ADVERTISEMENT

ಶಿವ ಶಿವ...

​ಪ್ರಜಾವಾಣಿ ವಾರ್ತೆ
Published 17 ಜುಲೈ 2014, 19:30 IST
Last Updated 17 ಜುಲೈ 2014, 19:30 IST

‘ಇಲ್ಲಿಗೆ ಎಂಟ್ರಿ ಆಗಬೇಕಾದರೆ ಅನ್ನಿಸಿತು. ಏನಪ್ಪಾ ಎಲ್ಲಾ ಖಾಲಿ ಖಾಲಿ ಅಂತ. ಬಹುಶಃ ಒಂದು ಚಿತ್ರವನ್ನು ನಾಲ್ಕು ವರ್ಷ ಮಾಡಿದ್ರೆ ಹೀಗೆ ಆಗುತ್ತೆ ಅನಿಸುತ್ತೆ. ಆಗಿದ್ದರೆ ನನ್ನ ‘ಮಂಜಿನ ಹನಿ’ ಚಿತ್ರ ಏನಾಗುತ್ತೋ? ಎಲ್ಲ ನಿರ್ಮಾಪಕರು ನಾನು ಕಾಟ ಕೊಡುತ್ತೇನೆ ಅನ್ನುತ್ತಿದ್ದರು. ಆದರೆ ಈ ನಿರ್ಮಾಪಕರು ಮೊದಲ ಬಾರಿಗೆ ತಾವೇ ಕಾಟಕೊಟ್ಟಿದ್ದೇನೆ ಅಂದು ಸತ್ಯ ಒಪ್ಪಿಕೊಂಡಿದ್ದಾರೆ...’ ಹೀಗೆ ರವಿಚಂದ್ರನ್ ಸೂಕ್ಷ್ಮವಾಗಿ ಚಾಟಿ ಬೀಸುತ್ತಿದ್ದರೆ ವೇದಿಕೆಯಲ್ಲಿದ್ದವರು ಗಂಭೀರ.

ಮುಹೂರ್ತ ನಡೆಸಿ ವರ್ಷಗಳೇ ಕಳೆದಿರುವ ‘ಪರಮಶಿವ’ ಸಿನಿಮಾದ ಚಿತ್ರೀಕರಣ ಮುಗಿಸಿದೆ. ಕಳೆದ ವಾರ ಆಡಿಯೊ ಬಿಡುಗಡೆಯೂ ಆಯಿತು. ತಮಿಳಿನ ಶಿವರಾಮ ರಾಜು ನಿರ್ಮಿಸಿದ್ದ ‘ಸಮುದ್ರಂ’ ಚಿತ್ರದ ರೀಮೇಕ್ ಈ ‘ಪರಮಶಿವ’. ಕಾರ್ಯಕ್ರಮದ ನಿಗದಿತ ಸಮಯಕ್ಕೆ ರವಿಮಾಮ ಹಾಜರಿದ್ದರೂ ಚಿತ್ರತಂಡದ ಇನ್ನಿತರ ಸದಸ್ಯರು ಗೈರಾಗಿದ್ದರು. ರವಿಚಂದ್ರನ್‌ ಮೇಲಿನ ಗೌರವಕ್ಕೆ ಮತ್ತು ನಿರ್ಮಾಪಕ ಅಣಜಿ ಮೇಲಿನ ಸ್ನೇಹಕ್ಕೆ ದರ್ಶನ್ ಸಹ ಹಾಜರಿ ಹಾಕಿದರು.

