ADVERTISEMENT

ಕಳೆದುಹೋಗಿರುವುದೇ ಹೆಚ್ಚು!

ಚಿತ್ರ : ‘ಕಳ್ದೋಗ್ಬಿಟ್ಟೆ’

ಆನಂದತೀರ್ಥ ಪ್ಯಾಟಿ
Published 27 ಮಾರ್ಚ್ 2015, 19:30 IST
Last Updated 27 ಮಾರ್ಚ್ 2015, 19:30 IST

ನಿರ್ಮಾಪಕ, ನಿರ್ದೇಶಕ: ಉದಯ್ ಪ್ರೇಮ್

ತಾರಾಗಣ: ಅಶು ಅಶೋಕ್, ಪೂಜಿತಾ, ಬಲರಾಮ್, ಬ್ಯಾಂಕ್‌ ಜನಾರ್ದನ್, ಡಿಂಗ್ರಿ ನಾಗರಾಜ್, ಭವ್ಯಾ ಇತರರು

ಹೇಳಿಕೊಳ್ಳುವಂಥ ಗಟ್ಟಿ ಕಥೆಯೂ ಇಲ್ಲ. ಪಾತ್ರಗಳಲ್ಲಿ ತಾಕತ್ತಿಲ್ಲ. ಚಿತ್ರಕಥೆಗೆ ಹೊಂದದ ಉಪಕಥೆಗಳೇ ಹೆಚ್ಚು. ಊಟಕ್ಕಿಂತ ಸಪ್ಪೆ ಉಪ್ಪಿನಕಾಯಿಯೇ ಹೆಚ್ಚು ಎಂಬಂತೆ ಬಾರು, ಬೀರುಗಳ ಸುದೀರ್ಘ ದೃಶ್ಯ. ಪ್ರೇಮದ ಕಥೆಯೊಂ ದನ್ನು ಹೇಳಲು ಹೊರಟ ನಿರ್ದೇಶಕ ಉದಯ್ ಪ್ರೇಮ್, ಕಥೆಯ ಎಳೆಗೆ ಅಂಟಿಕೊಂಡಿದ್ದಕ್ಕಿಂತ ಜಾರಿದ್ದೇ ಜಾಸ್ತಿ. ಕೊನೆಗೂ ‘ಕಳ್ದೋಗ್ಬಿಟ್ಟೆ’ ಅಂತ ಹೇಳು ವುದು ಪ್ರೇಕ್ಷಕನೋ, ನಾಯಕನೋ ಗೊತ್ತಾಗದಂಥ ಅಯೋಮಯ ಸ್ಥಿತಿ!

ಸಾಮಾನ್ಯ ಪ್ರೇಮಕಥೆಯನ್ನು ನಿರೂಪಿಸಲು ಸಿದ್ಧಸೂತ್ರಗಳನ್ನು ಗಟ್ಟಿ ಯಾಗಿ ನೆಚ್ಚಿಕೊಂಡಿರುವುದು ಉದಯ್ ಅವರಿಗೆ ಹೆಚ್ಚೇನೂ ಫಲ ನೀಡಿದಂತಿಲ್ಲ. ಪೋಸ್ಟ್‌ಮ್ಯಾನ್ ನಾಯಕ ಹಾಗೂ ಬಿಎಂಟಿಸಿ ಕಂಡಕ್ಟರ್ ನಾಯಕಿ ಮಧ್ಯೆ ಇಬ್ಬಿಬ್ಬರು ವಿಲನ್‌ಗಳು ಬೇಕು; ನಾಯಕಿ ಯನ್ನು ವಿಲನ್ ಬಲಾತ್ಕಾರ ಮಾಡಬೇಕು ಹಾಗೂ ಆಗ ನಾಯಕ ಕಾಪಾಡಬೇಕು ಎಂಬ ಸವಕಲು ಸೂತ್ರಗಳು ಇದರಲ್ಲಿವೆ. ಹೀಗಾಗಿ ಮೇಲ್ನೋಟಕ್ಕೆ ಇದೊಂದು ಮಾಮೂಲಿ ಲವ್‌ಸ್ಟೋರಿ ಎಂಬ ಭಾವನೆ ಮೂಡಿ ಬಿಡುತ್ತದೆ. ಮುಂದಿನ ದೆಲ್ಲ ಪ್ರೇಕ್ಷಕ ಊಹಿಸಿದಂತೆಯೇ ನಡೆಯುತ್ತದೆ.

