ADVERTISEMENT

‘ಮುತ್ತಿನ ದೃಶ್ಯದಲ್ಲಿ ನಟಿಸಲು ಹಿಂಜರಿಯಲ್ಲ’

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2015, 19:30 IST
Last Updated 31 ಮಾರ್ಚ್ 2015, 19:30 IST

ಈ ವಾರ ತೆರೆಕಾಣಲು ಸಜ್ಜಾಗಿರುವ ದಿವಾಕರ್‌ ಬ್ಯಾನರ್ಜಿ ನಿರ್ದೇಶನದ ‘ಡಿಟೆಕ್ಟಿವ್‌ ಬ್ಯೋಮಕೇಶ್‌ ಬಕ್ಷಿ’ ಚಿತ್ರದಲ್ಲಿ ಬೋಲ್ಡ್‌ ಪಾತ್ರಕ್ಕೆ ಮೈಯೊಡ್ಡಿರುವ ನಟಿ ಸ್ವಸ್ತಿಕಾ ಮುಖರ್ಜಿ ‘ಮುತ್ತಿನ ಅಥವಾ ಇತರೆ ಉತ್ಕಟ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲು ಕಲಾವಿದ ಹಿಂಜರಿಯಬೇಕಾಗಿಲ್ಲ’ ಎಂದು ಹೇಳಿದ್ದಾರೆ.

ಹಸಿಬಿಸಿ ದೃಶ್ಯಗಳಲ್ಲಿ ನಟಿಸಲು ಹಿಂಜರಿಕೆ ಇಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಸ್ವಸ್ತಿಕಾ ಹೀಗೆ ಹೇಳಿದರು. ‘ಇಂತಹ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲು ಹಿಂಜರಿಕೆಯಾಗಲಿ, ವಿಶೇಷ ಪೂರ್ವ ಸಿದ್ಧತೆಯ ಅವಶ್ಯಕತೆಯಾಗಲಿ ಇಲ್ಲ. ಇಂದಿನ ಚಿತ್ರ ತಯಾರಕರು ಮಾಡುವ ಸಿನಿಮಾಗಳಲ್ಲಿ ಉತ್ಕಟ ದೃಶ್ಯಗಳು ಇದ್ದೇ ಇರುತ್ತವೆ. ‘ಗೋಲಿಯೋಂಕಿ ರಾಸಲೀಲಾ ರಾಮಲೀಲಾ’ ಚಿತ್ರದಲ್ಲಿಯೂ ಇಂತಹ ಅನೇಕ ದೃಶ್ಯಗಳಿವೆ. ಅದೇನೂ ಅಂತಹ ಮಹತ್ವದ ಸಂಗತಿಯಾಗಿ ಉಳಿದಿಲ್ಲ. ಜನರೂ ಅದರ ಬಗ್ಗೆ ಹೆಚ್ಚೇನೂ ಯೋಚಿಸುವುದಿಲ್ಲ. ಸಿನಿಮಾದ ಉಳಿದೆಲ್ಲ ದೃಶ್ಯಗಳಂತೆಯೇ ಅದೂ ಒಂದು ಸಾಮಾನ್ಯ ದೃಶ್ಯವಷ್ಟೇ’ ಎಂದು ಅವರು ಹೇಳಿದ್ದಾರೆ.

ಅಭಿನಯ ಪ್ರಧಾನ ಪಾತ್ರಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುವ ಇಚ್ಛೆಯನ್ನೂ ಕೋಲ್ಕತ್ತ ಮೂಲದ ಈ ಬೆಡಗಿ ವ್ಯಕ್ತಪಡಿಸಿದ್ದಾರೆ. ‘ನಾನು ನಟಿಸುವ ಸಿನಿಮಾದ ಭಾಷೆ, ಆ ಸಿನಿಮಾದಲ್ಲಿ ನಾನು ನಾಯಕಿಯೇ ಅಲ್ಲವೇ ಎನ್ನುವುದೆಲ್ಲ ನನ್ನ ಪಾಲಿಗೆ ಮುಖ್ಯ ವಿಷಯವೇ ಅಲ್ಲ. ನನ್ನ ಪಾತ್ರವನ್ನು ಎಷ್ಟು ಸಮರ್ಥವಾಗಿ ನಿರ್ವಹಿಸುತ್ತೇನೆ ಎನ್ನುವುದಷ್ಟೇ ನನಗೆ ಮುಖ್ಯ’ ಎಂದೂ ಸ್ವಸ್ತಿಕಾ ತಮ್ಮ ಅಭಿನಯ ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ.       

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.