ADVERTISEMENT

16 ವರ್ಷಗಳ ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾಣಿಸಿಕೊಂಡ ಅಮೀರ್ ಖಾನ್

ಏಜೆನ್ಸೀಸ್
Published 25 ಏಪ್ರಿಲ್ 2017, 18:11 IST
Last Updated 25 ಏಪ್ರಿಲ್ 2017, 18:11 IST
16 ವರ್ಷಗಳ ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾಣಿಸಿಕೊಂಡ ಅಮೀರ್ ಖಾನ್
16 ವರ್ಷಗಳ ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾಣಿಸಿಕೊಂಡ ಅಮೀರ್ ಖಾನ್   

ಮುಂಬೈ: ಹಿಂದಿ ಚಿತ್ರ ನಟ ಅಮೀರ್ ಖಾನ್ ಅವರಿಗೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಮಂಗಳವಾರ 75ನೇ ಮಾಸ್ಟರ್‌ ದೀನನಾಥ್‌ ಮಂಗೇಶ್ಕರ್‌ ಪ್ರಶಸ್ತಿ ಪ್ರದಾನ ಮಾಡಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸುವ ಸಮಾರಂಭದಲ್ಲಿ ‘ದಂಗಲ್‌’ ಚಿತ್ರದ ಅಭಿನಯಕ್ಕಾಗಿ ಅಮೀರ್ ಖಾನ್ ಅವರಿಗೆ ವಿಶೇಷ ಪ್ರಶಸ್ತಿ ನೀಡಲಾಯಿತು. 16 ವರ್ಷದಲ್ಲಿ ಇದೇ ಮೊದಲ ಬಾರಿಗೆ ಅಮೀರ್‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಾರೆ.

‘ಇಂದು ನಾನು ಏನಾಗಿದ್ದೇನೆಯೋ, ಅದರ ಎಲ್ಲ ಶ್ರೇಯಸ್ಸೂ ನನ್ನ ಸಿನಿಮಾದ ಬರಹಗಾರರಿಗೆ ಸಲ್ಲಬೇಕು. ನನಗಾಗಿ ಅದ್ಭುತ ಕೆಲಸಗಳನ್ನು ಮಾಡಿದ ನಿರ್ದೇಶಕರು ಮತ್ತು ಬರಹಗಾರರಿಂದ ನಾನು ಇಲ್ಲಿದ್ದೇನೆ. ಅವರಿಗೆಲ್ಲ ನಾನು ಧನ್ಯವಾದ ಸಲ್ಲಿಸುತ್ತೇನೆ’ ಎಂದು ಪ್ರಶಸ್ತಿ ಸ್ವೀಕರಿಸಿದ ಬಳಿಕ ಅಮೀರ್ ಹೇಳಿದರು.

ADVERTISEMENT

ಭಾರತೀಯ ಕ್ರಿಕೆಟ್‌ಗೆ ನೀಡಿದ ಅಮೋಘ ಕೊಡುಗೆಗಾಗಿ ಕಪಿಲ್‌ ದೇವ್‌ ಅವರಿಗೆ ಪ್ರಶಸ್ತಿ ನೀಡಲಾಯಿತು. ಹಿರಿಯ ನಟಿ ವೈಜಯಂತಿ ಮಾಲಾ ಅವರಿಗೆ ಮಾಸ್ಟರ್‌ ದೀನನಾಥ್‌ ವಿಶೇಷ ಪುರಸ್ಕಾರ ಪ್ರದಾನ ಮಾಡಲಾಯಿತು.

ಮರಾಠಿ ರಂಗಭೂಮಿ ನಟ ಮತ್ತು ಶಾಸ್ತ್ರೀಯ ಸಂಗೀತಗಾರ ದೀನನಾಥ್ ಮಂಗೇಶ್ಕರ್ ಅವರ ನೆನಪಿನಲ್ಲಿ ಸಾಮಾಜಿಕ, ಸಾಹಿತ್ಯ, ಸಂಗೀತ, ಕ್ರೀಡೆ ಸಿನಿಮಾ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ದೀನನಾಥ್ ಅವರ ಮಗಳು, ಖ್ಯಾತ ಗಾಯಕಿ ಲತಾ ಮಂಗೇಶ್ಕರ್‌ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.