ADVERTISEMENT

‘ರಿಂಗ್‌’ನಿಂದ ಅಂಗಳಕ್ಕೆ...

ಡಿ.ಎಂ.ಕುರ್ಕೆ ಪ್ರಶಾಂತ
Published 8 ಅಕ್ಟೋಬರ್ 2015, 19:30 IST
Last Updated 8 ಅಕ್ಟೋಬರ್ 2015, 19:30 IST

* ‘ರಿಂಗ್ ಮಾಸ್ಟರ್’ ಪ್ರಯೋಗಾತ್ಮಕ ಚಿತ್ರ ಎಂದಿದ್ದಿರಿ. ಯಾವ ರೀತಿಯ ಪ್ರಯೋಗ?
ಇದು ಪಕ್ಕಾ ಕರ್ಮಷಿಯಲ್ – ಪ್ರಯೋಗಾತ್ಮಕ ಚಿತ್ರ. ಒಂದು ಚಿಕ್ಕ ಅಪಾರ್ಟ್‌್‌ಮೆಂಟಿನ 20x18 ರೂಮು ಮತ್ತು 10x10 ಶೌಚಾಲಯದಲ್ಲಿ ನಡೆಯುವ ಕಥೆ. ಹೊಸ ವರ್ಷ ಉದಯಿಸುವ, ಡಿಸೆಂಬರ್ 31ರ ರಾತ್ರಿಯ ಸಮಯ. ಆ ರಾತ್ರಿ  9 ಗಂಟೆಯಿಂದ 12 ಗಂಟೆಯವರೆಗೆ ನಡೆಯುವ ಕಥೆಯೇ ‘ರಿಂಗ್ ಮಾಸ್ಟರ್’. ಆ ಮನೆಯೊಳಗೆ ನಾಲ್ಕು ಮಂದಿ ಇರುತ್ತಾರೆ. ರಹಸ್ಯ, ಥ್ರಿಲ್ಲರ್, ಮನರಂಜನೆಯಲ್ಲಿ ಆ ಪಾತ್ರಗಳು ಜನರನ್ನು ಹೇಗೆ ಹಿಡಿದಿಟ್ಟುಕೊಳ್ಳುತ್ತವೆ ಎನ್ನುವುದು ಮುಖ್ಯ. ಸಿನಿಮಾದಲ್ಲಿ ಒಟ್ಟು ಆರು ಪಾತ್ರಗಳು ಬರುತ್ತವೆ.

* ಸಿನಿಮಾ ಸಂದರ್ಭದಲ್ಲಿ ಎದುರಾದ ಸವಾಲುಗಳೇನು?
ಚಿತ್ರೀಕರಣದ ಸಮಯದಲ್ಲಿ ಸವಾಲುಗಳು ಎದುರಾಗುತ್ತವೆ ಎನ್ನುವುದು ಮೊದಲೇ ತಿಳಿದಿತ್ತು. ಅಪಾರ್ಟ್‌ಮೆಂಟ್‌ನಲ್ಲಿ ನಾನೇ ಸೆಟ್ ಹಾಕಿದ್ದೆ. ಅದಕ್ಕೂ ಮುನ್ನ ಕೆಲವು ದಿನಗಳ ಕಾಲ ಅಲ್ಲಿ ತಾಲೀಮು ನಡೆಸಿದೆವು. ಸೆಟ್ ಹಾಕಿದ ನಂತರ ಮೂರು ದಿನ ತಾಲೀಮು ಮಾಡಿಕೊಂಡೆವು. ಟೈಟಲ್ ಮತ್ತು ಡುಯೆಟ್ ಹಾಡು ಸಹ ಅಲ್ಲಿಯೇ ನಡೆಯಲಿದೆ. ಕೊಠಡಿಯಲ್ಲಿಯೇ ಹಾಡನ್ನು ಚಿತ್ರೀಕರಿಸುವುದು ಸವಾಲು. ಯೋಜನಾಬದ್ಧವಾಗಿ ಸಿದ್ಧತೆಗಳನ್ನು ಮಾಡಿಕೊಂಡಿದ್ದರಿಂದ ಸಮಸ್ಯೆಗಳು ಮತ್ತು ಸವಾಲುಗಳು ಉಂಟಾಗಲಿಲ್ಲ.

* ‘ಜೋಕರ್’ ಚಿತ್ರ ನಟಿಸಿ ನಿರ್ದೇಶಿಸಲು ಮುಂದಾಗಿದ್ದೀರಿ. ಅದಕ್ಕಿಂತ ಮೊದಲು ‘ರಿಂಗ್ ಮಾಸ್ಟರ್’ ಬಂದಿತು?
‘ಜೋಕರ್’ ದೊಡ್ಡವರಿಗಾಗಿ ಮಾಡುವ ಮಕ್ಕಳ ಚಿತ್ರ. ಹಾಗೆಂದು ಅದು ಮಕ್ಕಳ ಚಿತ್ರ ಅಲ್ಲ. ಪೋಷಕರು–ಶಿಕ್ಷಣ ವ್ಯವಸ್ಥೆ ಮತ್ತಿತರ ವಿಷಯಗಳನ್ನು ನೈಜವಾಗಿ ಹಾಸ್ಯರೂಪದಲ್ಲಿ ಹೆಣೆದಿರುವ ಕಥೆ. ಚಾಪ್ಲಿನ್‌ನ ನೋವು–ನಗು ಎರಡನ್ನೂ ಒಳಗೊಳ್ಳುವ ವಿಷಯ. ‘ಜೋಕರ್’ ಆರ್ಥಿಕ ಮುಗ್ಗಟ್ಟಿನಿಂದ ತಡವಾಗುತ್ತಿದೆ. ಅದಕ್ಕೊಬ್ಬ ಸೂಕ್ಷ್ಮ ನಿರ್ಮಾಪಕರು ಅಗತ್ಯ. ‘ಜೋಕರ್’ ಮಾಡಿಯೇ ಮಾಡುವೆ, ಗೆದ್ದೇ ಗೆಲ್ಲುವೆ ಇದು ನನ್ನ ಶಪಥ.

* ‘ಜೋಕರ್’ ಮೇಲೆ ದೊಡ್ಡ ಮುಟ್ಟದ ಆತ್ಮವಿಶ್ವಾಸಕ್ಕೆ ಕಾರಣ?
ನಮ್ಮ ಎಲ್ಲರ ನಡುವೆ ಪ್ರತಿ ದಿನವೂ ನಡೆಯುವ ಕಥೆ ಚಿತ್ರದಲ್ಲಿದೆ. ಸಂಗೀತದ ಪರಿಕಲ್ಪನೆ ಪೂರ್ಣವಾಗಿದೆ, ಅನೂಪ್ ಸೀಳಿನ್ ಸಂಗೀತ ಸಹ ಮಾಡಿದ್ದಾರೆ. ಶೂಟಿಂಗ್‌ಗೆ ಹೋಗಬೇಕು ಅಷ್ಟೇ. ‘ಜೋಕರ್’ ಬೇರೆಯದ್ದೇ ಆದ ಭಿನ್ನ ಚಿತ್ರ. ಕಥೆಯ ಪ್ರತಿ ಪಾತ್ರಗಳೊಳಗೂ ಒದ್ದಾಟವಿದೆ. ಯಾಂತ್ರಿಕ ಯುಗದಲ್ಲಿ ನಾವು ಹೇಗೆ ಬದುಕುತ್ತಿದ್ದೇವೆ, ಏನೆಲ್ಲ ಸಂಕಟಗಳ ಜತೆ ನಗುವುದು ಹೇಗೆ ಎನ್ನುವುದನ್ನು ‘ಜೋಕರ್’ ಹೇಳುತ್ತದೆ.

* ಪರಭಾಷೆಯ ಚಿತ್ರರಂಗದತ್ತ ಮುಖ ಮಾಡಿದ್ದೀರಿ?
ಹೌದು, ತಮಿಳಿನಲ್ಲಿ ‘ಚಂಡಮಾರುತಂ’ ಚಿತ್ರ ಮಾಡಿದ್ದೆ. ಅದು ಒಂದು ಮಟ್ಟಕ್ಕೆ ಹೋಯಿತು. ಈಗ ಮತ್ತೊಂದು ಚಿತ್ರದಲ್ಲಿ ನಟಿಸಬೇಕಿದೆ.

* ನಿಮ್ಮ ಸಿನಿಮಾ ವೃತ್ತಿ ಬದುಕಿಗೆ ‘ರಿಯಾಲಿಟಿ ಶೋ’ಗಳು ಯಾವ ರೀತಿ ನೆರವಾದವು?
ರಿಯಾಲಿಟಿ ಶೋ ಮತ್ತು ಸಿನಿಮಾ ಎರಡೂ ನನ್ನ ಪಾಲಿಗೆ ಪ್ರತ್ಯೇಕ. ‘ಬಿಗ್ ಬಾಸ್‌’ನಲ್ಲಿ ನಿಜವಾದ ಅರುಣ್ ಸಾಗರ್ ಕಾಣಿಸಿಕೊಂಡ. ಕಿರುತೆರೆಯಲ್ಲಿ ವಿದೂಷಕ–ನಿರೂಪಕನಾಗಿದ್ದೇನೆ. ಇದರಿಂದಾಗಿ ನನ್ನೊಳಗಿನ ಬೇರೆ ಬೇರೆ ಆಯಾಮಗಳು ಹೊರಬರುವುದಕ್ಕೆ ಸಾಧ್ಯವಾಯಿತು. ಸಿನಿಮಾ ಎನ್ನುವುದು ನನ್ನೊಳಗಿನ ನಟ ಎನ್ನುವ ತತ್ವವನ್ನು ಹೊರತೆಗೆಯುತ್ತದೆ.

* ಚಿತ್ರರಂಗಕ್ಕೆ ಬಂದು ಇಷ್ಟು ವರ್ಷಗಳಾದರೂ ನಿಮಗೆ ಉತ್ತಮ ಅವಕಾಶಗಳು ಸಿಕ್ಕುತ್ತಿಲ್ಲ ಎನಿಸುತ್ತದೆಯೇ?
ಹೌದು ಎಂದು ಹೇಳಲೋ, ಇಲ್ಲ ಎಂದು ಹೇಳುವುದೋ ಗೊಂದಲವಿದೆ. ಏಕೆ ಹೀಗೆ ಎಂದು ನನಗೆ ಗೊತ್ತಿಲ್ಲ. ಹಾಗೆಂದು ನಾನು ಯಾರನ್ನೂ ದೂರುವುದಿಲ್ಲ.  ಈ ಬಗ್ಗೆ ಒಂದು ಸಣ್ಣ ನೋವು ಇದ್ದೇ ಇದೆ. ಆದರೆ ಅದೆಲ್ಲವನ್ನೂ ಮೀರಿ ಬೆಳೆಯುವ ಭರವಸೆ ಮತ್ತು ಆತ್ಮವಿಶ್ವಾಸವಿದೆ. ಒಳ್ಳೆಯ ನಟನಾಗಬೇಕು ಎಂದರೆ ನಾಯಕನೇ ಆಗಬೇಕು ಎಂದೇನೂ ಇಲ್ಲ. ‘ಸಂಜು ವೆಡ್ಸ್ ಗೀತಾ’, ‘ಮೈನಾ’ ಚಿತ್ರಗಳಲ್ಲಿ ಸಣ್ಣ ಪಾತ್ರಗಳಾದರೂ ಮುಖ್ಯಪಾತ್ರಗಳಾಗಿದ್ದವು. ‘ಬೆಂಕಿಪಟ್ಣ’ದಲ್ಲಿ ವಯಸ್ಸಿಗೆ ಮೀರಿದ ಪಾತ್ರ. ಇವೆಲ್ಲವೂ ದೊಡ್ಡ ಮಟ್ಟದಲ್ಲಿ ಉಳಿದುಕೊಂಡಿವೆ. ನನ್ನೊಳಗೆ ಒಬ್ಬ ಅರುಣ್ ಸಾಗರ್ ಇದ್ದಾನಲ್ಲ, ಅವನ ಪ್ರಯೋಗಗಳ ಮೂಲಕ ನಾನು ಬೆಳೆಯಬೇಕು. ಈ ಮಾತು ಒಂದು ರೀತಿ ಫಿಲಾಸಫಿಕಲ್ ಆದರೂ ನಿಜ. ಪ್ರಬುದ್ಧತೆ ತಪಸ್ಸು ಇದ್ದಂತೆ. ಆ ಕಡೆ ನಾನು ಹೋಗುವೆ. 

