ADVERTISEMENT

ಶ್‌್! ಈಗ ಹಣ ಸದ್ದು ಮಾಡುತ್ತಿದೆ!

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2017, 19:30 IST
Last Updated 27 ಏಪ್ರಿಲ್ 2017, 19:30 IST
ಶ್‌್! ಈಗ ಹಣ ಸದ್ದು ಮಾಡುತ್ತಿದೆ!
ಶ್‌್! ಈಗ ಹಣ ಸದ್ದು ಮಾಡುತ್ತಿದೆ!   
ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡುತ್ತಿರುವ ಒಂದಷ್ಟು ಸ್ನೇಹಿತರು ಜೊತೆಯಾಗಿ ಸಿನಿಮಾ ನಿರ್ಮಾಣದ ಉತ್ಸಾಹದಲ್ಲಿದ್ದಾರೆ. ಚಿತ್ರದ ಹೆಸರು ‘ಝಣ್! ಝಣಾ!! ಝಣ್!!!’. 
 
ಚಿಕ್ಕಂದಿನಲ್ಲಿ ಓದಿದ ‘ಝಣ್ ಝಣ್ ಝಣಾ, ಜೇಬು ತುಂಬ ಹಣ’ ಹಾಡು ನೆನಪಿದ್ದರೆ ಈ ಸಿನಿಮಾ ಕೂಡ ಹಣಕ್ಕೆ ಸಂಬಂಧಿಸಿದ್ದು ಎಂಬುದು ಗೊತ್ತಾಗುತ್ತದೆ. ಚಿತ್ರದ ಶೀರ್ಷಿಕೆಗೆ ತಕ್ಕಂತೆ ಇದು ಹಣದ ಸುತ್ತ ನಡೆಯುವ ಕಥೆ.
 
ಹೇಗಾದರೂ ಶ್ರೀಮಂತರಾಗಬೇಕು ಎಂಬ ಹೆಬ್ಬಯಕೆಯ ಮಧ್ಯಮ ವರ್ಗದ ಇಬ್ಬರು ಯುವಕರು ಮತ್ತು ಒಬ್ಬ ಯುವತಿ ಚಿತ್ರದ ಪ್ರಮುಖ ಪಾತ್ರಗಳು. ಒಬ್ಬ ಅಪರಾಧಿಯ ಸಂಪರ್ಕದಿಂದಾಗಿ ಅಚಾನಕ್ಕಾಗಿ ಇವರಿಗೆ ದೊಡ್ಡ ಮೊತ್ತದ ಹಣ ಸಿಗುತ್ತದೆ. ಆ ಹಣವನ್ನು ಅವರು ದಕ್ಕಿಸಿಕೊಳ್ಳುವ ಪ್ರಯತ್ನ ಮಾಡುತ್ತಾರಾ ಅಥವಾ ಸರ್ಕಾರಕ್ಕೆ ಒಪ್ಪಿಸಿ ಪ್ರಾಮಾಣಿಕತೆ ಮೆರೆಯುತ್ತಾರಾ ಎಂಬುದು ಕಥಾಹಂದರ. 
 
ಇಂಗ್ಲಿಷ್ ಸಿನಿಮಾಗಳನ್ನು ಹೆಚ್ಚಾಗಿ ನೋಡುವ ಶಿವಕುಮಾರ್ ತಂತಿ, ಕನ್ನಡದಲ್ಲೂ ಯಾಕೆ ಇಂಥದ್ದೊಂದು ಸಿನಿಮಾ ಮಾಡಬಾರದು ಎಂದು ಯೋಚಿಸುವಾಗ ಈ ಕಥೆ ಹುಟ್ಟಿದೆ.

ಶಿವಕುಮಾರ್ ಮೊದಲ ಬಾರಿ ನಿರ್ದೇಶಕನ ಪಟ್ಟ ಅಲಂಕರಿಸಿದ್ದಾರೆ. ಈ ಹಿಂದೆ ಅವರು ಧಾರಾವಾಹಿ ಮತ್ತು ಒಂದು ಸಿನಿಮಾಕ್ಕೆ ಸಹಾಯಕನಾಗಿ ದುಡಿದಿದ್ದಾರೆ. ಅಲ್ಲದೇ ಸಾಕ್ಷ್ಯಚಿತ್ರ ಮತ್ತು ಜಾಹೀರಾತುಗಳನ್ನೂ ನಿರ್ಮಿಸಿದ್ದಾರೆ.
 
ರದ್ದು ಮಾಡಲಾದ ಹಳೆಯ ನೋಟುಗನ್ನು ಚಿತ್ರದ ಪೋಸ್ಟರ್‌ಗಳಲ್ಲಿ ತೋರಿಸಲಾಗಿದೆ. ಆದರೆ ಇದು ಗೊತ್ತಿಲ್ಲದೇ ಮಾಡಿದ ತಪ್ಪಲ್ಲ. ಕಥೆಗೆ ಬೇಕು ಎಂದು ಉದ್ದೇಶಪೂರ್ವಕವಾಗಿ ಮಾಡಿದ್ದು.

ರಾಜಕುಮಾರ್ ಹುಟ್ಟಿದ ದಿನದಂದು ಚಿತ್ರಕ್ಕೆ ಮುಹೂರ್ತ ನೆರವೇರಿಸಿದ್ದು, ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ಚಿಕ್ಕಮಗಳೂರು ಮತ್ತು ಅಂಡಮಾನ್‌ಗಳಲ್ಲಿ ಚಿತ್ರೀಕರಣ ನಡೆಯಲಿದೆ.
 
ಸಂದೇಶ್, ಅಸ್ಮಾ ಮತ್ತು ಪ್ರಭು ಮುಖ್ಯ ಪಾತ್ರಧಾರಿಗಳು. ಥ್ರಿಲ್ಲರ್ ಮಂಜು ಸಾಹಸ ಸಂಯೋಜನೆ, ಮನೋಹರ್ ಜೋಶಿ ಛಾಯಾಗ್ರಹಣ ಮತ್ತು ಅಭಿಷೇಕ್ ರಾಯ್ ಅವರ ಸಂಗೀತ ನಿರ್ದೇಶನ ಇದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.