ADVERTISEMENT

ಸಂಬಂಧಗಳ ನೇಯ್ಗೆಗೆ ‘ಏನೆಂದು ಹೆಸರಿಡಲಿ’

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2017, 19:30 IST
Last Updated 9 ಫೆಬ್ರುವರಿ 2017, 19:30 IST
ಸಂಬಂಧಗಳ ನೇಯ್ಗೆಗೆ ‘ಏನೆಂದು ಹೆಸರಿಡಲಿ’
ಸಂಬಂಧಗಳ ನೇಯ್ಗೆಗೆ ‘ಏನೆಂದು ಹೆಸರಿಡಲಿ’   

‘ಮೂರು ಪಾತ್ರಗಳು, ಎರಡು ಕಥೆ. ಒಂದು ಮುದ್ದು ಪ್ರೀತಿ, ಮತ್ತೊಂದು ಅಮ್ಮ ಮಗಳ ಬಾಂಧವ್ಯ – ಈ ಮೂರು ಸಂಬಂಧಗಳ ನಡುವಿನ ಸೂಕ್ಷ್ಮತೆಯಲ್ಲಿಯೇ ಸಿನಿಮಾ ವಿನ್ಯಾಸಗೊಂಡಿದೆ. ಇದೊಂದು ರೀತಿಯಲ್ಲಿ ಮ್ಯೂಸಿಕಲ್ ಜರ್ನಿ. ಗೆಲ್ಲುವ ವಿಶ್ವಾಸ ಇದೆ’

‘ಏನೆಂದು ಹೆಸರಿಡಲಿ’ ಸಿನಿಮಾ ನಿರ್ದೇಶಕ ರವಿ ಬಸಪ್ಪನದೊಡ್ಡಿ ತಮ್ಮ ಎಂದಿನ ಸಣ್ಣ ಧ್ವನಿಯಲ್ಲಿ ಇಷ್ಟು ಮಾತು ಒಪ್ಪಿಸಿ ಮೈಕ್‌ ಪಕ್ಕದಲ್ಲಿದ್ದವರಿಗೆ ಹಸ್ತಾಂತರಿಸಿದರು. ಅವರ ಮಾತಿನಲ್ಲಿ ವಿಶ್ವಾಸ ತುಂಬಿ ತುಳುಕುತ್ತಿತ್ತು. ಅಂದಹಾಗೆ, ಇಂದು (ಫೆ.10) ‘ಏನೆಂದು ಹೆಸರಿಡಲಿ’ ಸಿನಿಮಾ ತೆರೆಕಾಣುತ್ತಿದೆ.
ಪ್ರಚಾರಕ್ಕಾಗಿ ರಾಜ್ಯದಾದ್ಯಂತ ಸಂಚರಿಸುವಾಗ ಸಿನಿಮಾದ ಹಾಡುಗಳಿಗೆ ಜನರು ತೋರಿಸಿದ ಪ್ರೀತಿಯಿಂದ ನಿರ್ಮಾಪಕ ಶ್ರೀನಿವಾಸ ಕುಲಕರ್ಣಿ ಅವರಿಗೂ ಸಿನಿಮಾ ಗೆಲ್ಲುವ ಬಗ್ಗೆ ವಿಶ್ವಾಸ ಮೂಡಿದೆ.

‘ಹಾಡುಗಳು ಜನರಿಗೆ ತಲುಪಿವೆ. ಮೊದಲ ಸಿನಿಮಾಕ್ಕೆ ಇಷ್ಟು ಒಳ್ಳೆಯ ಸ್ಪಂದನ ಸಿಕ್ಕಿರುವುದಕ್ಕೆ ಸಂತೋಷವಾಗಿದೆ’ ಎಂದು ಸಂಗೀತ ನಿರ್ದೇಶಕ ಸುರೇಂದ್ರನಾಥ್‌ ಬಿ.ಆರ್‌. ಸಂತಸ ಹಂಚಿಕೊಂಡರು. 

ನಾಯಕ ಅರ್ಜುನ್‌ ಅವರಿಗೆ ಈ ಸಿನಿಮಾದಲ್ಲಿ ತಾವು ಅಭಿನಯಿಸಿದ ಪಾತ್ರದ ಬಗ್ಗೆ ಅಪಾರ ನಿರೀಕ್ಷೆಗಳಿವೆ. ‘ಮೊದಲರ್ಧ ಪಕ್ಕಾ ಕಮರ್ಷಿಯಲ್‌ ಅಂಶಗಳಿರುವ ಸಿನಿಮಾ. ದ್ವಿತೀಯಾರ್ಧ ಹಲವು ಸೂಕ್ಷ್ಮಸಂಗತಿಗಳಿವೆ. ಆ ಭಾಗದಲ್ಲಿ ನೀಡುವ ಒಂದೊಂದು ರಿಯಾಕ್ಷನ್‌ ಕೂಡ ಮಹತ್ವದ್ದಾಗಿರುತ್ತದೆ. ಅದು ನನ್ನ ಪಾಲಿಗೆ ಸವಾಲಿನ ಪಾತ್ರ. ಯಶಸ್ವಿಯಾಗಿ ನಿಭಾಯಿಸಿದ್ದೇನೆ ಎಂಬ ಹೆಮ್ಮೆ ಇದೆ. ಈ ಪಾತ್ರ ನನಗೆ ಒಳ್ಳೆಯ ಹೆಸರು ತಂದುಕೊಡುತ್ತದೆ’ ಎನ್ನುವುದು ಅರ್ಜುನ್‌ ನಂಬಿಕೆ. ನಾಯಕಿ ರೋಜಾ ಇದರಲ್ಲಿ ಮುಗ್ಧ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಒಳ್ಳೆಯ ಕಥೆ ಇರುವ ಚಿತ್ರ. ನಿರ್ದೇಶಕರು ನನ್ನನ್ನು ಮುದ್ದುಮುದ್ದಾಗಿ ತೋರಿಸಿದ್ದಾರೆ’ ಎಂದು ಖುಷಿಯಿಂದ ಹೇಳಿಕೊಂಡರು.

ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ಚಿತ್ಕಲಾ ಬಿರಾದಾರ್‌ ‘ಕನ್ನಡ ಚಿತ್ರರಸಿಕರಿಗೆ ಇದು ಸುಖದ ಕಾಲ. ‘ಏನೆಂದು ಹೆಸರಿಡಲಿ’ ಇಂಥ ಸಿನಿಮಾಗಳ ಸಾಲಿಗೆ ಹೊಸ ಸೇರ್ಪಡೆ. ಒಂದೇ ಕಥೆಗೆ ಎರಡು ಮುಖಗಳಿವೆ’ ಎಂದು ಸಿನಿಮಾದ ಬಗ್ಗೆ ಹೇಳುತ್ತಲೇ ತಮ್ಮ ಪಾತ್ರದ ಕುರಿತೂ ಹೇಳಿಕೊಂಡರು. ‘ನಾನು ತುಂಬ ಸಿನಿಮಾಗಳಲ್ಲಿ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಆದರೆ ಈ ಸಿನಿಮಾದಲ್ಲಿ ಚಿತ್ರಕ್ಕೆ ತಿರುವು ನೀಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದು ಅವರು ವಿವರಣೆ ನೀಡಿದರು. ಮಂಜುನಾಥ್‌ ನಾಯಕ ಅವರ ಛಾಯಾಗ್ರಹಣ, ಶ್ರೀನಾಥ್‌ ಸಂಕಲನ, ಪೂರ್ಣೇಶ ಸಾಗರ ಅವರ ಕಥೆ ಈ ಸಿನಿಮಾಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.