ADVERTISEMENT

ಹೃದಯದೊಳಗೆ ತನನ–ಕಂಪನ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2014, 19:30 IST
Last Updated 16 ಅಕ್ಟೋಬರ್ 2014, 19:30 IST

ಎಸ್‌. ಶ್ರೀಧರ್‌ ನಿರ್ಮಾಣ ಮತ್ತು ಸಾಹಿತ್ಯ ರಚನೆಯ ಮೊದಲ ಚಿತ್ರ ‘ಈ ದಿಲ್‌... ಹೇಳಿದೆ ನೀ ಬೇಕಂತ’ ಈ ತಿಂಗಳ ಅಂತ್ಯದಲ್ಲಿ ತೆರೆಗೆ ಬರಲಿದೆ. ಅವಿನಾಶ್ ನರಸಿಂಹರಾಜು ಮತ್ತು ಶ್ರೀಶ್ರುತಿ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ.

ತಮ್ಮ ಮೊದಲ ನಿರ್ಮಾಣದ ಸಿನಿಮಾದ ಬಗ್ಗೆ ಶ್ರೀಧರ್‌ ಅವರಿಗೆ ಅಪಾರ ಆತ್ಮವಿಶ್ವಾಸ. ಸೆನ್ಸಾರ್ ಮಂಡಳಿಯ ಬಾಗಿಲಿನಲ್ಲಿ ನಿಂತಿರುವ ಚಿತ್ರದ ಇಲ್ಲಿಯವರೆಗಿನ ಒಟ್ಟಾರೆ ವೆಚ್ಚ ಸುಮಾರು ಎರಡು ಕೋಟಿ ರೂಪಾಯಿ. ಬಂಡವಾಳ ವಾಪಸ್ಸಾಗುವ ಬಗ್ಗೆ ಆತ್ಮವಿಶ್ವಾಸದಿಂದ ಮಾತನಾಡುವ ಅವರು, ಸುಮಾರು 60ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾವನ್ನು ತೆರೆ ಕಾಣಿಸಲು ಪ್ರಯತ್ನ ನಡೆಸಿದ್ದಾರೆ.

ಚಿಕ್ಕಮಗಳೂರು, ಶಿವಮೊಗ್ಗ, ತೀರ್ಥಹಳ್ಳಿಯಲ್ಲಿ ‘ಈ ದಿಲ್‌...’ ಚಿತ್ರಕ್ಕಾಗಿ ಶ್ರೀಧರ್‌ ಬಳಗ 42 ದಿನಗಳ ಕಾಲ ಚಿತ್ರೀಕರಣ ನಡೆಸಿದೆ. ಉಡುಪಿ–ಚಿಕ್ಕಮಗಳೂರು ಜಿಲ್ಲೆಯ ನಡುವಿನ ರಾಣಿಝರಿ ಪರಿಸರದಲ್ಲಿ ಕ್ಲೈಮ್ಯಾಕ್ಸ್ ಚಿತ್ರೀಕರಿಸಲಾಗಿದೆ.

