ADVERTISEMENT

ಸೋಲಿನ ಭಯ ಹೊಸತನದ ಆಶಯ

ಪ್ರಜಾವಾಣಿ ವಿಶೇಷ
Published 4 ಮಾರ್ಚ್ 2015, 19:30 IST
Last Updated 4 ಮಾರ್ಚ್ 2015, 19:30 IST

ಗಿರಿರಾಜ್‌ ಕನ್ನಡ ಚಿತ್ರರಂಗದ ಹೊಸ ನಿರ್ದೇಶಕರಷ್ಟೇ ಅಲ್ಲ, ಹೊಸ ಬಗೆಯ ಚಿತ್ರಗಳನ್ನು ನೀಡುತ್ತಿರುವ ನಿರ್ದೇಶಕರೂ ಹೌದು. ‘ನವಿಲಾದವರು’, ‘ಜಟ್ಟ’ದಂತಹ ಪ್ರಯೋಗಾತ್ಮಕ ಸಿನಿಮಾ ನೀಡಿದ ಇವರ ಇತ್ತೀಚೆಗಿನ ‘ಮೈತ್ರಿ’ ಹಲವು ಕಾರಣಗಳಿಗೆ ಮೆಚ್ಚುಗೆಗೆ ಅರ್ಹವಾದ ಸಿನಿಮಾ. ವಾಣಿಜ್ಯಾತ್ಮಕ ಚೌಕಟ್ಟಿನಲ್ಲಿಯೇ ಕಲಾತ್ಮಕ ಅಂಶಗಳಿಂದ ನೇಯ್ದಿರುವ ‘ಮೈತ್ರಿ’ ಮಲಯಾಳಂಗೆ ಡಬ್‌ ಆಗಿದ್ದು, ಮುಂದಿನ ವಾರ ಬಿಡುಗಡೆಯಾಗಲಿದೆ. ಅದು ತೆಲುಗಿಗೂ ರಿಮೇಕ್‌ ಆಗಲಿದೆ. ಕನ್ನಡದಲ್ಲಿ ಪುನೀತ್‌ ರಾಜ್‌ಕುಮಾರ್‌ ನಟಿಸಿರುವ ಪಾತ್ರವನ್ನು ತೆಲುಗಿನಲ್ಲಿ ನಾಗಾರ್ಜುನ ನಿರ್ವಹಿಸಲಿದ್ದಾರೆ ಎನ್ನುವುದು ‘ಮೈತ್ರಿ’ ಕುರಿತಾದ ಹೊಸ ಸುದ್ದಿ.

ಈ ಎಲ್ಲ ಹಿನ್ನೆಲೆಯಲ್ಲಿ ಮೆಟ್ರೊ ಜತೆ ಮಾತಿಗೆ ಕುಳಿತ ಗಿರಿರಾಜ್‌ ತಮ್ಮ ಸಿನಿಮಾಕ್ಕಿಂತ ಕನ್ನಡ ಚಿತ್ರರಂಗದ ಕುರಿತಾಗಿಯೇ ಹೆಚ್ಚು ಮಾತನಾಡಿದರು.

*ನಿಮ್ಮ ಪಾಲಿಗೆ ಸಿನಿಮಾ ಏನು?
ಸಿನಿಮಾ ಅಷ್ಟೇ ಅಲ್ಲ, ಎಲ್ಲ ಕಲೆಯೂ ಹಾಗೆ. ಅದು ನಮ್ಮ ಉದರಕ್ಕೂ, ಉದ್ಧಾರಕ್ಕೂ ಮಾರ್ಗವಾಗಬೇಕು. ಜೀವನೋಪಾಯದ ದಾರಿಯಾಗುವುದರ ಜತೆಗೆ ನಮ್ಮೆಲ್ಲ ನ್ಯೂನ್ಯತೆಗಳನ್ನು ಮೀರಲಿಕ್ಕೂ ಸಾಧ್ಯವಾಗಬೇಕು. ಇವೆಲ್ಲದರ ಜತಗೆ ಬೋಧಿಸುವ ದುರಹಂಕಾರವನ್ನು ಕಲಾವಿದ ಪಡ್ಕೋಬಾರದು. ಆ ಎಚ್ಚರ ಅವನಿಗೆ ಸದಾ ಇರಬೇಕು. ಒಬ್ಬ ಡಾಕ್ಟರ್‌, ಎಂಜಿನಿಯರ್‌ ಎಲ್ಲರಿಗೂ ಅನ್ವಯಿಸುವ ಮಾತಿದು. ನನ್ನ ಕ್ಷೇತ್ರ ಸಿನಿಮಾ ಆಗಿದ್ದರಿಂದ ನನಗೆ ಇವೆಲ್ಲವೂ ಸೇರಿ ಸಿನಿಮಾ.

*ಈ ಎಲ್ಲ ಅಂಶಗಳನ್ನು ಇಂದಿನ ಕನ್ನಡ ಸಿನಿಮಾಗಳು ಪಡೆದುಕೊಂಡಿವೆಯೇ?
ಸಿನಿಮಾ ಎನ್ನುವುದು ಕೊನೆಗೂ ಒಂದು ಉದ್ಯಮ. ಅದರ ಒಳಗೆ ನಾವು ಕಲಾವಿದರು ಸಿಕ್ಕಿಹಾಕಿಕೊಂಡಿರ್ತೀವಿ. ಇಲ್ಲಿ ನಾವೇನೇ ಮಾಡಹೊರಟರೂ ಆ ಸಿನಿಮಾದ ವೆಚ್ಚ, ಅದು ಅವಲಂಬಿತವಾಗಬೇಕಾದ ಪ್ರೇಕ್ಷಕ ವರ್ಗ, ಬಂಡವಾಳ ಮರಳಿಕೆ ಈ ಎಲ್ಲ ಅಂಶಗಳೂ ಭಯ ಹುಟ್ಟಿಸಲು ಶುರುವಾಗ್ತವೆ. ಆಗ ಕಲಾವಿದ ಹೆಚ್ಚು ಸುರಕ್ಷಿತ ಜಾಡು ಹಿಡೀತಾನೆ. ಯಾಕಂದ್ರೆ ಇಂದು ಎಂಥ ಕಡಿಮೆ ವೆಚ್ಚದಲ್ಲಿ ಸಿನಿಮಾ ಮಾಡ್ತೀವಿ ಅಂದ್ರೂ ಮೂವತ್ತು ನಲ್ವತ್ತು ಲಕ್ಷ ಹಣ ಬೇಕು. ಅದು ಸಣ್ಣ ಮೊತ್ತವಲ್ಲ. ಅಷ್ಟು ಹಣ ಹೂಡಿದವನಿಗೆ ಕನಿಷ್ಠ ರಿಟರ್ನ್‌ ಆದ್ರೂ ಇರಬೇಕಲ್ಲ. ಈಗಂತೂ ಟೀವಿ ರೈಟ್ಸ್‌ನವರೂ ಅಂಗಡಿ ಮುಚ್ಚಿ ಬಿಟ್ಟಿದ್ದಾರೆ. ಆದ್ದರಿಂದ ಸಿನಿಮಾ ಬಿಡುಗಡೆಯಾದ ಮೊದಲೆರಡು ವಾರದಲ್ಲಿಯೇ ಹಾಕಿದ ಬಂಡವಾಳ ಮರಳಿಸಿಕೊಳ್ಳುವುದು ಹೇಗೆ ಅಂತ ಯೋಚಿಸಬೇಕಾಗುತ್ತದೆ.

ಈಗ ಎಲ್ಲರೂ ಹೇಳ್ತಿದ್ದಾರೆ ‘ಮೈತ್ರಿ’ ಪುನೀತ್‌ ಅವರ ಬೆಸ್ಟ್‌ ಸಿನಿಮಾ ಅಂತ. ಆದ್ರೆ ಗಳಿಕೆ ಮಾತ್ರ ಅವರ ಕೆಟ್ಟ ಸಿನಿಮಾಗಿಂತ ಕಡಿಮೆಯೇ ಇರುತ್ತದೆ. ಅದಕ್ಕೇ ಹೇಳಿದ್ದು, ಕೊನೆಗೂ ಸಿನಿಮಾ ಒಂದು ಉದ್ಯಮ. ಅದಕ್ಕೊಂದು ಮಾರುಕಟ್ಟೆ ಇದೆ. ಆ ಮಾರುಕಟ್ಟೆಗೆ ಅದರದೇ ಆದ ಕೆಲವು ನಿಯಮಗಳಿವೆ.

