ADVERTISEMENT

ಸಪ್ತಪದಿಗೆ ಅನುಷ್ಕಾ ರೆಡಿ?

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2016, 14:04 IST
Last Updated 25 ಸೆಪ್ಟೆಂಬರ್ 2016, 14:04 IST
ಸಪ್ತಪದಿಗೆ ಅನುಷ್ಕಾ ರೆಡಿ?
ಸಪ್ತಪದಿಗೆ ಅನುಷ್ಕಾ ರೆಡಿ?   

ಬೆಂಗಳೂರು/ ಹೈದರಾಬಾದ್‌: ‘ಟಾಲಿವುಡ್‌ ಹಾಗೂ ಕಾಲಿವುಡ್‌ನಲ್ಲಿ ಲೀಡಿಂಗ್‌ನಲ್ಲಿರುವ ಕನ್ನಡದ ಬೆಡಗಿ ಅನುಷ್ಕಾ ಶೆಟ್ಟಿ ಮುಂದಿನ ವರ್ಷ ಸಪ್ತಪದಿ ತುಳಿಯಲ್ಲಿದ್ದಾರೆ’

ಮಾಧ್ಯಮಗಳಿಗೆ ಸೋರಿಕೆಯಾದ ಈ ಸುದ್ದಿ ಟಾಲಿವುಡ್‌ ಮತ್ತು ಕಾಲಿವುಡ್‌ನಲ್ಲಿ ಅಂಗಳದಲ್ಲಿ ಅಕ್ಷರಶಃ ಸಂಚಲನ ಮೂಡಿಸಿದೆ.
ತೆಲುಗು ಮತ್ತು ತಮಿಳು ಮಾಧ್ಯಮಗಳಲ್ಲಿ ಅನುಷ್ಕಾ ಮದುವೆ ಕುರಿತು ಹತ್ತಾರು ಸುದ್ದಿಗಳು ಪ್ರಕಟವಾಗುತ್ತಿವೆ.

ಹೌದು, ಕನ್ನಡದ ಬೆಡಗಿ ಅನುಷ್ಕಾ ಶೆಟ್ಟಿ ಅವರು ಬಾಹುಬಲಿ–2 ಚಿತ್ರ ಬಿಡುಗಡೆಯಾದ ಬಳಿಕ ಖ್ಯಾತ  ಸಿನಿಮಾ ನಿರ್ಮಾಪಕರೊಬ್ಬರನ್ನು ವರಿಸಲಿದ್ದಾರೆ ಎಂಬುದನ್ನು ಅನುಷ್ಕಾ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.
ಆದರೆ, ಅನುಷ್ಕಾ ಶೆಟ್ಟಿ ಮಾತ್ರ, ‘ನಾನು ಮದುವೆಯ ಬಗ್ಗೆ ಇನ್ನೂ ಯೋಚನೆಯನ್ನೇ ಮಾಡಿಲ್ಲ. ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಯ ಬಗ್ಗೆ ನನಗೇನೂ ಗೊತ್ತಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

ಯಾರು ಆ ಭಾಗ್ಯಶಾಲಿ
ಚೆಂದುಳ್ಳಿ ಚೆಲುವೆಯನ್ನು ಮದುವೆಯಾಗಲಿರುವ ಭಾಗ್ಯಶಾಲಿ ಯಾರು ಎಂಬುದು ಸದ್ಯಕ್ಕೆ ಹೈದರಾಬಾದ್‌– ಚೆನ್ನೈ ನಗರದಲ್ಲಿ ಬಿಸಿಬಿಸಿ ಚರ್ಚೆಯ ವಿಷಯ. ಕನ್ನಡದಲ್ಲೂ ಆಕೆಗೆ ಇರುವ ಅಭಿಮಾನಿಗಳ ಸಂಖ್ಯೆ ಕಡಿಮೆಯಲ್ಲ. ಹೀಗಾಗಿ ಬೆಂಗಳೂರಿನ ಬಿಎಂಟಿಸಿ ಬಸ್‌ಗಳಲ್ಲೂ ಈ ವಿಚಾರ ಚರ್ಚೆಗೆ ಗ್ರಾಸವಾಗುತ್ತಿದೆ.

ತೆಲುಗು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಮಾಹಿತಿಯನ್ನು ಆಧರಿಸಿ ಹೇಳುವುದಾದರೆ, ಅನುಷ್ಕಾ ಅಭಿನಯದ 8 ಸಿನಿಮಾ ನಿರ್ಮಿಸಿರುವ ನಿರ್ಮಾಪಕನೇ ಮದುವೆ ಗಂಡು. ಟಾಲಿವುಡ್‌ನ ಟಾಪ್‌ ನಿರ್ಮಾಪಕರಲ್ಲಿ ಒಬ್ಬ. ಅನುಷ್ಕಾಳನ್ನು ಮದುವೆಯಾಗುತ್ತಿರುವ ನಿರ್ಮಾಪಕರಿಗೆ ಈಗಾಗಲೇ ಮದುವೆಯಾಗಿದೆ. ಮೊದಲ ಹೆಂಡತಿಗೆ ವಿಚ್ಛೇದನ ನೀಡಿದ ಬಳಿಕ, ಮುಂದಿನ ವರ್ಷ ವಿವಾಹವಾಗಲಿದ್ದಾರೆ. ಈ ಹೊತ್ತಿಗೆ ಅನುಷ್ಕಾ ಅಭಿನಯದ ಬಾಹುಬಲಿ 2,  ಸಿಂಗಂ 3, ಭಾಗಮತಿ ಸಹ ಸಿದ್ಧವಾಗಿರುತ್ತವೆ. ಈ ಚಿತ್ರಗಳ ಚಿತ್ರೀಕರಣದ ನಂತರದ ಡೇಟ್ಸ್‌ಗಳನ್ನು ಅನುಷ್ಕಾ ನೀಡುತ್ತಿಲ್ಲ ಎಂದೇ ಹೇಳಲಾಗುತ್ತಿದೆ.

ಈ ಹಿಂದೆ ತೆಲುಗು ನಟ ನಾಗಚೈತನ್ಯ ಅವರನ್ನು ಅನುಷ್ಕಾ ವರಿಸಲಿದ್ದಾರೆ ಎಂಬ ಸುದ್ದಿ ಹರಡಿತ್ತು. 2014ರಲ್ಲಿ   ಉಡುಪಿಯ ಯುವ ಉದ್ಯಮಿಯೊಬ್ಬರನ್ನು ಅನುಷ್ಕಾ ಮದುವೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.

ಕೇವಲ ದೇಹಸಿರಿಯಿಂದ ಮಾತ್ರವಲ್ಲ, ಅಭಿನಯದಿಂದಲೂ ದೇಶದ ಮನೆಮಾತಾಗಿರುವ ಅನುಷ್ಕಾ ಅರುಂಧತಿ, ರುದ್ರಮಾದೇವಿ, ವೇದಂನಂಥ ಸ್ತ್ರೀ ಪ್ರಧಾನ ಚಿತ್ರಗಳಲ್ಲಿ ತಮ್ಮ ಪ್ರತಿಭೆ ಸಾಬೀತು ಪಡಿಸಿದ ನಟಿ. ಗ್ಲಾಮರ್‌ ಪ್ರಧಾನ ಚಿತ್ರಕ್ಕೂ ನಾನು ಸೂಕ್ತ ಎಂಬ ಸಂದೇಶವನ್ನು ಅನುಷ್ಕಾ ‘ಬಿಲ್ಲಾ’ ಚಿತ್ರದ ಮೂಲಕ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT