ADVERTISEMENT

ಸರ್ಜಾ ಪುತ್ರಿ ಪ್ರೇಮದ ಬರವಣಿಗೆ

​ಪ್ರಜಾವಾಣಿ ವಾರ್ತೆ
Published 26 ಮೇ 2016, 19:41 IST
Last Updated 26 ಮೇ 2016, 19:41 IST
ಐಶ್ವರ್ಯಾ
ಐಶ್ವರ್ಯಾ   

ಪ್ರೇಮ ಬರಹ, ಕೋಟಿ ತರಹ
ಬರೆದರೆ ಮುಗಿಯದ ಕವನವಿದು

ಅರ್ಜುನ್ ಸರ್ಜಾ ಮತ್ತು ಸುಧಾರಾಣಿ ಅಭಿನಯಿಸಿದ್ದ, 1990ರಲ್ಲಿ ತೆರೆಕಂಡ ‘ಪ್ರತಾಪ್’ ಚಿತ್ರದ ಜನಪ್ರಿಯ ಹಾಡಿದು. ಈ ಹಾಡಿನ ಮೊದಲ ಪದವೇ ಅರ್ಜುನ್ ಸರ್ಜಾರ ನಿರ್ದೇಶನದ ಹೊಸ ಚಿತ್ರದ ಶೀರ್ಷಿಕೆ. ಅದಕ್ಕಿಂತಲೂ ಮಿಗಿಲಾಗಿ ಸರ್ಜಾ ತಮ್ಮ ಮಗಳು ಐಶ್ವರ್ಯಾರನ್ನು ಅವರು ಕನ್ನಡದ ಬೆಳ್ಳಿಪರದೆಗೆ ಪರಿಚಯಿಸುತ್ತಿರುವ ಸಿನಿಮಾ ಇದು.

‘ಪ್ರತಾಪ್‌’ನ ಹಾಡಿಗೂ ಸರ್ಜಾರಿಗೂ ಒಂದು ಭಾವನಾತ್ಮಕ ನಂಟಿದೆ. ಸುಧಾರಾಣಿ ಅವರೊಂದಿಗೆ ಈ ಹಾಡಿನ ಚಿತ್ರೀಕರಣದಲ್ಲಿ ತೊಡಗಿರುವಾಗಲೇ ಅವರಿಗೆ ಹೆಣ್ಣುಮಗು ಜನಿಸಿದ ಸುದ್ದಿ ಚೆನ್ನೈನಿಂದ ಬಂದಿದ್ದು. ಆ ಮಗುವೇ ‘ಪ್ರೇಮ ಬರಹ’ ಚಿತ್ರದ ನಾಯಕಿ.

ನಿರ್ದೇಶಕರಾಗಿ ಸರ್ಜಾ ಅವರಿಗಿದು ಕನ್ನಡದಲ್ಲಿ ಎರಡನೇ ಸಿನಿಮಾ. ಮಗಳನ್ನು ನಾಯಕಿಯಾಗಿ ಪರಿಚಯಿಸುವ ತಮ್ಮ ಸಂಭ್ರಮಕ್ಕೆ ಸಾಕ್ಷಿಯಾಗಲು ಸರ್ಜಾ, ಚಿತ್ರರಂಗದ ಅನೇಕರನ್ನು ಒಂದೆಡೆ ಸೇರಿಸಿದ್ದರು. ಪಾರ್ವತಮ್ಮ ರಾಜ್‌ಕುಮಾರ್‌, ಬಿ. ಸರೋಜಾದೇವಿ, ಭಾರತಿ ವಿಷ್ಣುವರ್ಧನ್‌, ಅಂಬರೀಷ್‌, ದ್ವಾರಕೀಶ್‌, ರಾಜೇಶ್‌, ಶಿವರಾಜ್‌ಕುಮಾರ್, ಶ್ರೀನಾಥ್, ಉಪೇಂದ್ರ, ಎಸ್‌.ವಿ. ರಾಜೇಂದ್ರ ಸಿಂಗ್‌ ಬಾಬು, ಸುಧಾರಾಣಿ, ತಾರಾ, ರಾಕ್‌ಲೈನ್‌ ವೆಂಕಟೇಶ್‌– ಹೀಗೆ ನೆರೆದಿದ್ದ ಗಣ್ಯರ ದಂಡು ಹಿರಿದಾಗಿತ್ತು.

ಐಶ್ವರ್ಯಾ ಈಗಾಗಲೇ ತಮಿಳಿನ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಆಕೆಯ ಕನ್ನಡ ಪ್ರವೇಶ ತಮ್ಮ ನಿರ್ದೇಶನದಲ್ಲಿಯೇ ಆಗಬೇಕು ಎನ್ನುವುದು ಅರ್ಜುನ್ ಸರ್ಜಾ ಬಯಕೆ.

ಕನ್ನಡ ಮತ್ತು ತಮಿಳು ಚಿತ್ರರಂಗಕ್ಕೆ ಮಗಳನ್ನು ಪರಿಚಯಿಸುವ ಮೂಲಕ ‘ಲ್ಯಾಂಡ್‌ಮಾರ್ಕ್‌’ ಸೃಷ್ಟಿಸುತ್ತಿರುವುದಾಗಿ ಸರ್ಜಾ ಹೇಳಿಕೊಂಡರು. ತಮ್ಮ ಮನಸಿನಲ್ಲಿದ್ದ ಪ್ರೇಮಕಥೆಯ ಮೊಗ್ಗು ಮಗಳ ಮೂಲಕ ಅರಳುತ್ತಿದೆ ಎಂದು ಅವರು. ಶೀರ್ಷಿಕೆಯೇ ಹೇಳುವಂತೆ ಇದೊಂದು ರಮ್ಯ ಪ್ರೇಮಕಥಾನಕ. ಚಿತ್ರದಲ್ಲಿ ಮನರಂಜನೆಯ ಜತೆ ಸಾಕಷ್ಟು ಹೊಸ ಅಂಶಗಳಿವೆ ಎಂದರು.

‘36 ವರ್ಷದ ಸಿನಿಮಾ ಪಯಣದಲ್ಲಿ ಹೆಸರು, ಗೌರವ, ಹಣ ಎಲ್ಲವನ್ನೂ ಸಂಪಾದಿಸಿದ್ದೇನೆ. ಎಲ್ಲದಕ್ಕಿಂತ ಮಿಗಿಲು ಜನರ ಪ್ರೀತಿ. ನನ್ನ ತಂದೆ ಶಕ್ತಿ ಪ್ರಸಾದ್‌ ಅವರ ಕಾರಣದಿಂದ ನೀವೆಲ್ಲರೂ ಇಂದು ಬಂದಿದ್ದೀರಿ. ನನ್ನ ಮಗಳು ಲಂಡನ್‌ನಲ್ಲಿ ಫ್ಯಾಷನ್‌ ಡಿಸೈನಿಂಗ್‌ ಮಾಡಿದ್ದಾಳೆ.

ಅದು ಮುಗಿದ ಬಳಿಕವೇ ಅವಳನ್ನು ಸಿನಿಮಾಕ್ಕೆ ಕರೆತರಲು ಬಯಸಿದ್ದು. ಆಕೆ ಇದಕ್ಕಾಗಿ ವಿವಿಧ ವಿಭಾಗಗಳಲ್ಲಿ ತರಬೇತಿ ಪಡೆದಿದ್ದಾಳೆ’ ಎಂದು ಹಳೆಯ ದಿನಗಳಿಗೆ ಜಾರುತ್ತಲೇ ವರ್ತಮಾನಕ್ಕೆ ಕಾಲಿಟ್ಟರು.

‌‘ಬಿಗ್‌ಬಾಸ್‌’ ಖ್ಯಾತಿಯ ಚಂದನ್‌ ಚಿತ್ರದ ನಾಯಕ. ‘ಐದು ವರ್ಷದ ಹಿಂದೆ ಎಂಜಿನಿಯರಿಂಗ್‌ ಮುಗಿಸುವಾಗ ಈ ಗಳಿಗೆ ಬರುತ್ತದೆ ಎಂಬ ಅರಿವು ಇರಲಿಲ್ಲ. ಇದು ನನ್ನ ಪಾಲಿಗೆ ದೊಡ್ಡ ವೇದಿಕೆ ಎಂದರು ಚಂದನ್‌. ಲಕ್ಷ್ಮಿ, ರಂಗಾಯಣ ರಘು, ಜಹಾಂಗೀರ್‌, ಚಿಕ್ಕಣ್ಣ ಮುಂತಾದವರು ತಾರಾಬಳಗದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT