ADVERTISEMENT

‘ನಾನಿ’ ಮತ್ತು ರೂಪಾಂತರ!

​ಪ್ರಜಾವಾಣಿ ವಾರ್ತೆ
Published 30 ಜೂನ್ 2016, 19:30 IST
Last Updated 30 ಜೂನ್ 2016, 19:30 IST
ನಾನಿ ಜೈಜಗದೀಶ್, ಸುಹಾಸಿನಿ
ನಾನಿ ಜೈಜಗದೀಶ್, ಸುಹಾಸಿನಿ   

ಗುಜರಾತ್‌ನಲ್ಲಿ ನಡೆದ ಸತ್ಯಕಥೆಯೊಂದನ್ನು ಆಧರಿಸಿದ ಸಿನಿಮಾ ‘ನಾನಿ’. ಇದು ಮಾನವೀಯ, ರಮಣೀಯ ಹಾಗೂ ಹಾರರ್ ಸಿನಿಮಾ ಎಂದು ಬಣ್ಣಿಸುವ ನಿರ್ದೇಶಕರು, ಸಿನಿಮಾ ತೆರೆಕಾಣುವ ವೇಳೆಗೆ ಹೆಸರು ಬದಲಿಸಿಕೊಂಡು ಗೆಲುವಿನ ಲೆಕ್ಕಾಚಾರದಲ್ಲಿದ್ದಾರೆ.


‘ಹದಿನೇಳು ವರ್ಷಗಳ ನಂತರ ಆ ಮನೆಯ ಬಾಗಿಲು ತೆಗೆದವರಲ್ಲಿ ನಾನೇ ಮೊದಲಿಗ. ಯಾರ ಪ್ರವೇಶವೂ ಇಲ್ಲದ ಆ ಮನೆಯಲ್ಲಿ ಲಕ್ಷಾಂತರ ಬಾವಲಿಗಳು, ಹಾವುಗಳು ಆರಾಮವಾಗಿ ಹಾರಾಡಿ ಹರಿದಾಡಿಕೊಂಡಿವೆ.

ನನ್ನ ಜೊತೆ ಆ ಮನೆ ಪ್ರವೇಶಿಸಲು ಬಂದ ನನ್ನ ಚಿತ್ರತಂಡದ ಸದಸ್ಯರೆಲ್ಲ ಅರ್ಧದಲ್ಲೇ ಕಾಲ್ಕಿತ್ತರು. ಆದರೆ ನಾನು ಒಳ್ಳೆಯ ಕಂಟೆಂಟ್ ಸಿಕ್ಕುತ್ತದೆ ಎಂದು ಒಂದು ಬ್ಯಾಟರಿ ಹಿಡಿದು ಇಡೀ ಮನೆ ಸುತ್ತಿ ಎಲ್ಲವನ್ನೂ ಚಿತ್ರಿಸಿಕೊಂಡೆ. ಚಿತ್ರದಲ್ಲಿಯೂ ಅದನ್ನು ತೋರಿಸಿದ್ದೇನೆ’.

ಇದು ‘ನಾನಿ’ ಚಿತ್ರದ ನಿರ್ದೇಶಕ ರಾಘವೇಂದ್ರ ಗೊಲ್ಲಹಳ್ಳಿ ಹಂಚಿಕೊಂಡ ಅನುಭವ. ಸೆಟ್ಟೇರಿದಾಗಿನಿಂದಲೂ ಸುದ್ದಿ ಮಾಡುತ್ತಲೇ ಇದ್ದ ‘ನಾನಿ’ ಇಂದು (ಜುಲೈ 1) ತೆರೆಗೆ ಬರುತ್ತಿದೆ. ನಿರ್ದೇಶಕರಿಗೆ ಇದು ಮೊದಲ ಚಿತ್ರ. ಆರಂಭದಲ್ಲಿ ರಾಘವೇಂದ್ರ ಕೆ. ಗೊಲ್ಲಹಳ್ಳಿ ಆಗಿದ್ದ ನಿರ್ದೇಶಕರು ಬಿಡುಗಡೆಯ ಹಂತಕ್ಕೆ ಬರುವವರೆಗೆ ಸುಮಂತ್ ಆಗಿದ್ದಾರೆ.

‘ಸಿನಿಮಾಕ್ಕೆ ಕಸರತ್ತು ಮಾಡಿ ಆಕರ್ಷಕ ಶೀರ್ಷಿಕೆ ಇಡುವಂತೆಯೇ ಸಿನಿಮಾ ಚೆನ್ನಾಗಿ ಆಗಲಿ ಎಂದು ಸಂಖ್ಯಾಶಾಸ್ತ್ರದ ಪ್ರಕಾರ ನಾನೂ ಹೆಸರು ಬದಲಾಯಿಸಿಕೊಂಡಿದ್ದೇನೆ’ ಎನ್ನುವ ಸುಮಂತ್, ತಮ್ಮ ಮೊದಲ ಸಿನಿಮಾದ ಅನುಭವಗಳನ್ನು ಹಂಚಿಕೊಂಡಿದ್ದಾರೆ.

1997ರಲ್ಲಿ ಗುಜರಾತ್‌ನ ನೌಸಾರಿ ಊರಿನಲ್ಲಿ ಕಾಂಜಿಭಾಯಿ ಎಂಬುವವರ ಕುಟುಂಬದಲ್ಲಿ ನಡೆದ ಘಟನೆಯೊಂದನ್ನು ಕೇಳಿದ ಸುಮಂತ್ ಚಿತ್ರಕಥೆ ಮಾಡಿದ್ದಾರೆ. ಅದೇ ‘ನಾನಿ’. ಚಿತ್ರದ ನಿರ್ಮಾಪಕ ರಮೇಶ್‌ಕುಮಾರ್ ಜೈನ್ ಅವರು ಈ ಘಟನೆಯ ಬಗ್ಗೆ ಎರಡು ಮೂರು ಬಾರಿ ಚರ್ಚಿಸಿದಾಗ ಈ ಕಥೆಯನ್ನು ಸಿನಿಮಾ ಮಾಡುವ ಯೋಚನೆ ರಾಘವೇಂದ್ರ ಅವರಿಗೆ ಬಂದಿದೆ.

ಕಾಂಜಿಭಾಯಿ ಕುಟುಂಬ ವಾಸವಾಗಿದ್ದ, ದುರ್ಘಟನೆ ಸಂಭವಿಸಿದ ಮನೆಯಲ್ಲೇ ಚಿತ್ರೀಕರಣ ಮಾಡಬೇಕು ಎಂದುಕೊಂಡಿದ್ದ ಸುಮಂತ್ ಅಲ್ಲಿಗೆ ಹೋದಾಗ ತಮಗಾದ ಅನುಭವವನ್ನು ಉತ್ಸಾಹದಿಂದ ತೆರೆದಿಟ್ಟರು.

‘ನಾನಿ ಮನೆ’ಯಲ್ಲೇ ಚಿತ್ರೀಕರಣ ಮಾಡಬೇಕೆಂಬುದು ಅವರ ಆಶಯವಾಗಿದ್ದರೂ ಆ ಮನೆಯ ಪರಿಸ್ಥಿತಿ ಕಂಡು ಅವರೇ ಗಾಬರಿಯಾಗಿದ್ದಾರೆ. ಲಕ್ಷಾಂತರ ಬಾವಲಿಗಳಿರುವ ದೊಡ್ಡ ಬಂಗಲೆ ಅದು. ಆ ಮನೆಯನ್ನು ಮತ್ತೆ ಮೊದಲಿನ ಸ್ಥಿತಿಗೆ ತರುವ ಬದಲು ಅಂಥದ್ದೇ ಹೊಸ ಮನೆ ನಿರ್ಮಾಣ ಮಾಡಬಹುದು ಎನ್ನುತ್ತಾರೆ ರಾಘವೇಂದ್ರ. ಚಿತ್ರದ ಅರ್ಧದಷ್ಟು ಭಾಗವನ್ನು ಆ ಮನೆಯಲ್ಲೇ ಚಿತ್ರೀಕರಣ ಮಾಡಬೇಕೆಂದುಕೊಂಡಿದ್ದ ಚಿತ್ರತಂಡಕ್ಕೆ ಅದು ಸಾಧ್ಯವಾಗದೆ ಶೇಕಡ ಹತ್ತರಷ್ಟನ್ನು ಮಾತ್ರ ಗುಜರಾತ್‌ನಲ್ಲಿ ಚಿತ್ರೀಕರಿಸಿದೆ.