ಮದುವೆ ಹಿನ್ನೆಲೆಯ ಒಂದು ಪ್ರೇಮ ಕಥೆಯೇ ‘ಈ ದಿಲ್‌... ಹೇಳಿದೆ ನೀ ಬೇಕಂತ’. ‘ಒಬ್ಬ ಹುಡುಗನ ಜೀವನದಲ್ಲಿ ನಡೆಯುವ ಪ್ರೀತಿ–ಪ್ರೇಮ ಮತ್ತು ಪ್ರೇಮ ವೈಫಲ್ಯವನ್ನು ಚಿತ್ರದಲ್ಲಿ ಹೇಳುತ್ತಿದ್ದೇವೆ. ಅಪ್ಪ ಅಮ್ಮನ ಮಾತು ಕೇಳದಿದ್ದರೆ ಏನಾಗುತ್ತದೆ. ಅಪ್ಪ ಅಮ್ಮನ ಮಾತು ಮುಖ್ಯವೋ ಹೃದಯದ ಮಾತು ಮುಖ್ಯವೋ ಎನ್ನುವುದು ಕಥೆಯ ಕೇಂದ್ರ. ಇದನ್ನು ಭಿನ್ನ; ಹೊಸ ಕಥೆ ಎನ್ನುವುದಕ್ಕಿಂತ ನಿರೂಪಣೆಯಲ್ಲಿ ಹೊಸತನವಿದೆ. ಚಿತ್ರಕಥೆಯ ಜತೆ ಜತೆಯಲ್ಲಿಯೇ ಹಾಡುಗಳು ಸಾಗುತ್ತವೆ’ ಎಂದು ಸಿನಿಮಾದ ಕಥೆಯ ಎಳೆಯನ್ನು ಶ್ರೀಧರ್‌ ಬಿಟ್ಟುಕೊಟ್ಟರು.

ಅಂದಹಾಗೆ, ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿರುವ ಶ್ರೀಧರ್, ಒಳ್ಳೆಯ ಸಿನಿಮಾ ಮಾಡುವ ಕನಸಿನೊಂದಿಗೆ ಈ ಸಿನಿಮಾ ನಿರ್ಮಿಸಿದ್ದಾರೆ. ಬಹುಪಾಲು ಹೊಸಬರ ಮೇಲೆ ನಂಬಿಕೆ ಇಟ್ಟು ಹಣ ಸುರಿದಿದ್ದಾರೆ. ‘ನಾನು ಹೊಸ ಹುಡುಗರಿಗೆ ಅವಕಾಶ ಕೊಡಬೇಕು ಎನ್ನುವ ಮನೋಭಾವದಿಂದ ಸಿನಿಮಾ ಮಾಡಿದ್ದೇನೆ. ಒಂದರ್ಥದಲ್ಲಿ ಅದು ನನಗೆ ಕೂಡ ಅನುಕೂಲವೇ. ಚಿತ್ರಕಥೆಯ ಮೇಲೆ ಎರಡು ತಿಂಗಳು ಕೆಲಸ ಮಾಡಿದ್ದೇನೆ. ಮೊದಲ ಪ್ರಯತ್ನದಲ್ಲಿ ಒಳ್ಳೆಯ ಸಿನಿಮಾವನ್ನು ಜನರ ಕೈಗಿಡಬೇಕು, ಆ ಮೂಲಕ ನಾನೂ ಹೆಚ್ಚು ಹೆಚ್ಚು ಸಿನಿಮಾಗಳನ್ನು ನಿರ್ಮಿಸಬೇಕು ಎನ್ನುವ ಆಲೋಚನೆ ನನ್ನದು’ ಎನ್ನುವ ಅವರು ಮುಂದೆಯೂ ಸಿನಿಮಾಗಳಲ್ಲಿ ತೊಡಗುವುದಾಗಿ ಹೇಳಿದರು.

ಚಿತ್ರದಲ್ಲಿ ಎಂಟು ಹಾಡುಗಳಿದ್ದು ನಿರ್ಮಾಪಕರೇ ಪದಗಳನ್ನು ಪೋಣಿಸಿದ್ದಾರೆ. ಈಗಾಗಲೇ ಒಟ್ಟು 25 ಸಾವಿರ ಆಡಿಯೊ ಸೀಡಿಗಳು ಮಾರಾಟವಾಗಿವೆಯಂತೆ. ಭದ್ರಾವತಿಯ ಕೆ.ಟಿ.ಎಂ. ಶ್ರೀನಿವಾಸ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ವಿದ್ಯಾ ಮೂರ್ತಿ, ಕುಮುದಾ, ನಾಗೇಂದ್ರ ಶಾ, ಮಿತ್ರಾ ಮತ್ತಿತರರ ತಾರಾಗಣವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT