ADVERTISEMENT

ನಿಜದ ಸೋಜಿಗ

ಅಮಿತ್ ಎಂ.ಎಸ್.
Published 9 ಡಿಸೆಂಬರ್ 2016, 16:52 IST
Last Updated 9 ಡಿಸೆಂಬರ್ 2016, 16:52 IST
ನಿಜದ ಸೋಜಿಗ
ನಿಜದ ಸೋಜಿಗ   

ನಿರ್ಮಾಪಕ: ನಾರಾಯಣ ಹೆಗ್ಡೆ
ನಿರ್ದೇಶಕ: ದಿನೇಶ್‌ ಕಂಪ್ಲಿ
ತಾರಾಗಣ: ವಿಕ್ರಾಂತ್‌ ಹೆಗ್ಡೆ, ಅಖಿಲಾ ಪ್ರಕಾಶ್‌, ಹರಿಣಿ, ಗಿರೀಶ್ ಜತ್ತಿ, ಯಶ್‌ ಶೆಟ್ಟಿ

ಚಿತ್ರದ ಪ್ರತಿ ದೃಶ್ಯ, ಕಲಾವಿದರ ಅಭಿನಯ, ಸಂಭಾಷಣೆ, ಹಿನ್ನೆಲೆ ಸಂಗೀತ, ಕಥೆ, ಸಾಹಸ ಎಲ್ಲವೂ ಶೀರ್ಷಿಕೆಯ ಅರ್ಥವನ್ನು ಪ್ರತಿಧ್ವನಿಸುತ್ತವೆ. ಗಟ್ಟಿಯಾದ ಕಥೆ ಮತ್ತು ಅದಕ್ಕೆ ಜೀವತುಂಬುವ ಚಿತ್ರಕಥೆ ಇಲ್ಲದೆಯೂ ಸಿನಿಮಾ ಮಾಡಲು ಸಾಧ್ಯ ಎಂದು ನಿರ್ದೇಶಕರಿಗೆ ಅನಿಸಿರುವುದು ‘ಸೋಜಿಗ’ವೇ ಸರಿ. ಆ್ಯಕ್ಷನ್‌ ನೆಪದಲ್ಲಿ ಹೊಡೆದಾಟದ ಸನ್ನಿವೇಶಗಳು, ಭಾವನೆಯನ್ನೇ ಮರೆತ ಪಾತ್ರಗಳು, ಸಂಬಂಧವೇ ಇಲ್ಲದ ದೃಶ್ಯ ಮತ್ತು ಚಿತ್ರ–ವಿಚಿತ್ರ ಸಂಭಾಷಣೆಗಳು ಚಿತ್ರದಲ್ಲಿವೆ.

ಪರೀಕ್ಷೆಯ ಹಿಂದಿನ ದಿನ ಪುಸ್ತಕ ತೆರೆದು, ಉತ್ತರ ಪತ್ರಿಕೆಯ ಮೇಲೆ ತೋಚಿದ್ದನ್ನು ಗೀಚಿ, ಉತ್ತೀರ್ಣನಾಗಲು ಇಷ್ಟು ಸಾಕು ಎಂದು ಭಾವಿಸುವ ವಿದ್ಯಾರ್ಥಿಯಂತೆ ನಿರ್ದೇಶಕ ದಿನೇಶ್‌ ಕಂಪ್ಲಿ ಅವರ ಕೆಲಸ ತೆರೆಯ ಮೇಲೆ ಗೋಚರಿಸುತ್ತದೆ. ವಿದೇಶದಿಂದ ಬರುವ ನಾಯಕನಿಗೆ ಕೋಟ್ಯಧಿಪತಿ ಅಪ್ಪನ ವ್ಯವಹಾರವನ್ನು ಮುಂದುವರಿಸಲು ಆಸಕ್ತಿಯಿಲ್ಲ. ಅಮೆರಿಕದಲ್ಲಿ ಎಂ.ಬಿಎ ಮಾಡಿದ್ದಾಗಿ ಸುಳ್ಳು ಹೇಳುವ ಆತನಿಗೆ, ಮಾರ್ಷಲ್ ಆರ್ಟ್ಸ್‌ನತ್ತ ಒಲವು. ಅದೇ ಕೋಪದಿಂದ ತಂದೆ ಆತನನ್ನು ಮನೆಯಿಂದ ಹೊರಹಾಕಿದ್ದಾರೆ.

ADVERTISEMENT

ಆತನಿಗೆ ಆಶ್ರಯ ನೀಡುವ ಸ್ನೇಹಿತನಿಂದ ಜಿಮ್ ಮಾಲೀಕನೊಬ್ಬನ ತಂಗಿಯ ಸ್ನೇಹ ಉಂಟಾಗುತ್ತದೆ. ಅದರ ಬೆನ್ನಲ್ಲೇ ಜಿಮ್ ಮಾಲೀಕನ ಕೊಲೆಯಾಗುತ್ತದೆ. ಆ ಕೊಲೆಯ ಉರುಳು ನಾಯಕನ ಕುತ್ತಿಗೆಗೆ ಸುತ್ತಿಕೊಳ್ಳುತ್ತದೆ. ನಿಜವಾದ ಕೊಲೆಗಾರ ಯಾರು ಎನ್ನುವುದನ್ನು ಪತ್ತೆ ಮಾಡುವುದಕ್ಕೆ ಪೊಲೀಸರು ಬರಲೇಬೇಕಿಲ್ಲ. ಪ್ರೇಕ್ಷಕರೇ ಸುಲಭವಾಗಿ ಊಹಿಸಬಹುದು!

ನಾಯಕ ವಿಕ್ರಾಂತ್‌ ಡ್ಯೂಪ್‌ ಇಲ್ಲದೆಯೇ ಸಾಕಷ್ಟು ಸಾಹಸಗಳನ್ನು ಮಾಡಿದ್ದಾರೆ. ಅದು ಪ್ರೇಕ್ಷಕರಿಗೆ ತಿಳಿಯಲಿ ಎಂದು ಅವರಿಂದಲೇ ಆ ಮಾತನ್ನೂ ನಿರ್ದೇಶಕರು ಹೇಳಿಸಿದ್ದಾರೆ. ಆದರೆ, ಅವರಿಂದ ಅಭಿನಯ ಹೊರಹಾಕುವ ಸಾಹಸ ಎಲ್ಲಿಯೂ ಕಾಣುವುದಿಲ್ಲ. ಸಂಭಾಷಣೆ ಒಪ್ಪಿಸುವಾಗ ತಡವರಿಸುತ್ತಾರೆ. ಇದನ್ನು ನಾಯಕಿ ಹಾಗೂ ಇತರೆ ಪಾತ್ರಗಳಿಗೂ ಅನ್ವಯಿಸಬಹುದು.

ಸಂಗೀತದ ಜತೆಗೆ ಛಾಯಾಗ್ರಹಣವನ್ನೂ ಮಾಡಿರುವ ಸುನಾದ್‌ ಗೌತಮ್‌ ಶ್ರಮ ಎಲ್ಲಿಯೂ ಕಾಣಿಸುವುದಿಲ್ಲ. ‘ಸ್ಮಶಾನದಲ್ಲಿ ಹೆಣ, ಬ್ಯಾಂಕ್‌ನಲ್ಲಿ ಹಣ, ಇನ್‌ಫಾರ್ಮೇಷನ್‌ ಇರುವಲ್ಲಿ ಈ ಇನ್ಸ್‌ಪೆಕ್ಟರ್ ರಾಣಾ’ ಎಂದು ಪೊಲೀಸ್‌ ಪಾತ್ರಧಾರಿಯು ಸಾಯಿಕುಮಾರ್‌ ಶೈಲಿಯಲ್ಲಿ ಸನ್ನಿವೇಶಕ್ಕೆ ಸಂಬಂಧವೇ ಇಲ್ಲದೆ ಆಡುವ ಸಂಭಾಷಣೆಗಳು ಧಾರಾಳವಾಗಿ ನಗಿಸಬಲ್ಲವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.