‘ನಾನು ರವಿ ಅಣ್ಣನಿಗೋಸ್ಕರ ಬಂದಿದ್ದೇನೆ’ ಎನ್ನುತ್ತಲೇ ವೇದಿಕೆಗೆ ಬಂದರು ದರ್ಶನ್‌. ‘ನೀನು ನನಗಾಗಿ ಬಂದಿದ್ದಲ್ಲ. ಪಕ್ಕದಲ್ಲೇ ಡರ್ಬಿ ಇದೆ, ಅದಕ್ಕಾಗಿ ಬಂದಿದ್ದೀಯಾ. ನೀವು ಈಗ ಓಡುತ್ತೀರೋ ಕುದುರೆಗಳು’ ಎಂದು ರವಿಚಂದ್ರನ್‌ ದರ್ಶನ್‌ರನ್ನು ಛೇಡಿಸಿದರು.
‘ಇದು ಸಿಸ್ಟರ್ ಸೆಂಟಿಮೆಂಟ್ ಚಿತ್ರ. ಆದರೆ ಇಲ್ಲಿ ಸಿಸ್ಟರೂ ಇಲ್ಲ, ಬ್ರದರೂ ಇಲ್ಲ, ಹೀರೋಯಿನ್ನೂ ಇಲ್ಲ, ಮ್ಯೂಸಿಕ್ ಡೈರೆಕ್ಟರ್‌–ಸೀಡಿ ಹಕ್ಕು ತೆಗೆದುಕೊಂಡವರೂ ಇಲ್ಲ.

ಅಣಜಿ ನಾಗರಾಜ್‌ಗೆ ಹೇಳುತ್ತೇನೆ, ಕೊನೆಗೆ ನಿನ್ನ ಜತೆ ಉಳಿದುಕೊಳ್ಳುವನು ಈ ರವಿಚಂದ್ರನ್ ಒಬ್ಬನೇ’ ಎಂದರು ರವಿಚಂದ್ರನ್‌. ‘ಏನೇ ಕಷ್ಟವಾದರೂ ಕೊನೆಗೆ ಬೇಡಿಕೊಳ್ಳುವುದು ಸಿನಿಮಾ ಚೆನ್ನಾಗಿ ಬರಲಿ ಎಂದು. ಶಿವ ಈಗ ನನ್ನ ಕಡೆ ಸ್ವಲ್ಪ ಕಣ್ಣು ಬಿಟ್ಟಿದ್ದಾನೆ. ಆ ಕಣ್ಣು ನಿರ್ಮಾಪಕ ಅಣಜಿ ನಾಗರಾಜ್ ಮೇಲೂ ಬಿಡಲಿ’ ಎಂದವರು ಆಶಿಸಿದರು.

‘ಮಾಣಿಕ್ಯ ಚಿತ್ರದಲ್ಲಿ ಅಣ್ಣನನ್ನು ಭಿನ್ನವಾಗಿ ನೋಡಿದ್ದೇವೆ. ನಂತರದ ‘ದೃಶ್ಯ’ ನೋಡಿ ಪೂರ್ಣವಾಗಿ ಶರಣಾದೆ. ಖಂಡಿತಾ ನನಗೆ ಆ ರೀತಿಯ ಪಾತ್ರ ಮಾಡುವುದಕ್ಕೆ ಬರುವುದಿಲ್ಲ’ ಎಂದರು ದರ್ಶನ್. ‘ಎಂದಿಗೂ ರಣಧೀರ, ಅಂಜದ ಗಂಡು ರೀತಿ ನಿಮ್ಮನ್ನು ನೋಡುತ್ತೇವೆ. ಈ ಬಿಳಿಗಡ್ಡ ಬೇಡ; ಕಪ್ಪಾಗಲಿ’ ಎಂದರು ದರ್ಶನ್. ಚಿತ್ರ ತಡವಾಗಿದ್ದನ್ನು ನಿರ್ಮಾಪಕ ಅಣಜಿ ನಾಗರಾಜ್ ಒಪ್ಪಿಕೊಂಡರು. ರವಿಚಂದ್ರನ್ ಮತ್ತು ನಿರ್ದೇಶಕ ಮಹೇಶ್ ಬಾಬು ಅವರಿಗೆ ತೊಂದರೆ ಕೊಟ್ಟೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.