯಕ್ಷ’ ಚಿತ್ರದ ಹಾಡುಗಳು ಹಿಟ್ ಆಗಿವೆ ಎಂಬ ಎಲ್ಲರ ಮೆಚ್ಚುಗೆಗೆ ಪ್ರತಿಯಾಗಿ ಅರ್ಜುನ್ ಈ ಪ್ರಶ್ನೆ ಎಸೆದರು! ರವಿಶಂಕರ್ ಹಾಗೂ ಶರಣ್ ಅಭಿನಯ ಅವರನ್ನು ಅಷ್ಟು ಸೆಳೆದಿದೆಯಂತೆ.

ಚಿತ್ರೀಕರಣ ಪೂರ್ಣಗೊಳಿಸಿರುವ ‘ಅಧ್ಯಕ್ಷ’ ಚಿತ್ರತಂಡ, ಉಳಿದ ಕೆಲಸಗಳನ್ನು ನಡೆಸುತ್ತಿದೆ. ಚಿತ್ರದ ವಿವರ ಹಂಚಿಕೊಳ್ಳಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ನಂದಕಿಶೋರ್ ಹೆಚ್ಚು ಮಾತಾಡಲಿಲ್ಲ. ‘ವಿಕ್ಟರಿ’ ತರಹವೇ ಈ ಚಿತ್ರ ಪ್ರೇಕ್ಷಕರನ್ನು ರಂಜಿಸಲಿದೆ ಎಂಬ ವಿಶ್ವಾಸ ಅವರದು. ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂಬ ಎಲ್ಲರ ಪ್ರಶಂಸೆಗೆ ಅವರು ‘ಎಲ್ಲವೂ ತಂಡದ ಸಹಕಾರ. ಅದನ್ನು ಬಿಟ್ಟರೆ ನನ್ನದೇನಿಲ್ಲ’ ಎಂದಷ್ಟೇ ನುಡಿದರು.

ಕಾಮಿಡಿಗಳ ಸಾಲಿನಲ್ಲಿ ಸೇರುವ ‘ಅಧ್ಯಕ್ಷ’ ತೆರೆಗೆ ಬರಲು ಸಿದ್ಧವಾಗಿದ್ದು ಶರಣ್‌ಗೆ ಭಯ ಹಾಗೂ ಖುಷಿ ಎರಡೂ ಉಂಟಾಗಿವೆ. ಹಾಡುಗಳು ಪಡೆದ ಜನಪ್ರಿಯತೆ ಅವರನ್ನು ಭಯಕ್ಕೆ ಈಡು ಮಾಡಿದೆಯಂತೆ. ‘ಯಾಕೆಂದರೆ, ನಾವು ಅಂದುಕೊಂಡಿದ್ದಕ್ಕಿಂತ ಹಾಡುಗಳು ಹೆಚ್ಚು ಜನಪ್ರಿಯವಾಗಿವೆ. ಹೀಗಾಗಿ ಅದು ಸಿನಿಮಾದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆಯೋ ಎಂಬ ಹೆದರಿಕೆ ನನ್ನದು’ ಎಂದರು ಶರಣ್.

ತಮಿಳು ಚಿತ್ರ ‘ವರದಪದ ವಾಲಿಬಾಲ್ ಸಂಘಂ’ ರೀಮೇಕ್‌ ಆಗಿರುವ ‘ಅಧ್ಯಕ್ಷ’ನನ್ನು ಸಾಕಷ್ಟು ಕನ್ನಡೀಕರಣ ಮಾಡಲಾಗಿದೆ ಎಂಬ ಭರವಸೆಯನ್ನು ಅವರು ಕೊಟ್ಟರು. ಈವರೆಗೆ ಮಾಡಿದ್ದಕ್ಕಿಂತ ಭಿನ್ನವಾದ, ಅಂದರೆ ಹಳ್ಳಿ ಸೊಗಡಿನ ಪಾತ್ರ ತಮಗೆ ಸಿಕ್ಕಿದೆ ಎಂಬ ಖುಷಿ ಶರಣ್ ಅವರಲ್ಲಿದೆ. ಅಂದ ಹಾಗೆ. ಚಿತ್ರದಲ್ಲಿ ‘ಚಿ.ತು. ಸಂಘ’ಕ್ಕೆ ಅವರೇ ‘ಅಧ್ಯಕ್ಷ’ರಂತೆ. ಚಿ.ತು. ಅಂದರೆ ಚಿಂತೆಯಿಲ್ಲದ ತುಂಡ್‌ಹೈಕ್ಳ ಸಂಘ!

ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ರವಿಶಂಕರ್‌, ಶರಣ್ ಹಾಗೂ ಚಿಕ್ಕಣ್ಣ ನಟನೆಯನ್ನು ಕೊಂಡಾಡಿದರು. ಮುಂದೆ ತಮಗೆ ಚಿತ್ರರಂಗದಲ್ಲಿ ಒಳ್ಳೆಯ ಅವಕಾಶ ತಂದುಕೊಡುವ ಪಾತ್ರ ‘ಅಧ್ಯಕ್ಷ’ದಲ್ಲಿ ಸಿಕ್ಕಿದೆ ಎಂಬ ಖುಷಿಯನ್ನು ಚಿಕ್ಕಣ್ಣ ಹಂಚಿಕೊಂಡರು. ‘ಹೀರೋ ಆಗ್ತೀರಾ?’ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ಆ ಕನಸು ಇಲ್ಲ. ಕನ್ನಡೀಲಿ ದಿನಾ ನನ್ನ ನೋಡ್ಕಂತೀನಿ. ಆಗ ಹೀರೋ ಆಗಬೇಕು ಅಂತ ಅನಿಸೋದಿಲ್ಲ’ ಎಂದು ಹೇಳಿ ನಗೆಬುಗ್ಗೆ ಉಕ್ಕಿಸಿದರು. ಹಗಲು– ರಾತ್ರಿ ಶೂಟಿಂಗ್‌ ಮಾಡಿದ್ದನ್ನು ಛಾಯಾಗ್ರಾಹಕ ಸುಧಾಕರ ನೆನಪಿಸಿಕೊಂಡರು. ನಿರ್ಮಾಪಕ ಬಸವರಾಜ ಹಾಗೂ ಗಂಗಾಧರ ಮಾತನಾಡಿದರು. ಚಿತ್ರದ ಪ್ರೊಮೋ ಹಾಗೂ ಹಾಡುಗಳನ್ನು ಪ್ರದರ್ಶಿಸಲಾಯಿತು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.