ಕಥೆಗೆ ಒಂದಷ್ಟು ತಿರುವುಗಳನ್ನು ಕೊಡಲು ನಿರ್ದೇಶಕರು ಕಷ್ಟಪಟ್ಟಿದ್ದಾರೆ. ನಾಯಕನ ಮೂತ್ರಪಿಂಡ ವಿಫಲವಾ ದಾಗ, ನಾಯಕಿ ತನ್ನ ಮೂತ್ರಪಿಂಡ ದಾನ ಮಾಡುವುದು, ಬಾರ್‌ನಲ್ಲಿ ಸ್ನೇಹಿತನ ಜತೆ ಕೂರುವ ನಾಯಕನಿಗೆ ಜೀವನದ ಕುರಿತು ‘ಜ್ಞಾನೋ ದಯ’ ವಾಗುವುದು, ಕಣ್ಣು ಕಳೆದು ಕೊಂಡ ಬಾಲಕನಿಗೆ ನಾಯಕ ನೇತ್ರ ದಾನ ಮಾಡುವುದು... ಈ ದೃಶ್ಯಗಳಾ ದರೂ ಪರಿಣಾಮಕಾರಿಯಾಗಿ ಮೂಡಿಬರ ಬೇಕಿತ್ತು. ನಾಯಕ ಅಶು ಅಶೋಕ್ ಹಾಗೂ ನಾಯಕಿ ಪೂಜಿತಾ ಅಭಿನಯಕ್ಕೆ ತೀರಾ ಹೊಸಬರು ಎಂಬುದು ತಕ್ಷಣ ಗೊತ್ತಾಗಿಬಿಡುತ್ತದೆ. ಈವರೆಗೆ ಮಚ್ಚು–ಲಾಂಗುಗಳ ಹೊಡೆತ ನೋಡಿದ್ದ ಪ್ರೇಕ್ಷಕ ರಿಗೆ, ದೊಡ್ಡ ಸ್ಪ್ಯಾನರ್‌ನಿಂದ ದುಷ್ಟರ ಮರ್ಮಾಂಗಕ್ಕೆ ನಾಯಕ ಹೊಡೆಯುವ ಹೊಸ ಬಗೆಯ ಫೈಟ್‌ ಹೇಗೆ ಅನ್ನಿಸು ತ್ತದೋ?! ಹಿರಿಯ ನಟಿ ಭವ್ಯ ಅವರದು ವಿಶೇಷ ಪಾತ್ರ ವಾಗಿದ್ದು, ರೇಡಿಯೋ ಸಂವಾದದಲ್ಲಿ ಒಂದು ಹಾಡು– ನಾಲ್ಕಾರು ಮಾತು ಹೇಳಿ ಎದ್ದು ಹೋಗುತ್ತಾರೆ.

ಆರಂಭದಿಂದ ಕೊನೆಯವರೆಗೆ ಏಕತಾನತೆ ಕಾಡದಿರಲಿ ಎಂಬ ಉದ್ದೇಶ ದಿಂದ ಸೇರಿಸಲಾದ ಹಾಸ್ಯ ದೃಶ್ಯಗಳು ನಗೆ ಮೂಡಿಸುವಲ್ಲಿ ಸೋಲುತ್ತವೆ. ಶ್ರೀಹರ್ಷ ಸಂಗೀತ ಹೊಸೆದ ಹಾಡು ಗಳಲ್ಲಿ ಎರಡು ಗಮನ ಸೆಳೆಯುವಂತಿವೆ. ಕುಮಾರ್ ಚಕ್ರವರ್ತಿ ಕ್ಯಾಮೆರಾದಲ್ಲಿ ವಿಶೇಷವೇನಿಲ್ಲ. ಪ್ರೇಮಿಗಾಗಿ ಪೋಸ್ಟ್‌ ಮ್ಯಾನ್‌ ಕೆಲಸ ಬಿಡುವ ನಾಯಕ, ಬಳಿಕ ಕಿಡ್ನಿ ಕಳೆದು ಕೊಂಡು ಆ ನಂತರ ಪ್ರಿಯತಮೆಯನ್ನೂ ಕಳೆದುಕೊಳ್ಳುತ್ತಾನೆ. ಆತನ ದುಸ್ಥಿತಿ ಯನ್ನು ‘ಕಳ್ದೋಗ್ಬಿಟ್ಟೆ’ ಎಂಬ ಪದದ ಮೂಲಕ ಬಿಂಬಿಸಲಾ ಗಿದೆ. ನಿರೂಪಣೆ ಇನ್ನೊಂದಷ್ಟು ಚುರು ಕಾಗಿದ್ದರೆ ಪ್ರೇಕ್ಷಕರೂ ಚಿತ್ರದಲ್ಲಿ ಮುಳುಗಿ ಕಳೆದು ಹೋಗುತ್ತಿದ್ದ ರೇನೋ? ಆದರೆ ನೇರ ದಾರಿಯಲ್ಲಿ ಓಡದ, ಸಂಬಂಧಿ ಸದ ದೃಶ್ಯಗಳೇ ಹೆಚ್ಚು ತುಂಬಿರುವ ಈ ಚಿತ್ರ ನೋಡುವಾಗ ಪ್ರೇಕ್ಷಕ ಕಳೆದು ಹೋಗಲು ಹೇಗೆ ಸಾಧ್ಯ?!

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.