ADVERTISEMENT

ತುಸು ಸದ್ದು, ತುಸು ವಾಸನೆ

ಸಂದೀಪ ನಾಯಕ
Published 26 ಮೇ 2017, 12:23 IST
Last Updated 26 ಮೇ 2017, 12:23 IST
ತುಸು ಸದ್ದು, ತುಸು ವಾಸನೆ
ತುಸು ಸದ್ದು, ತುಸು ವಾಸನೆ   

ನಿರ್ಮಾಣ: ಎಸ್‌.ವಿ. ಬಾಬು
ನಿರ್ದೇಶನ: ಮಂಜು ಸ್ವರಾಜ್‌
ತಾರಾಗಣ: ಗಣೇಶ್‌, ಸಾಯಿಪ್ರಕಾಶ್‌, ರನ್ಯಾ ರಾವ್‌

ಕಳ್ಳ ಪೊಲೀಸರ ನಡುವಿನ ಕಿತ್ತಾಟ–ಮೇಲಾಟದ ಕತೆಯನ್ನು ನಿರ್ದೇಶಕ ಮಂಜು ಸ್ವರಾಜ್‌ ‘ಪಟಾಕಿ’ಯಲ್ಲಿ ಸುತ್ತಿದ್ದಾರೆ. ಇದು ತೆಲುಗು ಭಾಷೆಯಲ್ಲಿ ಸದ್ದು ಮಾಡಿದ ‘ಪಟಾಸ್‌’ ಸಿನಿಮಾದ ನಕಲು.

ಪರಮ ಭ್ರಷ್ಟ ಪೊಲೀಸ್ ಅಧಿಕಾರಿ ಒಂದು ಹಂತದಲ್ಲಿ ಸಾರ್ವಜನಿಕರಿಗೆ ಒಳ್ಳೆಯದು ಮಾಡಲು ಬಯಸುತ್ತಾನೆ. ಅದರಿಂದ ಆಗುವ ಬದಲಾವಣೆ ಏನೆಲ್ಲ ಮಾಡುತ್ತದೆ ಎಂಬುದು ಸಿನಿಮಾದ ವಸ್ತು. ಕೆಟ್ಟವನು ಒಳ್ಳೆಯವನಾಗುವ ಕತೆ ಇಟ್ಟುಕೊಂಡು ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸುವಂತೆ ಸಿನಿಮಾ ಮಾಡುವುದು ಈ ರಂಗದ ಹಳೆಯ ಚಾಳಿ. ಅದರಲ್ಲಿ ವಿಶೇಷವಿಲ್ಲ; ಹಾಗೆಯೇ ‘ಪಟಾಕಿ’ಯಲ್ಲೂ ಅಂತಹ ದಮ್ಮಿಲ್ಲ. ಏಕೆಂದರೆ ಇಲ್ಲಿನ ಪೊಲೀಸ್ ಅಧಿಕಾರಿ ಭ್ರಷ್ಟ ಮಾತ್ರವಲ್ಲ, ತಾನು ಅಧಿಕಾರಿ ಎಂಬುದನ್ನೂ ಮರೆತು ಎಳಸಾಗಿ ನಡೆದುಕೊಂಡು ಪ್ರೇಕ್ಷಕರ ಕನಿಕರಕ್ಕೆ ಪಾತ್ರನಾಗುತ್ತಾನೆ. ನಿರ್ದೇಶಕ ಮಂಜು ಸ್ವರಾಜ್‌ ಮತ್ತು ನಾಯಕ ಗಣೇಶ್‌ ಅವರ ಜಂಟಿ ಪ್ರಯತ್ನದ ಫಲವಾಗಿಯೇ ಪ್ರೇಕ್ಷಕರ ಬೆನ್ನಿಗೆ ‘ಪಟಾಕಿ’ ಹಚ್ಚುವ ಪ್ರಯತ್ನ ನಡೆದಿದೆ. ಯುವಕರನ್ನು ರಂಜಿಸುವ ಭರದಲ್ಲಿ ಈ ಇಬ್ಬರು ಹಲಬಗೆಯ ಕಸರತ್ತುಗಳನ್ನು ಮಾಡಿದ್ದಾರೆ. ಅವೆಲ್ಲವೂ ಸಿನಿಮಾದ ಹದ ಕೆಡಿಸಿದ್ದಷ್ಟೇ ಅಲ್ಲ, ನೋಡುಗರ ಕಣ್ಣುನೋವಿಗೂ ಕಾರಣವಾಗುತ್ತವೆ.

ADVERTISEMENT

ಕೆಲವು ಉದಾಹರಣೆಗಳು ಹೀಗಿವೆ: ಸುದ್ದಿವಾಹಿನಿಯ ಪತ್ರಕರ್ತೆಯಾಗಿ ಕೆಲಸ ಮಾಡುವ ನಾಯಕಿಯನ್ನು ಕಾಣಬೇಕು ಎಂದಾಗಲೆಲ್ಲ ನಾಯಕ ಸುದ್ದಿಗೋಷ್ಠಿ ಏರ್ಪಡಿಸುತ್ತಾನೆ! ತನ್ನ ವಿರುದ್ಧ ಮಾತನಾಡಿದ ಬಡಪಾಯಿಗಳನ್ನು ಸರಿಯಾಗಿ ‘ವಿಚಾರಿಸಿಕೊಳ್ಳುತ್ತಾನೆ’. ನಾಯಕ ಕಾಲಿಡುತ್ತಿದ್ದಂತೆಯೇ ಪೊಲೀಸ್‌ ಠಾಣೆ ಎಂಬುದು ವಸೂಲಿಕೇಂದ್ರವಾಗಿ ಬದಲಾಗುತ್ತದೆ. ಅಂದರೆ, ಇಡೀ ಸಿನಿಮಾ ಮೊದಲಿಗೆ ಪೊಲೀಸರೆಂದರೆ ವಿದೂಷಕರು, ಸಮಾಜ ವಿರೋಧಿಗಳು ಎಂಬಂತೆ ಬಿಂಬಿಸುತ್ತದೆ. ಬಳಿಕ ಅವರು ಏನು ಬೇಕಾದರೂ ಮಾಡಬಲ್ಲರು ಎಂಬುದನ್ನು ಹೇಳಿ ಆರೋಪಿಗಳಿಗೆ ನಾಯಕನೇ ಶಿಕ್ಷೆ ವಿಧಿಸುವಂತೆ ನೋಡಿಕೊಳ್ಳುತ್ತದೆ.
ಇನ್ನು ಸಿನಿಮಾದ ತಾಂತ್ರಿಕ ವಿವರಗಳಲ್ಲಿ ಛಾಯಾಗ್ರಹಣ ಬಿಟ್ಟರೆ ಉಳಿದವು ಸುಮಾರಾಗಿವೆ. ಅದರಲ್ಲಿ ಗಣೇಶ್‌ ಹಾಗೂ ಅವರ ಸಹ ನಟರ ನಟನೆಯೂ ಸೇರುತ್ತದೆ. ಸಾಧು ಕೋಕಿಲ ಮಂಗಳಮುಖಿಯಾಗಿ ಕಾಣಿಸಿಕೊಂಡಿರುವುದು ವಿಶೇಷ. ಕನ್ನಡ ಸಿನಿಮಾಗಳ ಕಾಯಂ ಪೊಲೀಸ್‌ ಅಧಿಕಾರಿ ಸಾಯಿಪ್ರಕಾಶ್‌ ತಮ್ಮ ಅದೇ ಹಳೆಯ ‘ಬ್ರಾಂಡ್‌’ನ ಸಂಭಾಷಣೆಗಳನ್ನು ಉದುರಿಸಿದ್ದಾರೆ. ಅರ್ಜುನ ಜನ್ಯ ಸ್ವರಸಂಯೋಜನೆಯ ಹಾಡುಗಳು ಪಟಾಕಿಯ ಸದ್ದನ್ನೂ ಮೀರಿಸಿವೆ.

ಮೂಲಕ್ಕೆ ಬದ್ಧರಾದ ನಿರ್ದೇಶಕ ಮಂಜು ಸ್ವರಾಜ್‌ ತೆಲುಗಿನ ಗಿಳಿಪಾಠವನ್ನು ಕನ್ನಡದಲ್ಲಿ ಒಪ್ಪಿಸಿದ್ದಾರೆ. ಅದರಲ್ಲಿ ಅವರ ತಪ್ಪೇನೂ ಇಲ್ಲ. ಕನ್ನಡದ ಅನೇಕ ನಿರ್ಮಾಪಕ, ನಾಯಕರಿಗೆ ಯಶಸ್ಸಷ್ಟೇ ಬೇಕು; ಅವರು ಬಡಿಸಿದ ಹಳಸಿದ ಊಟ ಮಾಡುವ ಜನರ ಪಾಡು ಕಟ್ಟಿಕೊಂಡು ಅವರಿಗೆ ಆಗಬೇಕಾದುದು ಏನೂ ಇಲ್ಲವಲ್ಲ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.