ADVERTISEMENT

ಏನಿಲ್ಲ ಏನಿಲ್ಲ...

ಪದ್ಮನಾಭ ಭಟ್ಟ‌
Published 15 ಡಿಸೆಂಬರ್ 2017, 10:14 IST
Last Updated 15 ಡಿಸೆಂಬರ್ 2017, 10:14 IST
‘ಇಲ್ಲ’  ಚಿತ್ರದ ದೃಶ್ಯ
‘ಇಲ್ಲ’ ಚಿತ್ರದ ದೃಶ್ಯ   

ಚಿತ್ರ: ಇಲ್ಲ

ನಿರ್ದೇಶಕ: ರಾಜ್‌ ಪ್ರಭು

ನಿರ್ಮಾಪಕ: ಶಂಕರ್‌ ಎನ್.

ADVERTISEMENT

ತಾರಾಗಣ: ರಾಜ್‌ ಪ್ರಭು

ರಾತ್ರಿ ಕಗ್ಗತ್ತಲಲ್ಲಿ ಅವನು ದಾರಿ ತಪ್ಪಿ ಅಲೆಯುತ್ತಿದ್ದಾನೆ. ಕಿವಿಗಡಚಿಕ್ಕುವಂತೆ ಯಾರೋ ‘ಸತೀಶಾ...’ ಎಂದು ಕರೆಯುತ್ತಾರೆ. ಅವನು ‘ಇದೇನಿದು, ಯಾರೋ ಕರೆದ ಹಾಗೆ ಕೇಳಿತಲ್ಲಾ’ ಎನ್ನುತ್ತಾನೆ. ಪಟ್ಟನೆ ಮರದ ಟೊಂಗೆಯೊಂದು ಬೀಳುತ್ತದೆ. ಅವನು ‘ಇದೇನಿದು, ಮರ ಬೀಳ್ತಲ್ಲಾ’ ಎನ್ನುತ್ತಾನೆ. ತೆರೆಯ ಅಂಚಿನಲ್ಲಿ ‘ಮಧ್ಯರಾತ್ರಿ ಹನ್ನೆರಡು ಗಂಟೆ’ ಎಂದು ತೋರಿಸುತ್ತಿರುತ್ತದೆ. ‘ಇದೇನಿದು, ರಾತ್ರಿ ಆಗೋಯ್ತಲ್ಲಾ...’ ಎನ್ನುತ್ತಾನೆ.

ಮೊಬೈಲ್‌ ರಿಂಗಾಗುತ್ತದೆ ‘ಇದೇನಿದು, ಮೊಬೈಲ್‌ ರಿಂಗಾಗ್ತಾ ಇದ್ಯಲ್ಲಾ’ ಎನ್ನುತ್ತಾನೆ... ಅಡುಗೆ ಮನೆಯಲ್ಲಿ ಪಾತ್ರೆ ತೆಗೆದು ನೋಡುತ್ತಾನೆ. ಒಳಗೆ ಖಾಲಿ ಇರುವುದು ಕಾಣಿಸುತ್ತದೆ. ‘ಇದೇನಿದು ಖಾಲಿ ಇದ್ಯಲ್ಲಾ’ ಎನ್ನುತ್ತಾನೆ. ಟಾಯ್ಲೆಟ್‌ನಲ್ಲಿ ಯಾರೋ ಸೇದಿ ಬಿಸಾಕಿ ಹೋದ ಸಿಗರೇಟು ತುಣುಕು ಕಾಣುತ್ತದೆ ‘ಇದೇನಿದು ಯಾರೋ ಸಿಗರೇಟು ಸೇದಿ ಬಿಸಾಕಿ ಹೋಗಿದಾರಲ್ಲಾ’ ಎನ್ನುತ್ತಾನೆ.

ಹೀಗೆ ‘ಇಲ್ಲ’ ಸಿನಿಮಾದುದ್ದಕ್ಕೂ ‘ಇದೇನಿದು’ ಮತ್ತು ’ಇದ್ಯಲ್ಲಾ’ ಎಂಬೆರಡು ಶಬ್ದಗಳೇ ಇಡಿಕಿರಿದಿವೆ. ಅವು ಕಿರಿಕಿರಿ, ರೇಜಿಗೆ ಎಲ್ಲವನ್ನೂ ಹುಟ್ಟಿಸುವಷ್ಟು ಪರಿಣಾಮಕಾರಿಯೂ ಆಗಿವೆ.

ಗೆಳತಿಯನ್ನು ಭೇಟಿಯಾಗಲಿಕ್ಕೆ ಎಂದು ನಗರದ ಹೊರವಲಯಕ್ಕೆ ಹೋದ ನಾಯಕ ದಾರಿ ತಪ್ಪಿ ಕಾಡಿಗೆ ಹೋಗಿ ಅಲ್ಲಿ ಯಾರೋ ಮಾಡಿದ ಮಾಟಕ್ಕೆ ಬಲಿಯಾಗುತ್ತಾನೆ. ಅಲ್ಲಿಂದ ಮನೆಯಲ್ಲಿ ಅವನು ಕಳೆಯುವ ಮೂರು ದಿನಗಳ ಕಥೆಯನ್ನು ಏಕಪಾತ್ರದ ಸಿನಿಮಾ ಮಾಡಿದ್ದಾರೆ ನಿರ್ದೇಶಕ ರಾಜ್‌ ಪ್ರಭು. ಭಿನ್ನ ಚಿತ್ರವಾಗಬೇಕು ಎಂಬ ಹಂಬಲದಿಂದ ಒಂದೇ ಪಾತ್ರದ ಮೂಲಕ ಸಿನಿಮಾ ಕಟ್ಟಲು ನಿರ್ದೇಶಕರು ಪಟ್ಟ ಪಡಿಪಾಟಲು ಪ್ರತಿ ದೃಶ್ಯದಲ್ಲಿಯೂ ಕಾಣುತ್ತದೆ. ಈ ಕಾರಣದಿಂದಲೇ ಈ ಸಿನಿಮಾವನ್ನು ನೋಡುವುದೂ  ಹರಸಾಹಸವಾಗಿಯೇ ಕಾಣುತ್ತದೆ.

ಸಂಭಾಷಣೆ ಇರಲೇಬೇಕು ಎಂಬ ಹಟದಲ್ಲಿ ತೆರೆಯ ಮೇಲೆ ಕಾಣಿಸಿದ್ದನ್ನೇ ಪಾತ್ರದ ಬಾಯಿಯಲ್ಲಿಯೂ ಹೇಳಿಸುತ್ತಾ ಹೋಗಲಾಗಿದೆ. ಇದೊಂದು ರೀತಿಯಲ್ಲಿ ವೀಕ್ಷಕ ವಿವರಣೆ. ಏಕತಾನತೆ ಮುರಿಯಬೇಕು ಎಂಬ ಕಾರಣಕ್ಕೆ ಕೃತಕವಾಗಿ ತುರುಕಿರುವ ಜೋಕಿನ ಹೆಸರಿನ ಮಂಗಾಟಗಳು, ಪೇಲವ ದೆವ್ವ, ಸಿಕ್ಕ ಸಿಕ್ಕ ವಾದ್ಯಗಳನ್ನೆಲ್ಲ ಎಡೆಬಿಡದೇ ಬಡಿಯುತ್ತ ಸಿನಿಮಾ ಬಗೆಗಿನ ರೇಜಿಗೆ ಹೆಚ್ಚಿಸುವ ಹಿನ್ನೆಲೆ ಸಂಗೀತ, ಪೆಕರು ಪೆಕರಾದ ನಟನೆ, ಶರೀರದ ಚಲನೆಗೆ ಹೊಂದಿಕೆಯೇ ಇಲ್ಲದ ಶಾರೀರ... ಹೀಗೆ ಸಿನಿಮಾದಲ್ಲಿ ಸಹನೀಯ ಅಂಶಗಳು ಏನಿವೆ ಎಂಬ ಪ್ರಶ್ನೆಕೆ ಶೀರ್ಷಿಕೆಯೇ ಉತ್ತರ. ಇರುವುದರಲ್ಲಿಯೇ ಕೊಂಚ ಸಹನೀಯ ಎನ್ನಿಸುವುದು ಛಾಯಾಗ್ರಹಣ.

ಅನುಭವದ ದೃಷ್ಟಿಯಿಂದ ಅಲ್ಲದಿದ್ದರೂ ತೆರೆಯ ಮೇಲಿನ ಹಲವು ಸಂಭಾಷಣೆಗಳು ಅಡ್ಡದಾರಿಯಲ್ಲಿ ಪ್ರೇಕ್ಷಕನಿಗೆ ಕನೆಕ್ಟ್‌ ಆಗುತ್ತವೆ. ಸಿನಿಮಾದ ದ್ವಿತೀಯಾರ್ಧದಲ್ಲಿ ನಾಯಕನಿಗೆ ದೂರವಾಣಿ ಕರೆ ಬರುತ್ತದೆ. ಅತ್ತಲಿಂದ ಮಾತಾಡುವವನು ‘ಏನೋ ಸತೀಶಾ... ಬದ್ಕಿದ್ದೀಯೇನೋ’ ಎಂದು ಕೇಳುತ್ತಾನೆ. ‘ಹೂ ಕಣೋ’ ಎನ್ನುವ ನಾಯಕನಿಗೆ ನಾವೂ ಧ್ವನಿಗೂಡಿಸಬೇಕು ಅನಿಸುತ್ತದೆ. ಹಾಗೆಯೇ ದೆವ್ವ ನಾಯಕನಿಗೆ ಸಣ್ಣ ಸಣ್ಣ ಚೆಂಡುಗಳಿಂದ ಹೊಡೆಯುವ ದೃಶ್ಯವೂ ಇದೆ. ಇಲ್ಲಿ ದೆವ್ವವನ್ನು ಸಿನಿಮಾ ನೋಡುತ್ತಿರುವ ನಮ್ಮ ಪ್ರತಿನಿಧಿಯಾಗಿ ಭಾವಿಸಿಕೊಂಡು ಆನಂದಿಸಬಹುದು.

‘ಬ್ಲಾಕ್‌ ಮ್ಯಾಜಿಕ್‌’ ಕತೆಯನ್ನು ಇಟ್ಟುಕೊಂಡು ಮಾಡಿರುವ ‘ಇಲ್ಲ’ದಲ್ಲಿ ಬೆಚ್ಚಿ ಬೀಳಿಸುವ ಒಂದೇ ಅಂಶ, ಸಿನಿಮಾದ ಕೊನೆಯಲ್ಲಿ ಬರುವ ‘ಇಲ್ಲ 2’ ಸದ್ಯದಲ್ಲಿಯೇ ಬರುತ್ತದೆ ಎಂಬ ಸೂಚನೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.