*ನಮ್ಮಲ್ಲಿ ಕಲಾತ್ಮಕ ಮಾದರಿಯ ಎಲ್ಲವೂ ಶ್ರೇಷ್ಠ ಸಿನಿಮಾ, ವಾಣಿಜ್ಯಾತ್ಮ ಸಿನಿಮಾಗಳೆಲ್ಲ ಎರಡನೇ ದರ್ಜೆಯವು ಎಂಬ ಮನಸ್ಥಿತಿ ಇದೆ. ಅದರ ಬಗ್ಗೆ ಏನನಿಸುತ್ತೆ?
ಕಲಾತ್ಮಕ ಸಿನಿಮಾವನ್ನು ಮಾಡುವ– ನೋಡುವ ಜನರು ಆಡುವ ಕನ್ನಡ ಮತ್ತು ಇಂಗ್ಲಿಷ್‌. ಕನ್ನಡಕ್ಕಿಂತ ಹೆಚ್ಚು ಇಂಗ್ಲಿಷ್‌.. ಇವೆಲ್ಲ ಸೇರಿ ಅವರಲ್ಲಿ ನಾವು ಉಳಿದವರಿಗಿಂತ ಭಿನ್ನರು, ಶ್ರೇಷ್ಠರು ಎಂಬ ಭಾವನೆ ಶುರುವಾಗುತ್ತದೆ. ಕಲಾತ್ಮಕ ಚಿತ್ರ ಮಾಡುವವನು– ನೋಡುವವನು ತಾನೊಂದು ಮೇಲು ಸಂಸ್ಕೃತಿಯ ಭಾಗವಾಗ್ತಿದ್ದೀನಿ ಎಂಬ ಭಾವ ಅನುಭವಿಸ್ತಾ ಇರ್ತಾನೆ. ಕೆ.ವಿ.ಸುಬ್ಬಣ್ಣ ಹೇಳಿದಂತೆ ಇದೊಂಥರ ಶ್ರೇಷ್ಠತೆಯ ವ್ಯಸನ. 

ನಿಜವಾಗಿಯೂ ಕಲಾತ್ಮಕ ಚಿತ್ರಗಳಲ್ಲಿ ಅಂತಹ ಹೂರಣ ಇದ್ದಿದ್ದೇ ಆದಲ್ಲಿ ಪರ್ಯಾಯ ಮಾರುಕಟ್ಟೆ ನಿರ್ಮಾಣವಾಗಬೇಕಿತ್ತು. ಹಾಗಾಗಲಿಲ್ಲವಲ್ಲ. ನಮ್ಮಲ್ಲಿ ಆರಂಭಿಕವಾಗಿ ಒಂದೆರಡು ಸಿನಿಮಾಗಳು ಬಿಟ್ಟರೆ ಸಮಗ್ರವಾಗಿ ಕಲಾತ್ಮಕ ಮಾದರಿಯಲ್ಲಿ ಒಳ್ಳೆಯ ಸಿನಿಮಾಗಳು ಬಂದಿಲ್ಲ. ಹಾಗೆ ನೋಡಿದ್ರೆ ಕಾಸರವಳ್ಳಿ ಮತ್ತು ಶೇಷಾದ್ರಿ ಅವರೇ ಒಂದಷ್ಟು ಒಳ್ಳೆಯ ಸಿನಿಮಾಗಳನ್ನು ಕೊಟ್ಟಿದ್ದಾರೆ. ಉಳಿದ ನಿರ್ದೇಶಕರು ಹೇಳಿಕೊಳ್ಳುವಂಥ ಸಿನಿಮಾ ಮಾಡಿಲ್ಲ.