* ಕಿರುತೆರೆಯಲ್ಲಿ ಅರುಣ್ ಸಾಗರ್ ನಿರೂಪಣೆ ಏಕತಾನವಾಗುತ್ತಿದೆ ಎನ್ನುವ ಮಾತು ಇದೆಯಲ್ಲ? 
ಹಾಗೇನೂ ಇಲ್ಲ. ನಾನು ಆ ರೀತಿಯ ಏಕತಾನತೆಯಲ್ಲಿ ಸಿಕ್ಕಿಕೊಳ್ಳುವುದಿಲ್ಲ. ‘ಸಿಂಪಲ್ಲಾಗ್ ಒಂದ್ ಸಿಂಗಿಂಗ್’ ಶೋ ಮಾಡಿದೆ. ಅಲ್ಲಿ ನನ್ನೊಳಗಿನ ಗಾಯಕನನ್ನು ಪೋಷಿಸಬೇಕಾಯಿತು. ನಿರೂಪಣೆ ಮಾಡುವಾಗ ಚಾನೆಲ್‌ಗಳಿಗೆ ವ್ಯಾಪಾರಿ ಮೌಲ್ಯಗಳು ಇರುತ್ತದೆ. ಅವರಿಗೆ ಆ ರೀತಿ ಮಾಡಿದರೆ ವರ್ಕ್ ಆಗುತ್ತದೆ. ಅದಕ್ಕೆ ತಕ್ಕಂತೆಯೇ ಕೆಲಸ ಮಾಡಬೇಕು.

* ಮುಂದಿನ ಚಿತ್ರಗಳು?
‘ಮಾರುತಿ 800’ ಚಿತ್ರಕ್ಕೆ ಕಲಾನಿರ್ದೇಶನ ಮಾಡಿ ನಟಿಸುತ್ತಿದ್ದೇನೆ. ಅದು ಬಿಟ್ಟರೆ ಬೇರೆಯಾವ ಚಿತ್ರಗಳು. ಎರಡು ಕಾಮಿಡಿ ಚಿತ್ರಕಥೆಗಳನ್ನು ಸಿದ್ಧಮಾಡಿಕೊಳ್ಳುತ್ತಿರುವೆ. ಜತೆಗೆ ಮುಂದಿನ ತಿಂಗಳಿನಿಂದ ನಟನೆಯ ತರಗತಿಯನ್ನು ಆರಂಭಿಸುತ್ತಿದ್ದೇನೆ.

ನಾಲ್ಕೂನಿಟ್ಟಿನಿಂದ ‘ರಿಂಗ್ ಮಾಸ್ಟರ್’
‘ಮಿಸ್ ಬಿಹೇವಿಯರ್’ ಎಂಬ ಕೆನಡಿಯನ್ ಚಿತ್ರದಿಂದ ಪ್ರೇರಿತವಾದ ಚಿತ್ರ ‘ರಿಂಗ್ ಮಾಸ್ಟರ್’ ಇಂದು (ಅ.9) ತೆರೆಗೆ ಬರುತ್ತಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಟ್ರೇಲರ್ ಮೂಲಕ ಸಾಕಷ್ಟು ಕುತೂಹಲ ಹುಟ್ಟುಹಾಕಿರುವ ಚಿತ್ರ ‘ರಿಂಗ್ ಮಾಸ್ಟರ್’. ‘ನಮ್ಮ ಚಿತ್ರವು ಒಂದು ಬಿಳಿ ಹಾಳೆಯಂತೆ. ಚಿತ್ರ ನೋಡಿದವರು ಅದರ ಮೇಲೆ ಏನನ್ನಾದರೂ ಬರೆದುಕೊಳ್ಳಬಹುದು’ ಎನ್ನುತ್ತಾರೆ ನಿರ್ದೇಶಕ ವಿಶ್ರುತ್. ಮೂವರು ಮುಖ್ಯ ಪಾತ್ರಧಾರಿಗಳಾದ ಅನುಶ್ರೀ, ಶೃಂಗ, ಶ್ವೇತಾ ಅವರನ್ನು ಆಡಿಸುವ ಸೂತ್ರಧಾರಿ ಅರುಣ್ ಸಾಗರ್. 

ವಿಶ್ರುತ್ ನಾಯಕ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರ ಮಾನಸಿಕ ಅಸ್ವಸ್ಥರ ಚಡಪಡಿಕೆ ಮತ್ತು ಅಂಥವರ ವರ್ತನೆಯನ್ನು ಸರಿದಾರಿಗೆ ತರುವ ಹಂದರವನ್ನೊಳಗೊಂಡಿದೆ. ಪ್ರಮುಖ ಪಾತ್ರದಲ್ಲಿರುವ ಅರುಣ್ ಸಾಗರ್‌ಗೆ ಮಹತ್ವದ ಚಿತ್ರ. ಚಿತ್ರದಲ್ಲಿ ಎರಡು ಹಾಡುಗಳಿದ್ದು ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. ಸತ್ಯನಾರಾಯಣ್, ಬಸವರಾಜು, ಚೇತನ್ ಎಂ., ನರಸಿಂಹಮೂರ್ತಿ ಚಿತ್ರದ ನಿರ್ಮಾಪಕರು. 80ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT