ADVERTISEMENT

ವಿದ್ಯೆ, ಬುದ್ಧಿಯ ಬೆಸುಗೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 20:29 IST
Last Updated 5 ಜುಲೈ 2018, 20:29 IST
ರಾಧಿಕಾ ಚೇತನ್
ರಾಧಿಕಾ ಚೇತನ್   

ಆಧುನಿಕ ಶಿಕ್ಷಣ ಪದ್ಧತಿಯ ಪರಿಣಾಮವಾಗಿ ಮಕ್ಕಳು ಅಂಕಗಳಿಕೆಗೆ ಸೀಮಿತರಾಗಿದ್ದಾರೆ. ಬಾಂಧವ್ಯದಿಂದ ದೂರ ಉಳಿಯುತ್ತಿದ್ದಾರೆ. ಇದನ್ನೇ ‘ಅಸತೋಮ ಸದ್ಗಮಯ’ ಚಿತ್ರದಲ್ಲಿ ಹೇಳಲು ಹೊರಟಿದ್ದಾರೆ ನಿರ್ದೇಶಕ ರಾಜೇಶ್‌ ವೇಣೂರ್.

ಈ ಚಿತ್ರ ಶುಕ್ರವಾರ ತೆರೆಕಾಣುತ್ತಿದೆ. ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ಸರ್ಕಾರಿ ಶಾಲೆಗಳು ಮುಚ್ಚಲು ಕಾರಣವಾಗುತ್ತಿರುವ ಅಂಶಗಳ ಬಗ್ಗೆಯೂ ಸಿನಿಮಾದಲ್ಲಿ ಹೇಳಲಾಗಿದೆ. ಸಸ್ಪೆನ್ಸ್, ಥ್ರಿಲ್ಲರ್‌, ಕಾಮಿಡಿಯೂ ಇದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

‘ಭಾವುಕತೆ ಮತ್ತು ಬುದ್ಧಿವಂತಿಕೆ ಕುರಿತು ಹೊಸೆದ ಚಿತ್ರ ಇದು. ಪೋಷಕರು ಮಕ್ಕಳಿಗೆ ಪರೀಕ್ಷೆಯ ಕಟ್ಟುಪಾಡು ವಿಧಿಸಿದ್ದಾರೆ. ಅದರಿಂದ ಅವರು ಹೊರಬರುತ್ತಿಲ್ಲ. ಹಾಗಾಗಿ ಮಾನವ ಸಂಬಂಧಗಳು ಮೌಲ್ಯ ಕಳೆದುಕೊಳ್ಳುತ್ತಿವೆ. ಅದನ್ನೇ ಚಿತ್ರದಲ್ಲಿ ಹೇಳಿದ್ದೇವೆ’ ಎಂದರು ನಿರ್ದೇಶಕ ರಾಜೇಶ್‌.

ADVERTISEMENT

‘ಮನೆಗೆ ನೆಂಟರು ಬಂದಾಗಲೂ ಅವರೊಂದಿಗೆ ಮಕ್ಕಳನ್ನು ಮಾತನಾಡಲು ಬಿಡುವುದಿಲ್ಲ. ಪೋಷಕರ ಈ ಮನಸ್ಥಿತಿ ಕುರಿತು ಸಿನಿಮಾದಲ್ಲಿ ಹೇಳಿದ್ದೇವೆ. ಇಂದಿನ ಶೈಕ್ಷಣಿಕ ಅವ್ಯವಸ್ಥೆ ಕುರಿತು ಚಿತ್ರ ಬೆಳಕು ಚೆಲ್ಲಲಿದೆ’ ಎಂದು ವಿವರಿಸಿದರು.

ವಿಭಿನ್ನ ಪಾತ್ರ ಮಾಡಿರುವ ಖುಷಿಯಲ್ಲಿದ್ದರು ನಟಿ ರಾಧಿಕಾ ಚೇತನ್. ‘ಇಂದಿನ ಸಾಮಾಜಿಕ ಸ್ಥಿತಿಗತಿ ಕುರಿತು ಚಿತ್ರ ಮಾತನಾಡುತ್ತದೆ’ ಎಂದ ಅವರ ಮಾತಿನಲ್ಲಿ ಸಿನಿಮಾ ಜನರಿಗೆ ಇಷ್ಟವಾಗಲಿದೆ ಎಂಬ ವಿಶ್ವಾಸವಿತ್ತು.

ಕಿರಣ್‌ರಾಜ್‌ ಈ ಚಿತ್ರದ ನಾಯಕ. ‘ಈ ದೇಶದಲ್ಲಿ ನನ್ನ ಪ್ರತಿಭೆಗೆ ಬೆಲೆಯಿಲ್ಲ. ನನ್ನ ಪ್ರತಿಭೆ ಅನಾವರಣಕ್ಕೆ ವಿದೇಶವೇ ಸೂಕ್ತ ಎಂಬ ಮನಸ್ಥಿತಿ ಇರುವ ಪಾತ್ರ ನನ್ನದು. ಕೊನೆಗೊಂದು ದಿನ ನನ್ನ ತಪ್ಪಿನ ಅರಿವಾಗುತ್ತದೆ. ಭಿನ್ನವಾದ ಪಾತ್ರ ಮಾಡಿರುವ ಖುಷಿಯಿದೆ’ ಎಂದಷ್ಟೇ ಹೇಳಿದರು.

ಲಾಸ್ಯಾ ನಾಗರಾಜ್ ಅವರಿಗೆ ಇದು ಕನ್ನಡದಲ್ಲಿ ಪ್ರಥಮ ಚಿತ್ರ. ಅವರಿಗಾಗಿ ಸಿನಿಮಾದಲ್ಲಿ ಒಂದು ರೊಮ್ಯಾಂಟಿಕ್‌ ಹಾಡು ಕೂಡ ಇದೆಯಂತೆ. ‘ನನ್ನದು ಆಧುನಿಕ ಹುಡುಗಿಯ ಪಾತ್ರ. ಮೊದಲ ಸಿನಿಮಾದಲ್ಲಿಯೇ ಭಿನ್ನವಾದ ‍ಪಾತ್ರ ಸಿಕ್ಕಿರುವುದು ಖುಷಿ ಕೊಟ್ಟಿದೆ’ ಎಂದರು.

ಅಶ್ವಿನ್‌ ಪಿರೇರಾ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರದ ಐದು ಹಾಡುಗಳಿಗೆ ವಹಾಬ್‌ ಸಲೀಂ ಸಂಗೀತ ಸಂಯೋಜಿಸಿದ್ದಾರೆ. ಹಿನ್ನೆಲೆ ಸಂಗೀತ ಮಣಿಕಾಂತ್‌ ಕದ್ರಿ ಅವರದ್ದು. ಕಿಶೋರ್‌ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಎಂಬತ್ತಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.