ADVERTISEMENT

‘ಶ್ರೀಕಂಠ’: ಶಿವಣ್ಣನ ವ್ಯಕಿತ್ವದ ಅನಾವರಣ

​ಪ್ರಜಾವಾಣಿ ವಾರ್ತೆ
Published 5 ಜನವರಿ 2017, 19:30 IST
Last Updated 5 ಜನವರಿ 2017, 19:30 IST
ಶ್ರೀಕಂಠ ಶಿವರಾಜ್‌ಕುಮಾರ್
ಶ್ರೀಕಂಠ ಶಿವರಾಜ್‌ಕುಮಾರ್   

‘ಶಿಶಿರ’ ಮತ್ತು ‘ಶ್ರಾವಣಿ ಸುಬ್ರಮಣ್ಯ’ ಚಿತ್ರಗಳ ಖ್ಯಾತಿಯ ಮಂಜು ಸ್ವರಾಜ್‌ ನಿರ್ದೇಶನದ ಹೊಸ ಸಿನಿಮಾ ‘ಶ್ರೀಕಂಠ’. ‘ಶಿವರಾಜ್‌ ಕುಮಾರ್ ಅವರ ನೈಜ ವ್ಯಕ್ತಿತ್ವದ ಅನಾವರಣ’ ಎಂದು ತಮ್ಮ ಚಿತ್ರವನ್ನು ಅವರು ಬಣ್ಣಿಸುತ್ತಾರೆ.

*‘ಶ್ರೀಕಂಠ’ ಸಿನಿಮಾದ ತಿರುಳೇನು? ಕಥೆ ಹುಟ್ಟಿದ್ದು ಹೇಗೆ?
ಸಾಮಾನ್ಯ ಪ್ರಜೆಯೊಬ್ಬನ ಸುತ್ತ ಹೆಣೆಯಲಾದ ಕಥೆ ‘ಶ್ರೀಕಂಠ’ ಚಿತ್ರದ್ದು. ಸಮಕಾಲೀನ ರಾಜಕೀಯವೂ ಇದರೊಳಗೆ ಅಡಕವಾಗಿದೆ. ಹಾದಿ ತಪ್ಪಿರುವ ರಾಜಕಾರಣ ಸೇರಿದಂತೆ, ಸಮಾಜದಲ್ಲಿರುವ ಅವ್ಯವಸ್ಥೆ   ವಿರುದ್ಧ ತಿರುಗಿ ಬೀಳುವ ವ್ಯಕ್ತಿಯಾಗಿ ಶಿವಣ್ಣ (ಶಿವರಾಜ್‌ಕುಮಾರ್) ಕಾಣಿಸಿಕೊಂಡಿದ್ದಾರೆ. ತನ್ನ ಅಸ್ತಿತ್ವಕ್ಕಾಗಿ ಸಿಡಿದೇಳುವ ಅವರ ಪಾತ್ರ, ಸಾಮಾನ್ಯ ಜನರನ್ನು ಪ್ರತಿನಿಧಿಸುತ್ತದೆ. ಕಥೆ ಬೆಂಗಳೂರಿನಿಂದ ಆರಂಭಗೊಂಡು ಆಗುಂಬೆವರೆಗೆ ಸಾಗುತ್ತದೆ. ಈ ಜರ್ನಿಯಲ್ಲಿ ವಿಜಯರಾಘವೇಂದ್ರ ಶಿವಣ್ಣನಿಗೆ ಜೊತೆಯಾಗುತ್ತಾರೆ.

*ಶಿವರಾಜ್‌ಕುಮಾರ್ ಜೊತೆಗಿನ ಕೆಲಸದ ಅನುಭವ ಹೇಗಿತ್ತು?
ಶಿವಣ್ಣ ನಿಜ ಬದುಕಿನಲ್ಲೂ ಕಾಮನ್ ಮ್ಯಾನ್ ಎಂಬುದು ನಾನು ಕಣ್ಣಾರೆ ಕಂಡ ಸತ್ಯ. ಈ ಚಿತ್ರ ಅವರ ನಿಜವ್ಯಕ್ತಿತ್ವದ ಅನಾವರಣ ಎಂದರೂ ತಪ್ಪಾಗಲಾರದು. ಚಿತ್ರದ ಕಥೆ ಕೇಳಿ ಮಾರುಹೋದ ಅವರು, ‘ಒಳ್ಳೆಯ ಕಥೆ ಮಂಜು. ಸಿನಿಮಾ ಮಾಡೋಣ’ ಎಂದರು. ಕೆಲವು ದೃಶ್ಯಗಳನ್ನು ನೈಜವಾಗಿಯೇ ಸೆರೆ ಹಿಡಿಯಬೇಕಾಗಿತ್ತು. ಭಿಕ್ಷುಕರೊಂದಿಗೆ ಶಿವಣ್ಣ ಮಲಗುವ ದೃಶ್ಯ ಬೇಕಿತ್ತು. ಮಾಗಡಿ ರಸ್ತೆಯ ಟೋಲ್‌ಗೇಟ್‌ ವೃತ್ತದ ದೇವಸ್ಥಾನವೊಂದರ ಬಳಿ ಭಿಕ್ಷುಕರು ಮಲಗುವ ಜಾಗದಲ್ಲಿ ರಾತ್ರಿ ಶೂಟಿಂಗ್ ಮಾಡಲು ನಿರ್ಧರಿಸಿದ್ದೆವು.

ಆ ಜಾಗದ ಸಮೀಪದಲ್ಲೇ, ಕೊಳಚೆ ನೀರು ಹರಿಯುವುದರಿಂದ ವಾಸನೆ ಹಾಗೂ ವಿಪರೀತ ಸೊಳ್ಳೆಗಳ ಕಾಟ. ಶಿವಣ್ಣನಿಗೆ ಹೇಗೆ ಒಪ್ಪಿಸುವುದು ಎಂಬ ಗೊಂದಲದಲ್ಲಿದ್ದೆ. ಆಗ ಅವರೇ ಬಂದು, ‘ತಲೆ ಕೆಡಿಸಿಕೊಳ್ಳಬೇಡ. ನಿನಗೇನು ಬೇಕು ಹೇಳು. ನಾ ಮಾಡುತ್ತೇನೆ’ ಎಂದು ಹೇಳಿ ಭಿಕ್ಷುಕರ ಮಧ್ಯೆ ಹೋಗಿ ಗೋಣಿಚೀಲ ಹೊದ್ದು ಮಲಗಿದರು.

ADVERTISEMENT

ಚಿತ್ರೀಕರಣಕ್ಕೆ ಮನೆಯೊಂದನ್ನು ಹುಡುಕುತ್ತಿದ್ದಾಗ, ‘ಎಲ್ಲೋ, ಯಾವುದೋ ಮನೆಗೆ ಯಾಕೆ ಬಾಡಿಗೆ ಕಟ್ಟುತ್ತೀರಾ? ನಮ್ಮ ಮನೆಯಲ್ಲಿ ಶೂಟಿಂಗ್ ಮಾಡಿಕೊಳ್ಳಿ’ ಎಂದರು. ಮನೆಯಲ್ಲಿ ಮೂರು ದಿನ ನಡೆದ ಚಿತ್ರೀಕರಣದ ವೇಳೆ ಇಡೀ ತಂಡಕ್ಕೆ ಊಟ, ತಿಂಡಿ ಹಾಕಿ ದೊಡ್ಡತನ ಮೆರೆದರು. ನಿಜವಾದ ಸರಳತೆಯನ್ನು ಅವರಿಂದ ಕಲಿಯಬೇಕು.

*ಸಿನಿಮಾಗೆ ಸಂಬಂಧಿಸಿದಂತೆ ನಿಮ್ಮ ಮೇಲೆ ರೇಗಿದ್ದಾಗಿ ಶಿವಣ್ಣ ಇತ್ತೀಚೆಗೆ ಹೇಳಿದ್ದರು. ಯಾಕೆ?
ತಾಂತ್ರಿಕ ಕಾರಣಗಳಿಂದ ಶೂಟಿಂಗ್‌ ಸ್ವಲ್ಪ ನಿಧಾನವಾಯಿತು. ಆಗವರು ಕೋಪಿಸಿಕೊಂಡಿದ್ದು ನಿಜ. ನೈಜತೆಗಾಗಿ ಕೆಲವು ದೃಶ್ಯಗಳಲ್ಲಿ ಹೀಗೆಯೇ ಇರಬೇಕು ಎನ್ನುತ್ತಿದ್ದೆ. ಶಿವಣ್ಣ ಬದಲಾವಣೆ ಸೂಚಿಸಿದರೂ ನಾನು ಒಪ್ಪದೆ ಹಟ ಮಾಡುತ್ತಿದ್ದೆ. ಆಗಲೂ ಅವರು ಸಿಟ್ಟಾಗಿದ್ದುಂಟು. ಆಗವರು ನಿರ್ಮಾಪಕರ ಬಳಿಗೆ ಹೋಗಿ, ‘ನೋಡಿ ಮಂಜುಗೆ ಹೇಗೆ ಕೋಪ ಬರೋ ಹಾಗೆ ಮಾಡಿದೆ’ ಎಂದು ಹೇಳಿ ನಗುತ್ತಿದ್ದರು. ಅವರ ಸಿಟ್ಟಿನ ಹಿಂದೆ ಕಾಮಿಡಿ ಸೆನ್ಸ್ ಇರುತ್ತಿತ್ತು.

ಉದ್ದೇಶಪೂರ್ವಕವಾಗಿ ನಾವಿಬ್ಬರೂ ಎಂದಿಗೂ ಪರಸ್ಪರ ಮುಖ ಸಿಂಡರಿಸಿಕೊಂಡಿಲ್ಲ. ‘ಉಪೇಂದ್ರ ಬಿಟ್ಟರೆ, ಹಠಕ್ಕೆ ಬಿದ್ದು ನನ್ನಿಂದ ಕೆಲಸ ತೆಗೆಸಿಕೊಂಡ ನಿರ್ದೇಶಕರಲ್ಲಿ ನೀನು ಎರಡನೆಯವನು’ ಎಂದು ಶಿವಣ್ಣ ಒಂದು ದಿನ ಹೇಳಿದ್ದರು. ಅದಕ್ಕಿಂತ ಒಳ್ಳೆಯ ಕಾಂಪ್ಲಿಮೆಂಟ್ ಬೇರೇನಿದೆ.

*ಬಿಡುಗಡೆಗೆ ಮುಂಚೆಯೇ ಆ್ಯಕ್ಷನ್ ವಿಷಯದಲ್ಲಿ ಸಿನಿಮಾ ಹೆಚ್ಚು ಸುದ್ದಿ ಮಾಡಿತಲ್ಲ?
ಹೌದು. ಮೊದಲನೆಯದು ಚಿತ್ರದಲ್ಲಿ ಬರುವ ಪಾತ್ರವೊಂದರ 60 ಅಡಿ ಎತ್ತರದ ಕಟೌಟ್‌ ಅನ್ನು ಸ್ವತಃ ಶಿವಣ್ಣನೇ ಹತ್ತಿ ಇಳಿದಿದರು. ಎರಡು ತಾಸು ಬಿರುಬಿಸಿಲಿನಲ್ಲಿ ಅದರ ಮೇಲೆಯೇ ಕುಳಿತಿದ್ದರು. ನಾವು ಬೇಡ ಎಂದರೂ, ‘ಮೊದಲ ಸಲ ಕಟೌಟ್‌ ಮೇಲೆರುವ ಅವಕಾಶ ಸಿಕ್ಕಿದೆ. ಅದನ್ನೂ ಕಿತ್ಕೊತೀಯಾ’ ಎನ್ನುತ್ತಾ, ಕ್ಯಾಮೆರಾ ಆನ್ ಆಗುವುದಕ್ಕೆ ಮುಂಚೆಯೇ ಹತ್ತತೊಡಗಿದ್ದರು. ಎರಡನೆಯದು, ಫೈಟ್‌ ಮಾಡುವಾಗ ಶಿವಣ್ಣ ಚಲಿಸುವ ರೈಲಿನ ಕೆಳಗೆ ಮಲಗಿದ್ದು. ಅದಕ್ಕೆ ಚಿತ್ರರಂಗದ ಹಲವರು ಆಕ್ಷೇಪ ವ್ಯಕ್ತಪಡಿಸಿದರು. ನಾವು ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿಯೇ ಆ ದೃಶ್ಯವನ್ನು ಮಾಡಿದೆವು. ಒಂದೇ ಟೇಕ್‌ನಲ್ಲಿ ಆ ದೃಶ್ಯ ಓಕೆ ಆಯಿತು. ಇದಕ್ಕೆ ಶಿವಣ್ಣ ನೀಡಿದ ಧೈರ್ಯವೇ ಕಾರಣ.


*ಈ ಚಿತ್ರಕ್ಕೆ ನೀವು ಸಂಭಾವನೆಯನ್ನೇ ಪಡೆದಿಲ್ಲವಂತೆ?
ನನ್ನ ಮೊದಲ ಚಿತ್ರ ‘ಶಿಶಿರ’ಕ್ಕೆ ಬಂಡವಾಳ ಹಾಕಿದ್ದು ಎಂ.ಎಸ್. ಮನುಗೌಡರೇ. ಚಿತ್ರ ಹೆಸರು ಮಾಡಿದರೂ ಹಾಕಿದ ಬಂಡವಾಳ ಮಾತ್ರ ಕೈ ಸೇರಲಿಲ್ಲ. ನನ್ನ ಎರಡನೇ ಸಿನಿಮಾ ‘ಶ್ರಾವಣಿ ಸುಬ್ರಮಣ್ಯ’ ಗೆದ್ದಿತು. ಆಗ ಮನು ಸರ್‌ಗೆ ಕಾಲ್ ಮಾಡಿ, ಮುಂದಿನ ಸಿನಿಮಾವನ್ನು ನಿಮಗಾಗಿ ಮಾಡುತ್ತೇನೆ ಎಂದು ಹೇಳಿದೆ. ಅದರಂತೆಯೇ ಈಗ ನಡೆದುಕೊಂಡಿದ್ದೇನೆ. ಅವರು ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ಇದ್ಯಾವ ಲೆಕ್ಕ ಹೇಳಿ? ಮೊದಲ ಚಿತ್ರಕ್ಕೆ ಬಂಡವಾಳ ಹಾಕಿ, ನಿರ್ದೇಶಕನಾಗಿ ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ನಿರ್ಮಾಪಕರು. ಅವರು ಕೈ ಸುಟ್ಟುಕೊಂಡಾಗ ಅವರನ್ನು ಉಳಿಸುವ ನೈತಿಕ ಜವಾಬ್ದಾರಿ ನಿರ್ದೇಶಕನ ಮೇಲೂ ಇರಬೇಕಲ್ಲವೆ?

*ಮುಂದಿನ ಪ್ರಾಜೆಕ್ಟ್‌ಗಳು?
‘ಪಟಾಕಿ’ ಚಿತ್ರದ ಶೂಟಿಂಗ್ ಮುಗಿದಿದ್ದು, ಪೋಸ್ಟ್‌ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಇನ್ನೆರಡು ತಿಂಗಳಲ್ಲಿ ಅದೂ ತೆರೆಗೆ ಬರಲಿದೆ.

ಸಾಮಾನ್ಯನ ಸುತ್ತ
‘ಸಾಮಾನ್ಯ ಮನುಷ್ಯನೊಬ್ಬ ಏನು ಮಾಡಬಲ್ಲ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ’ ಎಂದು ಶಿವರಾಜ್‌ಕುಮಾರ್ ನಿಟ್ಟುಸಿರು ಬಿಟ್ಟ ದನಿಯಲ್ಲಿ ಹೇಳಿದರು. ಅವರ ಮಾತಿನಲ್ಲಿದ್ದ ಸಾರ್ಥಕತೆ, ‘ಶ್ರೀಕಂಠ’ ಚಿತ್ರ ಅವರ ಮನಸ್ಸಿಗೆ ಎಷ್ಟು ಹತ್ತಿರವಾಗಿದೆ ಎಂಬುದನ್ನು ತೋರಿಸುತ್ತಿತ್ತು. ನಿರ್ದೇಶಕ ಮಂಜು ಸ್ವರಾಜ್ ಗೈರು ಹಾಜರಿಯಲ್ಲೂ ಅವರು ಚಿತ್ರದ ಟೀಸರ್ ಮತ್ತು ಬಿಡುಗಡೆ ಪತ್ರಿಕಾಗೋಷ್ಠಿಗೆ ಬಂದಿದ್ದರು.

‘ಪ್ರತಿ ಸಿನಿಮಾ ತೆರೆಕಾಣುವ ಹಂತದಲ್ಲಿ ಭಯಮಿಶ್ರಿತ ಸಂತೋಷವಿರುತ್ತದೆ. ಇದನ್ನು ಅಪ್ಪಾಜಿಯಲ್ಲೂ ಕಂಡಿದ್ದೇನೆ’ ಎಂದು ತಂದೆಯನ್ನು ಸ್ಮರಿಸಿದ ಅವರು, ‘ಇಂತಹದೇ ಮತ್ತೊಂದು ಚಿತ್ರವನ್ನು ಇದೇ ಬ್ಯಾನರ್‌ನಡಿ ನಟಿಸಲು ಒಪ್ಪಿದ್ದೇನೆ. ರಾಧಾಕೃಷ್ಣ ಅದಕ್ಕಾಗಿ ಒಳ್ಳೆಯ ಕಥೆಯೊಂದನ್ನು ಬರೆದಿದ್ದಾರೆ’ ಎಂದು ಪರಿಚಯಿಸಿದರು. ‘ಮಾಸ್ತಿಗುಡಿ’ ಚಿತ್ರದ ಶೂಟಿಂಗ್ ವೇಳೆ ಮೃತಪಟ್ಟ ನಟ ಅನಿಲ್ ಅವರು ‘ಶ್ರೀಕಂಠ’ ಚಿತ್ರದಲ್ಲೂ ನಟಿಸಿರುವುದನ್ನು ನೆನೆದ ಅವರು, ‘ಅನಿಲ್ ಮತ್ತು ಉದಯ್ ಪ್ರತಿ ಕನ್ನಡಿಗರ ಹೃದಯದಲ್ಲಿ ಇದ್ದಾರೆ’ ಎಂದರು.

‘ಶಿವಣ್ಣನ ಚಿತ್ರವನ್ನು ಮಾಡಬೇಕೆಂಬ ಕನಸು ಇಂದು ನನಸಾಗಿದೆ’ ಎಂದು ಮಾತು ಆರಂಭಿಸಿದ ನಿರ್ಮಾಪಕ ಮನುಗೌಡ, ‘ಹೊಸ ವರ್ಷಾರಂಭದಲ್ಲಿ ಶ್ರೀಕಂಠನ ದರ್ಶನವಾಗಲಿದೆ. ಚಿತ್ರದಲ್ಲಿ ರಾಜ್‌ಕುಮಾರ್ ಹಾಗೂ ವಿಷ್ಣುವರ್ಧನ್ ಹಾಡನ್ನು ಬಳಸಲಾಗಿದೆ. ಅಭಿಮಾನಿಗಳ ನಿರೀಕ್ಷೆಯನ್ನು ಚಿತ್ರ ಹುಸಿ ಮಾಡದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದತ್ತಣ್ಣ ಮಾತನಾಡಿ, ‘ನೋಟು ಅಮಾನ್ಯದ ಬಿಸಿ ಇದ್ದರೂ ಕನ್ನಡ ಚಿತ್ರಗಳು ಯಶಸ್ಸಾಗುತ್ತಿರುವುದು ಶುಭಸಂಕೇತವಾಗಿದೆ. ಶಿವು 112 ಚಿತ್ರದಲ್ಲಿ ನಟಿಸಿದ್ದು ನಮೆಗೆಲ್ಲ ಹೆಮ್ಮೆ ತಂದಿದೆ. ಆತನ ಮುಂದಿನ ಚಿತ್ರಗಳು ಚಿತ್ರರಂಗದಲ್ಲಿ ದೊಡ್ಡ ಛಾಪು ಮೂಡಿಸಲಿ’ ಎಂದು ಹರಸಿದರು. ಚಿತ್ರದಲ್ಲಿ ಖಳನಟರಾಗಿ ಕಾಣಿಸಿಕೊಂಡಿರುವ ಮಂಜುನಾಥಗೌಡ, ದೀಪಕ್‌ಶೆಟ್ಟಿ ‘ಶಿವಣ್ಣ ಜೊತೆ ನಟಿಸಿದ್ದು ಸಂತಸ ತಂದಿದೆ’ ಎಂದು ಸಂಭ್ರಮಿಸಿದರು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.