ಈ ಕರಾಳ ಘಟನೆಯನ್ನು ಸಿನಿಮಾ ರೂಪಕ್ಕೆ ತರುವಲ್ಲಿ ಅವರು ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾರೆ. ಈವರೆಗೆ ಇಪ್ಪತ್ತಕ್ಕೂ ಹೆಚ್ಚು ಬಾರಿ ಸಿನಿಮಾ ನೋಡಿರುವ ಸುಮಂತ್‌ಗೆ ಈಗಲೂ ‘ನಾನಿ’ ಕಣ್ಣಲ್ಲಿ ನೀರು ತರಿಸುತ್ತಾಳೆ. ಅದು ಚಿತ್ರದಲ್ಲಿನ ಮಾನವೀಯ ಮುಖವಾದರೆ, ಇನ್ನೊಂದು ಮುಖ ಹಾರರ್.

ADVERTISEMENT

ಚಿತ್ರದಲ್ಲಿ ಬರುವ ಹಾರರ್ ದೃಶ್ಯಗಳಿಗೆ ಸೆನ್ಸಾರ್ ಮಂಡಳಿ ಸದಸ್ಯರೇ ಬೆಚ್ಚಿದ್ದಾರಂತೆ. ಅಂದರೆ ಚಿತ್ರಕ್ಕೆ ಪ್ರಮಾಣಪತ್ರ ನೀಡಲು ಸಿನಿಮಾ ನೋಡುವಾಗ ಹೆದರಿಕೊಂಡ ಸೆನ್ಸಾರ್ ಮಂಡಳಿ ಸದಸ್ಯರು, ಚಿತ್ರದ ಧ್ವನಿಯನ್ನು ತಗ್ಗಿಸಿ ಸಿನಿಮಾ ನೋಡಿ ಮುಗಿಸಿದ್ದಾರಂತೆ.

ಚಿತ್ರದ ಮುಖ್ಯಪಾತ್ರಧಾರಿ ‘ನಾನಿ’. ಈ ನಾನಿ ಗುಜರಾತ್‌ನಲ್ಲಿ ಜನಿಸಿದ ಮೊದಲ ಪ್ರಣಾಳ ಶಿಶು. ಆಕೆಯ ತಂದೆಯೇ ಮಗಳನ್ನು ಬೆಂಕಿಯಿಟ್ಟು ಕೊಂದಿದ್ದಾರೆ ಎಂಬ ನಂಬಿಕೆ ಇಂದಿಗೂ ನೌಸಾರಿಯಲ್ಲಿದೆ. ನಾನಿಯ ಆತ್ಮ ಮನೆಯ ಸುತ್ತ ಅಲೆದಾಡುತ್ತಿದೆ ಎಂದೇ ಅನೇಕರು ಹೇಳುತ್ತಾರೆ. ಹಾಗಾಗಿ ಚಿತ್ರದಲ್ಲಿ ಹಾರರ್ ಅಂಶಗಳಿಗೂ ಜಾಗ ನೀಡಲಾಗಿದೆ. ಆದರೆ ಅಲ್ಲಿ ನಡೆದ ಘಟನೆಗಳೇ ಬೇರೆ ಎನ್ನುತ್ತಾರೆ ನಿರ್ದೇಶಕರು.

ಅದನ್ನೇ ಸಿನಿಮಾದಲ್ಲಿ ಹೇಳಿರುವುದು. ನಾನಿಗೆ ಪಾಠ ಹೇಳುತ್ತಿದ್ದ ಶಂಕರ್‌ಬೆನ್ ಎಂಬುವವರಿಂದ ಸುಮಂತ್ ನಿಜ ಸಂಗತಿಯನ್ನು ಕಲೆ ಹಾಕಿದ್ದಾರೆ. ಚಿತ್ರದ ತೊಂಬತ್ತು ಭಾಗ ನಿಜ ಘಟನೆಗಳೇ ಇವೆ. ಪ್ರಣಾಳ ಶಿಶು ಪರಿಕಲ್ಪನೆಯಲ್ಲಿ ಬರುತ್ತಿರುವ ಮೊದಲ ಸಿನಿಮಾ ತಮ್ಮದು ಎನ್ನುತ್ತಾರೆ ಅವರು. ಜೊತೆಗೆ, ಹೆಣ್ಣು ಗರ್ಭ ಧರಿಸಿದ ನಂತರ ಗರ್ಭದಲ್ಲಿ ಮಗು ಹೇಗೆ ಬೆಳೆಯುತ್ತದೆ, ಲಿಂಗ ಹೇಗೆ ರೂಪು ಪಡೆಯುತ್ತದೆ ಎಂಬುದನ್ನೂ ಗ್ರಾಫಿಕ್ಸ್ ಮೂಲಕ ತೋರಿಸಿದ್ದಾರಂತೆ.

ಸಿನಿಮಾ ಸೆಟ್ಟೇರಿ ಒಂದೂಕಾಲು ವರ್ಷವೇ ಆಗಿದೆ. ತಡವಾಗುವುದಕ್ಕೆ ಕಾರಣಗಳೂ ಇವೆ. ‘ಮಗಧೀರ’ ಚಿತ್ರಕ್ಕೆ ಕಲಾ ನಿರ್ದೇಶನ ಮಾಡಿದ್ದ ಗಜೇಂದ್ರನ್ ಎಂಬುವವರನ್ನು ಚೆನ್ನೈನಿಂದ ಕರೆಸಿ ನಲವತ್ತು ಅಡಿ ಎತ್ತರದ ಶಿವನ ಮೂರ್ತಿ ನಿರ್ಮಿಸಿ, ಒಂದೂವರೆ ಸಾವಿರ ಅಘೋರಿ ಪಾತ್ರಧಾರಿಗಳನ್ನು ಇಟ್ಟುಕೊಂಡು ಒಂದು ಹಾಡಿನ ಚಿತ್ರೀಕರಣ ಮಾಡಲು ಮೂರು ತಿಂಗಳು ತಗುಲಿತು. ಅಲ್ಲದೆ ಚಿತ್ರದಲ್ಲಿ ಗ್ರಾಫಿಕ್ ಪಾತ್ರ ಮಹತ್ವದ್ದು.

ಬೆಂಗಳೂರಲ್ಲಿ ಒಂದಷ್ಟು ಗ್ರಾಫಿಕ್ಸ್ ಮಾಡಿಸಿದ್ದು ಇನ್ನರ್ಧ ಚೆನ್ನೈನಲ್ಲಿ ಮಾಡಿಸಲಾಗಿದೆ. ಆದರೆ ಚೆನ್ನೈನಲ್ಲಿ ಮಳೆಯಿಂದಾಗಿ ಪ್ರವಾಹ ಉಂಟಾದಾಗ ಗ್ರಾಫಿಕ್ಸ್ ಕೆಲಸಗಳೆಲ್ಲ ನೀರಿನಲ್ಲಿ ಹೋಮವಾಗಿದ್ದವಂತೆ. ಹಾಗಾಗಿ ಗ್ರಾಫಿಕ್ಸ್ ಮರು ನಿರ್ಮಾಣದ ಅನಿವಾರ್ಯತೆ ಎದುರಾಗಿದ್ದೂ ಸಿನಿಮಾ ಬಿಡುಗಡೆ ತಡವಾಗಿದ್ದಕ್ಕೆ ಕಾರಣವಂತೆ.

ಚಿತ್ರ ತೆಲುಗು, ಹಿಂದಿ, ತಮಿಳು ಭಾಷೆಗಳಿಗೂ ಡಬ್ ಆಗಿದೆ. ಕಳೆದ ವಾರವೇ ಬಿಡುಗಡೆಯಾಗಬೇಕಿದ್ದ ‘ನಾನಿ’ಗೆ ತೆಲುಗಿನಲ್ಲಿ ಸೆನ್ಸಾರ್ ಆಗಿರದ ಕಾರಣ ಇಂದು ತೆರೆ ಕಾಣುತ್ತಿದೆ. ತಮಿಳಿನಲ್ಲಿ ಒಂದು ತಿಂಗಳು ತಡವಾಗಿ ಬಿಡುಗಡೆಯಾಗಲಿದ್ದು, ಹಿಂದಿಗೆ ನೇರ ಸ್ಯಾಟಲೈಟ್ ಹಕ್ಕನ್ನು ನೀಡಲಾಗಿದೆ.

‘ಇದು ನೈಜ ಪಾತ್ರ’
ಜನರು ‘ಅರುಂಧತಿ’ ಮತ್ತು ‘ನಾಗವಲ್ಲಿ’ ಪಾತ್ರಗಳಿಗೆ ನಾನಿ ಪಾತ್ರವನ್ನು ಹೋಲಿಸುವುದಕ್ಕೆ ಶುರು ಮಾಡಿದ್ದಾರೆ. ಆದರೆ ಇವುಗಳಲ್ಲಿ ಯಾವುದೇ ಹೋಲಿಕೆ ಇಲ್ಲ. ಈ ನಾನಿ ನೈಜ ಪಾತ್ರ ಎನ್ನುತ್ತಾರೆ ಚಿತ್ರದ ನಾಯಕಿ ಪ್ರಿಯಾಂಕಾ ರಾವ್. ಗುರುಕಿರಣ್ ಅವರ ಹಿನ್ನೆಲೆ ಸಂಗೀತವನ್ನು ಬಹುವಾಗಿ ಮೆಚ್ಚಿ ಮಾತನಾಡಿದ್ದಾರೆ ಅವರು.

ಈ ಮಾತನ್ನು ಅನುಮೋದಿಸುತ್ತಾರೆ ನಾಯಕ ಮನೀಶ್. ‘ಚಿತ್ರದ ಬಗ್ಗೆ ಒಳ್ಳೆಯ ಮಾತುಗಳಿವೆ’ ಎನ್ನುವ ಮನೀಶ್, ಸ್ಕ್ರಿಪ್ಟ್ ಸಿದ್ಧಪಡಿಸುವುದರಿಂದ ಹಿಡಿದು ಚಿತ್ರೀಕರಣ ಸ್ಥಳಗಳನ್ನು ಗುರುತಿಸುವವರೆಗೂ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.

ಕಥೆ ಮೆಚ್ಚಿ ಬಂದ ಸುಹಾಸಿನಿ
ಚಿತ್ರದಲ್ಲಿ ನಾನಿಯ ತಾಯಿ ಸುರಕ್ಷಾ ಪಾತ್ರ ಮುಖ್ಯವಾದುದು. ಆ ಪಾತ್ರಕ್ಕೆ ಯಾರು ಸೂಕ್ತ ಎಂದು ಯೋಚಿಸುವಾಗ ಸುಮಂತ್‌ಗೆ ಹೊಳೆದಿದ್ದು ಸುಹಾಸಿನಿ. ಚಿತ್ರದಲ್ಲಿ ನಟಿಸುವಂತೆ ಸುಹಾಸಿನಿ ಅವರಿಗೆ ಕೇಳುವ ಹೊತ್ತಿನಲ್ಲಿ ಅವರು ಬೇರೊಂದು ಚಿತ್ರದಲ್ಲಿ ತೊಡಗಿದ್ದರು.

ನಾಲ್ಕು ತಿಂಗಳು ಕಾಲ್‌ಶೀಟ್ ಸಿಗುವ ಸಾಧ್ಯತೆಯೇ ಇರಲಿಲ್ಲ. ಆದರೆ ಸುಮಂತ್ ಕಳುಹಿಸಿದ್ದ ಚಿತ್ರಕಥೆ ಮತ್ತು ತಮ್ಮ ಪಾತ್ರದ ವಿವರಣೆ ಓದಿದ ಸುಹಾಸಿನಿ ತಕ್ಷಣಕ್ಕೆ ಕಾಲ್‌ಶೀಟ್ ನೀಡಿ, ಎಂಟು ದಿನ ಚಿತ್ರತಂಡದೊಂದಿಗೆ ಇದ್ದು ಚಿತ್ರೀಕರಣ ಮುಗಿಸಿ ಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.