ADVERTISEMENT

ಚೆಲ್ಲಾಪಿಲ್ಲಿ ‘ಅಕ್ಷತೆ’

​ಪ್ರಜಾವಾಣಿ ವಾರ್ತೆ
Published 22 ಜುಲೈ 2016, 11:02 IST
Last Updated 22 ಜುಲೈ 2016, 11:02 IST
ಚೆಲ್ಲಾಪಿಲ್ಲಿ ‘ಅಕ್ಷತೆ’
ಚೆಲ್ಲಾಪಿಲ್ಲಿ ‘ಅಕ್ಷತೆ’   

ಚಿತ್ರ: ‘ಅಕ್ಷತೆ’
ನಿರ್ಮಾಪಕರು: ಸಂಜೀವ್ ಶೆಟ್ಟಿ, ವೆಂಕಟೇಶ್
ನಿರ್ದೇಶಕ: ರಾಜು ದೇವಸಂದ್ರ
ತಾರಾಗಣ: ಕಾರ್ತೀಕ್ ಶೆಟ್ಟಿ, ಮೈತ್ರಿಯಾ ಗೌಡ, ವಿನಯಾ ಪ್ರಕಾಶ್, ರಾಜ್ ಸೂರ್ಯನ್

ಪ್ರಾಮಾಣಿಕವಾಗಿ ಕೆಲಸ ಮಾಡುವ ಜಿಲ್ಲಾಧಿಕಾರಿಯನ್ನು ಹತ್ಯೆ ಮಾಡುವುದು ತೀರಾ ಸುಲಭ. ಆ ಖದೀಮರನ್ನು ಪತ್ತೆ ಹಚ್ಚುವುದು ಕಷ್ಟ. ಯಾಕೆಂದರೆ, ಕೊಲೆಗಡುಕರಿಗೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ರಕ್ಷಣೆ ಇರುತ್ತದೆ. ಅಂಥ ಸ್ಥಿತಿಯಲ್ಲೂ ನಿಷ್ಠೆಯಿಂದ ತನಿಖೆ ಮಾಡುವ ಇನ್‌ಸ್ಪೆಕ್ಟರ್, ಕೊಲೆಗಾರರನ್ನು ಪತ್ತೆ ಹಚ್ಚಿ ಬಲಿ ಹಾಕುತ್ತಾನೆ. ಈ ಹಂತದಲ್ಲಿ ನಡೆಯುವುದೆಲ್ಲ ಪ್ರೇಕ್ಷಕನ ಊಹೆಯಂತೆಯೇ ಎಂಬುದು ‘ಅಕ್ಷತೆ’ ಚಿತ್ರದ ವೈಶಿಷ್ಟ್ಯ!

ಬಡತನದಲ್ಲಿ ಬೆಳೆಯುವ ಬಾಲಕ ಅರ್ಜುನ್ ಜಿಲ್ಲಾಧಿಕಾರಿಯಾಗಿ ನೇಮಕಗೊಂಡು, ಆ ಅಧಿಕಾರವನ್ನು ಜನರ ಒಳಿತಿಗಾಗಿ ಬಳಸಿಕೊಳ್ಳುವ ಕಥೆ ಇದು. ಆತನ ಸರಳತೆ, ಪ್ರಾಮಾಣಿಕತೆಯನ್ನು ಯಾರೂ ಪ್ರಶ್ನಿಸುವಂತಿಲ್ಲ. ಅದೇ ಆತನ ಪ್ರಾಣಕ್ಕೆ ಎರವಾಗುತ್ತದೆ. ಆ ಬಳಿಕ ತನಿಖೆ ನಡೆಯುತ್ತಿದೆ; ಅದನ್ನು ತಡೆಯಲು ಮೇಲಧಿಕಾರಿಗಳು ಪ್ರಯತ್ನಿಸುತ್ತಾರೆ; ಹಾಗಿದ್ದರೂ ಪಟ್ಟು ಬಿಡದೇ ಇನ್‌ಸ್ಪೆಕ್ಟರ್ ಅಭಿ ತನ್ನ ಗುರಿ ತಲುಪುತ್ತಾನೆ... ಇತ್ಯಾದಿ ಇತ್ಯಾದಿ. ಮೇಲ್ನೋಟಕ್ಕೆ ಇದೊಂದು ಒಳ್ಳೆಯ ಸಂದೇಶ ರವಾನಿಸುವ ಸಿನಿಮಾ ಎನ್ನುವಂತೆ ಕಾಣುತ್ತದೆ; ಆದರೆ ಕೊನೆಕೊನೆಗೆ ಏನೂ ನೆನಪಿನಲ್ಲಿ ಉಳಿಯುವುದಿಲ್ಲ.

ಡಿ.ಸಿ ಕಾರ್ಯವೈಖರಿ ಹೇಗಿರುತ್ತದೆ ಎಂಬುದನ್ನು ನಿರ್ದೇಶಕರು ಒಂದಷ್ಟು ಅಧ್ಯಯನ ಮಾಡಿದ್ದರೆ ಚೆನ್ನಾಗಿರುತ್ತಿತ್ತು. ‘ಅಕ್ಷತೆ’ಯ ಜಿಲ್ಲಾಧಿಕಾರಿ ವಿದ್ಯಾರ್ಥಿಗಳ ಎದುರು ಭರ್ಜರಿ ಭಾಷಣ ಮಾಡುತ್ತಾನೆ. ಪ್ರಿಯತಮೆಯ ಜತೆ ನಂದಿಬೆಟ್ಟ ಮತ್ತಿತರ ಉದ್ಯಾನಗಳಲ್ಲಿ ಆಕರ್ಷಕವಾಗಿ ನೃತ್ಯ ಮಾಡುತ್ತಾನೆ. ಆತನ ಕೆಲಸದ ಸ್ವರೂಪ ಏನೆಂದು ಪ್ರೇಕ್ಷಕ ತಲೆಕೆಡಿಸಿಕೊಳ್ಳುವ ಹೊತ್ತಿಗೆ ಸಿನಿಮಾ ಅರ್ಧ ಭಾಗಕ್ಕೆ ಮುಟ್ಟಿರುತ್ತದೆ. ಇನ್ನೇನು ನಾಳೆಯೇ ಮದುವೆ ಎನ್ನುವ ಸಂದರ್ಭದಲ್ಲಿ ಆತ ಗಣಿ ಮಾಫಿಯಾದ ಬೆನ್ನಹಿಂದೆ ಬೀಳುತ್ತಾನೆ, ಅಲ್ಲಿಗೆ ಆತನ ಕಥೆ ಅಷ್ಟೇ!

‘ಪ್ರಾಮಾಣಿಕ ಜಿಲ್ಲಾಧಿಕಾರಿಯೊಬ್ಬರ ನಿಗೂಢ ದುರಂತ’ ಎಂಬ ಅಡಿಬರಹದೊಂದಿಗೆ ರಾಜು ದೇವಸಂದ್ರ ಈ ಚಿತ್ರ ನಿರ್ದೇಶಿಸಿದ್ದಾರೆ. ಆದರೆ ಆ ಛಾಪು ಎಲ್ಲೂ ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಪ್ರಿಯತಮೆಯ ಜೊತೆ ಮಾತಾಡಲು ಪದೇ ಪದೇ ಪರದಾಡುವ ಡಿ.ಸಿ ಪಾಡನ್ನು ನೋಡಿದರೆ ಅಯ್ಯೋ ಅನಿಸುತ್ತದೆ.

ಅದಕ್ಕಿಂತಲೂ ಇನ್‌ಸ್ಪೆಕ್ಟರ್ ಪಾತ್ರ ಪೋಷಣೆ ಚೆನ್ನಾಗಿದೆ. ಜಿಲ್ಲಾಧಿಕಾರಿಯಾಗಿ ಕಾರ್ತೀಕ್ ಶೆಟ್ಟಿ ಅಭಿನಯಕ್ಕಿಂತ ಇನ್‌ಸ್ಪೆಕ್ಟರ್ ರಾಜ್ ಸೂರ್ಯನ್ ಆರ್ಭಟವೇ ಚೆಂದ. ನಾಯಕಿ ಮೈತ್ರಿಯಾ ಗೌಡ ಮರ ಸುತ್ತಲಿಕ್ಕಷ್ಟೇ ಸೀಮಿತ. ಚಿಕ್ಕ ಪಾತ್ರಗಳಲ್ಲಿ ವಿನಯಾ ಪ್ರಕಾಶ್, ಅವಿನಾಶ್ ಗಮನ ಸೆಳೆಯುತ್ತಾರೆ. ಉಳಿದಂತೆ ಹಾಡುಗಳಾಗಲೀ (ವಿ. ಮನೋಹರ್), ಛಾಯಾಗ್ರಹಣವಾಗಲೀ (ಎನ್.ವಿ. ನಂದಕುಮಾರ್) ಚಿತ್ರಕ್ಕೆ ಯಾವ ಕೊಡುಗೆಯನ್ನೂ ನೀಡುವುದಿಲ್ಲ.

ಅಧಿಕಾರಿಗಳ ಜನಪರ ಕಾಳಜಿಯನ್ನು ಸಿನಿಮೀಯವಾಗಿಯಾದರೂ ಬಿಂಬಿಸುವ ಅವಕಾಶವನ್ನು ನಿರ್ದೇಶಕರು ಕಳೆದುಕೊಂಡಿದ್ದಾರೆ. ಅರ್ಧ ಪ್ರೇಮದಾಟಕ್ಕೂ ಇನ್ನರ್ಧ ಹಂತಕರ ಬೇಟೆಗೂ ಮೀಸಲಿಟ್ಟು ಸಿನಿಮಾ ಮಾಡಿ ಕೈತೊಳೆದುಕೊಳ್ಳುವ ‘ಅಕ್ಷತೆ’ಯ ಮೂಲ ಆಶಯವೇ ಇಲ್ಲಿ ನಾಪತ್ತೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT