ADVERTISEMENT

ನಾನು ಹೇಮಂತ್‌ ಅವಳು ಸೇವಂತಿ

ಸಂದೀಪ ನಾಯಕ
Published 12 ಡಿಸೆಂಬರ್ 2014, 19:30 IST
Last Updated 12 ಡಿಸೆಂಬರ್ 2014, 19:30 IST

ನಿರ್ದೇಶನ, ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ಮಾಣ: ಸುಧಾಕರ್‌ ಬನ್ನಂಜೆ ತಾರಾಗಣ: ರಜನೀಶ್‌, ವಿಜೇಶ್‌ ಶೆಟ್ಟಿ, ಲೇಖಾಚಂದ್ರ, ನವ್ಯಾ, ದಿವ್ಯಶ್ರೀ, ಮಂಜು ಮಲ್ನಾಡ್‌, ದುರ್ಗಾಪ್ರಸಾದ್‌, 

ಅರಳಿದ ಸೇವಂತಿ ಹೂವನ್ನು ಒಂದೇ ಹೆಸರಿನ ಎರಡು ದುಂಬಿಗಳು ಸುತ್ತುವ ಪ್ರೇಮಕಥೆಯನ್ನು ಇಟ್ಟು­ಕೊಂಡು ಸುಧಾಕರ್‌ ಬನ್ನಂಜೆ ಸುತ್ತುಬಳಸಿ ಹೇಳಿದ ಸಿನಿಮಾ ‘ನಾನು ಹೇಮಂತ್‌, ಅವಳು ಸೇವಂತಿ’. ಅವರು ಎಂದಿನ ಪ್ರೇಮಕಥೆಗೆ ಕೊಂಚ ಒಗ್ಗರಣೆ, ಮಸಾಲೆ ಸೇರಿಸಿ ಬೇರೆ ರುಚಿ, ತಿರುವು ಕೊಟ್ಟಿದ್ದಾರೆ.

ಇಬ್ಬರು ಹುಡುಗರು ಒಬ್ಬಳು ಹುಡುಗಿಯ ನಡುವೆ ನಡೆಯುವ ತ್ರಿಕೋನಪ್ರೇಮ ಕಥೆ ಎಂಬ ಭ್ರಮೆಯನ್ನು ಈ ಸಿನಿಮಾ ಮೊದಲಿಗೆ ಹುಟ್ಟಿಸುತ್ತದೆ. ಇದೇ ಇದರ ಹೊಸ ಅಂಶ. ಮಿಕ್ಕಿದ್ದೆಲ್ಲ ಅದೇ ರಾಗ, ಅದೇ ಧಾಟಿ ಸರಾಗವಾಗಿ ಕೇಳುತ್ತದೆ. ತನ್ನ ತಮಾಷೆಯ ಗುಣದಿಂದಾಗಿ ಕೆಲವೆಡೆ ನೋಡುವಂತೆಯೂ ಇದೆ. ಇಲ್ಲಿನ ತಮಾಷೆಯ ಸಂಭಾ­ಷಣೆ­ಗಳೇ ಸಿನಿಮಾವನ್ನು ಕೆಳಕ್ಕೆ ಬೀಳದಂತೆ ಹಿಡಿದು ನಿಲ್ಲಿಸಿದ್ದು. ಅದರ ಹೊರತಾಗಿ ಸಿನಿಮಾದ ಸಣ್ಣಬಜೆಟ್‌ಗೆ ತಕ್ಕಂತೆ ಎಲ್ಲವೂ ಒಂದು ಮಿತಿಗೆ ಒಳಪಟ್ಟಿವೆ.

ಸಿನಿಮಾದ ಇಬ್ಬರು ಹುಡುಗರ ಹೆಸರೂ ಹೇಮಂತ್‌. ಇದೇ ಸಿನಿಮಾದ ಅಂತ್ಯಕ್ಕೆ, ಎರಡನೆ ಭಾಗವನ್ನು ಮುಂದಕ್ಕೆ ಒಯ್ಯಲು ಆಧಾರ. ಬೆಳ್ಳಗೆ ಬಳ್ಳಿಯಂತಿರುವ ಹುಡುಗಿಗಾಗಿ ನಾಯಕನ ಹಲವು ಕಪಿಚೇಷ್ಟೆಗಳು ಸಿನಿಮಾದ ಉದ್ದಕ್ಕೂ ಇವೆ. ಅವನ ಜೊತೆಗಿರುವ ಸ್ನೇಹಿತರೂ ಇಂಥ ಮಂಗಾಟ­ಗಳಲ್ಲಿ ತೊಡಗಿರುವವರು. ಇವರೆಲ್ಲ ಸೇರಿ ವ್ಯಂಗ್ಯಚಿತ್ರಗಳ ಪಾತ್ರಗಳಂತೆ ಅಭಿನಯಿಸುತ್ತಾರೆ. ನಾಯಕನ ಕಚೇರಿಯಲ್ಲಿ ಅವನೊಂದಿಗೆ ಕೆಲಸ ಮಾಡುವವರು ಕೂಡ ಹೊಸ ಹುಡುಗಿಯನ್ನು ಕಂಡೊಡನೆ ಕಪಿಗಳಂತೆ ವರ್ತಿಸುತ್ತಾರೆ.

ಇವರೆಲ್ಲರ ಹಲಬಗೆಯ ‘ಹುಡುಗಿಯ ಪ್ರೀತಿಗಾಗಿ ಕೋತಿಯಾಟ’ವನ್ನು ಆಸಕ್ತರು ನೋಡಿ ಆನಂದಿಸಬಹುದು. ಇವೆಲ್ಲವುಗಳಿಂದಾಗಿ ಇದನ್ನು ತಮಾಷೆಯ ಸಿನಿಮಾ ಎಂದುಕೊಳ್ಳುವಷ್ಟರಲ್ಲಿ, ನಾಯಕ ನಾಯಕಿಯ ಕನಸಿನಲ್ಲಿ ತೇಲುವ ಹಾಡುಗಳು ಶುರುವಾಗಿ ಇದು ಪ್ರೇಮಕಥೆಯೂ ಹೌದು ಎಂಬುದನ್ನು ನೆನಪಿಸುತ್ತದೆ. ಆದರೆ, ಈ ಎರಡರಲ್ಲಿ ಯಾವುದೂ ಆಗದ ಎಡಬಿಡಂಗಿತನ ಈ ಸಿನಿಮಾದ್ದು.
ಬೇರೆ ಯಾವುದೋ ಲೋಕದಲ್ಲಿ ಓಡಾಡುತ್ತಿರುವಂತೆ ನಾಯಕ ರಜನೀಶ್‌ ಅವರ ಅಭಿನಯವಿದೆ. ತೆರೆಯ ಮೇಲೆ ಭಾವನೆಗಳನ್ನು ತೋರುವಲ್ಲಿ ಅವರು ಸದಾ ನಿರ್ಲಿಪ್ತರು.

ADVERTISEMENT

ಸಾಧುಕೋಕಿಲ ಪಾತ್ರ ಇದರಲ್ಲಿ ಸಂದರ್ಶಕ ನಟನ ರೀತಿಯದ್ದು. ಅವರು ಹುಡುಗಿಯರನ್ನು ಪಟಾಯಿಸಲು ಆಗಾಗ ಬರುತ್ತಾರೆ. ಅವರು ಬರುವುದು ಅದಕ್ಕಾಗಿ ಮಾತ್ರ. ಅದೇ ಅಲ್ಲಿನ ಅವರ ಕಸುಬು. ಸಾಧು ಅವರಿಗಿದು ಸಾದಾ ಪಾತ್ರ. ಏಕೆಂದರೆ ಅವರೇನೂ ಅಂಥ ಮಜಾ ಕೊಡುವುದಿಲ್ಲ.

ಸುಧಾಕರ ಬನ್ನಂಜೆ ಒಂದು ಪುಟ್ಟ ಕಥೆಯನ್ನು ಸಾಕಷ್ಟು ಹಿಗ್ಗಿಸಿದ್ದರಿಂದ ಆದ ಭಾರವನ್ನು ಸಿನಿಮಾಕ್ಕೆ ತಡೆದುಕೊಳ್ಳಲು ಆಗಿಲ್ಲ. ಹುಡುಗಿ ಯಾರಿಗೆ ಸಿಗುತ್ತಾಳೆ ಎಂಬ ಸಣ್ಣ ಕುತೂಹಲವನ್ನು ತಿಳಿದುಕೊಳ್ಳಲು ಇಡೀ ಸಿನಿಮಾವನ್ನು ನೋಡಬೇಕೆ ಎಂಬ ಪ್ರಶ್ನೆಯೂ ನಡುವೆ ಹುಟ್ಟಿಕೊಳ್ಳುತ್ತದೆ. ಹೀಗಿದ್ದ ಮೇಲೆ ಹುಡುಗಿ ಯಾರಿಗೆ ಸಿಕ್ಕರೆ ನಮ್ಮದೇನು ಖರ್ಚಾಗುತ್ತದೆ ಎಂದೂ ಪ್ರೇಕ್ಷಕರು ಕೇಳಿಕೊಳ್ಳುವ ಸಾಧ್ಯತೆಯೂ ಇಲ್ಲಿದೆ. ಆದರೆ, ಅಷ್ಟರಲ್ಲಿ ಕಾಲಮಿಂಚಿರುತ್ತದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.