ಕಲಾತ್ಮಕ ಮತ್ತು ವಾಣಿಜ್ಯಾತ್ಮಕ ಎರಡೂ ಮಾದರಿಯ ಸಿನಿಮಾಗಳು ನೇರ ಸ್ಪರ್ಧೆಗೆ ಬಿದ್ದಾಗ ಇಬ್ಬರೂ ಬೆಳೆಯುತ್ತಾರೆ. ಅದನ್ನು ಬಿಟ್ಟು ಮಧ್ಯದಲ್ಲೊಂದು ಗಡಿ ಹಾಕಿಕೊಂಡು ಆ ಕಡೆ ನೀವು ಇರಿ, ಈ ಕಡೆ ನಾವು ಇರ್ತೀವಿ ಅನ್ನೋದು ಸರಿಯಲ್ಲ. ಆ ವಿಭಾಗವನ್ನು ಒಡೆಯಬೇಕಾಗಿದೆ.

*‘ಮೈತ್ರಿ’ ಚಿತ್ರದಲ್ಲಿ ಸ್ಲಂ ಡಾಗ್‌ ಮಿಲೇನಿಯರ್‌ ನಕಲು ಮಾಡಲಾಗಿದೆ ಎನ್ನುವ ಆರೋಪ ಕೇಳಿಬರ್ತಿದೆಯಲ್ಲ?
ನಿಜ ಅಂದ್ರೆ ಸ್ಲಂ ಡಾಗ್‌ ಮಿಲೇನಿಯರ್‌ ಆಶಯಕ್ಕೆ ಸಿನಿಮಾಗೆ ವಿರುದ್ಧವಾಗಿಯೇ ಈ ಸಿನಿಮಾ ಮಾಡಿರುವುದು. ಅದರಲ್ಲಿ ಕರ್ಮ ಸಿದ್ದಾಂತವನ್ನು ಅರ್ಥಮಾಡಿಕೊಂಡಿರುವ ರೀತಿ ಬೇರೆಯೇ. ಮೊದಲು ಕಷ್ಟಪಡಿ, ನಂತರ ಒಳ್ಳೆಯದಾಗಿ ಬಿಡುತ್ತದೆ. ಹೀರೋಯಿನ್‌ ಸಿಗ್ತಾಳೆ, ರೇಲ್ವೇ ನಿಲ್ದಾಣದಲ್ಲಿ ಡಾನ್ಸ್‌ ಮಾಡಬಹುದು. ಹೀಗೆ.. ಹಾಗಿದ್ರೆ ಕಷ್ಟಪಟ್ಟ ಉಳಿದ ಮಕ್ಕಳಿಗೂ ಅವೆಲ್ಲ ಸಿಗಬೇಕಿತ್ತಲ್ಲ. ಒಬ್ಬ ಹುಡುಗನಿಗೇ ಮಾತ್ರ ಯಾಕೆ ಸಿಕ್ತು?
ನಮ್ಮ ಜೀವನವನ್ನು ಪ್ರತಿದಿನ ನಾವು ತೆಗೆದುಕೊಳ್ಳುವ ನಿರ್ಧಾರಗಳ ಮೂಲಕ ನಾವೇ ರೂಪಿಸಿಕೊಳ್ಳುತ್ತಾ ಇರ್ತೀವಿ. ಇದನ್ನೇ ‘ಮೈತ್ರಿ’ಯಲ್ಲಿ ಹೇಳಹೊರಟಿದ್ದು.

*‘ಮೈತ್ರಿ’ ಸಿನಿಮಾದ ಯಶಸ್ಸು ಏನನ್ನು ಸಾಬೀತುಪಡಿಸಿದೆ?
ಇಂಥ ಸಿನಿಮಾಗಳನ್ನು ಜನ ನೋಡಲ್ಲ ಎಂಬ ಭಯ ಇತ್ತು. ಅದು ಸುಳ್ಳು ಎಂದು ಸಾಬೀತಾಗಿದೆ. ಎಲ್ಲರಿಗೂ ಒಂಥರ ಆಶಾಭಾವನೆ ಹುಟ್ಟಿದೆ. ಸಿನಿಮಾ ಮಾಡುವವರಿಗೆ ಇಂಥ ಸಿನಿಮಾ ಮಾಡಬಹುದು ಎಂದು. ಹಾಗೆಯೇ ಪ್ರೇಕ್ಷಕನಿಗೂ ಬೇರೆ ರೀತಿಯ ಸಿನಿಮಾಗಳು ಬರ್ತಿವೆ ಎಂಬ ಆಶಾಭಾವನೆ ಬಂದಿದೆ.

