ADVERTISEMENT

ಅಮೆರಿಕದಲ್ಲೂ ವಾತ್ಸಲ್ಯದ ಸುಧೆ ಹರಿಸಿದ ಅಮ್ಮ!

​ಪ್ರಜಾವಾಣಿ ವಾರ್ತೆ
Published 7 ಜುಲೈ 2018, 12:24 IST
Last Updated 7 ಜುಲೈ 2018, 12:24 IST
‘ಅಮ್ಮ ಐ ಲವ್‌ ಯು’ ಚಿತ್ರದಲ್ಲಿ ಸಿತಾರಾ ಮತ್ತು ಚಿರಂಜೀವಿ ಸರ್ಜಾ
‘ಅಮ್ಮ ಐ ಲವ್‌ ಯು’ ಚಿತ್ರದಲ್ಲಿ ಸಿತಾರಾ ಮತ್ತು ಚಿರಂಜೀವಿ ಸರ್ಜಾ   

ಬೆಂಗಳೂರು:ಕೆ.ಎಂ. ಚೈತನ್ಯ ನಿರ್ದೇಶನದ ಚಿರಂಜೀವಿ ಸರ್ಜಾ ನಟಿಸಿರುವ ‘ಅಮ್ಮ ಐ ಲವ್‌ ಯು’ ಚಿತ್ರ ರಾಜ್ಯದಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಅಮೆರಿಕ ಮತ್ತು ಗಲ್ಫ್‌ ರಾಷ್ಟ್ರಗಳಲ್ಲೂ ಚಿತ್ರವನ್ನು ಬಿಡುಗಡೆ ಮಾಡಲಾಗಿದ್ದು, ಅಲ್ಲಿಯೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ನಿರ್ದೇಶಕ ಚೈತನ್ಯ ತಿಳಿಸಿದ್ದಾರೆ.

ಚಿರಂಜೀವಿ ಸರ್ಜಾ ಪ್ರಥಮ ಬಾರಿಗೆ ಆ್ಯಕ್ಷನ್‌ ಜೊತೆಗೆ ಭಾವನಾತ್ಮಕ ಸನ್ನಿವೇಶದಲ್ಲಿ ಕಾಣಿಸಿಕೊಂಡಿರುವುದು ಈ ಚಿತ್ರದ ವಿಶೇಷ. ತಾಯಿ ಪಾತ್ರಕ್ಕೆ ನಟಿ ಸಿತಾರಾ ಜೀವ ತುಂಬಿದ್ದಾರೆ. ಚಿಕ್ಕಣ್ಣ ಭಿಕ್ಷುಕನ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ಮತ್ತೊಂದು ವಿಶೇಷ. 12 ವರ್ಷಗಳ ಬಳಿಕ ದ್ವಾರಕೀಶ್ ಬ್ಯಾನರ್‌ನಲ್ಲಿ ಸಂಗೀತ ನಿರ್ದೇಶಕ ಗುರುಕಿರಣ್ ಕೆಲಸ ಮಾಡಿದ್ದಾರೆ. ಜೊತೆಗೆ, ಅವರೇ ವಿದೇಶಗಳಲ್ಲಿ ಈ ಚಿತ್ರದ ಬಿಡುಗಡೆಯ ಜವಾಬ್ದಾರಿ ಹೊತ್ತಿದ್ದಾರೆ.

ಅಮೆರಿಕದಲ್ಲಿ ಈ ಚಿತ್ರವು ಕೇವಲ ವಾರಾಂತ್ಯದ ಪ್ರದರ್ಶನ ಕಾಣುತ್ತಿಲ್ಲ. ಕೆಲವೆಡೆ ವಾರದ ಎಲ್ಲ ದಿನಗಳಲ್ಲೂ ಪ್ರದರ್ಶನ ಕಾಣುತ್ತಿದೆ. ಕುವೈತ್, ಓಮನ್, ದುಬೈದಲ್ಲೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ಚಿತ್ರತಂಡ ಖುಷಿ ಹಂಚಿಕೊಂಡಿದೆ.

ADVERTISEMENT

ನಟಿ ಮೇಘನಾ ರಾಜ್‌ ಅವರೊಟ್ಟಿಗೆ ನಟ ಚಿರಂಜೀವಿ ಸರ್ಜಾ ಇತ್ತೀಚೆಗೆ ಸ‍ಪ್ತಪದಿ ತುಳಿದಿದ್ದರು. ಮದುವೆ ಬಳಿಕ ತೆರೆಕಂಡ ಮೊದಲ ಚಿತ್ರ ‘ಅಮ್ಮ ಐ ಲವ್‌ ಯು’. ದಾಂಪತ್ಯ ಜೀವನಕ್ಕೆ ಅಡಿಯಿಟ್ಟ ನಂತರ ನಟನಾ ಬದುಕಿನಲ್ಲೂ ಚಿರು ಹೊಸಹಾದಿಗೆ ಹೊರಳಲು ಅಮ್ಮನ ಪ್ರೇರಣೆಯಾಗಿರುವುದು ಸ್ಪಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.