ADVERTISEMENT

‘ಓಂ ನಮಃ’ ಜಪದ ಸಮಯ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 19:32 IST
Last Updated 3 ಸೆಪ್ಟೆಂಬರ್ 2015, 19:32 IST

‘ಓಂ’, ‘ಓಂ ನಮಃ ಶಿವಾಯ’ ಚಿತ್ರಗಳು ತೆರೆಗೆ ಬಂದಿದ್ದಾಯಿತು. ಈಗ ‘ಓಂ ನಮಃ’ ಸರದಿ. ವಿಜಯೇಂದ್ರ ನಟಿಸಿ–ನಿರ್ದೇಶಿಸಿರುವ ‘ಓಂ ನಮಃ’ ಸಿನಿಮಾ ಇಂದು (ಸೆಪ್ಟೆಂಬರ್ 04) ತೆರೆಗೆ ಬರುತ್ತಿದೆ. ಇದು ಮೂರು ವರ್ಷಗಳ ಹಿಂದೆ ಚಾಲನೆ ಪಡೆದ, ನೈಜ ಕಥೆ ಆಧರಿಸಿದ ಸಿನಿಮಾವಂತೆ.

‘ಬಾಲ್ಯದಲ್ಲಿ ನನ್ನ ಪರಿಸರದಲ್ಲಿ ಒಂದು ಘಟನೆಯನ್ನು ನೋಡಿದ್ದೆ. ಒಬ್ಬ ರೌಡಿಯನ್ನು ಬ್ರಾಹ್ಮಣ ಹುಡುಗಿಯೊಬ್ಬಳು ಪ್ರೀತಿಸಿ ಮದುವೆಯಾಗುವಳು. ಆ ಹುಡುಗ ಯಾವಾಗಲೂ ಪೊಲೀಸ್‌ ಸ್ಟೇಷನ್ ಕೋರ್ಟುಗಳಿಗೆ ಅಲೆದಾಡುತ್ತಿದ್ದವನು. ಮದುವೆಯ ನಂತರ ಅವರ ಬದುಕು ಹೇಗೆಲ್ಲಾ ಆಯಿತು ಎನ್ನುವುದನ್ನು ಸಿನಿಮಾದಲ್ಲಿ ತಂದಿದ್ದೇನೆ. ಇದು ಆಕ್ಷನ್ ಸಿನಿಮಾ. ಕಥೆಯ ನಿರೂಪಣೆಯೇ ಸಿನಿಮಾದ ಹೈಲೆಟ್’ ಎಂದರು ವಿಜಯೇಂದ್ರ. ಮಡಿಕೇರಿಯಲ್ಲಿ ಚಿತ್ರೀಕರಣ ಮಾಡಲಾಗಿದೆಯಂತೆ.

ಮೀನಾಕ್ಷಿ  ‘ಓಂ ನಮಃ’ದ ನಾಯಕಿ. ಚಿತ್ರಕ್ಕಾಗಿ ವೈದೇಹಿ ಎಂದು ಹೆಸರು ಬದಲಿಸಿಕೊಂಡಿದ್ದ ಅವರು ಈಗ ಪುನಃ ಮೀನಾಕ್ಷಿ ಎನ್ನುವ ಹೆಸರಿನಿಂದಲೇ ಮುಂದುವರೆಯುತ್ತಾರಂತೆ. ‘ವಿದ್ಯಾವಂತ–ಒರಟು ಹುಡುಗಿಯ ಪಾತ್ರ ನನ್ನದು. ಒಬ್ಬ ರೌಡಿಯನ್ನು ಮದುವೆಯಾಗಿ ಯಾವ ರೀತಿ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎನ್ನುವುದಕ್ಕೆ ಉದಾಹರಣೆಯಾಗಿ ನನ್ನ ಪಾತ್ರ ಮೂಡಿಬಂದಿದೆ’ ಎಂದು ಮುಗುಳ್ನಕ್ಕರು ಮೀನಾಕ್ಷಿ. ಮೂಲತಃ ಓಡಿಶಾದ ಮೀನಾಕ್ಷಿ ಚಿತ್ರಕ್ಕಾಗಿಯೇ ಕನ್ನಡವನ್ನು ಕಲಿತಿದ್ದಾರೆ.

 ರಂಗಭೂಮಿ ಕಲಾವಿದ ಮುನಿ ವೀರಪ್ಪ ಮತ್ತು ಎಂ. ಉಮೇಶ್ ಚಿತ್ರಕ್ಕೆ ಬಂಡವಾಳ ಹೂಡಿರುವವರು. ಮುನಿ ವೀರಪ್ಪ ಖಳನಾಯಕನ ಪಾತ್ರವನ್ನು ಇಲ್ಲಿ ಮಾಡಿದ್ದಾರೆ. ಚಿತ್ರದಲ್ಲಿ 6 ಹಾಡುಗಳಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಶಿವನಂಜೇಗೌಡ ಸಂಭಾಷಣೆ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.