*ಕನ್ನಡ ಚಿತ್ರರಂಗಕ್ಕೆ ಹೊಸ ನೀರಿನ ಹರಿವು ಜೋರಾಗಿಯೇ ಇದೆ. ಆದರೆ ಅದಕ್ಕೆ ತಕ್ಕ ಹೊಸತನ ಕಾಣ್ತಿಲ್ವಲ್ಲಾ?
ಹೊಸಬರು ಬರ್ತಿದ್ದರೂ ಹಣ ಹಾಕುವವರು ಹಳಬರೇ ತಾನೇ? ವಿತರಕರು ಹಳಬರೇ ತಾನೇ? ಅಲ್ಲದೇ ಪ್ರೇಕ್ಷಕರು ಯಾರು ಅಂತ ಯಾರಿಗೂ ಗೊತ್ತಾಗ್ತಿಲ್ಲ. ಆದ್ದರಿಂದ ಹಳೆಯದನ್ನೇ ಹೊಸತಾಗಿ ನಿರೂಪಣೆ ಮಾಡ್ತಾ ಇದ್ದಾರೆ.

*ಕನ್ನಡ ಚಿತ್ರರಂಗದ ಕೆಲವು ಪ್ರಯೋಗಶೀಲ ಮನಸ್ಸುಗಳು ಒಂದೆಡೆ ಸೇರಿದರೆ ಬದಲಾವಣೆ ಮಾಡಲು ಸಾಧ್ಯವಿದೆ ಅನಿಸಲ್ವಾ?
ಇತ್ತೀಚೆಗೆ ನಾನು ಮತ್ತು ಪವನ್‌ ಕುಮಾರ್‌ ಅದರ ಬಗ್ಗೆನೇ ಮಾತಾಡ್ತಿದ್ವಿ. ಆದ್ರೆ ಸೋಲು, ಭಯ ತುಂಬಾ ಕಾಡಿಸುತ್ತೆ. ‘ಉಳಿದವರು ಕಂಡಂತೆ’ ಒಂದು ವೇಳೆ ಗೆದ್ದಿದ್ದರೆ ರಕ್ಷಿತ್‌ ಶೆಟ್ಟಿ ಮತ್ತು ಪವನ್‌ ಕುಮಾರ್‌ ಸೇರಿ ಒಂದು ಸಿನಿಮಾ ಮಾಡಬೇಕು ಅಂತಿದ್ರು. ಆದ್ರೆ ಸೋಲು ಎಂಬ ಭಯವೇ ಎದ್ದು ಕಾಣತೊಡಗುತ್ತದಲ್ಲ. ಅಲ್ಲದೇ ನಮ್ಮಲ್ಲಿ ಒಂದು ಸಲ ಸೋತುಬಿಟ್ರೆ ಅವ್ರನ್ನು ಯಾರೂ ಹತ್ರಕ್ಕೆ ಸೇರಿಸಿಕೊಳ್ಳಲ್ಲ. ಬೇರೆ ಇಂಡಸ್ಟ್ರಿಯಲ್ಲಿ ಹಾಗಿಲ್ಲ.

ಇವೆಲ್ಲ ಏನೇ ಇದ್ರೂ ನಾವೆಲ್ಲ ಸೇರಿ ಅಂಥದ್ದೊಂದು ಪ್ರಯತ್ನ ಮಾಡ್ತಿದ್ದೀವಿ. ಸಮಾನ ಮನಸ್ಕರು ಒಂದೆಡೆ ಸೇರಿದಾಗ ಏನಾದ್ರೂ ಮಾಡಲಿಕ್ಕೆ ಸಾಧ್ಯ ಎಂಬ ನಂಬಿಕೆ ನಮಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.