ADVERTISEMENT

ಟೈಗರ್‌ ಗಲ್ಲಿಯೆಂಬ ವಿಧ್ವಂಸಕ ಕೃತ್ಯ!

ಪದ್ಮನಾಭ ಭಟ್ಟ‌
Published 27 ಅಕ್ಟೋಬರ್ 2017, 10:16 IST
Last Updated 27 ಅಕ್ಟೋಬರ್ 2017, 10:16 IST
ಟೈಗರ್‌ ಗಲ್ಲಿಯೆಂಬ ವಿಧ್ವಂಸಕ ಕೃತ್ಯ!
ಟೈಗರ್‌ ಗಲ್ಲಿಯೆಂಬ ವಿಧ್ವಂಸಕ ಕೃತ್ಯ!   

ಸಿನಿಮಾ: ಟೈಗರ್‌ ಗಲ್ಲಿ

ನಿರ್ಮಾಪಕ: ಯೋಗೇಶ್‌ ಕುಮಾರ್‌

ನಿರ್ದೇಶಕ: ರವಿ ಶ್ರೀವತ್ಸ

ADVERTISEMENT

ತಾರಾಗಣ: ನೀನಾಸಂ ಸತೀಶ್‌, ರೋಶಿನಿ ಪ್ರಕಾಶ್‌, ಭಾವನಾ, ಯಮುನಾ ಶ್ರೀನಿಧಿ, ಶಿವಮಣಿ, ಬಿ.ಎಂ. ಗಿರಿರಾಜ್‌

ಬೆಂಗಳೂರಿನ ತಿಗಳರ ಪೇಟೆಯ ದನ–ಕುರಿ ಸಾಕುವ ಹೆಂಗಸೊಬ್ಬಳು ಸೊಂಟದಲ್ಲಿ ತಲವಾರು ಇಟ್ಟುಕೊಂಡು ರಾಜ್ಯದ ಮುಖ್ಯಮಂತ್ರಿ ಮನೆಯೊಳಗೆ ಸಲೀಸು ಹೋಗಿ ಕೂತಿರುತ್ತಾಳೆ. ಅಷ್ಟೇ ಸಲೀಸಾಗಿ ರಿವ್ವ ರಿವ್ವನೇ ತಲವಾರ್‌ ಬೀಸಿಕೊಂಡು ಹೋಗಿ ಮುಖ್ಯಮಂತ್ರಿಯ ಮಗನ ಕತ್ತನ್ನು ಕತ್ತರಿಸಿಯೂ ಬಿಡುತ್ತಾಳೆ!

ಇದು ‘ಟೈಗರ್‌ ಗಲ್ಲಿ’ ಸಿನಿಮಾದ ಆರಂಭದ ದೃಶ್ಯ. ಆ ಹೆಂಗಸಿನ ಹಣೆಯ ಮೇಲಿನ ಕಾಸಗಲ ಕುಂಕುಮದಿಂದ ಆರಂಭವಾಗುವ ಕೆಂಬಣ್ಣ ಇಡೀ ಸಿನಿಮಾದುದ್ದಕ್ಕೂ ನೆತ್ತರ ಕೋಡಿಯಾಗಿ ವ್ಯಾಪಿಸಿದೆ. ‘‘ಟೈಗರ್‌ ಗಲ್ಲಿ’ಗೆ ಬರುವವರು ಸೊಕ್ಕು, ಸೆಡವು, ಧಿಮಾಕು, ಗಾಂಚಾಲಿಗಳನ್ನು ಬಿಟ್ಟು ಬರಬೇಕು’ ಎಂಬ ಡೈಲಾಗ್‌  ಟ್ರೈಲರ್‌ನಲ್ಲಿಯೇ ಗಮನಸೆಳೆದಿತ್ತು. ಈ ಬಿಟ್ಟುಬರುವ ಸಂಗತಿಗಳ ಲಿಸ್ಟಿಗೆ ಪ್ರೇಕ್ಷಕನ ಮಿದುಳನ್ನೂ ಧಾರಾಳವಾಗಿ ಸೇರಿಸಬಹುದು!

ಆ ಗಲ್ಲಿಯಲ್ಲಿ ಎಲ್ಲವೂ ತರ್ಕ ಮೀರಿಯೇ ನಡೆಯುತ್ತದೆ. ಜಗದ ಕೇಡೆಲ್ಲವೂ ಮನುಷ್ಯರೂಪ ತಾಳಿ ಬಂದಂಥ ಒಂದಿಷ್ಟು ಖಳರು, ಅವರ ಕೈಯಲ್ಲಿಯೇ ರಾಜಕೀಯ ಅಧಿಕಾರ. ಅಧಿಕಾರ ಬಲದಿಂದ ಅವರು ನಕಲಿ ಪೊಲೀಸ್‌, ನಕಲಿ ಪೊಲೀಸ್‌ ಸ್ಟೇಷನ್‌, ಅಷ್ಟೇ ಏಕೆ ನಕಲಿ ನ್ಯಾಯಾಯಲವನ್ನೇ ಸೃಷ್ಟಿಸಬಲ್ಲರು.

ಜೈಲಿನಲ್ಲಿನ ತಾಯಿಯನ್ನು ಬಿಡಿಸಲು ನಾಯಕ ಸರಳನ್ನೇ ಕಿತ್ತು ಬಿಸಾಕುತ್ತಾನೆ. ಕೋರ್ಟಿನಲ್ಲಿ ನ್ಯಾಯಾಧೀಶೆ ಕೈಲಿನ ಸುತ್ತಿಗೆಯನ್ನು ಹಿಡಿದೆತ್ತಿ ಅಬ್ಬರಿಸುತ್ತಾಳೆ. ಆಸ್ಪತ್ರೆಯ ಬಾಗಿಲಿಗೆ ಬಂದ ಗಾಯಾಳುವನ್ನು ಬದುಕಿಸಬಾರದು ಎಂದೂ, ಐಪಿಎಸ್‌ ಅಧಿಕಾರಿಯೊಬ್ಬಳು ತನ್ನ ಬಟ್ಟೆ ಬಿಚ್ಚಿ ರಸ್ತೆಯಲ್ಲಿ ಖಳನನ್ನು ಮೆರವಣಿಗೆ ಮಾಡಿಕೊಂಡು ಹೋಗಬೇಕು ಎಂದೂ ಸಿ.ಎಂ. ಆರ್ಡರ್‌ ಮಾಡುತ್ತಾನೆ! ಪೊಲೀಸ್ ಪೊಲೀಸರಿಗೇ ಹೊಡೆಯುತ್ತಾನೆ. ಅದುವರೆಗೆ ನಾಯಕನಾಗಿದ್ದ ವಿಷ್ಣುವಿನ ರುಂಡ ನೆಲದ ಮೇಲೆ ಬಿದ್ದು, ಪ್ರೇಕ್ಷಕ ‘ಮುಗೀತು ಸದ್ಯ’ ಎಂದು ನೆಮ್ಮದಿಯ ನಿಟ್ಟುಸಿರು ಬಿಡುವಷ್ಟರಲ್ಲಿಯೇ ಅವನ ಸಹೋದರ ಶಿವ ಪ್ರತ್ಯಕ್ಷವಾಗಿ ಪ್ರಹಾರವನ್ನು ಮುಂದುವರಿಸುತ್ತಾನೆ. ತನ್ನ ಮೊಮ್ಮಗಳು ನಾಯಕನೊಂದಿಗೆ ಪ್ರಣಯಗೀತೆ ಹಾಡುತ್ತಿರುವಂತೆ ಅಜ್ಜಿ ಕನಸು ಕಾಣುತ್ತಾಳೆ. ಇನ್ನೊಬ್ಬಳು ನಾಯಕಿ ಯಾವಾಗ ನೋಡಿದರೂ ಕಾಮೋನ್ಮತ್ತಳಾಗಿಯೇ ನುಲಿಯುತ್ತಿರುತ್ತಾಳೆ. ನಾಯಕ ಕೇಳಿದ ಕೂಡಲೇ ನ್ಯಾಯಾಧೀಶರು ನ್ಯಾಯಾಲಯದಿಂದ ಕೃತ್ಯ ನಡೆದ ಸ್ಥಳಕ್ಕೆ ಎದ್ದುಬಂದು ಪರಿಸ್ಥಿತಿ ಅವಲೋಕಿಸುತ್ತಾರೆ. ಆರೋಪಿಯನ್ನು ತಾವೇ ಸ್ವತಃ ವಿಚಾರಣೆ ಮಾಡುತ್ತಾರೆ. ಕ್ಲೈಮ್ಯಾಕ್ಸ್‌ನಲ್ಲಿ ಖಳರನ್ನು ಸದೆಬಡಿಯುತ್ತಾ ನಾಯಕ ಶಿವ ‘ಇಂಡಿಯಾ ಇಂಡಿಯಾ ಇದು ನಮ್ಮ ಹೃದಯಾ’ ಎಂದೆಲ್ಲ ಆಶುಕವಿತೆ ವಾಚನ ಮಾಡುತ್ತಾನೆ! ಇದು ಹೇಗೆ ಯಾಕೆ ಅಂತೆಲ್ಲ ಪ್ರಶ್ನೆ ಮಾಡುವಂತಿಲ್ಲ. ಇಲ್ಲಿ ಲಾಜಿಕ್‌ ಇಲ್ಲ, ಮ್ಯಾಜಿಕ್‌ ಅಂದುಕೊಂಡು ಸುಮ್ಮನಿರಬೇಕು ಅಷ್ಟೆ.

ಸಾಮಾನ್ಯ ಹೆಣ್ಣೊಬ್ಬಳ ಕುರಿಗಳನ್ನು ಮುಖ್ಯಮಂತ್ರಿ ಮನೆಗೆ ಎತ್ತಿಕೊಂಡು ಬಂದು ಕಟ್ಟಿಕೊಳ್ಳುವುದು, ಅದನ್ನು ಬಿಡಿಸಲು ನಾಯಕ ಬರುವ ದೃಶ್ಯ ಸಿನಿಮಾದಲ್ಲಿದೆ. ನಿರ್ದೇಶಕರು ಪ್ರೇಕ್ಷಕರನ್ನೂ ಕುರಿಗಳು ಎಂದುಕೊಂಡಿದ್ದಾರೋ ಎಂಬ ಅನುಮಾನ ಚಿತ್ರವನ್ನು ನೋಡಿದ ಮೇಲೆ ಬಂದರೆ ಆಶ್ಚರ್ಯವೇನಿಲ್ಲ.

ಮಧ್ಯಂತರಕ್ಕೆ ಸೂಚಕವಾಗಿ ‘ಟೇಕ್‌ ಬ್ರೀದಿಂಗ್‌’ ಎಂಬ ಅಕ್ಷರಗಳು ತೆರೆಯ ಮೇಲೆ ಮೂಡುತ್ತವೆ. ನಿಜಕ್ಕೂ ಇಡೀ ಚಿತ್ರದಲ್ಲಿ ಪ್ರೇಕ್ಷಕ ಸಮಾಧಾನದ ಉಸಿರು ಬಿಡುವುದು ಮಧ್ಯಂತರದ ಅವಧಿ ಮತ್ತು ಮುಕ್ತಾಯದ ನಂತರ ಮಾತ್ರ!

ಅಸಂಬದ್ಧಗಳನ್ನೆಲ್ಲ ಸೇರಿಸಿ ಹೇಗೆ ಸಿನಿಮಾ ಮಾಡಬಹುದು ಎಂಬುದನ್ನು ಈ ಚಿತ್ರದಲ್ಲಿ ರವಿ ಶ್ರೀವತ್ಸ ಚೆನ್ನಾಗಿ ತೋರಿಸಿಕೊಟ್ಟಿದ್ದಾರೆ.  ಇಡೀ ಚಿತ್ರದಲ್ಲಿ ಯಾರೂ ಸಹಜವಾಗಿ ಮಾತಾಡುವುದೇ ಇಲ್ಲ. ಎಲ್ಲರೂ ಲಯಬದ್ಧ ಉದ್ದುದ್ದ ಡೈಲಾಗ್‌ಗಳಲ್ಲಿ ಕಿರುಚುತ್ತಲೇ ಇರುತ್ತಾರೆ. ಆ ಕೀರಲು ಸ್ವರದಲ್ಲಿ ನಾಮರ್ಧ, ಬೋ... ಮಗ, ಸೂ... ಮಗ, ಚೂತ್ಯಾ ಸರ್ಕಾರ, ತುಕಾಲಿಗಳಂಥ ಹಲವು ಶಬ್ದಗಳು ಯಾವ ಎಗ್ಗಿಲ್ಲದೇ ನುಗ್ಗುತ್ತವೆ. ಅದಕ್ಕೆ, ಸ್ಲಂ ಹುಡುಗ, ಪೊಲೀಸ್‌, ನ್ಯಾಯಾಧೀಶ, ಮುಖ್ಯಮಂತ್ರಿ ಎಂಬುದೆಲ್ಲ ಯಾವ ಭೇದವೂ ಇಲ್ಲ.

ಕಿರುಚುವಿಕೆಯೇ ಎಲ್ಲವನ್ನೂ ಮುಚ್ಚಿಹಾಕುವುದರಿಂದ ಯಾವ ನಟರ ಅಭಿನಯದ ಬಗ್ಗೆಯೂ ಮಾತನಾಡುವಂತಿಲ್ಲ. ಇರುವುದರಲ್ಲಿಯೇ ಸ್ವಲ್ಪ ಮೆಲುದನಿಯಲ್ಲಿ ಮಾತನಾಡುವವರು ಧೂರ್ತ ಮುಖ್ಯಮಂತ್ರಿ ಪಾತ್ರಧಾರಿ ಬಿ.ಎಂ. ಗಿರಿರಾಜ್‌ ಮಾತ್ರ. ಇಡೀ ಚಿತ್ರದುದ್ದಕ್ಕೂ ವಿಪರೀತ ನುಲಿಯುತ್ತಲೇ ಇರುವ ಭಾವನಾ ರೇಜಿಗೆ ಹುಟ್ಟಿಸುತ್ತಾರೆ. ರೋಶಿನಿ ಅವರ ಮುದ್ದು ಮುಗ್ಧ ಮುಖಕ್ಕೂ ಅವರ ಬಾಯಲ್ಲಿ ಉದುರುವ ರೋಷಾವೇಶದ ಡೈಲಾಗ್‌ಗಳಿಗೂ ತಾಳವೇಳ ಇಲ್ಲ. ತಮ್ಮ ವೃತ್ತಿಜೀವನದ ಆ್ಯಕ್ಷನ್‌ ಅಧ್ಯಾಯವನ್ನು ಸತೀಶ್‌ ತಪ್ಪು ಚಿತ್ರದ ಮೂಲಕ ಆರಂಭಿಸಿದ್ದಾರೆ.

ನಿರ್ದೇಶಕರೇ ಹೇಳಿಕೊಂಡಂತೆ ‘ಟೈಗರ್‌ ಗಲ್ಲಿ’ ತುಂಬಾ ಕಾದು ಕಾದು ಹೆತ್ತ ಗಂಡು ಮಗು. ಅವರ ಎಣಿಕೆ ನಿಜ. ಇದು ಗಂಡು ಮಗುವೇ. ಗಂಡುಮಗು ಹೆತ್ತರೆ ಕುಲದೀಪಕನಾಗುತ್ತಾನೆ ಎಂಬೆಲ್ಲ ಭ್ರಮೆಯನ್ನು ತೊಡೆದುಹಾಕಿ ‘ಇದಕ್ಕಿಂತ ಹೆಣ್ಣಾಗಿದ್ದರೆ ಚೆನ್ನಿತ್ತು’ ಎಂದು ಹೆತ್ತವರು ಪರಿತಪಿಸುವಂಥ ಗಂಡುಮಗು. ಇಡೀ ಚಿತ್ರದಲ್ಲಿ ನಿರ್ದೇಶಕರು, ವ್ಯವಸ್ಥೆಯ, ಅಧಿಕಾರಿಗಳ ವಿಧ್ವಂಸಕ ಕೃತ್ಯಗಳನ್ನು ಯಾವ ಅತಿರೇಕದಲ್ಲಿ, ಅಸಂಬದ್ಧವಾಗಿ ತೋರಿಸಿದ್ದಾರೆಂದರೆ ಈ ಚಿತ್ರವೇ ನಿರ್ದೇಶಕರ ವಿಧ್ವಂಸಕ ಕೃತ್ಯ ಎಂದು ಅನಿಸಿದರೆ ಅಚ್ಚರಿಯಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.