ADVERTISEMENT

ಫುಲ್‌ಸ್ಟಾಪ್‌ ಇಲ್ಲದ ‘ಕಾಮ’!

‘ಕೋಟಿಗೊಂದ್ ಲವ್ ಸ್ಟೋರಿ’

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2015, 18:00 IST
Last Updated 20 ಫೆಬ್ರುವರಿ 2015, 18:00 IST
ಫುಲ್‌ಸ್ಟಾಪ್‌ ಇಲ್ಲದ ‘ಕಾಮ’!
ಫುಲ್‌ಸ್ಟಾಪ್‌ ಇಲ್ಲದ ‘ಕಾಮ’!   

ನಿರ್ಮಾಪಕ: ಎಚ್.ಎಲ್.ಎನ್. ರಾಜ್
ನಿರ್ದೇಶಕ: ಜಗ್ಗು ಸಿರ್ಸಿ
ತಾರಾಗಣ: ರಾಕೇಶ್ ಅಡಿಗ, ಶುಭಾ ಪೂಂಜಾ, ಹೈದರ್, ಎಲಿಜಬೆತ್ ಟುಲಿ, ಬಿರಾದಾರ್, ಸಿಂಧೂರಾವ್ ಇತರರು


ಆತ್ಮಹತ್ಯೆ ಮಾಡಿಕೊಳ್ಳಲು ಬಂದ ಹುಡುಗ– ಹುಡುಗಿ, ಯಾವು­ದಕ್ಕೂ ‘ಆ’ ಅನುಭವವೂ ಇರಲಿ ಎಂದು­ಕೊಂಡು ಪ್ರಣಯದಾಟ ಆಡುತ್ತಾರೆ. ಅದು ಒಂದೆರಡಲ್ಲ; ಹಲವು ಸಲ! ಆತ್ಮಹತ್ಯೆ ಮಾಡಿಕೊಳ್ಳುವ ಯತ್ನ ವಿಫಲ­ವಾಗುತ್ತ, ಆಗುತ್ತ ಒಂದಷ್ಟು ದಿನಗಳ ಬಳಿಕ ಆಕೆ ಗರ್ಭಿಣಿ­ಯಾ­ಗು­ತ್ತಾಳೆ. ಬೇಕೆಂದಾಗ ಕೈಗೆ ಸಿಗದೇ ಓಡಿ ಹೋಗುವ ಸಾವು, ಅವರಿಬ್ಬರಿಗೆ ಬದುಕುವ ಆಸೆ ಮೂಡುತ್ತಲೇ ಹುಡುಕಿ­ಕೊಂಡು ಬಂದು ಕರೆದೊಯ್ಯುತ್ತದೆ.

‘ಕೋಟಿಗೊಂದು ಲವ್ ಸ್ಟೋರಿ’ ಎನ್ನುತ್ತ ಕಥೆ ಕಟ್ಟಿದ್ದಾರೆ ನಿರ್ದೇಶಕ ಜಗ್ಗು ಶಿರ್ಸಿ. ನಿರ್ಮಲ ಪ್ರೀತಿ, ಪ್ರೇಮ, ಭಾವನೆಗಳಿಗೆ ಅರ್ಥ ಕೊಡದೆ ಬರೀ ‘ಕಾಮ’ವೊಂದನ್ನೇ ‘ಲವ್ ಸ್ಟೋರಿ’ ಎಂದು ತಿಳಿದುಕೊಂಡಿರುವಂತಿದೆ. ಹೀಗಾಗಿ ಸಿನಿಮಾದುದ್ದಕ್ಕೂ ಅಂಥದೇ ಗಾಢ ‘ಪರಿಮಳ’ ಅಡರುತ್ತದೆ.

ಹುಡುಗಿ ಕೈಕೊಟ್ಟ ದುಃಖದಲ್ಲಿ ಆತನೂ, ಹುಡುಗ ಕೈಕೊಟ್ಟ ನೋವಿನಲ್ಲಿ ಆಕೆಯೂ ಸಾಯಲು ನಿರ್ಧರಿಸಿ, ಆತ್ಮಹತ್ಯೆ ಮಾಡಿಕೊಳ್ಳಲು ಬಂದಾಗ ಆಕಸ್ಮಿಕವಾಗಿ ಭೇಟಿಯಾಗು­ತ್ತಾರೆ. ಆ ಹಿನ್ನೆಲೆಯಲ್ಲಿ ಮುಂದೆ ನಡೆಯುವ ಕಥೆಯು ಜಾಳು ಜಾಳು. ಸಾಯುವ ಮುನ್ನ ‘ಸ್ವರ್ಗ ಸುಖ’ ಪಡೆಯುವ ರಾಕೇಶ್‌ನ ಆಸೆಗೆ ಮಾನಸಿ ಒಪ್ಪುವುದು, ಮತ್ತೆ ಮತ್ತೆ ಆ ದಾಹ ತಣಿಸಿಕೊಳ್ಳುವುದು– ಈ ರಸವತ್ತಾದ ಕಥೆಯೇ ಅರ್ಧ­ದವರೆಗೂ ಸಾಗುತ್ತದೆ. ‘ಕಿತ್ತೋದ್ ಲವ್ ಸ್ಟೋರಿ ದುರಂತ ಕಥೆಯ ನಾಯಕ ನಾನು’ ಎಂದು ರಾಕೇಶ್ ಹೇಳುತ್ತಾ­ರಾ­ದರೂ, ನಾಯಕಿ ಜತೆ ಪ್ರಣಯಕೇಳಿ ನಡೆಸುವುದರಲ್ಲಿ ಮಾತ್ರ ಕಾಮರಾಜ! ಮತ್ತೆ ಮತ್ತೆ ನಡೆಯುವ ಈ ಸಮಾಗಮಕ್ಕೆ ಸಂಬಂಧಿಸಿದಂತೆ ಇಬ್ಬರೂ ಆಡುವ ಸಂಭಾಷಣೆಗಳಲ್ಲಿ ದ್ವಂದ್ವಾರ್ಥ ಹೇರಳವಾಗಿವೆ.

ನಟನೆಗಿಂತ ಎಕ್ಸ್‌ಪೋಸ್‌ಗೆ ಹೆಚ್ಚು ಆದ್ಯತೆ ಕೊಟ್ಟಿದ್ದಾರೆ ನಾಯಕಿ ಶುಭಾ ಪೂಂಜಾ. ಯಾವುದೇ ಎಗ್ಗುಸಿಗ್ಗಿಲ್ಲದೇ ತಮ್ಮ ಮೈಮಾಟವನ್ನು ಧಾರಾಳವಾಗಿ ಪ್ರದರ್ಶಿಸಿದ್ದಾರೆ. ರಾಕೇಶ್ ಅಡಿಗ ಅಭಿನಯಕ್ಕೆ ಅವಕಾಶ ಸಿಕ್ಕಿಲ್ಲ. ಅವರದು ಏನಿದ್ದರೂ ನಾಯಕಿಯನ್ನು ಬಗೆಬಗೆಯಾಗಿ ಆವರಿಸಿಕೊಳ್ಳುವ ಪ್ರತಿಭೆ!

ದುಷ್ಟರ ಒಂದೇ ಹೊಡೆತಕ್ಕೆ ಪ್ರಜ್ಞೆ ತಪ್ಪಿ ಬೀಳುವ ರಾಕೇಶ್, ಅರ್ಧ ಕ್ಷಣದಲ್ಲೇ ಎದ್ದು ಆರೆಂಟು ವೈರಿಗಳಿಗೆ ಮಣ್ಣು ಮುಕ್ಕಿಸುವುದು ಹೇಗೆ? ನಾಯಕಿಯನ್ನು ಪ್ರಣಯದಾಟಕ್ಕೆ ಭರಪೂರ ಬಳಸಿಕೊಂಡು, ಬಳಿಕ ಹೆಣ್ಣಿನ ಕುರಿತು ಉಪದೇಶಾ­ಮೃತ ನೀಡುವುದು ಹೇಗೆ? ಇಂಥ ಹತ್ತಾರು ಜಿಜ್ಞಾಸೆಗೆ ಉತ್ತರ ಸಿಕ್ಕದು!

ಕೋಟಿಯಲ್ಲೊಂದು ಪ್ರೇಮಕಥೆ ಮಾಡಲು ಅಗತ್ಯವಾದ ಗಟ್ಟಿ ಕಥೆಯನ್ನಾಗಲೀ, ನವಿರು ನಿರೂಪಣೆಯನ್ನಾಗಲೀ ನಿರ್ದೇಶಕ ಜಗ್ಗು ಶಿರ್ಸಿ ಅವಲಂಬಿಸಿಲ್ಲ. ಮರಣಕ್ಕೆ ಮುನ್ನ ಪ್ರಣಯ ಯಾತ್ರೆಯೊಂದನ್ನು ಕೈಗೊಂಡು, ಪ್ರೇಕ್ಷಕರಿಗೂ ಅದನ್ನು ರಸವತ್ತಾಗಿ ಉಣಬಡಿಸುವ ನಾಯಕ– ನಾಯಕಿ­ಯರ ಮನ್ಮಥಲೀಲೆಯೇ ಚಿತ್ರದ ಬಂಡವಾಳ. ಪ್ರೇಮ ಎಂದರೆ ಕಾಮ ಎಂದು ಅರ್ಥೈಸಿಕೊಂಡವರಿಗೆ ಇದೊಂದು ಮಾದರಿ ಸಿನಿಮಾ ಎಂದಷ್ಟೇ ಹೇಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT