ADVERTISEMENT

ನೀರಸ ‘ಗೋವಾ’ ಪ್ರವಾಸ!

‘ಗೋವಾ’

ಅಮಿತ್ ಎಂ.ಎಸ್.
Published 6 ಮಾರ್ಚ್ 2015, 19:30 IST
Last Updated 6 ಮಾರ್ಚ್ 2015, 19:30 IST
ನೀರಸ ‘ಗೋವಾ’ ಪ್ರವಾಸ!
ನೀರಸ ‘ಗೋವಾ’ ಪ್ರವಾಸ!   

ನಿರ್ಮಾಪಕರು: ಶಂಕರ್ ಗೌಡ, ಸಿ.ಎಂ.ಆರ್‌. ಶಂಕರ್‌ ರೆಡ್ಡಿ ಮತ್ತು ರಜತ್ ಮಂಜುನಾಥ್
ನಿರ್ದೇಶಕ: ಸೂರ್ಯ

ತಾರಾಗಣ: ಕೋಮಲ್, ಶ್ರೀಕಾಂತ್, ತರುಣ್‌ ಚಂದ್ರ, ಶರ್ಮಿಳಾ ಮಾಂಡ್ರೆ, ಸೋನು ಗೌಡ, ರಚೇಲ್‌, ಅಶೋಕ್‌, ಶೋಭರಾಜ್ ಮತ್ತಿತರರು

ನಾಲ್ಕು ವರ್ಷದ ಹಿಂದೆ ತೆಲುಗಿನಲ್ಲಿ ತೆರೆಕಂಡಿದ್ದ ‘ಗೋವಾ’ ಚಿತ್ರವನ್ನು ಅದೇ ಹೆಸರಿನೊಂದಿಗೆ ತೆರೆಗೆ ತಂದಿದ್ದಾರೆ ನಿರ್ದೇಶಕ ಸೂರ್ಯ. ಇದನ್ನು ಒಂದು ಚಿತ್ರದ ಯಥಾವತ್ ನಕಲು ಎನ್ನುವಂತಿಲ್ಲ. ಏಕೆಂದರೆ ಇದೇ ಮಾದರಿ ಕಥೆಯುಳ್ಳ ಅನೇಕ ಸಿನಿಮಾಗಳು ಬಂದು ಹೋಗಿವೆ. ‘ಮಸ್ತ್‌ ಮಜಾ ಮಾಡಿ’, ‘ಚಮ್ಕಾಯ್ಸಿ ಚಿಂದಿ ಉಡಾಯ್ಸಿ’ ಮುಂತಾದ ಸಿನಿಮಾಗಳಲ್ಲಿಯೂ ಬಹುತೇಕ ಇದೇ ರೀತಿಯ ಕಥೆ, ಸನ್ನಿ­ವೇಶಗಳನ್ನು ಪ್ರೇಕ್ಷಕರು ನೋಡಿರುತ್ತಾರೆ. ಹೀಗಾಗಿ ನೂರ­ರಲ್ಲಿ ಒಂದಾಗುವ ‘ಗೋವಾ’, ಬೀಚ್‌ಗಳ ಅರೆಬರೆ ದರ್ಶನ ಮಾಡಿ­ಸುತ್ತದೆಯೇ ಹೊರತು, ಭರಪೂರ ಮನರಂಜನೆಯ­ನ್ನಾಗಲೀ, ಮನಸಿನಲ್ಲಿ ಉಳಿಯುವ ಸಂಗತಿಗಳನ್ನಾಗಲೀ ನೀಡುವುದಿಲ್ಲ.

ಹಲವು ಚಿತ್ರಗಳಲ್ಲಿ ನೋಡಿರುವ ಕಥೆಯಾದ್ದರಿಂದ ‘ಗೋವಾ’­ದಲ್ಲಿ ವಿಶೇಷ ಎನಿಸುವ ಅಂಶಗಳಿಲ್ಲ. ಒಂದು ಊರು. ಅಲ್ಲಿ ಕೆಲಸವಿಲ್ಲದ ಕೆಲ ತರಲೆ ಯುವಕರು. ಹಣ, ಹೆಣ್ಣಿಗಾಗಿ ಎಂತಹ ಕೆಲಸಕ್ಕೂ ಸೈ ಎನ್ನುವವರು. ಮೋಜು ಮಸ್ತಿ ಮಾಡ­ಲೆಂದೇ ಊರು ಬಿಟ್ಟು ನಗರಕ್ಕೆ ಓಡುವವರು. ಅಲ್ಲಿ ಗೆಳತಿ­ಯರೂ ದಕ್ಕುತ್ತಾರೆ. ಅವ­ರನ್ನು ಒಲಿಸಿಕೊಳ್ಳುವ ಸಾಹ­ಸ­ದಲ್ಲಿ ಎದುರಿಸುವ ಪೀಕ­ಲಾ­ಟಗಳು. ನಡುವೆ ಒಂದಷ್ಟು ಹಾಡು. ಅನಗತ್ಯ ಹೊಡೆ­ದಾಟ. ಇದಾವುದೂ ಕನ್ನಡ ಪ್ರೇಕ್ಷ­ಕನಿಗೆ ಹೊಸ­ತಲ್ಲ. ಕಡೇಪಕ್ಷ ಗೋವಾದ ಸೊಬಗನ್ನು ಸೊಗಸಾಗಿ ತೋರಿ­ಸುವ ಪ್ರಯತ್ನವೂ ಈ ಚಿತ್ರದಲ್ಲಿಲ್ಲ (ಛಾಯಾಗ್ರಹಣ– ರಾಜೇಶ್‌ ಕಾಟ).

ಹಳ್ಳಿಯಲ್ಲಿ ಮೂವರು ಆಪ್ತ ಗೆಳೆಯರು. ಮೂವ­ರದೂ ಒಂದೇ ದಿಕ್ಕು, ಗುರಿ. ಒಬ್ಬ ಊರ ನಾಯಕನ ಮಗ. ಇನ್ನೊಬ್ಬ ಮಾಜಿ ಸೈನಿಕನ ಮಗನಾದರೆ, ಮತ್ತೊಬ್ಬ ದೇವಸ್ಥಾನದ ಅರ್ಚಕನ ಮಗ. ಊರು ದಾಟಿ ಹೊರಹೋಗಬಾರದು ಎಂಬ ಸಂಪ್ರದಾಯವನ್ನು ಮುರಿದು ಕದ್ದು ಮುಚ್ಚಿ ಬೆಂಗಳೂರು ಸೇರುವವರು. ಅಲ್ಲಿ ವಿದೇಶಿ ಯುವತಿಯನ್ನು ಮದುವೆಯಾ­ಗುವ ಸ್ನೇಹಿತನನ್ನು ನೋಡಿ ಅವನಂತೆ ತಾವೂ ವಿದೇಶಕ್ಕೆ ಹಾರ­ಬೇಕೆಂದು ಗೋವಾಕ್ಕೆ ಹೋಗುತ್ತಾರೆ. ಸ್ವಚ್ಛಂದ ಬದುಕನ್ನೂ ಅನುಭವಿಸುತ್ತಾರೆ. ಸುಲಭವಾಗಿ ಪ್ರೇಯಸಿಯರೂ ಒಲಿ­ಯುತ್ತಾರೆ. ಮನರಂಜನೆ ನೀಡಬೇಕೆಂಬ ಹಪಾಹಪಿಯಲ್ಲಿ ತರ್ಕ­ವಿಲ್ಲದ, ಜೊಳ್ಳು ಸನ್ನಿವೇಶಗಳ ಜೋಡಣೆ ಚಿತ್ರದುದ್ದಕ್ಕೂ ಕಾಣಿಸುತ್ತದೆ. ಅಲ್ಲಲ್ಲಿ ಮಾತ್ರ ನಗೆಯುಕ್ಕಿಸುವ ದೃಶ್ಯಗಳು ಎದುರಾಗುತ್ತವೆ. ದುರ್ಬಲ ಚಿತ್ರಕಥೆಯಲ್ಲಿ ನೋಡಿಸಿಕೊಂಡು ಹೋಗುವ ಗುಣವನ್ನು ನಿರೀಕ್ಷಿಸುವಂತಿಲ್ಲ.

ಎಂದಿನಂತೆ ಕೋಮಲ್‌ ತಮ್ಮ ಮ್ಯಾನರಿಸಂನಿಂದ ಗಮನ ಸೆಳೆ­ಯುತ್ತಾರೆ. ಈ ಬಗೆ ಪಾತ್ರ ಅವರಿಗೆ ಹೊಸತಲ್ಲ. ತರುಣ್‌ ಕೂಡ ಇಂತಹ ಪಾತ್ರಗಳಲ್ಲಿ ಕಾಣಿಸಿಕೊಂಡವರೇ. ಶ್ರೀಕಾಂತ್ ಅಭಿನಯ ಸಾಧಾರಣ. ಶರ್ಮಿಳಾ ಮಾಂಡ್ರೆ, ಸೋನು ಗೌಡ ಮತ್ತು ರಚೇಲ್‌ ಗ್ಲಾಮರ್‌ನಲ್ಲಷ್ಟೇ ಮಿಂಚು­ತ್ತಾರೆ. ಅರ್ಜುನ್‌ ಜನ್ಯ ಸಂಗೀತದಲ್ಲಿ ಸಾಹಿತ್ಯಕ್ಕಿಂತ ಸದ್ದಿಗೇ ಹೆಚ್ಚು ಆದ್ಯತೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.