ADVERTISEMENT

‘ಹೀರೊಯಿನ್‌’ ಹಾಡು ಪಾಡು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 19:30 IST
Last Updated 21 ಸೆಪ್ಟೆಂಬರ್ 2017, 19:30 IST
‘ಹೀರೊಯಿನ್‌’ ಹಾಡು ಪಾಡು
‘ಹೀರೊಯಿನ್‌’ ಹಾಡು ಪಾಡು   

ಹೊರಗೆ ಜೋರು ಮಳೆ ಬಂದು ನಿಂತು ತಣ್ಣನೆಯ ಗಾಳಿ ಬೀಸುತ್ತಿತ್ತು. ಆದರೆ ಆ ಸಭಾಂಗಣದ ಒಳಗೆ ಮಾತ್ರ ಬಿಸಿ ಹವೆ ತುಂಬಿತ್ತು. ಆ ಬೇಗೆಯನ್ನು ಹೋಗಲಾಡಿಸಲು ಹಚ್ಚಿದ್ದ ಫ್ಯಾನುಗಳು ವೇದಿಕೆಯ ಮೇಲೆ ಕೂತಿದ್ದ ನಟೀಮಣಿಯರು ತೊಟ್ಟಿದ್ದ ಮೊಣಕಾಲ ಮೇಲಿನ ದಿರಿಸನ್ನು ದಿಕ್ಕೆಡಿಸುವ ಪೋಲಿತನದಲ್ಲಿ ತನ್ಮಯವಾಗಿದ್ದವು.

ಅದು ‘ನನ್ ಮಗಳೇ ಹೀರೊಯಿನ್‌’ ಸಿನಿಮಾದ ಸಿ.ಡಿ. ಬಿಡುಗಡೆ ಕಾರ್ಯಕ್ರಮ. ಚಿತ್ರತಂಡದ ಹಲವು ಗಣ್ಯರು ಶುಭ ಹಾರೈಸಿದ ವಿಡಿಯೊ ಕ್ಲಿಪ್ಪಿಂಗ್‌ ಮತ್ತು ಎರಡು ಹಾಡುಗಳನ್ನು ತೋರಿಸಿದ ನಂತರ ವೇದಿಕೆಯ ಮೇಲೆ ಮೈಕ್‌ ಎತ್ತಿಕೊಂಡಿದ್ದು ನಿರ್ದೇಶಕ ಬಾಹುಬಲಿ.

‘ಸಿನಿಮಾ ಚೆನ್ನಾಗಿ ಬಂದಿದೆ. ಕಾಮಿಡಿ ಮತ್ತು ಮನರಂಜನೆ ಎರಡನ್ನೂ ಹದವಾಗಿ ಬೆರೆಸಿ ಸಿನಿಮಾ ಮಾಡಿದ್ದೇವೆ. ಹಾಗೆಯೇ ಹಾಸ್ಯದ ರೂಪದಲ್ಲಿ ಒಂದು ಸಂದೇಶವನ್ನೂ ನೀಡಿದ್ದೇವೆ. ಬದುಕಿನಲ್ಲಿ ಬರುವ ಕಷ್ಟಗಳನ್ನು ಕಾಮಿಡಿಯ ದೃಷ್ಟಿಕೋನದಿಂದಲೇ ನೋಡುವ ಪ್ರಯತ್ನ ಇದು’ ಎಂದು ಬಾಹುಬಲಿ ವಿವರಿಸಿದರು.

ADVERTISEMENT

ಚಿತ್ರದಲ್ಲಿನ ಐದು ಹಾಡುಗಳಲ್ಲಿ ಒಂದನ್ನು ಕವಿರಾಜ್‌ ಬರೆದಿದ್ದಾರೆ. ಟ್ಯೂನ್‌ ಕೇಳಿದ ಅವರು ಏನೂ ಮಾತನಾಡದೆ ಎದ್ದು ಹೋದರಂತೆ. ನಂತರ ಬರಿ ಎರಡೇ ಗಂಟೆಗಳಲ್ಲಿ ಪಲ್ಲವಿ ಮತ್ತು ಅನುಪಲ್ಲವಿಯನ್ನು ಬರೆದು ಕಳಿಸಿದರಂತೆ. ಹಾಗೆಯೇ ಇನ್ನೊಂದು ಹಾಡನ್ನು ಯೋಗರಾಜ್‌ ಭಟ್‌ ಬರೆದಿದ್ದಾರೆ. ‘ಯೋಗರಾಜ ಭಟ್ಟರ ಬಳಿ ಮೂರು ಸಲ ಹಾಡು ಬರೆಸಿದ್ದೀವಿ. ಅವರು ಕೊಂಚವೂ ಬೇಸರ ಮಾಡಿಕೊಳ್ಳದೆ ಬರೆದುಕೊಟ್ಟಿದ್ದಾರೆ’ ಎಂದು ಬಾಹುಬಲಿ ಖುಷಿಯಿಂದ ಹೇಳಿಕೊಂಡರು. ಉಳಿದ ಮೂರು ಹಾಡುಗಳಲ್ಲಿ ಎರಡನ್ನು ಸ್ವತಃ ಬಾಹುಬಲಿ ಅವರೇ ಬರೆದಿದ್ದಾರೆ. ಕನ್ನಡವೇ ಬರದ ಸಂಗೀತ ನಿರ್ದೇಶಕ ಅಶ್ವಮಿತ್ರ ಅವರೂ ಒಂದು ಹಾಡು ಬರೆದಿರುವುದು ವಿಶೇಷ!

ನಾಯಕಿ ಅಮೃತಾ ರಾವ್‌ ಮಾತನಾಡಿ, ರಾಜಸ್ಥಾನದ ಬಿರುಬಿಸಿಲಿನಲ್ಲಿ ಹಾಡಿನ ಚಿತ್ರೀಕರಣ ಮಾಡಿದ ಅನುಭವವನ್ನು ಹಂಚಿಕೊಂಡರು. ‘ಸಾಕಷ್ಟು ಕಷ್ಟಪಟ್ಟಿದ್ದೇವೆ. ಆದರೆ ಅವೇನನ್ನೂ ತೋರಿಸಿಕೊಂಡಿಲ್ಲ. ಚಿತ್ರ ಚೆನ್ನಾಗಿ ಬರಬೇಕು ಎನ್ನುವುದೇ ನಮ್ಮೆಲ್ಲರ ಗುರಿಯಾಗಿತ್ತು’ ಎಂದರು.

ನಾಯಕ ಸಂಚಾರಿ ವಿಜಯ್‌ ‘ಈ ಚಿತ್ರದಲ್ಲಿ ಎಲ್ಲ ನಟರೂ ನಾಯಕರೇ. ಒಳ್ಳೆಯ ತಂಡ, ಒಳ್ಳೆಯ ಚಿತ್ರ ಮಾಡಿದೆ’ ಎಂದಷ್ಟೇ ಚುಟುಕಾಗಿ ಹೇಳಿ ಮಾತು ಮುಗಿಸಿದರು.

ಇನ್ನೊಬ್ಬ ನಟಿ, ದೀಪಿಕಾ ಮಾತನಾಡಿ, ‘ಕಿರುತೆರೆ ಧಾರಾವಾಹಿಯಲ್ಲಿ ಇಷ್ಟು ದಿನ ಎಲ್ಲರನ್ನೂ ಅಳಿಸುತ್ತಿದ್ದೆ. ಆದರೆ ಈಗ ಈ ಸಿನಿಮಾ ಮೂಲಕ ನಗಿಸಲು ಬರುತ್ತಿದ್ದೇನೆ’ ಎಂದರು.

ಎನ್‌.ಜಿ. ಮೋಹನ್‌ಕುಮಾರ ಮತ್ತು ಪಟೇಲ್‌ ಆರ್‌. ಅನ್ನದಾನಪ್ಪ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ತಬಲಾ ನಾಣಿ, ಗೋಪಾಲಕೃಷ್ಣ ದೇಶಪಾಂಡೆ, ಪವನ್‌, ಬುಲೆಟ್‌ ಪ್ರಕಾಶ್‌ ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ.

‘ಇದು ಮನರಂಜನೆಯೇ ಹೆಚ್ಚಾಗಿರುವ ಸಿನಿಮಾ. ಎಲ್ಲರೂ ಒಳ್ಳೆಯ ಸಿನಿಮಾ ಮಾಡಬೇಕು ಎಂಬ ಉದ್ದೇಶದಿಂದಲೇ ಮಾಡುತ್ತಾರೆ. ಆದರೆ ಯಾವುದು ಒಳ್ಳೆಯ ಚಿತ್ರ ಎಂಬುದು ಚಿತ್ರಮಂದಿರದಲ್ಲಿ ಗೊತ್ತಾಗುತ್ತದೆ’ ಎಂದು ಹೇಳಿ ಬಿ.ಸಿ. ಪಾಟೀಲ್‌ ಮಾತು ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.