ADVERTISEMENT

‘ಭಿನ್ನ ನಟನೆಯೇ ನಮ್ಮ ಗುರುತು’

ಮಂಜುಶ್ರೀ ಎಂ.ಕಡಕೋಳ
Published 5 ಜುಲೈ 2018, 20:29 IST
Last Updated 5 ಜುಲೈ 2018, 20:29 IST
ನವಾಜುದ್ದೀನ್‌ ಸಿದ್ಧಿಕಿ, ರಾಧಿಕಾ ಆಪ್ಟೆ
ನವಾಜುದ್ದೀನ್‌ ಸಿದ್ಧಿಕಿ, ರಾಧಿಕಾ ಆಪ್ಟೆ   

ಸಂಜೆಯ ಸೂರ್ಯ ಮುಳುಗಿ ಕಾಡಿಗೆಯಷ್ಟು ಕಪ್ಪಗಿನ ರಾತ್ರಿ ಆವರಿಸಲು ಇನ್ನೇನು ಕೆಲಕ್ಷಣಗಳಿದ್ದವು. ಆದರೆ, ಅಷ್ಟೊತ್ತಿಗಾಗಲೇ ಆ ಹೋಟೆಲ್‌ನ ಲಾಂಜ್‌ನಲ್ಲಿ ದೀಪಗಳು ಬೆಳಕು ಚೆಲ್ಲಿದ್ದವು. ಅಲ್ಲಿನ ದೊಡ್ಡ ಕೊಠಡಿಯೊಂದರಲ್ಲಿ ನಟ ನವಾಜುದ್ದೀನ್ ಸಿದ್ಧಿಕಿ ಮತ್ತು ನಟಿ ರಾಧಿಕಾ ಆಪ್ಟೆ ಸರಣಿಯೋಪಾದಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು.

ತೆರೆಯ ಮೇಲೆ ಚೆಂದವಾಗಿ ಕಾಣಿಸಿಕೊಳ್ಳುವ ನವಾಜುದ್ದೀನ್ ಅವರ ಗಡ್ಡದೊಳಗಿನ ಬಿಳಿಕೂದಲು ಅವರ ವಯಸ್ಸನ್ನು ಎತ್ತಿ ತೋರಿಸುತ್ತಿತ್ತು. ಮುಖ ತುಸು ಗಂಟಿಕ್ಕಿಕೊಂಡೇ ಕುಳಿತಿದ್ದ ಅವರು, ಈಗ ಬಿಟ್ರೆ ಸಾಕು ಒಂದು ಸಿಗರೇಟ್ ಸೇದಿ ರಿಲೀಫ್ ಆಗಿಬಿಡ್ತೀನಿ ಅನ್ನೋ ಭಾವದಲ್ಲಿದ್ದರು. ಚೌಕಳಿ ಶರ್ಟ್‌ ಮೇಲೊಂದು ಬೂದು ಬಣ್ಣದ ಜರ್ಕಿನ್ ಹಾಕಿಕೊಂಡಿದ್ದ ಅವರು ಬ್ರೇಕ್‌ಗಾಗಿ ಚಡಪಡಿಸುತ್ತಿದ್ದರು.

ನವಾಜುದ್ದೀನ್ ಎದುರಿಗೇ ಕುಳಿತಿದ್ದ ರಾಧಿಕಾ ಆಪ್ಟೆ, ತೋಳಿಲ್ಲದ ಕಪ್ಪು ಅರೆ ಪಾರದರ್ಶಕ ಮೇಲಂಗಿಯಲ್ಲಿ ಮಾದಕವಾಗಿ ಕಾಣುತ್ತಿದ್ದರು. ಒತ್ತಡ ನೀಗಿಕೊಳ್ಳಲೆಂಬಂತೆ ಅಲ್ಲೇ ಇದ್ದ ಬಿಳಿಕಾಗದದ ಮೇಲೆ ಪೆನ್ಸಿಲ್‌ನಿಂದ ಚಿತ್ರ ಗೀಚುತ್ತಿದ್ದರು. ಇಬ್ಬರಿಗೂ ಹಾಯ್ ಹೇಳಿ, ನೆಟ್‌ಫ್ಲಿಕ್ಸ್‌ನ ಹೊಸ ವೆಬ್‌ಸರಣಿ ‘ಸೆಕ್ರೇಡ್ ಗೇಮ್ಸ್‌’ ಕುರಿತು ಕೇಳಿದ ಪ್ರಶ್ನೆಗಳಿಗೆ ಅವರಿಬ್ಬರಾಡಿದ ಮಾತುಕತೆ ಇಲ್ಲಿದೆ.

ADVERTISEMENT

‘ಸೆಕ್ರೇಡ್ ಗೇಮ್ಸ್‌’ ವೆಬ್ ಸರಣಿ ಅನುಭವ ಹೇಗಿತ್ತು?

ನವಾಜುದ್ದೀನ್‌: ತುಂಬಾನೇ ಚೆನ್ನಾಗಿತ್ತು. ಹೆಚ್ಚುಕಮ್ಮಿ ಸಿನಿಮಾದಂತೆಯೇ. ಆದರೆ, ಅಲ್ಲಿಗಿಂತ ಇಲ್ಲಿ ಅಭಿನಯಕ್ಕೆ ಜಾಸ್ತಿ ಅವಕಾಶ ದೊರೆಯುತ್ತದೆ.

ರಾಧಿಕಾ: ಈ ಹಿಂದೆಯೂ ವೆಬ್‌ಸರಣಿಯಲ್ಲಿ ಅಭಿನಯಿಸಿದ್ದೇನೆ. ಈಗ ಸೈಫ್ ಅಲಿಖಾನ್ ಮತ್ತು ಸಿದ್ಧಿಕಿ ಅವರ ಜತೆ ನಟಿಸಿದ್ದು ಖುಷಿ ಅನಿಸಿತು.

ನಿಮ್ಮ ಪಾತ್ರಗಳ ಬಗ್ಗೆ ಹೇಳಿ...

ನವಾಜುದ್ದೀನ್: ಈ ವೆಬ್ ಸರಣಿಯಲ್ಲಿ ನನ್ನದು ಗ್ಯಾಂಗ್‌ಸ್ಟರ್ ಪಾತ್ರ. ಇಂಥ ಪಾತ್ರಗಳಲ್ಲೂ ನಾನು ಮಾನವೀಯತೆಯನ್ನೇ ಕಾಣಲು ಬಯಸುತ್ತೇನೆ. ಈ ಹಿಂದೆಯೂ ನಾನು ಇಂಥ ಪಾತ್ರಗಳಲ್ಲಿ ನಟಿಸಿದ್ದೇನೆ. ಆದರೆ, ಇಷ್ಟು ಆಳಕ್ಕಿಳಿದು ನಟಿಸಲು ಆಗಿರಲಿಲ್ಲ.

ರಾಧಿಕಾ: ನನ್ನದು ರೀಸರ್ಚ್ ಅಂಡ್ ಅನಾಲಿಸಿಸ್ ವಿಂಗ್ ಏಜೆಂಟ್ ಅಂಜಲಿ ರಾಥೋಡ್ ಅನ್ನುವ ಪಾತ್ರ. ಇದಕ್ಕಾಗಿ ಸಾಕಷ್ಟು ಅಧ್ಯಯನ ನಡೆಸಿದೆ. ಮಾಹಿತಿ ಸಂಗ್ರಹಿಸಿದೆ. ನಿರ್ದೇಶಕ ವಿಕ್ರಮಾದಿತ್ಯ ಮೋಟ್ವಾನಿ ಜತೆ ಚರ್ಚಿಸಿ ಪಾತ್ರಕ್ಕೆ ಸಿದ್ಧವಾದೆ.

ನಿಮ್ಮ ಸಿನಿಮಾಗಳ ಪ್ರತಿ ಪಾತ್ರವೂ ಭಿನ್ನವಾಗಿರುತ್ತದೆಯಲ್ಲ...

ನವಾಜುದ್ದೀನ್: ಹೌದು. ನೋಡಿ ನನಗೆ ಬಾಲಿವುಡ್‌ ಶೈಲಿಯ ಹೀರೋ ಪಾತ್ರಗಳನ್ನು ಮಾಡುವಾಸೆ ಖಂಡಿತಾ ಇಲ್ಲ.

ನನಗೆ ನನ್ನದೇ ಆದ ಆಯ್ಕೆ ಇದೆ. ಹಾಗಂತ ನನಗೆ ಸ್ಟಿರಿಯೊಟೈಪ್ ಹೀರೋ ಪಾತ್ರಗಳನ್ನು ಮುರಿಯಬೇಕೆಂಬ ಹಂಬಲವೂ ಇಲ್ಲ. ನೋಡಿ ನಾನೇ ಸಾದತ್ ಹಸನ್ ಮಂಟೋ ಪಾತ್ರವನ್ನೂ ಮಾಡ್ತೀನಿ. ಅಂತೆಯೇ ಗ್ಯಾಂಗ್‌ಸ್ಟರ್ ಪಾತ್ರವನ್ನೂ ಮತ್ತೊಂದೆಡೆ ಬಾಳಾ ಠಾಕ್ರೆ ಪಾತ್ರವನ್ನೂ ಮಾಡ್ತೀನಿ.

ರಾಧಿಕಾ: ಪಾತ್ರಗಳ ಆಯ್ಕೆಯಲ್ಲಿ ನಾನು ತುಂಬಾ ಚೂಸಿ. ಯಾವುದೇ ಪಾತ್ರವನ್ನು ಮಾಡುವಾಗ ಅದರಲ್ಲಿ ನನಗೆ ಮಜವಿದೆ ಅಂತ ಅನಿಸಬೇಕು. ಎಲ್ಲರೂ ಮಾಡುವ ಪಾತ್ರಗಳನ್ನೇ ಮಾಡಿದರೆ ಅದರಲ್ಲಿ ಭಿನ್ನವೇನಿದೆ? ಹಾಗಾಗಿ ಸವಾಲೆನಿಸುವ ಪಾತ್ರಗಳನ್ನೇ ನಾನು ಮಾಡಲು ಬಯಸುತ್ತೇನೆ.

ಸಿನಿಮಾ ಮತ್ತು ವೆಬ್ ಸರಣಿ ನಡುವಿನ ವ್ಯತ್ಯಾಸವೇನು?

ನವಾಜುದ್ದೀನ್–ರಾಧಿಕಾ: ಸಿನಿಮಾದಲ್ಲಿ ಮೂರು ಗಂಟೆ ತೋರಿಸೋದನ್ನು ವೆಬ್ ಸಿರೀಸ್‌ನಲ್ಲಿ 8 ತಾಸು ತೋರಿಸುತ್ತಾರೆ. ಇದು ನಟರಿಗೆ ಒಂದು ರೀತಿಯ ವರದಾನ. ನಿಮ್ಮ ಪಾತ್ರವನ್ನು ಆಳವಾಗಿ ಹೊಕ್ಕಿ, ಪ್ರತಿ ಫ್ರೇಮ್‌ನಲ್ಲೂ ಪಾತ್ರವೇ ತಾನಾಗಿ ನಟಿಸುವ ಅವಕಾಶ ಇಲ್ಲಿರುತ್ತದೆ. ಶೂಟಿಂಗ್ ಅವಧಿಯಲ್ಲಿ ನಾವು ಒಂದು ದಿನದಲ್ಲೇ ನಮ್ಮ ಪಾತ್ರವನ್ನು ಇಡಿಯಾಗಿ ಆವರಿಸಲು ಸಾಧ್ಯವಾಗದಿದ್ದಾಗ ಮತ್ತೊಂದು ದಿನ ಆ ಪಾತ್ರವನ್ನು ಇಂಪ್ರೂವೈಸ್ ಮಾಡುವ ಸಮಯ ಸಿಗುತ್ತಿತ್ತು. ಹಾಗಾಗಿ, ಇಡೀ ಸರಣಿಯಲ್ಲಿ ತಲ್ಲೀನರಾಗಿ ಅಭಿನಯಿಸಬಹುದು. ಪರಕಾಯ ಪ್ರವೇಶ ಎನ್ನುವುದೂ ಕ್ಲೀಷೆ ಎನಿಸಬಹುದು. ನಾವೇ ಪಾತ್ರವಾಗಲು ಇಲ್ಲಿ ಸಾಕಷ್ಟು ಅವಕಾಶಗಳಿವೆ. ಇದೊಂದು ಹೊಸ ಅನುಭವವಂತೂ ಹೌದು.

ನೆಟ್‌ಫ್ಲಿಕ್ಸ್‌ನಲ್ಲಿ ನಿಮ್ಮಿಷ್ಟದ ಸರಣಿ ಯಾವುದು?

ನವಾಜುದ್ದೀನ್: ನಾರ್ಕೊಸ್ ನನ್ನಿಷ್ಟದ ಸರಣಿ

ರಾಧಿಕಾ: ಕಾರ್ಗೊ ಸೀಸನ್ 3 ನೋಡ್ತಾ ಇದ್ದೀನಿ.

ನೆಟ್‌ಫ್ಲಿಕ್ಸ್‌ ಸರಣಿ ಮತ್ತು ವಿಶೇಷ ಚಿತ್ರಗಳನ್ನು ನೋಡಲು ಚಂದಾದಾರರಾಗಬೇಕು. ಮಾಸಿಕ ಮತ್ತು ವಾರ್ಷಿಕ ಶುಲ್ಕವಿರುತ್ತದೆ. ಸದ್ಯಕ್ಕೆ ಒಂದು ತಿಂಗಳು ಉಚಿತ ಚಂದಾದಾರರಾಗುವ ಅವಕಾಶವನ್ನು ನೆಟ್‌ಫ್ಲಿಕ್ಸ್‌ ಕಲ್ಪಿಸಿದೆ. ವಿಶ್ವ ಸಿನಿಮಾ, ವೆಬ್‌ ಸರಣಿಗಳನ್ನು ನೋಡಬಹುದು. ಒಬ್ಬರು ಚಂದಾದಾರರು 4 ಡಿವೈಸ್‌ಗಳಲ್ಲಿ ಒಟ್ಟೊಟ್ಟಿಗೆಯೂ ವೀಕ್ಷಿಸಬಹುದು. ‘ಸೆಕ್ರೇಡ್ ಗೇಮ್ಸ್’ ಜುಲೈ 6ರಂದು ತೆರೆ ಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.