ADVERTISEMENT

ಕಂಪನದ ಯಃಕಶ್ಚಿತ್‌ ಆಟ

ಚಿತ್ರ: ಸ್ಯಾನ್‌ ಆಂಡ್ರಿಯಾಸ್‌ (ಇಂಗ್ಲಿಷ್‌)

ವಿಶಾಖ ಎನ್.
Published 29 ಮೇ 2015, 19:30 IST
Last Updated 29 ಮೇ 2015, 19:30 IST
ಕಂಪನದ ಯಃಕಶ್ಚಿತ್‌ ಆಟ
ಕಂಪನದ ಯಃಕಶ್ಚಿತ್‌ ಆಟ   

* ನಿರ್ಮಾಣ: ಬ್ಯೂ ಫ್ಲಿನ್‌, ಹಿರಮ್‌ ಗಾರ್ಸಿಯಾ, ಟ್ರಿಪ್‌ ವಿನ್ಸನ್‌.
* ನಿರ್ದೇಶನ: ಬ್ರಾಡ್‌ ಪೇಟನ್‌
* ತಾರಾಗಣ: ಡ್ವೇನ್‌ ಜಾನ್ಸನ್‌, ಕಾರ್ಲಾ ಗುಗಿನೊ, ಅಲೆಗ್ಸಾಂಡ್ರಾ ಡಡಾರಿಯೊ, ಹ್ಯುಗೊ ಜಾನ್ಸ್‌ಟೋನ್‌–ಬರ್ಟ್‌, ಪಾಲ್‌ ಗಿಯಾಮಟಿ ಮತ್ತಿತರರು.


ಸುಮಾರು 630 ಕೋಟಿ ರೂಪಾಯಿ ಬಜೆಟ್‌ನ ಸಿನಿಮಾ ತಾಂತ್ರಿಕವಾಗಿ ಒಂದು ಮಟ್ಟಕ್ಕೆ ಚೆಂದವಾಗಿ ಇರಲೇಬೇಕು. ಪ್ರಕೃತಿ ವೈಪರೀತ್ಯಗಳ ಕಥನದ ಸಿನಿಮಾ ಇದಾಗಿರುವುದರಿಂದ ಖರ್ಚಿಗೆ ಅರ್ಥವೂ ಇದೆ.

ಆದರೆ, ನಿರ್ದೇಶಕ ಬ್ರಾಡ್‌ ಪೇಟನ್‌ ಭೂಕಂಪ, ಸುನಾಮಿಯ ಭವ್ಯ ಕಥನವನ್ನು ‘ಫ್ಯಾಂಟಸಿ’ ಆಟದಂತೆ ತೋರಿಸಿದ್ದಾರೆಯೇ ವಿನಾ ಅದರ ಭಾವತೀವ್ರತೆಯನ್ನು ಕಟ್ಟುವ ಗೊಡವೆಗೆ ಹೋಗಿಲ್ಲ.

ಕಾರ್ಲ್‌ಟನ್‌ ಕ್ಯೂಸ್‌ ಚಿತ್ರಕಥೆಯಲ್ಲಿ ಗ್ರಾಫಿಕ್‌ ಹಾಗೂ ತಾಂತ್ರಿಕ ಸೂಕ್ಷ್ಮಗಳ ದಟ್ಟ ವಿವರಗಳು ಇಡುಕಿರಿದಿರಲಿಕ್ಕೆ ಸಾಕು. ಅದಕ್ಕೇ ಸಿನಿಮಾ ಯಾವುದೋ ವಿಡಿಯೊ ಗೇಮ್‌ನಂತೆ ನಿರ್ಭಾವುಕವಾಗಿ ನೋಡಿಸಿಕೊಳ್ಳುತ್ತದಷ್ಟೆ.

ಸಂಕಷ್ಟಕ್ಕೆ ಸಿಲುಕಿದವರನ್ನು ರಕ್ಷಿಸುವ ಸಿಬ್ಬಂದಿ ಈ ನಾಯಕ. ಅವನ ಬದುಕಿನಲ್ಲೇ ಸಂಕಷ್ಟ. ಹೆಂಡತಿ ಅವನನ್ನು ಬಿಟ್ಟು, ಧನವಂತನ ಹಿಂದೆ ಹೊರಟಿದ್ದೂ ಅವನ ಪಾಲಿಗೆ ಮನೋಭೂಕಂಪವೇ. ಅವನಿಗೊಬ್ಬ ಮುದ್ದಿನ ಮಗಳು.
ಅಪ್ಪನ ಬಿಡಲಾರಳು, ಅಮ್ಮನತೊರೆಯಲಾರಳು.

ಇಂಥ ಸಂದರ್ಭದಲ್ಲಿಯೇ ಅಮೆರಿಕದಲ್ಲಿ ಸರಣಿ ಭೂಕಂಪ.  ಅದರಲ್ಲಿ ಸಿಲುಕುವ ತನ್ನವರನ್ನು ನಾಯಕ ರಕ್ಷಿಸಿಕೊಳ್ಳುವ ರೋಮಾಂಚಕ ಕಥನವೇ ಸಿನಿಮಾ.

‘3 ಡಿ’ ನೋಟದಲ್ಲಿ ಆಟಿಕೆಯಂತೆ ಕಾಣುವ ಹೆಲಿಕಾಪ್ಟರ್‌, ಒಂದರ ಮೇಲೊಂದು ಬೀಳುವ ಇಮಾರತ್ತುಗಳು, ಸುನಾಮಿ ಅಲೆಗೆ ಇದಿರಾಗಿ ನಾಯಕ ಮೋಟಾರ್‌ ಬೋಟನ್ನು ಓಡಿಸಿಕೊಂಡು ಹೋಗುವುದು... ಇವೆಲ್ಲವುಗಳನ್ನು ಗ್ರಾಫಿಕ್‌ ಶ್ರೀಮಂತಿಕೆಯಲ್ಲಿ ತೋರಿಸುವ ಸಿನಿಮಾ ಮಂಕೆನಿಸುವುದು ಭಾವಶೂನ್ಯತೆಯ ಕಾರಣಕ್ಕೆ. ನಾಯಕನ ಕುಟುಂಬವೊಂದನ್ನು ಹೊರತುಪಡಿಸಿ ಬೇರೆ ಯಾರ ರೋದನವನ್ನೂ ನಿರ್ದೇಶಕರು ಕೇಳಿಸಿಕೊಳ್ಳದೇ ಇರುವುದು ದೊಡ್ಡ ಲೋಪ.

ನಾಯಕನ ಪತ್ನಿ ಕಣ್ಣೀರಿಡುವಾಗ, ಮನದನ್ನೆಗೆ ನೀಲಿಗಣ್ಣಿನ ಹುಡುಗ ಮುತ್ತು ಕೊಡುವಾಗ, ಇನ್ನೇನು ಮಡದಿ ಸತ್ತೇಹೋದಳು ಎಂದುಕೊಳ್ಳುಷ್ಟರಲ್ಲಿ ನಾಯಕನಿಗೆ ಅವಳು ಸಿಕ್ಕಾಗ, ಕೊನೆಯಲ್ಲಿ ಮಗಳು ಹೋರಾಡಿ ನಿಟ್ಟುಸಿರು ಹೊರಹಾಕಿದಾಗ ಈ ಯಾವ ಭಾವುಕ ಸನ್ನಿವೇಶಗಳಲ್ಲೂ ಮನಮಿಡಿಯುವ ದೃಶ್ಯ ಕುಶಲತೆ ಇಲ್ಲ.

ಬಂಡೆಗಲ್ಲುಗಳ ಮೇಲೆ ವಿಪತ್ತು ಎರಗಿತೆಂಬಂತೆ ನಿರ್ದೇಶಕರು ಎಲ್ಲವನ್ನೂ ಪ್ರಕಟಪಡಿಸುತ್ತಾರೆ. ನಾಯಕನ ಮಗಳ ಪ್ರೇಮಿಯ ತಮ್ಮನ ಪಾತ್ರಧಾರಿ (ಆರ್ಟ್‌ ಪಾರ್ಕಿನ್ಸನ್‌) ಮಾತ್ರ ಈ ವಿಷಯಕ್ಕೆ ಅಪವಾದ ಎಂಬಂತೆ ನಟಿಸಿದ್ದಾನೆ.

ನಾಯಕ ಡ್ವೇನ್‌ ಜಾನ್ಸನ್‌ ಹಲಸಿನ ಹಣ್ಣಿನ ಗಾತ್ರದ ತೋಳುಗಳು ಗಮನಸೆಳೆಯುವಷ್ಟು ಅವರ ಅಭಿನಯ ಆಕರ್ಷಿಸುವುದಿಲ್ಲ.

ಅವರ ಮಗಳ ಪಾತ್ರದಲ್ಲಿ ಅಲೆಗ್ಸಾಂಡ್ರಾ ಡಡಾರಿಯೊ ಅಲ್ಲಲ್ಲಿ ಅಭಿನಯ ಲಾಲಿತ್ಯ ತೋರಿದ್ದಾರೆ. ದುರಂತ ಕಥನವೊಂದನ್ನು ಮಾನವೀಯ ಸೂಕ್ಷ್ಮಗಳ ಸಹಿತ ಹೇಗೆ ಸಿನಿಮಾ ಮಾಡಬೇಕು ಎನ್ನುವುದಕ್ಕೆ ‘ಟೈಟಾನಿಕ್‌’ನಂಥ ಅದ್ಭುತ ಮಾದರಿ ಎದುರಲ್ಲಿ ಇದೆ. ಬ್ರಾಡ್‌ ಪೇಟನ್‌ ಯಾಕೋ ಅದಕ್ಕೆ ಬೆನ್ನುಮಾಡಿ, ಪ್ರಕೃತಿ ವಿಕೋಪವನ್ನೂ ತಮಾಷೆಯ ಸಿನಿಮಾದಂತೆ ಮಾಡಿರುವುದು ಒಂದು ದುರಂತವೇ ಸರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT