ADVERTISEMENT

ಹೊಸ ಹುಡುಗರ ಹಂಸನಡಿಗೆ!

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2017, 19:30 IST
Last Updated 7 ಸೆಪ್ಟೆಂಬರ್ 2017, 19:30 IST
ಹೊಸ ಹುಡುಗರ ಹಂಸನಡಿಗೆ!
ಹೊಸ ಹುಡುಗರ ಹಂಸನಡಿಗೆ!   

ಹೊಸ ಹುಡುಗರು ರೂಪಿಸಿರುವ 'ರಾಜಹಂಸ' ಈ ವಾರ (ಸೆ.8) ವಿಹಾರಕ್ಕೆ ಸಜ್ಜಾಗಿದೆ. ಈ ಸುದ್ದಿಯನ್ನು ಹಂಚಿಕೊಳ್ಳಲಿಕ್ಕಾಗಿಯೇ ಚಿತ್ರತಂಡ ಪತ್ರಿಕಾಗೋಷ್ಠಿ ಕರೆದಿತ್ತು. ಚಿತ್ರದ ನಾಯಕ ಗೌರೀಶಿಖರ ನಟನೆಯ ಜತೆಗೆ ಹಣವನ್ನೂ ಹೂಡಿದ್ದಾರೆ.

‘ರಾಜಹಂಸ ಒಂದೂವರೆ ವರ್ಷದ ಜರ್ನಿ. ಈಗ ಕೊನೆಯ ಹಂತಕ್ಕೆ ಬಂದಿದೆ. ಜನರಿಗೆ ತಲುಪಿಸಲು ಸಾಕಷ್ಟು ಪ್ರಯತ್ನಿಸಿದ್ದೇವೆ. ಈ ವಾರ ಚಿತ್ರ ಬಿಡುಗಡೆಯಾಗುತ್ತಿದೆ‌. ಯಾವುದೇ ಹಿನ್ನೆಲೆ ಇಲ್ಲದೆ ಬಂದವರು ನಾವು. ನಮ್ಮೆಲ್ಲರ ಶ್ರಮಕ್ಕೂ ಬೆಲೆ ಬರುವ ದಿನ ಇಂದು. ಸಿನಿಮಾ ಕಥೆ ಚೆನ್ನಾಗಿದ್ದರೆ ಸಾಲುವುದಿಲ್ಲ. ಎಲ್ಲ ಹಂತದಲ್ಲಿಯೂ ಶ್ರಮಿಸಬೇಕಾಗುತ್ತದೆ. ನಾವು ಹಾಗೇ ಶ್ರಮವಹಿಸಿದ್ದೇವೆ. ನಾವು ಈ ಸಿನಿಮಾವನ್ನು ಸುಖದಿಂದ ಮಾಡಿಲ್ಲ’ ಎಂದು ಮೊದಲ ಸಿನಿಮಾ ಬಿಡುಗಡೆಯ ತಳಮಳ ಮತ್ತು ವಿಶ್ವಾಸ ಎರಡನ್ನೂ ತಮ್ಮ ಮಾತಿನ ಮೂಲಕ ಹೊರಹಾಕಿದರು ಗೌರೀಶಿಖರ.

‘ನಮ್ಮ ಎಲ್ಲ ಹಾಡುಗಳನ್ನು ದಾಖಲೆಯ ಮಟ್ಟದಲ್ಲಿ ಮೆಚ್ಚಿಕೊಂಡಿದ್ದಾರೆ. ಇದು ಟೀಂ ವರ್ಕ್ ಪ್ರತಿಫಲ’ ಎನ್ನುವುದು ಅವರ ವಿವರಣೆ. ಸಿನಿಮಾಗೆ ಯಾಕೆ ರಾಜಹಂಸ ಎಂದು ಹೆಸರಿಟ್ಟಿದ್ದೀರಿ? ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದು ಹೀಗೆ, ‘ಬೆಂಗಳೂರಿನಿಂದ ರಾಜಹಂಸ ಬಸ್ ಹತ್ತಿಕೊಂಡು ಶಿವನೊಗ್ಗಕ್ಕೆ ಹೋಗುವ ದಾರಿ ಒಂದೇ. ಆದರೂ ಮಳೆಗಾಲದಲ್ಲಿ, ಚಳಿಗಾಲದಲ್ಲಿ ಬೇಸಿಗೆಯಲ್ಲಿ ಹೋಗುವ ಅನುಭವವೇ ಬೇರೆ ಬೇರೆಯೇ ಆಗಿರುತ್ತವೆ. ಹಾಗೆಯೇ ಅದೇ ಪ್ರೇಮ ಹಾಸ್ಯ ರಂಜನೆ ಸೂತ್ರಗಳಿದ್ದರೂ ಈ ಸಿನಿಮಾದಲ್ಲಿ ಅವು ಫ್ರೆಶ್ ಆಗಿವೆ’ ಎಂದು ಅವರು ತಮ್ಮ ಸಿನಿಮಾದ ಬಗ್ಗೆ ಹೇಳಿಕೊಳ್ಳುತ್ತಾರೆ.

ADVERTISEMENT

(ಗೌರೀಶಿಖರಜಡೇಶ್ ಕುಮಾರ್)

ಜಡೇಶ್ ಕುಮಾರ್ ಈ ಚಿತ್ರದ ಮೂಲಕ ನಿರ್ದೇಶಕನಾಗುತ್ತಿದ್ದಾರೆ. 'ಹಾಡುಗಳು ಮತ್ತು ಟ್ರೈಲರ್‌ಗಳನ್ನು ಜನ ಮೆಚ್ಚಿಕೊಂಡಿದಾರೆ. ಸಿನಿಮಾವನ್ನೂ ಇಷ್ಟಪಡುತ್ತಾರೆ ಎಂಬ ನಂಬಿಕೆ ಇದೆ. ಇದು ಒಂದು ಕಲಾಪ್ರಕಾರವನ್ನು ಆಧರಿಸಿದ ಚಿತ್ರ. ಅದಕ್ಕಾಗಿ ನಾನು ನೀನಾಸಮ್ ಹೋಗಿ ನಲ್ವತ್ತೈದು ದಿನ ತರಬೇತಿ ಪಡೆದಿದ್ದೇನೆ. ಕಲಾವಿದರಿಗೆ ರಿಹರ್ಸಲ್ ಮಾಡಿಸಿದ್ದೇವೆ. ಛಾಯಾಗ್ರಾಹಕ, ನಿರ್ದೇಶಕ, ಸಂಕಲನಕಾರ, ನಾಯಕ ಎಲ್ಲರೂ ಹೊಸಬರು. ಈ ಕಥೆಗೆ ಎಷ್ಟು ಸಾಧ್ಯವೋ ಅಷ್ಟು ನ್ಯಾಯ ಒದಗಿಸಿದ್ದೇನೆ. ನನ್ನ ಪ್ರಕಾರ ಇದು ಪ್ರಯೋಗಾತ್ಮಕ ಮತ್ತು ಕಮರ್ಷಿಯಲ್ ಎರಡೂ ಪ್ರಕಾರಗಳನ್ನು ಬೆಸೆದು ಸಿನಿಮಾ' ಎಂದು ಅವರು ವ್ಯಾಖ್ಯಾನಿಸುತ್ತಾರೆ.

ನಾಯಕಿ ರಂಜನಿ ರಾಘವ 'ಇದು ನನ್ನ ಮೊದಲನೇ ಸಿನಿಮಾ. ಈ ಕಥೆ ಕೇಳಿದಾಗ ಎಂಬಿಎ ಫೈನಲ್ ಇಯರ್ ಓದುತ್ತಿದ್ದೆ. ಆಗ ನನಗೆ ನಟನೆಯನ್ನು ವೃತ್ತಿಯಾಗಿ ತೆಗೆದುಕೊಳ್ಳಬೇಕು ಅನಿಸಿರಲಿಲ್ಲ. ಆದರೆ ಈಗ ನಾನು ನಟನೆಯನ್ನೇ ವೃತ್ತಿಯನ್ನಾಗಿ ಸ್ವೀಕರಿಸಲು ನಿರ್ಧರಿಸಿದ್ದೇನೆ. ಈ ಸಿನಿಮಾ ನನ್ನ ಬದುಕಿನ ಗುರಿಯನ್ನೇ ಬದಲಾಯಿಸಿದೆ. ನಾನು ನಾನೇನಾ ಅನ್ನುವಷ್ಟು ಬದಲಾಗಿದ್ದೇನೆ. ಇದು ನನ್ನ ಲೈಫ್ ಟರ್ನಿಂಗ್ ಸಮಯ' ಎಂದು ಭಾವುಕಳಾಗಿ ನುಡಿದರು.

‘ನಾನು ಕಿರುತೆರೆ ಸ್ಟಾರ್. ಆದರೆ ಚಿತ್ರರಂಗದಲ್ಲಿ ಕಿರುತೆರೆ ಸ್ಟಾರ್ ಗಿರಿ ಏನೂ ನಡೆಯುವುದಿಲ್ಲ. ಹೊಸತಾಗಿಯೇ ಶುರುಮಾಡಬೇಕು. ಸಿನಿಮಾ ಚೆನ್ನಾಗಿದ್ದರೆ ಮಾತ್ರ ನೋಡ್ತಾರೆ ಎನ್ನುವುದು ಅನುಭವಕ್ಕೆ ಬಂದಿದೆ’ ಎಂದೂ ಅವರು ಹೇಳಿದರು.

ವಿಜಯ್ ಚೆಂಡೂರು, ತಬಲಾ ನಾಣಿ, ರಾಜಗುರು ಹೊಸಕೋಟೆ, ಬುಲೆಟ್ ಪ್ರಕಾಶ್, ಶ್ರೀಧರ್, ಬಿ.ಸಿ. ಪಾಟೀಲ್ ‘ರಾಜಹಂಸ’ದ ಮುಖ್ಯಭೂಮಿಕೆಯಲ್ಲಿದ್ದಾರೆ.

ವಿ.ಎಚ್. ಸುರೇಶ್ ಈ ಚಿತ್ರವನ್ನು ವಿತರಿಸಲು ಮುಂದಾಗಿದ್ದಾರೆ. ನೂರಕ್ಕೂ ಅಧಿಕ ಚಿತ್ರಮಂದಿರದಲ್ಲಿ ತೆರೆಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.