ADVERTISEMENT

ಹೃತಿಕ್‌ ಚಿತ್ರಕಥನ

​ಪ್ರಜಾವಾಣಿ ವಾರ್ತೆ
Published 14 ಜುಲೈ 2016, 8:27 IST
Last Updated 14 ಜುಲೈ 2016, 8:27 IST
ಹೃತಿಕ್‌ ಚಿತ್ರಕಥನ
ಹೃತಿಕ್‌ ಚಿತ್ರಕಥನ   

‘ಮೊಹೆಂಜೋದಾರೋ’ ಸಿನಿಮಾಕ್ಕೆ ತಮ್ಮನ್ನು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ನಿರ್ದೇಶಕ ಅಶುತೋಷ್‌ ಗೋವಾರಿಕರ್‌ ಅವರ ಬಗ್ಗೆ ಬಾಲಿವುಡ್‌ ನಟ ಹೃತಿಕ್‌ ರೋಷನ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದೇ ಸಮಯದಲ್ಲಿ ತಾವು ಈ ಸಿನಿಮಾ ಒಪ್ಪಿಕೊಳ್ಳುವಾಗ ಹಾಕಿದ ಷರತ್ತಿನ ಕುರಿತೂ ಅವರು ಮಾತನಾಡಿದ್ದಾರೆ.

‘200 ಪುಟಗಳಷ್ಟಿದ್ದ ಚಿತ್ರಕಥೆ 80 ಪುಟಕ್ಕೆ ಇಳಿಸಿದ ಮೇಲೆಯೇ ನಾನು ಈ ಚಿತ್ರಕ್ಕೆ ಸಹಿ ಮಾಡಿದ್ದು’ ಎಂದು ಅವರು  ಇತ್ತೀಚೆಗೆ ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ.

‘ಮೊದಲನೇಯದಾಗಿ ಅಶುತೋಷ್‌ ನನ್ನ ಸ್ನೇಹಿತ. ‘ಜೋಧಾ ಅಕ್ಬರ್‌’ನಂಥ ಸಿನಿಮಾದಲ್ಲಿ ನಟಿಸಲು ನನಗೆ ಅವಕಾಶ ನೀಡಿದವರು. ತಮ್ಮ ಇನ್ನೊಂದು ಸಿನಿಮಾದಲ್ಲಿ ನಟಿಸಲು ನನಗೆ ಅವಕಾಶ ನೀಡುತ್ತಿರುವುದು ನನಗೆ ಖುಷಿ ನೀಡಿತು. ಇದೇ ಖುಷಿಯಿಂದ ಚಿತ್ರಕಥೆ ಓದಿದೆ.

ಅದು ನನಗೆ ಇಷ್ಟವಾಯಿತು. ಆದರೆ 200 ಪುಟಗಳಷ್ಟಿದ್ದ ಕಥೆ 80 ಪುಟಕ್ಕೆ ಇಳಿಸುವವರೆಗೆ ಕಾದೆ. ನಂತರ ನಾವು ಕೈಕುಲುಕಿಕೊಂಡು ‘ಈಗ ಈ ಸಿನಿಮಾ ಮಾಡೋಣ’ ಎಂದು ನಿರ್ಧರಿಸಿದೆವು’ ಎಂದು ಹೃತಿಕ್‌ ಸಿನಿಮಾ ಒಪ್ಪಿಕೊಂಡ ಪರಿಯನ್ನು ವಿವರಿಸಿದ್ದಾರೆ.

ಅಶುತೋಷ್‌ ದೀರ್ಘಾವಧಿಯ ಸಿನಿಮಾಗಳಿಗೆ ಹೆಸರಾದವರು. ಅವರ ಬಹುತೇಕ ಎಲ್ಲ ಸಿನಿಮಾಗಳೂ ಮೂರು ಗಂಟೆಗಳಿಗಿಂತ ಜಾಸ್ತಿ ಅವಧಿ ಹೊಂದಿರುತ್ತವೆ. ಆದರೆ ‘ಮೊಹೆಂಜೋ ದಾರೋ’ ಸಿನಿಮಾ ಚಿತ್ರಕಥೆಯನ್ನು ಇನ್ನಷ್ಟು ಕಡಿಮೆ ಪುಟಗಳಿಗೆ ಇಳಿಸುವಂತೆ ಹೃತಿಕ್‌ ಪಟ್ಟುಹಿಡಿದಿದ್ದರಂತೆ.

‘ಚಿತ್ರಕಥೆ 81ರಿಂದ 80ನೇ ಪುಟಕ್ಕೆ ಇಳಿದ ತಕ್ಷಣ ಅಶುತೋಷ್‌ ದೆಹಲಿಗೆ ಬಂದು ನನ್ನನ್ನು ಭೇಟಿ ಮಾಡಿದರು. ನಾನು ಚಿತ್ರಕ್ಕೆ ಸಹಿ ಹಾಕಿದೆ’ ಎಂದು ಹೃತಿಕ್‌ ಹೇಳಿಕೊಂಡಿದ್ದಾರೆ.

2014ರ ‘ಬ್ಯಾಂಗ್‌ ಬ್ಯಾಂಗ್‌’ ನಂತರ ಹೃತಿಕ್‌ ಅಭಿನಯದ ಯಾವುದೇ ಸಿನಿಮಾ ಬಿಡುಗಡೆಯಾಗಿಲ್ಲ. ಎರಡು ವರ್ಷಗಳ ಮಧ್ಯಂತರದ ಕುರಿತು ಅವರಿಗೆ ಕೇಳಿದ ಪ್ರಶ್ನೆಗೆ ‘ಪ್ರತಿ ಸಿನಿಮಾಕ್ಕೂ ಅದರದ್ದೇ ಆದ ಸಿದ್ಧತೆ ಮತ್ತು ಉದ್ದೇಶಗಳಿರುತ್ತವೆ. ಅದಕ್ಕೆ ಅವಶ್ಯವಿರುವಷ್ಟು ಸಮಯ ಮೀಸಲಿಡಲೇ ಬೇಕು’ ಎಂದ ಅವರು ‘ಇನ್ನೊಂದು ವರ್ಷದಲ್ಲಿ ಇನ್ನಷ್ಟು ಸಿನಿಮಾ ಮಾಡುತ್ತೇನೆ’ ಎಂಬ ಭರವಸೆಯನ್ನೂ ನೀಡಿದರು.

‘ಮೊಹೆಂಜೋದಾರೋ’ ಸಿನಿಮಾದ ನಂತರ ಹೃತಿಕ್‌ ‘ಕಾಬಲಿ’ ಸಿನಿಮಾದ ನಿರ್ದೇಶಕ ಪ. ರಂಜಿತ್‌ ನಿರ್ದೇಶಕನದ ಇನ್ನೊಂದು ಸಿನಿಮಾಕ್ಕೆ ಸಹಿ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.